ಕಲಬುರಗಿಯಿಂದ ಒಂದಾದ ಮೇಲೊಂದರಂತೆ ಅನ್ಯ ಜಿಲ್ಲೆಗಳಿಗೆ ಸರ್ಕಾರ ಕಚೇರಿಗಳು ಸ್ಥಳಾಂತರಕ್ಕೆ ಲಕ್ಷ್ಮಣ ದಸ್ತಿ ಆಕ್ರೋಶ| ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ| ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಬಗ್ಗೆ ತನ್ನ ನಿಲುವು ಏನೆಂಬುವದು ಸ್ಪಷ್ಟಪಡಿಸಬೇಕು|
ಕಲಬುರಗಿ(ಡಿ.27): ಒಂದಾದ ಮೇಲೊಂದರಂತೆ ಸರ್ಕಾರದ ಕಚೇರಿಗಳನ್ನು ಅನ್ಯ ಜಿಲ್ಲೆಗಳಿಗೆ ಶಿಫ್ಟ್ ಮಾಡೋದು, ಕೆಕೆಆರ್‌ಡಿಬಿಗೆ ಅನುದಾನ ನೀಡದೆ ಇರೋದು ಸೇರಿದಂತೆ ಇಂತಹ ಅನ್ಯಾಯಗಳೇ ಪ್ರತ್ಯೇಕ ರಾಜ್ಯದ ಕೂಗಿಗೆ ಬಲ ತುಂಬುತ್ತಿವೆ ಎಂದು ಹೈ-ಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಸರ್ಕಾರದ ಧೋರಣೆ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ರಾಜ್ಯ ಸರ್ಕಾರ ಮೂಗಿಗೆ ತುಪ್ಪ ಸವರುವಂತೆ ನಮ್ಮ ಪ್ರದೇಶಕ್ಕೆ ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ ನಾಮಕರಣ ಮಾಡಿದೆ. ಆದರೆ ಇದಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಮಲಧೋರಣೆ ಅನುಸರಿಸುತ್ತಿರುವುದನ್ನು ನೋಡಿದರೆ, ಸರ್ಕಾರವೇ ಪ್ರತ್ಯೇಕ ರಾಜ್ಯ ಕೇಳಿರಿ ಎಂಬುದಕ್ಕೆ ಪೂರಕವಾಗಿ ವರ್ತಿಸುತ್ತಿದೆ ಎಂದು ಖಂಡಿಸಿದರು.
ಬ್ರಿಟನ್ ವಿವಿಯಲ್ಲಿ ಕಲಬುರಗಿಯ ರಶ್ಮಿ ಪಾಟೀಲ್‌ಗೆ ಮೊದಲ ರ‍್ಯಾಂಕ್
ನಮ್ಮ ಭಾಗಕ್ಕೆ ಮಲತಾಯಿ ಧೋರಣೆ:
ಸರ್ಕಾರ ನಮ್ಮ ಪ್ರದೇಶಕ್ಕೆ ಮಂತ್ರಿ ಮಂಡದಲ್ಲಿ ಪ್ರಾತಿನಿಧ್ಯ ನೀಡಿಲ್ಲ. ನಮಗೆ ನೀಡಬೇಕಾದ ಅನುವಾದದಲ್ಲಿ ಕಡಿತ ಮಾಡಿದೆ. ನಾಮಕೇವಾಸ್ತೆ ಉಸ್ತುವಾರಿ ಸಚಿವರವನ್ನು ನೇಮಕ ಮಾಡಿದೆ. ಭರವಸೆ ನೀಡಿದಂತೆ ವಿಶೇಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ ಮಾಡಿಲ್ಲ. 371ನೇ ಕಲಂನ ವಿಶೇಷ ಕೋಶ ಕಚೇರಿಯ ಪ್ರಾದೇಶಿಕ ಕಚೇರಿಯನ್ನು ಕಲಬುರಗಿಯಲ್ಲಿ ಅಸ್ತಿತ್ವಕ್ಕೆ ತಂದಿಲ್ಲ. 371ನೇ ಕಲಂ ತಿದ್ದುಪಡಿಯ ನಿಯಮಗಳಲ್ಲಿರುವ ದೋಷಗಳ ನಿವಾರಣೆ ಮಾಡಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ನಮ್ಮಲ್ಲಿರುವ ಪ್ರಾದೇಶಿಕ ಮಟ್ಟದ ಕಚೇರಿಗಳು ಬೇರೆ ಜಿಲ್ಲೆಗಳಿಗೆ ಸ್ಥಳಾಂತರ ಮಾಡುತ್ತಿರುವುದು ನೋಡಿದರೆ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಶಾಸಕರು, ಸಂಸದರು ರಾಜೀನಾಮೆ ನೀಡಲಿ:
ಕೆಲವು ದಿನಗಳ ಹಿಂದೆ ಇಂಧನ ಪ್ರಾದೇಶಿಕ ಕಚೇರಿ ಬೇರೆಡೆಗೆ ಸ್ಥಳಾಂತರ ಮಾಡಿ, ಈಗ ಆಹಾರ ಪ್ರಯೋಗಾಲಯ ಕೇಂದ್ರ ಸ್ಥಳಾಂತರ ಮಾಡುತ್ತಿರುವುದು ನೋಡಿದರೆ ಸರ್ಕಾರದ ಅಸಲಿ ನಿಯತ್ತು ಏನೆಂಬುದು ಗೊತ್ತಾಗುತ್ತಿದೆ. ಇಂತಹ ಗಂಭೀರವಾದ ವಿಷಯಗಳಿಗೆ ನಮ್ಮ ಸಂಸದರು, ಶಾಸಕರು ಸವಾಲಾಗಿ ಸ್ವೀಕರಿಸಿ ಸ್ಥಳಾಂತರ ಮಾಡುತ್ತಿರುವ ಕಚೇರಿಗಳು ಇಲ್ಲೇ ಮುಂದುವರಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಬಗ್ಗೆ ತನ್ನ ನಿಲುವು ಏನೆಂಬುವದು ಸ್ಪಷ್ಟಪಡಿಸಬೇಕು. ಮುಂದೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಎಚ್ಚರಿಕೆ ನೀಡಿದ್ದಾರೆ.