ಲಾಲ್‌ಬಾಗ್‌ಗೆ ಒಂದೇ ದಿನ 2.45 ಲಕ್ಷ ಜನ: ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ 3.98 ಕೋಟಿ ಗಳಿಕೆ

By Kannadaprabha News  |  First Published Aug 16, 2023, 7:23 AM IST

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆದ 214ನೇ ಫಲಪುಷ್ಪ ಪ್ರದರ್ಶನ ನೂತನ ದಾಖಲೆ ಸೃಷ್ಟಿಸಿದ್ದು, ಮೊದಲ ಬಾರಿಗೆ ಪ್ರವೇಶಾತಿ ಶುಲ್ಕ, ಮಳಿಗೆಗಳು ಇತ್ಯಾದಿ ಮೂಲಗಳಿಂದ 3.98 ಕೋಟಿ ಆದಾಯ ಗಳಿಸಿದೆ. 


ಬೆಂಗಳೂರು (ಆ.16): ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆದ 214ನೇ ಫಲಪುಷ್ಪ ಪ್ರದರ್ಶನ ನೂತನ ದಾಖಲೆ ಸೃಷ್ಟಿಸಿದ್ದು, ಮೊದಲ ಬಾರಿಗೆ ಪ್ರವೇಶಾತಿ ಶುಲ್ಕ, ಮಳಿಗೆಗಳು ಇತ್ಯಾದಿ ಮೂಲಗಳಿಂದ 3.98 ಕೋಟಿ ಆದಾಯ ಗಳಿಸಿದೆ. ಮಂಗಳವಾರ ಒಂದೇ ದಿನ 2.45 ಲಕ್ಷಕ್ಕೂ ಹೆಚ್ಚು ಜನರು ಪ್ರದರ್ಶನ ವೀಕ್ಷಣೆಗೆ ಆಗಮಿಸಿದ್ದು ಮತ್ತೊಂದು ದಾಖಲೆ. 2019ರಲ್ಲಿ ನಡೆದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಒಂದೇ ದಿನ 1.96 ಲಕ್ಷ ಮಂದಿ ಆಗಮಿಸಿದ್ದು ಈವರೆಗಿನ ದಾಖಲೆಯಾಗಿತ್ತು.

2022 ಆಗಸ್ಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ನಡೆದಿದ್ದ 212ನೇ ಫಲಪುಷ್ಪ ಪ್ರದರ್ಶನಕ್ಕೆ ಬಂದವರ ಸಂಖ್ಯೆ 9.5 ಲಕ್ಷವಿದ್ದು ಮೊದಲ ಸ್ಥಾನದಲ್ಲಿದೆ. ಅಂದು 3.15 ಕೋಟಿ ಸಂಗ್ರಹಿಸಲಾಗಿತ್ತು. ಈ ಬಾರಿ 11 ದಿನಗಳಲ್ಲಿ 8.26 ಲಕ್ಷ ಜನರು ಆಗಮಿಸಿದ್ದು ಎರಡನೇ ಸ್ಥಾನದಲ್ಲಿದೆ. ಆದರೆ, ಅತ್ಯಧಿಕ ಮೊತ್ತ ಗಳಿಸಿದ ಪ್ರದರ್ಶನದಲ್ಲಿ ಮೊದಲ ಸ್ಥಾನದಲ್ಲಿದೆ. ಕೆಂಗಲ್‌ ಹನುಮಂತಯ್ಯ ಅವರ ಸ್ಮರಣಾರ್ಥ ಆಗಸ್ಟ್‌ 5ರಿಂದ 15ರವರೆಗೆ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ವಿಧಾನಸೌಧ, ಶಿವಪುರ ಧ್ವಜ ಸತ್ಯಾಗ್ರಹ ಸೌಧ ಸೇರಿದಂತೆ ಮತ್ತಿತರರ ಪುಷ್ಪ ಮಾದರಿಗಳು ಗಮನ ಸೆಳೆದಿದ್ದವು. 

Tap to resize

Latest Videos

77ನೇ ಸ್ವಾತಂತ್ರ್ಯೋತ್ಸವ: ವಿಧುರಾಶ್ವತ್ಥ, ಕಾರ್ಗಿಲ್‌ ತ್ಯಾಗ ಕತೆ ಹೇಳಿದ ಮಕ್ಕಳು

ಫಲಪುಷ್ಪ ಪ್ರದರ್ಶನಕ್ಕಾಗಿ ತೋಟಗಾರಿಕೆ ಇಲಾಖೆ 10 ಲಕ್ಷಕ್ಕೂ ಹೆಚ್ಚು ಹೂವುಗಳನ್ನು ವಿವಿಧ ಕಡೆಯಿಂದ ತರಿಸಿದ್ದು, ಪ್ರದರ್ಶನಕ್ಕಾಗಿ .2 ಕೋಟಿಗಳಿಗೂ ಹೆಚ್ಚು ವೆಚ್ಚ ಮಾಡಿತ್ತು. ಹನ್ನೊಂದು ದಿನಗಳು ನಡೆದ ಫಲಪುಷ್ಪ ಪ್ರದರ್ಶನಕ್ಕೆ 5.82 ಲಕ್ಷ ವಯಸ್ಕರು, 68 ಸಾವಿರ ಮಕ್ಕಳು, 1.75 ಲಕ್ಷ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 8.26 ಲಕ್ಷ ಜನರು ಭೇಟಿ ಕೊಟ್ಟಿದ್ದಾರೆ. ಪ್ರವೇಶಾತಿ ಟಿಕೆಟ್‌ ಶುಲ್ಕದಿಂದ 3.67 ಕೋಟಿಗಳು, ನರ್ಸರಿಗಳು, ತಾಂತ್ರಿಕ ಮತ್ತು ಸಾಮಾನ್ಯ ಮಳಿಗೆಗಳು ಸೇರಿ 180 ಮಳಿಗೆಗಳಿಂದ 27.45 ಲಕ್ಷ ಸಂಗ್ರಹವಾಗಿದೆ. ಜೊತೆಗೆ ಗಾರ್ಡನ್‌ ಸ್ಪರ್ಧೆ, ಇಕೆಬಾನ ಮತ್ತು ಇತರ ಕಲೆಗಳ ಪ್ರದರ್ಶಕರ ಪ್ರವೇಶ ಶುಲ್ಕದಿಂದ 2.91 ಲಕ್ಷ ಬಂದಿದೆ. 

ಒಟ್ಟು 3.98 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಪಾರ್ಕ್ಸ್ ಆ್ಯಂಡ್‌ ಗಾರ್ಡನ್ಸ್‌) ಡಾ.ಎಂ.ಜಗದೀಶ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು. 214ನೇ ಫಲಪುಷ್ಪ ಪ್ರದರ್ಶನ ಯಶಸ್ವಿಗೆ ಸಾರ್ವಜನಿಕರ ಸಂಯಮ, ಪೊಲೀಸ್‌ ಇಲಾಖೆ ಅಧಿಕಾರಿ, ಸಿಬ್ಬಂದಿಯವರ ಬಿಗಿ ಬಂದೋಬಸ್‌್ತ, ತೋಟಗಾರಿಕೆ ಇಲಾಖೆ ಅಧಿಕಾರಿ, ಸಿಬ್ಬಂದಿಯ ಸಹಕಾರ ಕಾರಣ. ಪ್ರದರ್ಶನ ಯಶಸ್ವಿಯಾಗಿ ಮುಕ್ತಾಯವಾಗಲು ಕಾರಣರಾದ ಎಲ್ಲರಿಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಕುಸುಮಾ ಧನ್ಯವಾದ ತಿಳಿಸಿದ್ದಾರೆ.

ಯಶಸ್ವಿ ಪ್ರದರ್ಶನ: ಮೈಸೂರು ಉದ್ಯಾನ ಕಲಾಸಂಘದ ನೇತೃತ್ವದಲ್ಲಿ 211 ಫಲಪುಷ್ಪ ಪ್ರದರ್ಶನಗಳು ಯಶಸ್ವಿಯಾಗಿ ನಡೆದಿದ್ದವು. ಆದರೆ ಕಳೆದ ವರ್ಷ ಗುತ್ತಿಗೆ ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಕಲಾ ಸಂಘದ ಕಚೇರಿಯನ್ನು ಬಂದ್‌ ಮಾಡಲಾಗಿತ್ತು. ಹೀಗಾಗಿ ತೋಟಗಾರಿಕೆ ಇಲಾಖೆ ಮತ್ತು ಕಲಾಸಂಘದ ವಿವಾದ ಈಗ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ಕಳೆದೊಂದು ವರ್ಷದಿಂದ ತೋಟಗಾರಿಕೆ ಇಲಾಖೆಯೇ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದ್ದು, ಇದು ಇಲಾಖೆಯ ಎರಡನೇ ಪ್ರದರ್ಶನವಾಗಿದೆ. ಗಣರಾಜ್ಯೋತ್ಸವದಂದು ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಸಣ್ಣಪುಟ್ಟದೋಷಗಳು ಕಂಡುಬಂದಿತ್ತು. ಮೈಸೂರು ಉದ್ಯಾನ ಕಲಾಸಂಘ ಇಲ್ಲದಿದ್ದರೆ ಫಲಪುಷ್ಪ ಪ್ರದರ್ಶನ ಯಶಸ್ವಿಯಾಗಿ ನಡೆಯುವುದೇ ಇಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ 214ನೇ ಫಲಪುಷ್ಪ ಪ್ರದರ್ಶನ ಯಶಸ್ವಿಯಾಗಿರುವುದು ತೋಟಗಾರಿಕೆ ಇಲಾಖೆ ಅಧಿಕಾರಿ, ಸಿಬ್ಬಂದಿಯಲ್ಲಿ ಸಂತಸ ಮೂಡಿಸಿದೆ.

ನಿರೀಕ್ಷೆಗೂ ಮೀರಿ ಜನ: ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾದ ಮಂಗಳವಾರ ಪ್ರದರ್ಶನ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಿದ್ದರು. ಹೀಗಾಗಿ ರಾತ್ರಿ 7 ಗಂಟೆಗೆ ಮುಕ್ತಾಯವಾಗಬೇಕಿದ್ದ 8.30ರವರೆಗೂ ಮುಂದುವರೆದಿತ್ತು. ಸುಡುಬಿಸಿಲಿನಲ್ಲೇ ಟಿಕೆಟ್‌ಗಾಗಿ ಕಿಲೋಮೀಟರ್‌ವರೆಗೂ ಸರದಿ ಸಾಲಿನಲ್ಲಿ ಜನರು ನಿಂತಿದ್ದರು. ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರಿಂದ ದಟ್ಟಣೆ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ವಾಹನ ದಟ್ಟಣೆ: ಕಿಲೋಮೀಟರ್‌ಗಟ್ಟಲೆ ಟಿಕೆಟ್‌ಗಾಗಿ ಜನರು ಸರದಿ ಸಾಲಿನಲ್ಲಿ ನಿಂತಿದ್ದರಿಂದ ಲಾಲ್‌ಬಾಗ್‌ ಸುತ್ತಮುತ್ತ ರಸ್ತೆಗಳಲ್ಲಿ ಟ್ರಾಫಿಕ್‌ಜಾಮ್‌ನಿಂದ ವಾಹನ ಸವಾರರು ಪರದಾಡುವಂತಾಯಿತು. ಸಂಚಾರಿ ಪೊಲೀಸರು ವಾಹನ ದಟ್ಟಣೆ ನಿವಾರಿಸಲು ಪರದಾಡಿದರು. ರಾತ್ರಿ 9 ಗಂಟೆ ನಂತರ ಸಂಚಾರ ದಟ್ಟಣೆ ಕಡಿಮೆ ಆಗಿದ್ದರಿಂದ ಪೊಲೀಸರು ನಿಟ್ಟುಸಿರು ಬಿಟ್ಟರು.

ಕ್ಷಮೆ ಕೋರಿದ ನಟಿ: ಲಾಲ್‌ಬಾಗ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಕಾರು ಡಿಕ್ಕಿಯಾಗಿದ್ದು ನನ್ನ ಗಮನಕ್ಕೆ ಬರಲಿಲ್ಲ. ಕ್ಷಮಿಸಿ ಎಂದು ಲಾಲ್‌ಬಾಗ್‌ ಸ್ವಚ್ಛತಾ ಕಾರ್ಯದ ಪೌರ ಕಾರ್ಮಿಕನಲ್ಲಿ ಚಲನಚಿತ್ರ ನಟಿ ರಚಿತಾರಾಮ್‌ ಅವರು ಕ್ಷಮೆ ಕೋರಿದರು. ಈ ಮೂಲಕ ಕಾರು ಡಿಕ್ಕಿ ಹೊಡೆದರೂ ನಟಿ ಪೌರ ಕಾರ್ಮಿಕನ ಕ್ಷಮೆ ಕೋರಲಿಲ್ಲ ಎಂಬ ವಿವಾದ ಅಂತ್ಯಗೊಂಡಿತು.

ದ್ವೇಷದಿಂದ ಅಭಿವೃದ್ಧಿ ಅಸಾಧ್ಯ, ದುಷ್ಟರ ಆಟ ಇನ್ನು ನಡೆಯಲ್ಲ: ಸಿದ್ದರಾಮಯ್ಯ ಭವಿಷ್ಯ

25000+ ಮೆಟ್ರೋ ಪೇಪರ್‌ ಟಿಕೆಟ್‌ ಮಾರಾಟ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಲಾಲ್‌ಬಾಗ್‌ ಪುಷ್ಪಪ್ರದರ್ಶನಕ್ಕೆ ವೀಕ್ಷಿಸಿದವರ ಪೈಕಿ 25,833 ಜನರು ಪೇಪರ್‌ ಟಿಕೆಟ್‌ ಖರೀದಿಸಿ ಮೆಟ್ರೋ ರೈಲಿನಲ್ಲಿ ಸಂಚರಿಸಿದ್ದಾರೆ. 30 ಬೆಲೆಯ ಟಿಕೆಟನ್ನು ಖರೀದಿಸಿ ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಿಂದ ಯಾವುದೇ ನಿಲ್ದಾಣದವರೆಗೆ ಸಂಚರಿಸಲು ವಿಶೇಷ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪೇಪರ್‌ ಖರೀದಿಸಿ ಪ್ರಯಾಣಿಸಿದರು. 

ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಹಸಿರು ಹಾಗೂ ನೆರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರದ ಅವಧಿಯನ್ನು ಕಡಿಮೆ ಮಾಡಲಾಗಿತ್ತು. ಹಸಿರು ಮಾರ್ಗದಲ್ಲಿ (ಲಾಲ್‌ಬಾಗ್‌ ನಡುವೆ ಸಂಚರಿಸುವ) ಸಂಚರಿಸುವ ಪ್ರತಿ ರೈಲುಗಳು ತುಂಬಿ ತುಳುಕುತ್ತಿದ್ದವು. ಬೆಳಗ್ಗೆ 10ರಿಂದ ಸಂಜೆ 8ಗಂಟೆವರೆಗೆ ಲಾಲ್‌ಬಾಗ್‌ ಸೇರಿ ವಿವಿಧ ನಿಲ್ದಾಣಗಳಲ್ಲಿ ಹಿಂದಿರುಗುವ ಪೇಪರ್‌ ಟಿಕೆಟನ್ನು ವಿತರಣೆ ಮಾಡಲಾಯಿತು. ರಾತ್ರಿ 9ಗಂಟೆವರೆಗೆ ಮೆಟ್ರೋ ರೈಲಿನಲ್ಲಿ ಈ ಟಿಕೆಟನ್ನು ಬಳಸಿ 25 ಸಾವಿರಕ್ಕೂ ಅಧಿಕ ಜನತೆ ಪ್ರಯಾಣಿಸಿದ್ದಾರೆ. ರಾತ್ರಿ 9 ಗಂಟೆವರೆಗೆ 4.5 ಲಕ್ಷ ಜನ ಸಂಚಾರ ಮಾಡಿದ್ದು, ತಡರಾತ್ರಿವರೆಗೆ ಪ್ರಯಾಣಿಕರು ಸಂಚರಿಸಿದ್ದಾರೆ.

click me!