Raichur: ನೀರಮಾನ್ವಿ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಭಯ ಭೀತರಾದ ಗ್ರಾಮಸ್ಥರು!

By Govindaraj S  |  First Published Aug 16, 2023, 8:51 AM IST

ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಬಳಿಯ ಬೆಟ್ಟದೂರು ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದೆ. ಕಳೆದ 15 ದಿನಗಳಲ್ಲಿ ಕುರಿಗಾಯಿಗಳ 10 ನಾಯಿ, ಕುರಿಗಳು ನಾಪತ್ತೆಯಾಗಿದ್ದು, ಇದೀಗ ಗ್ರಾಮದ ಸಿದ್ದರೂಡಮಠದ ಹತ್ತಿರ ಚಿರತೆ ಕಾಣಿಸಿಕೊಂಡಿದೆ. 


ರಾಯಚೂರು (ಆ.16): ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಬಳಿಯ ಬೆಟ್ಟದೂರು ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದೆ. ಕಳೆದ 15 ದಿನಗಳಲ್ಲಿ ಕುರಿಗಾಯಿಗಳ 10 ನಾಯಿ, ಕುರಿಗಳು ನಾಪತ್ತೆಯಾಗಿದ್ದು, ಇದೀಗ ಗ್ರಾಮದ ಸಿದ್ದರೂಡಮಠದ ಹತ್ತಿರ ಚಿರತೆ ಕಾಣಿಸಿಕೊಂಡಿದೆ. ಗುಡ್ಡದ ಮೇಲಿನ ಭಗಧ್ವಜದ ಹತ್ತಿರ ಸಂಜೆ ವೇಳೆ ಚಿರತೆ ಪ್ರತ್ಯಕ್ಷವಾಗಿದ್ದು, ಜಮೀನುಗಳಲ್ಲಿ ಚಿರತೆ ಹೆಜ್ಜೆಗುರುತು ಕಂಡು ಜನರು ಭಯಭೀತರಾಗಿದ್ದಾರೆ. ಚಿರತೆ ಭಯಕ್ಕೆ ಬೆಟ್ಟದಿಂದ ಗ್ರಾಮಕ್ಕೆ ಕೋತಿಗಳು ನುಗ್ಗಿದ್ದು, ಕಳೆದ ವರ್ಷವೂ ಜನರಲ್ಲಿ ಭಯ ನಾಲ್ಕು ಚಿರತೆಗಳು ಹುಟ್ಟಿಸಿದ್ದವು. ನಾಲ್ಕು ಚಿರತೆಗಳಲ್ಲಿ ಒಂದು ಬೋನಿಗೆ ಬಿದ್ದಿದ್ದು, ಚಿರತೆ ಮರಿ ಬಲೆಗೆ ಬಿದ್ದಿತ್ತು.ಇನ್ನೆರಡು ಚಿರತೆಗಳು ನಾಪತ್ತೆಯಾಗಿದ್ದವು. ಈಗ ಪುನಃ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡು ಭಯ ಹುಟ್ಟಿಸಿದ್ದು, ಚಿರತೆ ನೋಡಿ ಜನರು ಭಯಭೀತರಾಗಿದ್ದಾರೆ. 

ಚಿರತೆ ದಾಳಿಗೆ ಆಕಳ ಕರು ಬಲಿ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಕಳ ಕರುವೊಂದನ್ನು ಚಿರತೆ ತಿಂದು ಹಾಕಿರುವ ಘಟನೆ ತಾಲೂಕಿನ ಕುಂದರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಚಗೇರಿ ಗ್ರಾಮದ ಬಿಬ್ಬನಹಳ್ಳಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅರಣ್ಯದಂಚಿನ ಜಮೀನು ಹೊಂದಿರುವ ಶಂಕರ ನಾರಾಯಣ ಸಿದ್ದಿ ಎನ್ನುವವರ ಆಕಳ ಕರು ಚಿರತೆಗೆ ಆಹುತಿಯಾಗಿದೆ. ಕೊಟ್ಟಿಗೆಗೆ ಶನಿವಾರ ನುಗ್ಗಿದ ಚಿರತೆ ಕರುವನ್ನು ಕಟ್ಟಿಹಾಕಿದ್ದ ಕಾರಣ ಎಳೆದೊಯ್ಯಲಾಗದೆ ಮತ್ತು ಅದೇ ವೇಳೆ ಈ ಘಟನೆಯನ್ನು ಕಂಡ ಉಳಿದ ಹಸುಗಳು ರೋಧಿಸುವುದನ್ನು ಕೇಳಿ ಚಿರತೆ ಪರಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಜಗದೀಶ ಪಾಲಕ್ಕನವರ್‌, ಪಶು ವೈದ್ಯಕೀಯ ಇಲಾಖೆಯ ಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಭಾಗದಲ್ಲಿ ಚಿರತೆಯೊಂದು ಪದೇ ಪದೇ ರೈತರ ಜಾನುವಾರಗಳಿಗೆ ತೊಂದರೆ ನೀಡುತ್ತಿರುವುದು ಹೆಚ್ಚಾಗಿದೆ. ಇಂತಹ ಚಿರತೆಯನ್ನು ಸೆರೆ ಹಿಡಿದು, ಸಮಸ್ಯೆ ಪರಿಹರಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

Tap to resize

Latest Videos

ಯತ್ನಾಳ್‌ ಬಸ್‌ಸ್ಟ್ಯಾಂಡ್‌ನಲ್ಲಿ ಗಿಣಿಶಾಸ್ತ್ರ ಹೇಳಲಿ: ಸಚಿವ ಮಧು ತಿರುಗೇಟು

ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಕಾಡು ಬೆಕ್ಕು ಪ್ರತ್ಯಕ್ಷ: ಮುಂಡಗೋಡ ಪಟ್ಟಣದ ಹೊರ ವಲಯದ ಕಲಘಟಗಿ ರಸ್ತೆ ಅಂಚಿನಲ್ಲಿ ಭಾನುವಾರ ಚಿರತೆ ಕಾಣಿಸಿಕೊಂಡ ಜಾಗದಲ್ಲಿಯೇ ಸೋಮವಾರ ಗೋವಿನಜೋಳ ಗದ್ದೆಯಲ್ಲಿ ಕಾಡು ಬೆಕ್ಕು ಕಾಣಿಸಿಕೊಂಡಿದೆ. ಈ ವಿಷಯವೀಗ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದ್ದು, ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಚಿರತೆ ಸಂಚರಿಸಿದ ದೃಶ್ಯ ಆಧರಿಸಿ ಸ್ಥಳಕ್ಕೆ ಧಾವಿಸಿದ್ದ ಮುಂಡಗೋಡ ವಲಯ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದಾಗ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದವು, ಚಿರತೆ ಸುತ್ತಾಡಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳೇ ಖಚಿತಪಡಿಸಿದ್ದರು. ಜತೆಗೆ ಪ್ರತ್ಯಕ್ಷವಾಗಿ ಕಂಡ ಸುತ್ತಮುತ್ತಲಿನ ರೈತರಿಂದ ಮಾಹಿತಿ ಕಲೆ ಹಾಕಿದ್ದು, ಚಿರತೆಯ ಪತ್ತೆಗಾಗಿ ಸುತ್ತಮುತ್ತ ಪ್ರದೇಶಗಳಲ್ಲಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. 

ಬಿಚ್ಚಿಡುವವರು, ಬಿಚ್ಚಾಕುವವರನ್ನು ನಿಲ್ಲಿಸಲು ಸಾಧ್ಯವೇ?: ಎಚ್‌ಡಿಕೆಗೆ ಡಿಕೆಶಿ ತಿರುಗೇಟು

ಇದರ ಬೆನ್ನಲ್ಲೇ ಅದೇ ಸ್ಥಳದಲ್ಲಿ ಈಗ ಕಾಡು ಬೆಕ್ಕು ಕಾಣಿಸಿಕೊಂಡಿದೆ. ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದರಿಂದ ಸುತ್ತಮುತ್ತ ಪ್ರದೇಶದಲ್ಲಿ ಜಾಂಡಾ ಹೂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುತ್ತಮುತ್ತ ಪ್ರದೇಶದ ಜನರಿಗೆ ರಾತ್ರಿ ತಿರುಗಾಡದಂತೆ ಎಚ್ಚರಿಕೆ ನೀಡುವ ಕೆಲಸ ಕೂಡ ಮಾಡಿದ್ದಾರೆ. ಈ ಭಾಗದಲ್ಲಿ ಚಿರತೆ ಸಂಚರಿಸಿರುವುದು ದೃಢಪಟ್ಟಿದೆ. ಅದೇ ರೀತಿ ಸೋಮವಾರ ಕಾಡು ಬೆಕ್ಕು ಕೂಡ ಇಲ್ಲಿ ವಾಸವಾಗಿದ್ದು, ಇಲಾಖೆಯಿಂದ ತಂಡ ರಚಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಈಗಲೇ ಅಧಿಕೃತವಾಗಿ ಏನು ಹೇಳಲು ಸಾಧ್ಯವಿಲ್ಲ. ಆದರೂ ಕೂಡ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದು ಮುಂಡಗೋಡ ವಲಯ ಅರಣ್ಯಾಧಿಕಾರಿ ಸುರೇಶ ಕುಳ್ಳೊಳ್ಳಿ ತಿಳಿಸಿದ್ದಾರೆ.

click me!