ಕರ್ನಾಟಕ ವಾಯುವ್ಯ ಶಿಕ್ಷಕರ ಹಾಗೂ ವಾಯವ್ಯ ಪದವೀಧರ ಮತಕ್ಷೇತ್ರದ ಚುನಾವಣೆ-2022ಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಜೂ.12): ಕರ್ನಾಟಕ ವಾಯುವ್ಯ ಶಿಕ್ಷಕರ ಹಾಗೂ ವಾಯವ್ಯ ಪದವೀಧರ ಮತಕ್ಷೇತ್ರದ ಚುನಾವಣೆ-2022ಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ 13ರಂದು ಬೆಳಿಗ್ಗೆ 08 ರಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಕಾರ್ಯವು ಬೆಳಗಾವಿಯ ಕ್ಲಬ್‌ರೋಡ್‌ದಲ್ಲಿರುವ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಜೂನ್ 15ರಂದು ನಡೆಯಲಿದೆ ಎಂದು ತಿಳಿಸಿದರು.
ಕರ್ನಾಟಕ ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಅಂತಿಮ ಕಣದಲ್ಲಿ ಒಟ್ಟು 12 ಮತ್ತು ಕರ್ನಾಟಕ ವಾಯುವ್ಯ ಪದವೀಧರ ಮತಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳಿದ್ದಾರೆ. ಕರ್ನಾಟಕ ವಾಯುವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಗಂಡು 4985 ಮತ್ತು ಹೆಣ್ಣು 1943 ಸೇರಿ ಒಟ್ಟು 6928 ಮತದಾರರಿದ್ದಾರೆ. ಕರ್ನಾಟಕ ವಾಯುವ್ಯ ಪದವೀಧರ ಮತಕ್ಷೇತ್ರದಲ್ಲಿ ಗಂಡು 15,722 ಮತ್ತು ಹೆಣ್ಣು 5100 ಹಾಗೂ ಇತರೆ 1 ಸೇರಿ ಒಟ್ಟು 20,823 ಮತದಾರರಿದ್ದಾರೆ. ಕರ್ನಾಟಕ ವಾಯುವ್ಯ ಶಿಕ್ಷಕರ ಹಾಗೂ ವಾಯುವ್ಯ ಪದವಿಧರರ ಮತಕ್ಷೇತ್ರದಲ್ಲಿ ಮೂಲ ಮತಗಟ್ಟೆಗಳು 40 ಹಾಗೂ ಹೆಚ್ಚುವರಿ ಮತಗಟ್ಟೆಗಳು 7 ಸೇರಿ ಒಟ್ಟು 47 ಮತಗಟ್ಟೆಗಳಿವೆ. ಮತಗಟ್ಟೆಗಳಿಗೆ ಮೈಕ್ರೋ ಆಬ್ಸರವರ್ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗಳಿಗೆ 2 ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ವಿಧಾನ ಪರಿಷತ್ ಚುನಾವಣೆ: 'ಕಾಂಗ್ರೆಸ್, ಜೆಡಿಎಸ್‌ನಿಂದ ಹಣದ ಆಮಿಷ'
ಮತದಾನದಂದು ಶಾಹಿ: ಭಾರತ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆಯಂತೆ ಕರ್ನಾಟಕ ವಾಯುವ್ಯ ಶಿಕ್ಷಕರ ಹಾಗೂ ವಾಯುವ್ಯ ಪದವೀಧರ ಎರಡು ಚುನಾವಣೆಗಳು ಏಕ ಕಾಲಕ್ಕೆ ನಡೆಯುವ ಕ್ಷೇತ್ರಗಳಲ್ಲಿ ವಾಯುವ್ಯ ಪದವೀಧರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಹಿಯನ್ನು ಬಲಗೈ ತೋರುಬೆರಳಿಗೆ ಹಾಗೂ ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಹಿಯನ್ನು ಬಲಗೈ ಮಧ್ಯದ ಬೆರಳಿಗೆ ಹಾಕುವಂತೆ ನಿರ್ದೇಶಿಸಿರುತ್ತಾರೆ ಎಂದು ತಿಳಿಸಿದರು.
ಮಸ್ಟರಿಂಗ್ ವ್ಯವಸ್ಥೆ: ತಾಲೂಕು ಮಟ್ಟದಲ್ಲಿ ಮಸ್ಟರಿಂಗ್ ಹಾಗೂ ಡಿ.ಮಸ್ಟರಿಂಗ್ ಕಾರ್ಯವನ್ನು ಆಯಾ ತಹಸೀಲ್ದಾರ ಕಚೇರಿಗಳಲ್ಲಿ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ 34 ರೂಟ್‌ಗಳಿದ್ದು, ಅವುಗಳಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ.
ಅಧಿಕಾರಿಗಳ ವಿವರ: ವಿಜಯಪುರ ಜಿಲ್ಲೆಯಲ್ಲಿ ಪ್ರತಿ ಮತಗಟ್ಟೆಗೆ ತಲಾ ಒಬ್ಬರು ಪಿ.ಆರ್.ಓ ಹಾಗೂ ಎ.ಪಿ.ಆರ್.ಓ ಮತ್ತು ಮೂವರು ಪಿ.ಓ ಸೇರಿ 5 ಜನ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇನ್ನುಳಿದಂತೆ ಅಧಿಕಾರಿಗಳ ತಂಡಗಳು ಕೆಲಸ ನಿರ್ವಹಿಸುತ್ತಿವೆ ಎಂದರು. ಮತಗಟ್ಟೆ ಸಿಬ್ಬಂದಿಗೆ ಈಗಾಗಲೇ ಮತಗಟ್ಟೆವಾರು, ಸ್ಯಾನಿಟೈಜರ್, ಹ್ಯಾಂಡ್ ಗ್ಲೌಸ್, ಎನ್-95 ಮಾಸ್ಕ, ಹ್ಯಾಂಡ್ ವಾಶ್, ತ್ರೀ ಲೇಯರ್ ಗ್ಲೌಸ್ ಇರುವ ಕೋವಿಡ್-19 ಕೀಟ್‌ಗಳನ್ನು ವಿತರಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲೂ ಕೋವಿಡ್-19ರ ತಪಾಸಣೆ ಕುರಿತು ಈಗಾಗಲೇ ಒಬ್ಬ ಮೆಡಿಕಲ್ ಆಫೀಸರ್, ಎಎನ್‌ಎಂ, ಆಶಾ ಇವರನ್ನು ನೇಮಕ ಮಾಡಲಾಗಿದೆ.
ಇವರ ಮೇಲೆ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ನೋಡಲ್ ಅಧಿಕಾರಿಗಳು ಎಂದು ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು. ಜೂನ್ 11ರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಜೂನ್ 13ರ ಮಧ್ಯೆ ರಾತ್ರಿ 12 ಗಂಟೆಯವರೆಗೆ ಶುಷ್ಕ ದಿನ ಎಂದು ಘೋಷಣೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜೂನ್ 13ರಂದು ಮತದಾನ ನಡೆಯುವ ಹಿನ್ನಲೆಯಲ್ಲಿ ಜೂನ್ 11ರ ಸಂಜೆ 5ಗಂಟೆಯಿಂದ ಅನ್ವಯವಾಗುವಂತೆ ಜೂನ್ 14ರವರೆಗೆ ಪ್ರತಿಬಂಧಕಾಜ್ಞೆ 144 ಸೆಕ್ಷನ್‌ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯಲು ಸಹಕಾರ: ಕರ್ನಾಟಕ ವಾಯುವ್ಯ ಶಿಕ್ಷಕರ ಹಾಗೂ ವಾಯವ್ಯ ಪದವೀಧರ ಮತಕ್ಷೇತ್ರದ ಚುನಾವಣೆಯ ಎಲ್ಲ ಪ್ರಕ್ರಿಯೆಗಳನ್ನು ಯಾವುದೇ ನೂನ್ಯತೆಗಳಿಲ್ಲದೇ, ಸುಗಮವಾಗಿ ನಡೆಸಲು ಕಂದಾಯ ಇಲಾಖೆಗೆ ಸಹಕಾರ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೆಚ್.ಡಿ.ಆನಂದಕುಮಾರ ಅವರು ತಿಳಿಸಿದರು. ಚುನಾವಣೆಯಲ್ಲಿ ಬಂದೋಬಸ್ತಗಾಗಿ 47 ಮತಗಟ್ಟೆಗಳಲ್ಲಿ ಮೂರು ಡಿವೈಎಸ್ಪಿ, 11 ಸಿಪಿಐ ಮತ್ತು ಪಿಐ, 16 ಪಿಎಸ್‌ಐ ಮತ್ತು ಎಎಸ್‌ಐ, 18 ಎಎಸ್‌ಐ, 80 ಸಿಎಚ್‌ಸಿ, 193 ಸಿಪಿಸಿ ಸೇರಿದಂತೆ 12 ಡಿಎಆರ್ ತುಕಡಿಗಳು ಮತ್ತು 3 ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಈ ಚುನಾವಣೆಯಲ್ಲಿ 29 ಸಾಮಾನ್ಯ ಮತಗಟ್ಟೆಗಳು, 15 ಸೂಕ್ಷ್ಮ ಮತಗಟ್ಟೆಗಳು ಮತ್ತು 3 ಅತೀ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.
ವಿಜಯಪುರ: ಕೂಡಗಿ ಎನ್‌ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ಅವಘಡ
ಸೂಕ್ಷ್ಮ 14 ಹಾಗೂ ಅತೀ ಸೂಕ್ಷ್ಮ 3 ಮತಗಟ್ಟೆಗಳು ಸೇರಿ ಒಟ್ಟು 17 ಮತಗಟ್ಟೆಗಳಲ್ಲಿ ವೆಬ್ ಕ್ಯಾಮರಾ ಅಳವಡಿಸಲಾಗದೆ. ಸಾಮಾನ್ಯ 5 ಹಾಗೂ ಸೂಕ್ಷ್ಮ 1 ಸೇರಿ ಒಟ್ಟು 06 ಮತಗಟ್ಟೆಗಳಲ್ಲಿ ವಿಡಿಯೋ ಗ್ರಾಫರ್‌ಗಳನ್ನು ನಿಯೋಜಿಸಲಾಗಿದೆ. ಅತೀ ಸೂಕ್ಷ್ಮ ಮತಗಟ್ಟೆಗೆ ಒಬ್ಬ ಎಎಸ್‌ಐ, ತಲಾ ಇಬ್ಬರು ಹೆಡ್ ಕಾನಸ್ಟೇಬಲ್ ಮತ್ತು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗೆ ತಲಾ ಒಬ್ಬರು ಎಎಸ್‌ಐ ಮತ್ತು ಹೆಡ್ ಕಾನಸ್ಟೇಬಲ್ ಮತ್ತು ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಸಾಮಾನ್ಯ ಮತಗಟ್ಟೆಗೆ ಒಬ್ಬರು ಹೆಡ್ ಕಾನಸ್ಟೇಬಲ್ ಮತ್ತು ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.