
ಉತ್ತರ ಕನ್ನಡ (ಜೂ. 14): ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಲಗದ್ದೆ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿದ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. 24 ವರ್ಷದ ಸಂತೋಷ ಹೂವಣ್ಣ ಗೌಡ ಎಂಬ ಯುವಕ ಈ ದಾಳಿಗೆ ಒಳಗಾಗಿದ್ದು, ಎರಡು ಕೈಗಳಿಗೆ ಗಾಯಗಳಾಗಿವೆ.
ಘಟನೆ ಹೇಗೆ ನಡೆದಿತು?
ಸಂತೋಷ್ ಅವರ ಮನೆಯ ಪಕ್ಕದ ಹೊಸ ಮನೆಗೆ ಬಟ್ಟೆ ತರಲು ಹೋದ ಯುವತಿಯೋರ್ವಳು ಮನೆ ಒಳಗೆ ಚಿರತೆ ಅವಿತಿರುವುದನ್ನು ಕಂಡು ಭಯದಿಂದ ಬಲವಾಗಿ ಕಿರುಚಿದ್ದಾರೆ. ಈ ಶಬ್ದ ಕೇಳಿ ಮನೆಯೊಳಗಿದ್ದ ಸಂತೋಷ ಓಡುತ್ತಿದ್ದಂತೆ, ಚಿರತೆ ತಕ್ಷಣದ ದಾಳಿಗೆ ಮುಂದಾಗಿ ಆತನ ಮೇಲೆ ಜಿಗಿದಿದೆ. ಚಿರತೆ ದಾಳಿಯಿಂದ ಸಂತೋಷನಿಗೆ ಎರಡು ಕೈಗಳಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಕೂಡಲೇ ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಕೂಡಲೇ ಆಗಮಿಸಿದ ಅಂಕೋಲಾ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಚರಣೆ ಪಡೆದುಕೊಂಡಿದ್ದಾರೆ. ವನ್ಯಜೀವಿ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ದಿಂದ ಗ್ರಾಮದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಚಿರತೆ ಇನ್ನೂ ಸಹ ಹತ್ತಿರದಲ್ಲೇ ಇರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಜನತೆ ತಮ್ಮ ಮಕ್ಕಳನ್ನು ಹೊರಗೆ ಆಟವಾಡಲು ಬಿಡಲು ಹೆದರಿಕೊಂಡಿದ್ದಾರೆ. ಚಿರತೆಗಳನ್ನು ಹಿಡಿಯುವ ಹಾಗೂ ಹಿಂಸಾತ್ಮಕ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ತಕ್ಷಣ ಕಾರ್ಯನ್ವಯವಾಗಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.