ಬಿಜೆಪಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಕ್ಷಮೆಯಾಚಿಸಿದ ವಕೀಲ

By Kannadaprabha NewsFirst Published May 20, 2021, 1:27 PM IST
Highlights

* ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ವಿಚಾರ ಹರಿಬಿಡುತ್ತಿದ್ದ ವಕೀಲ
* ವಕೀಲರ ಮನೆಗೆ ಮುತ್ತಿಗೆ ಹಾಕಿ ಕ್ಷಮೆ ಯಾಚಿಸುವಂತೆ ಪಟ್ಟು ಹಿಡಿದ ಬಿಜೆಪಿ ಕಾರ್ಯಕರ್ತರು
* ಎಲ್ಲರೆದುರು ಕ್ಷಮೆ ಯಾಚಿಸಿದ ವಕೀಲ
 

ರಾಣಿಬೆನ್ನೂರು(ಮೇ.20): ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ, ಹಿಂದೂಪರ ಸಂಘಟನೆಗಳ ವಿರುದ್ಧ ಇಲ್ಲಸಲ್ಲದ ಹೇಳಿಕೆ ಹಾಗೂ ವಿಡಿಯೋಗಳನ್ನು ಹರಿಬಿಡುತ್ತಿದ್ದ ವಕೀಲರೊಬ್ಬರ ಮನೆಗೆ ಬಿಜೆಪಿ ಕಾರ್ಯಕರ್ತರು ಮಂಗಳವಾರ ರಾತ್ರಿ ಮುತ್ತಿಗೆ ಹಾಕಿದ್ದರಿಂದ ಅವರು ಕ್ಷಮೆಯಾಚಿಸಿದ ಘಟನೆ ನಡೆದಿದೆ.

ಕಳೆದ ಒಂದು ವರ್ಷದಿಂದ ನಗರದ ಈ ವಕೀಲರು ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ, ರೈತರ ಧರಣಿ, ಚಾಮರಾಜನಗರ ಘಟನೆಗಳಿಗೆ ಸಂಬಂಧಿಸಿದಂತೆ ಬಿಜೆಪಿ, ಹಿಂದೂಪರ ಸಂಘಟನೆಗಳು, ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಂಸದರು, ಸಚಿವರ ನಿಂದಿಸುತ್ತಾ ಬಂದಿದ್ದರು ಎನ್ನಲಾಗಿದೆ.

'ಯಡಿಯೂರಪ್ಪ ಸರ್ಕಾರದ ವಿಶೇಷ ಪ್ಯಾಕೇಜ್‌ ಬಡವರಿಗೆ ವರ'

ಮಂಗಳವಾರವೂ ಕೆಲವೊಂದು ಅವಾಚ್ಯ ಶಬ್ದಗಳನ್ನು ಬಿಜೆಪಿ ಮುಖಂಡರ ವಿರುದ್ಧ ಮಾತನಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ವಕೀಲರ ಮನೆಗೆ ಮುತ್ತಿಗೆ ಹಾಕಿ ಕ್ಷಮೆ ಯಾಚಿಸುವಂತೆ ಪಟ್ಟು ಹಿಡಿದರು. ಪ್ರತಿಭಟನಕಾರರ ಆಗ್ರಹಕ್ಕೆ ಮಣಿದು ವಕೀಲರು, ಎಲ್ಲರೆದುರು ಕ್ಷಮೆ ಯಾಚಿಸಿದರು.

ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ವಿಚಾರಗಳನ್ನು ಹರಿಬಿಡುತ್ತಿದ್ದ ವಕೀಲರ ಕ್ರಮಕ್ಕೆ ಬೇಸತ್ತ ಕಾರ್ಯಕರ್ತರು ಮಂಗಳವಾರ ರಾತ್ರಿ ಅವರ ಮನೆಗೆ ತೆರಳಿ ಕ್ಷಮೆ ಯಾಚಿಸುವಂತೆ ಒತ್ತಾಯಿಸುತ್ತಿದ್ದರು. ಈ ವಿಷಯ ಗೊತ್ತಾಗಿ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂಬ ಉದ್ದೇಶದಿಂದ ನಾನು ಅಲ್ಲಿಗೆ ತೆರಳಿ ಕಾರ್ಯಕರ್ತರನ್ನು ಹಿಂದಕ್ಕೆ ಕರೆತಂದಿದ್ದೇನೆ ಎಂದು ರಾಣಿಬೆನ್ನೂರು ಶಾಸಕ ಅರುಣಕುಮಾರ ಪೂಜಾರ ತಿಳಿಸಿದ್ದಾರೆ.
 

click me!