ಹೊನ್ನಾವರ (ಅ.22) : ತಾಲೂಕಿನ ಸಾಲ್ಕೋಡದಲ್ಲಿ ಮೇಯಲು ಹೋದ ಜಾನುವಾರಿನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಗುರುವಾರ ನಡೆದಿದೆ. ಅದೃಷ್ಟವಶಾತ್ ಜಾನುವಾರು ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದೆ. ಕೊಟ್ಟಿಗೆಗೆ ಬಂದ ದನವನ್ನು ಮಾಲೀಕರು ಗಮನಿಸಿದಾಗ ಚಿರತೆ ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ. ಕಳೆದೆರಡು ದಿನಗಳ ಹಿಂದೆ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ದಾಳಿಯಲ್ಲಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಸಾಲ್ಕೋಡಿನ ಸುತ್ತಮುತ್ತ ಇದೀಗ ಎಲ್ಲೆಡೆ ಚಿರತೆ ದಾಳಿ ಭಯ ಶುರುವಾಗಿದೆ. ಮಕ್ಕಳು, ವೃದ್ಧರು, ವಿದ್ಯಾರ್ಥಿಗಳು, ವಾಹನಸವಾರರು ಓಡಾಡಲು ಹಿಂಜರಿಯುವ ಪರಿಸ್ಥಿತಿ ಎದುರಾಗಿದೆ.
ಬೆಳಗಾವಿ ಚಿರತೆ ಸೆರೆಗೆ 200 ಜನ!: ಕಾರ್ಯಾಚರಣೆಗೆ 2 ಆನೆ ಕೂಡ ಬಳಕೆ
undefined
ಸಾಲ್ಕೋಡದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತು
ಸಾಲ್ಕೋಡ ಭಾಗದಲ್ಲಿ ಸಂಜೆಯಿಂದ ರಾತ್ರಿವರೆಗೆ ಒಂದು ವಾರಗಳ ಕಾಲ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಸಂಚರಿಸುವ ಕಾರ್ಯ ಆರಂಭಿಸಿದ್ದೇವೆ. ಸಾರ್ವಜನಿಕರು ಸಂಚರಿಸುವಾಗ ಎಚ್ಚರಿಕೆಯಿಂದ ಇರುವ ಜೊತೆ ಇಲಾಖೆಗೆ ಸಹಕರಿಸಬೇಕಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ. ಸುದರ್ಶನ ಹೇಳಿದರು.
ತಾಲೂಕಿನ ಸಾಲ್ಕೋಡ್ ಗ್ರಾಮದಲ್ಲಿ ಮೇಯಲು ತೆರಳಿದ ಆಕಳಿನ ಮೇಲೆ ಚಿರತೆ ದಾಳಿ ದಾಳಿಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಈಗಾಗಲೇ ಇದೇ ಗ್ರಾಮದಲ್ಲಿ ಒಂದು ಚಿರತೆ ಈ ವಾರದಲ್ಲೇ ಸೆರೆ ಹಿಡಿಯಲಾಗಿದೆ. ಮತ್ತೆ ಜಾನುವಾರು, ಮನುಷ್ಯರ ಮೇಲೆ ದಾಳಿ ಮಾಹಿತಿ ಅರಿತು ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಬೋನ್ ವ್ಯವಸ್ಥೆ ಕಲ್ಪಿಸಿದ್ದಾರೆ. ಸಂಜೆ ಮತ್ತೆ ಎರಡು ಬೋನ್ ತಂದು ಗ್ರಾಮದಲ್ಲಿ ಇಡುವ ಮೂಲಕ ಸೆರೆ ಹಿಡಿಯಲು ಪ್ರಯತ್ನ ಮುಂದುವರೆಸುತ್ತೇವೆ. ಜಾನುವಾರು ಹಾನಿ ಸಂಭವಿಸಿದಂತೆ ಮಾಲಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪರಿಹಾರಕ್ಕೆ ವ್ಯವಸ್ಥೆ ಇದೆ ಎಂದರು.
ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ: ಸಿಸಿ ಕ್ಯಾಮರಾದಲ್ಲಿ ಚಲನವಲನ ಸೆರೆ
ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಮಾತನಾಡಿ, ಇಂತಹ ಅನಾಹುತ ಸಂಭವಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಇರುವ ಬಗ್ಗೆ ಮಾಹಿತಿ ನೀಡಿ ಸಂಬಂಧಿಸಿದ ಅಧಿಕಾರಿಗಳು ದೂರವಾಣಿ ಸಂಖ್ಯೆ ನೀಡಿದ್ದಾರೆ. ಹೆಚ್ಚಿನ ಬೋನ್ ವ್ಯವಸ್ಥೆ ಕಲ್ಪಿಸಿ ಚಿರತೆ ಸೆರೆ ಹಿಡಿಯುವ ಪ್ರಯತ್ನ ಮುಂದುವರೆಸುವ ಭರವಸೆ ನೀಡಿದ್ದಾರೆ.
ಅಲ್ಲದೆ ಹಂದಿ, ಮಂಗ ಮುಂತಾದ ಪ್ರಾಣಿಯಿಂದ ತೆಂಗಿನಕಾಯಿ, ಅಡಿಕೆ, ತೆಂಗು, ಬಾಳೆ ಸಸಿ ಹಾನಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ರೈತರು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.