ಕೊರೋನಾಕ್ಕೆ ಬಲಿಯಾದವರ ದೇಹದಿಂದ ಅಂಗಾಂಗ ತೆಗೆಯಲಾಗುತ್ತಿದೆಯೆ?:ಲಕ್ಷ್ಮೀ ಹೆಬ್ಬಾಳ್ಕರ್‌

By Kannadaprabha NewsFirst Published Aug 29, 2020, 2:10 PM IST
Highlights

ಅಂಗಾಂಗ ತೆಗೆಯುತ್ತಿರುವ ಬಗ್ಗೆ ಕೊರೋನಾ ರೋಗಿಗಳ ಕುಟುಂಬಸ್ಥರ ಅನುಮಾನ| ಆರೋಗ್ಯ ಅಭಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೇಳಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌| ಜ್ವರ, ನೆಗಡಿ ಬಂದರೆ ಆಸ್ಪತ್ರೆಗೆ ತೆರಳಲು ಹಳ್ಳಿಯ ಜನ ಭಯ ಪಡುತ್ತಿದ್ದಾರೆ. ಅವರಿಗೆ ಕಾಂಗ್ರೆಸ್‌ ಆರೋಗ್ಯ ಅಭಯ ಹಸ್ತ ನೆರವಿಗೆ ಬರುತ್ತಿದೆ|

ಹುಬ್ಬಳ್ಳಿ(ಆ.29): ಕೊರೋನಾ ಸೋಂಕು ದೃಢಪಟ್ಟ ಒಂದೆರಡು ದಿನಗಳಲ್ಲಿ ಕೆಲವರು ಮೃತಪಡುತ್ತಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಮನೆಯವರಿಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಮೃತಪಟ್ಟ ವ್ಯಕ್ತಿಯ ದೇಹದ ಯಾವುದಾದರೂ ಅಂಗಗಳನ್ನು ತೆಗೆಯಲಾಗುತ್ತಿದೆಯೆ? ಎಂಬ ಅನುಮಾನವನ್ನು ಸೋಂಕಿತರ ಕುಟುಂಬಸ್ಥರು ವ್ಯಕ್ತಪಡಿಸುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

ನಗರದ ಭೈರಿದೇವರಕೊಪ್ಪದಲ್ಲಿ ಶುಕ್ರವಾರ ಆರೋಗ್ಯ ಅಭಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹತ್ತು ಮಂದಿಗೆ ಸೋಂಕು ತಗುಲಿದರೆ ಅದರಲ್ಲಿ 5 ಜನ ಸಾಯುತ್ತಿದ್ದಾರೆ. ಅವರು ಕೊರೋನಾ ಕಾರಣಕ್ಕೆ ಸಾಯುತ್ತಿದ್ದಾರೋ ಅಥವಾ ಭಯಪಟ್ಟು ಮೃತಪಡುತ್ತಿದ್ದಾರೊ ಗೊತ್ತಿಲ್ಲ. ಕೊರೋನಾ ಹೆಸರಲ್ಲಿ ಹಣ ಲೂಟಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆಸ್ಪತ್ರೆಗಳು 300 ಚಿಕಿತ್ಸೆಗೆ 3 ರಿಂದ 5 ಲಕ್ಷ ಬಿಲ್‌ ಮಾಡುತ್ತಿದ್ದಾರೆ. ಕೋವಿಡ್‌ ದೃಢಪಟ್ಟ ಕೆಲವರು ಎರಡೇ ದಿನದೊಳಗೆ ಮೃತರಾಗುತ್ತಿದ್ದಾರೆ. ಅವರ ದೇಹವನ್ನು ಮನೆಯವರಿಗೂ ನೀಡದೆ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಹೀಗಾಗಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಯಾರನ್ನು ದೂರಬೇಕು ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ: ಖ್ಯಾತ ವೈದ್ಯ ಕರ್ಪೂರಮಠ ಇನ್ನಿಲ್ಲ

ಜನರು ಕೊರೋನಾ ಕಾರಣಕ್ಕೆ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ರಾಜಕೀಯವೇ ಮುಖ್ಯವಾಗಿದೆ. ಕಾಂಗ್ರೆಸ್‌ ಜನಸಾಮಾನ್ಯರ ಪರವಾಗಿ ನಿಲ್ಲುವ ಪಕ್ಷವಾಗಿದ್ದು, ನಮ್ಮ ಖಜಾನೆ ತುಂಬಿಸಿಕೊಳ್ಳಲು ಬಂದಿಲ್ಲ. ಮಾಜಿ ಪ್ರಧಾನಿ ವಾಜಪೇಯಿ ಒಬ್ಬ ಸಂಸದರಿಂದ ಸರ್ಕಾರ ಕಳೆದುಕೊಂಡಾಗ, ಖರೀದಿ ವ್ಯವಹಾರಕ್ಕೆ ಇಳಿಯದೆ ಆದರ್ಶ ಮೆರೆದರು. ಅವರ ಪ್ರಾಮಾಣಿಕ ರಾಜಕಾರಣ ಸ್ತುತ್ಯಾರ್ಹ ಎಂದರು.

ಭಾರತದಲ್ಲಿ ಕೊರೋನಾ ವೈರಸ್‌ ಕಾಲಿಡುವುದಕ್ಕೆ ಮುನ್ನವೇ, ಫೆಬ್ರವರಿಯಲ್ಲೇ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಕೂಡಲೇ ತುರ್ತು ಕ್ರಮ ಕೈಗೊಳ್ಳಲು ಸಲಹೆ ನೀಡಿದ್ದರು. ಆದರೆ, ಕೇಂದ್ರ ಸರ್ಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸುವ ಕಸರತ್ತು ನಡೆಸುತ್ತಿತ್ತು. ಏಕಾಏಕಿ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಜನತೆ ಸಂಕಷ್ಟಅನುಭವಿಸಿದ್ದಾರೆ ಎಂದರು.

ಜ್ವರ, ನೆಗಡಿ ಬಂದರೆ ಆಸ್ಪತ್ರೆಗೆ ತೆರಳಲು ಹಳ್ಳಿಯ ಜನ ಭಯ ಪಡುತ್ತಿದ್ದಾರೆ. ಅವರಿಗೆ ಕಾಂಗ್ರೆಸ್‌ ಆರೋಗ್ಯ ಅಭಯ ಹಸ್ತ ನೆರವಿಗೆ ಬರುತ್ತಿದೆ. ತರಬೇತಿ ಪಡೆದ ಕಾರ್ಯಕರ್ತರು ಜನರ ಆರೋಗ್ಯ ತಪಾಣೆ ಮಾಡುತ್ತಿದ್ದು, ಚಿಕಿತ್ಸೆಯ ಅಗತ್ಯವಿದ್ದರೆ ಪಕ್ಷದ ಆರೋಗ್ಯ ಸೆಲ್‌ ಮೂಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದರು. ಈ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಸನ್ಮಾನಿಸಿದರು. ರಜತ್‌ ಉಳ್ಳಾಗಡ್ಡಿಮಠ, ಹನುಮಂತ, ಸಮೀರಖಾನ್‌, ವೀರಣ್ಣ ನೀರಲಗಿ ಇದ್ದರು.
 

click me!