ಲಕ್ಷಾಂತರ ಭಕ್ತರಿಂದ ಅಮ್ಮನಿಗೆ ಕಣ್ಣೀರ ವಿದಾಯ| ಯಾನಾಗುಂದಿ ಮಾಣಿಕ್ಯ ಪೀಠದ ಮಹಾ ಮಂದಿರದಲ್ಲಿ ಮಾತಾ ಮಾಣಿಕೇಶ್ವರಿ ಅಂತ್ಯ ಸಂಸ್ಕಾರ| ಮಾತೆ ಮಾಣಿಕೇಶ್ವರಿ ಅನುಷ್ಠಾನಗೈದ ಸ್ಥಳದಲ್ಲೇ ನಡೆದ ಅಂತ್ಯ ಸಂಸ್ಕಾರ|
ಕಲಬುರಗಿ(ಮಾ.10): ತಮ್ಮ ನಿರಾಹಾರ, ಶಿವಧ್ಯಾನ, ಅಂಹಿಸಾ ಬೋಧನೆಯಿಂದಲೇ ಕೋಟಿಕೋಟಿ ಭಕ್ತರ ಮನ ಗೆದ್ದಿದ್ದ ’ಗಿರಿ ಯೋಗಿನಿ’ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿ ಬೆಟ್ಟದ ಭಕ್ತರ ಮಾಣಿಕ್ಯ ಮಾತಾ ಮಾಣಿಕೇಶ್ವರಿ ಅಮ್ಮನವರ ಕೈಲಾಸ ಯಾತ್ರೆಗೆ ಸೋಮವಾರ ಸೂರ್ಯನಂದಿ ಕ್ಷೇತ್ರದಲ್ಲಿ ಸೇರಿದ್ದ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಕಲ್ಯಾಣ ಕರ್ನಾಟಕದ ನಡೆದಾಡುವ ದೇವತೆಯಾಗಿ ಭಕ್ತರ ಮನಸೂರೆಗೊಂಡಿದ್ದ ಮಾತಾಜಿ ತಮ್ಮ ಸಮಾಧಿ ಸ್ಥಳವನ್ನು ಎರಡೂವರೆ ದಶಕದ ಹಿಂದೆಯೇ ಗುರುತಿಸಿದ್ದರು. ಮಠದ ಮೂಲಗಳ ಪ್ರಕಾರ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದಿಂದ ಅಮ್ಮನವರು ತಂದಿದ್ದ ಲಿಂಗವನ್ನು ಪ್ರತಿಷ್ಠಾಪಿಸಿ ಮಹಾ ಮಂದಿರವೆಂದು ಕರೆಯಲಾಗಿದ್ದ ಸ್ಥಳದಲ್ಲೇ ತಮ್ಮ ಅಂತಿಮ ಸಂಸ್ಕಾರ ನಡೆಯಬೇಕೆಂದು ಸಂಕಲ್ಪಿಸಿದ್ದರು.
ಅಮ್ಮನವರ ಸಂಕಲ್ಪದ್ತಂತೆಯೇ ಅಂತಿಮ ಯಾತ್ರೆಯ ಎಲ್ಲ ವಿಧಿ ವಿಧಾನಗಳನ್ನು ಯಾನಾಗುಂದಿ ಟ್ರಸ್ಟ್‌ನ ಸದಸ್ಯರು ಸೇರಿಕೊಂಡು ನಡೆಸಿಕೊಟ್ಟರು. ಗುಹೆಯಲ್ಲಿ ನಿರ್ಮಿಸಲಾಗಿರುವ ಶಿವಲಿಂಗದಲ್ಲಿ ಅಮ್ಮನ ಪಾರ್ಥಿವ ಶರೀರ ಕುಳ್ಳರಿಸಿ ಅಂತ್ಯ ಸಂಸ್ಕಾರ ನಡೆಸಲಾಯ್ತು. ಮಧ್ಯಾಹ್ನ 3 ಗಂಟೆಗೆ ನಡೆದ ಮಾತಾಜಿ ಲಿಂಗೈಕ್ಯರಾಗುವ ಸಂಪ್ರದಾಯ ಕಮ್ತುಂಬಿಸಿಕೊಂಡ ಲಕ್ಷಾಂತರ ಭಕ್ತುರ ’ಮಾತಾಜಿ ಮತ್ತೆ ಹುಟ್ಟಿ ಬಾ...’ ಎಂದು ಹೇಳಿದ ಘೋಷಣೆ ಮುಗಿಲು ಮುಟ್ಟಿತ್ತು.
undefined
‘ನಾನೂ ಪುನರ್ಜನ್ಮ ಪಡೆದು ಬರುವೆ : ಮಾತೆ ಮಾಣಿಕೇಶ್ವರಿ ಭವಿಷ್ಯವಾಣಿಗಳಿವು'
ಸೋಮವಾರ ಮಧ್ಯಾಹ್ನ ವೀರಶೈವ ಸಂಪ್ರದಾಯದಂತೆ ನೆರವೇರಿತು ಅಂತಿಮ ವಿಧಿವಿಧಾನ, ಶ್ರೀಶೈಲ, ಯಾನಾಗುಂದಿಯ ಪುರೋಹಿತರ ತಂಡದಿಂದ ವೇದಘೋಷ, ಪೂಜೆ ನಡೆದಾದ ಮೇಲೆ ಅಂತಿಮ ವಿಧಿಯ ಪ್ರಕಾರ ಅಮ್ಮನವರಿಗೆ ನಾಗಸಿಂಹಾಸನದಲ್ಲಿ ವಿಶೇಷ ಪೂಜೆ ನಡೆಸಲಾಯ್ತು. ನಂತರ ನಾಗಸಿಂಹಾಸನದ ಕೆಳಗಡೆಯಿರುವ ಲಿಂಗಾಕಾರದ ಪುಟ್ಟ ಗುಹೆಯಲ್ಲಿ ಅಮ್ಮನವರ ಪಾರ್ಥೀವ ಶರೀರವಿಟ್ಟು ಪೂಜೆ ಸಲ್ಲಿಸಲಾಯ್ತು.
ವೇದಮಂತ್ರಗಳ ಪಠಣ- ಪೂಜೆ- ಪುನಸ್ಕಾರ:
ಮಧ್ಯಾಹ್ನ 3 ಗಂಟೆಗೆ ಮಾತಾಜಿ ಪಾರ್ಥಿವ ಶರೀರವನ್ನು ಸೂರ್ಯನಂದಿ ಕ್ಷೇತ್ರದಲ್ಲಿ ಮಹಾಮಂದಿರದ ಒಳಗೆ ಇದ್ದ ಕಲ್ಲಿನ ಲಿಂಗದೊಳಗೆ ಇಟ್ಟಾಗ 8 ದಶಕಗಳ ಯೋಗಿನಿ ಮಾತಾ ಮಾಣಿಕೇಶ್ವರಿ ಲಿಂಗದಲ್ಲಿ ಲೀನವಾದರು. ಅಮ್ಮನವರ ದೀರ್ಘ ಕಾಲದ ಒಡನಾಡಿಯಾಗಿದ್ದಂತಹ ಶಿವಯ್ಯ ಸ್ವಾಮಿ, ಶ್ರೀಶೈಲದಿಂದ ಆಗಮಿಸಿದ್ದಂತಹ ಮಲ್ಲಿಕಾರ್ಜುನ ಸ್ವಾಮಿ, ಲಕ್ಷ್ಮಣ ಸ್ವಾಮಿ ಅವರಿಂದ ಅಂತಿಮ ವಿಧಿವಿಧಾನ ಗುಹೆಯಲ್ಲಿಯೇ ನೆರವೇರಿದವು. ನಂತರ ಶಿವಲಿಂಗದಲ್ಲಿ ಅಮ್ಮನ ಪಾರ್ಥಿವ ಶರೀರ ಕುಳ್ಳರಿಸಿ ಅಂತ್ಯ ಸಂಸ್ಕಾರ ನಡೆಸಲಾಯ್ತು. ಶಿಲೆಯಲ್ಲಿ ನಿರ್ಮಿಸಲಾಗಿದ್ದ ಲಿಂಗದಲ್ಲಿ ವಿಭೂತಿ, ಏಕಬಿಲ್ವಪತ್ರದಳಗಳು, ತುಳಸಿ, ಗಂಧದ ಕಟ್ಟಿಗೆ ಇಡಲಾಯ್ತು. ಅರ್ಧಗಂಟೆ ನಿರಂತರ ನಡೆದ ವೇದ ಘೋಷ ಮಂತ್ರಗಳು ಇಡೀ ಬೆಟ್ಟದಲ್ಲಿ ಮಾರ್ದನಿಸಿದಾಗ ಮಾತೆಯ ಭಕ್ತರ ಕಣ್ಮಾಲಿಗಳು ತುಂಬಿ ಬಂದವು. ಎಲ್ಲರೂ ಆ ಕ್ಷಣದಲ್ಲಿ ಭಾವ ಪರವಶರಾಗಿ ಕಣ್ಣೀರಿಟ್ಟರು.
‘ಲಕ್ಷಾಂತರ ಭಕ್ತರ ಬಯಕೆ ಈಡೇರಿಸಿದ್ದ ಮಾಣಿಕೇಶ್ವರಿ ಅಮ್ಮನ ಕೊನೆಯ ಆಸೆ ಈಡೇರಲೇ ಇಲ್ಲ’
ಸನಾತನ ಹಿಂದು ಸಂಪ್ರಾದಾಯ ಪ್ರಕಾರ ಸರಳವಾಗಿ ಪೂಜೆಯನ್ನು ನೆರವೇರಿಸಿ ಅರತಿ ಬೆಳಗಿಸಿ ಲಿಂಗದಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಐಕ್ಯಗೊಳಿಸುವ ಪ್ರಕ್ರಿಯೆ ನಡೆಯಿತು. ಕಳೆದ ಶನಿವಾರ ಲಿಂಗೈಕ್ಯಯಾದ ಮಾತಾಜಿ ಅವರನ್ನು ಭಾನುವಾರದಿಂದ ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೆ ಭಕ್ತರಿಗೆ ದರ್ಶನದ ಭಾಗ್ಯ ಕಲ್ಪಿಸಿದ್ದರು.
ಸೋಮವಾರ ಅಂತಿಮ ದರ್ಶನ ಪಡೆಯಲು ತೆಲಂಗಾಣ, ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ 7 ರಿಂದ 8 ಲಕ್ಷದಷ್ಟು ಭಕ್ತರು ಬೆಟ್ಟದ ಮೇಲೆ ಸೇರಿದ್ದರು. ಯಾದಗಿರಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಸರ್ಕಾರದ ಪ್ರತಿನಿಧಿಯಾಗಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಹೈ.ಕ ಭಾಗದ ನಡೆದಾಡುವ ದೇವರು ಮಾತಾ ಮಾಣಿಕೇಶ್ವರಿ ಲಿಂಗೈಕ್ಯ
ಮಧ್ಯಾಹ್ನ 12.58 ನಿಮಿಷಕ್ಕೆ ಸರ್ಕಾರದ ಗೌರವಗಳನ್ನು ಮಾತೆಗೆ ಅರ್ಪಿಸಲಾಯ್ತು. ಪೊಲೀಸರು ಗಾಳಿಯಲ್ಲಿ ಮೂರು ಸಲ ಕುಶಾಲು ತೋಪು ಹಾರಿಸುವ ಮೂಲಕ ಹಾಗೂ ಪೊಲೀಸ್ ಬ್ಯಾಂಡ್ ಶೋಕಗೀತೆ ನುಡಿಸುವ ಮೂಲಕ ಮಾತೆಗೆ ಗೌರವ ನಮನ ಸಲ್ಲಿಸಿದರು. ಮಾತಾಜಿ ಅಂತಿಮ ದರ್ಶನಕ್ಕಾಗಿ ಕಲ್ಯಾಣ ಕರ್ನಾಟಕದ ಅನೇಕ ಮಠಗಳ ಸ್ವಾಮೀಜಿಗಳು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸೇಡಂ ಶಾಸಕರಾದ ರಾಜಕುಮಾರ ಪಾಟೀಲ್, ಸಂಸದ ಭಗವಂತ ಖೂಬಾ, ಎಂಎಲ್ಸಿ ಬಿಜಿ ಪಾಟೀಲ್, ಬಸವರಾಜ ಪಾಟೀಲ್ ಸೇಡಂ, ಬಾಬುರಾವ ಚಿಂಚನಸೂರ್ ಹಾಗೂ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಮಹಾ ಸ್ವಾಮಿಗಳು, ಅಬ್ಬೆತುಮಕೂರಿನ ಗಂಗಾಧರ ವಿಶ್ವರಾಧ್ಯ ಸ್ವಾಮೀಜಿ, ರಾಯಚೂರಿನ ಪ್ರಭು ಸ್ವಾಮಿ, ಸುಲೇಪೇಟ್‌ನ ವೀರಭದ್ರ ತಪಸ್ವಿ ಶಿವಾಚಾರ್ಯರು, ಭರತನೂರ ಮಠದ ಗುರುನಂಜೇಶ್ವರ ಸ್ವಾಮಿ ಮುಂತಾದವರು ಬಂದು ಮಾತಾಜಿ ಅಂತಿಮ ದರ್ಶನ ಪಡೆದುಕೊಂಡರು.
ವೀರಶೈವ ಪದ್ಧತಿಯಲ್ಲಿ ವಿಧಿವಿಧಾನ ಯಾನಾಗುಂದಿ:
ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅಮ್ಮನವರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನ 3.15ಕ್ಕೆ ಕಲ್ಲಿನ ಲಿಂಗದಲ್ಲಿ ವೀರಶೈವ ಪದ್ಧತಿಯಲ್ಲಿ ಐಕ್ಯಗೊಳಿಸಿದರು. ಬೀದರನ ಮಾಣಿಕ್ಯಗಿರಿ ಸಂಸ್ಥಾನದ ಅಪ್ಪಸಾಹೇಬ್ ಮಹಾರಾಜರ ಸ್ವಾಮಿಯ ಆಶ್ರಮದ ಮಹಾಸ್ವಾಮಿ ವಿಶ್ವನಾಥ ಶಾಸ್ತ್ರೀ ಮತ್ತು ಶ್ರೀಶೈಲಂನ ನಂದಿಶ್ವರ ಸ್ವಾಮಿ ಹಾಗೂ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಮೂವರು ವೇದಮಂತ್ರಗಳನ್ನು ಪಠಿಸುತ್ತ ರುದ್ರಾಭಿಷೇಕ, ಮಹಾಪೂಜೆಯನ್ನು ಮಾಡುತ್ತಾ ಮಾತಾಜಿಯನ್ನು ಸಮಾಧಿ ಮಾಡಿದರು. 30 ಪಾಕೇಟ್ ವಿಭೂತಿ, 20 ಕ್ವಿಂಟಾಲ್ ಏಕ ಬಿಲ್ವಪತ್ರೆ, ಉಪ್ಪುನ್ನು ಮಹಾಮಂದಿರದಲ್ಲಿರುವ ಕಲ್ಲಿನ ಲಿಂಗದಲ್ಲಿ ಹಾಕಿ ಮಾತಾಜಿ ಪಾರ್ಥಿವ ಶರೀರವನ್ನು ಐಕ್ಯಗೊಳಿಸಿದರು
ಧ್ಯಾನಕ್ಕೆ ಕುಳಿತ ಭಂಗಿಯಲ್ಲಿ ಮಾತೆ ಲಿಂಗೈಕ್ಯ
ಧ್ಯಾನದಿಂದಲೇ ಮಾತೆ ಪ್ರಸಿದ್ಧರಾದವರು. ಅವರ ಪಾರ್ಥೀವ ಶರೀರವನ್ನು ಲಿಂಗದಲ್ಲಿ ಲೀನಗೊಳಿಸುವಾಗಲೂ ಸಹ ಭಕ್ತರು, ಅನುಯಾಯಿಗಳು ಧ್ಯಾನಕ್ಕೆ ಕುಳಿತ ಭಂಗಿಯಲ್ಲೇ ಅವರನ್ನು ಲಿಂಗದೊಳಗಿಟ್ಟಿದ್ದು ವಿಶೇಷವಾಗಿತ್ತು. ಪದ್ಮಾಸನದಲ್ಲಿ ಮಾತಾಜಿಯನ್ನು ಮಲಗಿಸಿ ಭಕ್ತರಿಗೆ ಅಂತಿಮ ದರುಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದೇ ಭಂಗಿಯಲ್ಲಿ ಮಾತೆಯವನ್ನು ಕುಳ್ಳಿರಿಸಿ ಲಿಂಗೈಕ್ಯಗೊಳಿಸುವಾಗ ಕಣ್ಣುಗಳನ್ನು ತೆರೆದ ಸ್ಥಿತಿಯಲ್ಲಿಯೇ ಇರುವಂತೆ ನೋಡಿಕೊಳ್ಳಲಾಯ್ತು.
30 ಪೊಟ್ಟಣ ವಿಭೂತಿ, 20 ಕೆಜಿ ಬಿಲ್ವಪತ್ರಿ ದಳಗಳು, ಉಪ್ಪು ಅಂತಿಮ ವಿಧಿಯಲ್ಲಿ ಬಳಸಲಾಯ್ತು. ಸಕಲ ವಿಧಿ ವಿಧಾನಗಳೊಂ ದಿಗೆ ನಡೆದಂತಹ ಅಂತ್ಯ ಸಂಸ್ಕಾರಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಕಾಯಕ ತತ್ವ ಮತ್ತು ಅಹಿಂಸಾ ತತ್ವವನ್ನು ಬೋಧಿಸಿ, ಕಾಮ- ಕ್ರೋಧಾದಿ ಅರಿಷಡ್ ವರ್ಗಗಳನ್ನೆಲ್ಲ ಗೆದ್ದು, ಶಿವನ ದರ್ಶನಕ್ಕಾಗಿ ಕೈಲಾಸದ ಕಡೆ ವೀರಧರ್ಮಜಾ ಮಾತಾ ಮಾಣಿಕೇಶ್ವರಿ ಅವರು ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದರು
* ಎರಡೂವರೆ ದಶಕದ ಹಿಂದೆಯೇ ನಿರ್ಧಾರವಾಗಿತ್ತು ಅಂತ್ಯ ಸಂಸ್ಕಾರದ ಸ್ಥಳ
* ಸೋಮವಾರ ಮಧ್ಯಾಹ್ನ ಶಿವ ಸಂಪ್ರದಾಯದಂತೆ ನೆರವೇರಿತು ಅಂತಿಮ ವಿಧಿ
* ಶ್ರೀಶೈಲ, ಯಾನಾಗುಂದಿಯ ಪುರೋಹಿತರ ತಂಡದಿಂದ ವೇದಘೋಷ, ಪೂಜೆ
* ಅಂತಿಮ ವಿಧಿಯ ಪ್ರಕಾರ ಅಮ್ಮನವರಿಗೆ ನಾಗಸಿಂಹಾಸನದಲ್ಲಿ ವಿಶೇಷ ಪೂಜೆ
* ನಾಗಸಿಂಹಾಸನದ ಕೆಳಗಡೆಯಿರುವ ಲಿಂಗಾಕಾರದ ಪುಟ್ಟ ಗುಹೆಯಲ್ಲಿ ಅಮ್ಮ ಲೀನ