ರಾಜಧಾನಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಮಾನವ ಪ್ರಾಣಿ ಸಂಘರ್ಷ ಮುಂದುವರಿದಿದ್ದು, ನೈಸ್ ರಸ್ತೆ ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂಗಡಿಪುರದಲ್ಲಿ ಪುನಃ ಚಿರತೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಬೆಂಗಳೂರು (ಫೆ.03): ರಾಜಧಾನಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಮಾನವ ಪ್ರಾಣಿ ಸಂಘರ್ಷ ಮುಂದುವರಿದಿದ್ದು, ನೈಸ್ ರಸ್ತೆ ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂಗಡಿಪುರದಲ್ಲಿ ಪುನಃ ಚಿರತೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ಭಾಗದಲ್ಲಿ ಕಳೆದ 15 ದಿನಗಳಿಂದ ಚಿರತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕಳೆದ ರಾತ್ರಿ ಗ್ರಾಮದ ನಾಯಿಯೊಂದನ್ನು ತಿಂದಿದೆ. ತನ್ನ ಎರಡು ಮರಿಗಳೊಂದಿಗೆ ತಾಯಿ ಚಿರತೆ ಇಲ್ಲಿ ಓಡಾಡಿಕೊಂಡಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಹೀಗಾಗಿ ರಾತ್ರಿ 8ರ ಬಳಿಕ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಗ್ರಾಮದಲ್ಲಿ ಓಡಾಡಿದ ಚಿರತೆ ಹೆಜ್ಜೆ ಗುರುತು ಹಾಗೂ ನಾಯಿಯ ಕಳೇಬರದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅರಣ್ಯ ಇಲಾಖೆ ತಕ್ಷಣ ಕ್ರಮವಹಿಸಿ ಚಿರತೆ ಸೆರೆಹಿಡಿದು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚರಣ್, ‘ಕಳೆದ ಎರಡು ದಿನಗಳಲ್ಲಿ ಗೊಂಗಡಿಪುರದಲ್ಲಿ ಚಿರತೆ ಓಡಾಡಿರುವ ಯಾವುದೇ ಮಾಹಿತಿ ನಮಗಿಲ್ಲ. ಆದರೆ, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಎರಡು ತಿಂಗಳ ಹಿಂದಿನ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜನತೆ ಖಾತ್ರಿಯಿಲ್ಲದೆ ಭಯಬೀಳುವುದು ಬೇಡ. ಹಾಗೆಂದು ಜಾಗೃತಿ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಚಿರತೆ ಓಡಾಡಿರುವ ಸ್ಥಳ, ಸುತ್ತಮುತ್ತ ಒಬ್ಬೊಬ್ಬರೆ ತಿರುಗಾಡಬಾರದು’ ಎಂದು ತಿಳಿಸಿದರು.
ಪಾಗಲ್ ಪ್ರೇಮಿ ಕಾಟಕ್ಕೆ ದಂತ ವೈದ್ಯೆ ಆತ್ಮಹತ್ಯೆ: ಸಹಪಾಠಿ ಅಪಪ್ರಚಾರ ಕಾರಣ?
ಕಳೆದ ಡಿಸೆಂಬರ್‌ನಲ್ಲಿ ನಗರದ ಕೆಂಗೇರಿ ಸುತ್ತಮುತ್ತ, ಸೋಮಾಪುರದ ತುರಹಳ್ಳಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಸೆರೆ ಕಾರ್ಯಾಚರಣೆಗೆ ಇಲಾಖೆ ಸಾಕಷ್ಟು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ಜತೆಗೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣಕ್ಕೂ ಚಿರತೆ ಬಂದಿದೆ ಎಂಬ ಸುದ್ದಿಯಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದರು. ವಿವಿಯಿಂದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಜಾಗೃತಿ ಮೂಡಿಸಲಾಗಿತ್ತು.