ನಿರಂತರ ಮಳೆಯಿಂದಾಗಿ ಮಲೆನಾಡು ದಿನೇ ದಿನೇ ನಲುಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಡ ಹಲವು ಅನಾಹುತಗಳು ಸಂಭವಿಸಿದ್ದು, ಶೃಂಗೇರಿ ತಾಲೂಕಿನ ನೇರಳೆಕೊಡಿಗೆ ಬಳಿ ರಾಜ್ಯ ಹೆದ್ದಾರಿ ಸುಮಾರು ಕೊಚ್ಚಿ ಹೋಗಿದ್ದು ಭೂ ಕುಸಿತದಿಂದ ಮನೆಯೊಳಗೆ ಭಾರಿ ಪ್ರಮಾಣದ ಮಣ್ಣು ಹೋಗಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ.
ಚಿಕ್ಕಮಗಳೂರು: ನಿರಂತರ ಮಳೆಯಿಂದಾಗಿ ಮಲೆನಾಡು ದಿನೇ ದಿನೇ ನಲುಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಡ ಹಲವು ಅನಾಹುತಗಳು ಸಂಭವಿಸಿದ್ದು, ಶೃಂಗೇರಿ ತಾಲೂಕಿನ ನೇರಳೆಕೊಡಿಗೆ ಬಳಿ ರಾಜ್ಯ ಹೆದ್ದಾರಿ ಸುಮಾರು ಕೊಚ್ಚಿ ಹೋಗಿದ್ದು ಭೂ ಕುಸಿತದಿಂದ ಮನೆಯೊಳಗೆ ಭಾರಿ ಪ್ರಮಾಣದ ಮಣ್ಣು ಹೋಗಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಕೊಪ್ಪ, ಎನ್ ಆರ್ ಪುರದಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಶೃಂಗೇರಿ ತಾಲೂಕಿನಲ್ಲಿ ಮಳೆ ಭಾರೀ ಅನಾಹುತಗಳಿಗೆ ಕಾರಣವಾಗಿದೆ.
ಶೃಂಗೇರಿ ತಾಲೂಕಿನ ನೇರಳೆಕೊಡಿಗೆ ಬಳಿ ರಾಜ್ಯ ಹೆದ್ದಾರಿ ಸುಮಾರು ದೂರ ಕೊಚ್ಚಿ ಹೋಗಿದ್ದು ಸುಮಾರು 100 ಮೀಟರ್‌ನಷ್ಟು ರಸ್ತೆ ಕೊಚ್ಚಿಹೋಗಿ ಭಾರೀ ಪ್ರಮಾಣದ ಕಂದಕ ನಿರ್ಮಾಣಗೊಂಡಿದೆ. ಇದರಿಂದ ಶೃಂಗೇರಿ-ಆಗುಂಬೆ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಕಡಿತಗೊಂಡಿದೆ. ಮಳೆ ಇನ್ನೂ ಮುಂದುವರಿದಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ.
Chikkamagaluru: ಮಲೆನಾಡಿನಲ್ಲಿ ಮಹಾಮಳೆಯಿಂದ ತತ್ತರಿಸಿದ ಜನರು: ಕುಸಿದ ಶಾಲಾ ಕೊಠಡಿ
ಮನೆಯ ಹಿಂಬದಿಯ ಗುಡ್ಡ ಕುಸಿತದಿಂದ ಕೆಳಭಾಗದ ಮನೆಗೆ ಭಾರೀ ಪ್ರಮಾಣದ ಮಣ್ಣು ಸಂಗ್ರಹಣೆಗೊಂಡು ಲಕ್ಷಾಂತರ ರೂ.ನಷ್ಟ ಸಂಭವಿಸಿದ ಘಟನೆ ಶೃಂಗೇರಿ ತಾಲೂಕಿನ ಬೆಳ್ಳಂದೂರು ಗ್ರಾಮದಲ್ಲಿ ನಡೆದಿದೆ. ಸಾಹಿತಿ ಗಣೇಶ ಹೆಗ್ಡೆ ಎಂಬುವವರ ಮನೆಗೆ ಮಣ್ಣು ಹಾಗೂ ನೀರು ನುಗ್ಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೀಡಾಗಿವೆ. ಇದರೊಂದಿಗೆ ನೂರಾರು ಪುಸ್ತಕಗಳು ಸಹ ಹಾಳಾಗುವ ಸ್ಥಿತಿಯಲ್ಲಿದ್ದು, ಅವುಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಮನೆ ಹಿಂಬದಿಯಲ್ಲಿ ಮರವೊಂದನ್ನು ಅರಣ್ಯ ಇಲಾಖೆ ಕಡಿತ ಮಾಡಿದ್ದೆ ಗುಡ್ಡ ಕುಸಿಯಲು ಕಾರಣವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಗುಡ್ಡ ಕುಸಿಯುವ ಭೀತಿಯಿಂದ ಗಣೇಶ್ ಹೆಗ್ಡೆ ಕುಟುಂಬ ಮೊದಲೇ ಮನೆ ಖಾಲಿ ಮಾಡಿತ್ತು. ಆದರೂ ಕೆಲವು ವಸ್ತುಗಳು ಅಲ್ಲೇ ಉಳಿದಿದ್ದವು. ಇದರಿಂದ ಪ್ರಾಣಾಪಾಯ ತಪ್ಪಿದೆ. ಘಟನೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.
ಬಂಡೆ ಕುಸಿತ
ಅಧಿಕ ಮಳೆಯಿಂದಾಗಿ ಕಳಸ ತಾಲೂಕಿನ ಬಲಿಗೆ ಬಳಿ ಭೂಕುಸಿತ ಸಂಭವಿಸಿ ಬೃಹತ್ ಬಂಡೆಗಳು ಮೇಲಿಂದ ಉರುಳಿ ರಸ್ತೆಯತ್ತ ಬಂದು ಬೀಳುತ್ತಿವೆ. ಹೊರನಾಡು-ಬಲಿಗೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಭೂಕುಸಿತ ಸಂಭವಿಸಿದೆ. ಈ ಕಾರಣಕ್ಕೆ ರಸ್ತೆಯಲ್ಲಿ ಸಂಚರಿಸಲು ಜನತೆ ಹೆದರುವಂತಾಗಿದೆ. ಯಾವ ಸಮಯದಲ್ಲಿ ಮತ್ತೆ ಗುಡ್ಡಗಳು ರಸ್ತೆಯತ್ತ ಉರುಳುತ್ತವೋ ಎನ್ನುವ ಆತಂಕದಲ್ಲಿದ್ದಾರೆ.
Chikkamagaluru: ಮಲೆನಾಡಿನಲ್ಲಿ ಮುಂದುವರಿದ ಮಳೆ ಅಬ್ಬರ: ಶೃಂಗೇರಿಯಲ್ಲಿ ಶಾಲೆಗಳಿಗೆ ರಜೆ
350 ಮಿ.ಮೀ.ಮಳೆ
ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ದೇವರಮನೆಯಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 350 ಮಿಲಿ ಮೀಟರ್ ಮಳೆ ಸುರಿದಿದೆ. ಮಳೆಯಿಂದಾಗಿ ಬೈದುವಳ್ಳಿ ಗ್ರಾಮದಲ್ಲಿ ರಸ್ತೆ ಮೇಲೆ ನೀರು ನುಗ್ಗುತ್ತಿದೆ. ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ತಡೆಗೋಡೆ ಕುಸಿತ
ಕಳಸ ತಾಲೂಕಿನ ಕಲ್ಲುಗೋಡು ಎಂಬಲ್ಲಿ ರಸ್ತೆಗೆ ಹೊಂದಿಕೊಂಡು ಸೇತುವೆಗೆ ನಿರ್ಮಿಸಿದ್ದ ತಡೆಗೋಡೆಯೊಂದು ಮಳೆಯಿಂದ ಕುಸಿತಕ್ಕೊಳಗಾಗಿದೆ. ಇದರೊಂದಿಗೆ ಒಂದು ತಿಂಗಳಲ್ಲಿ ಮಳೆಯಿಂದಾಗಿ ಕಳಸ ತಾಲೂಕಿನಲ್ಲಿ 3 ತಡೆಗೋಡೆಗಳು ಕುಸಿತಕ್ಕೊಳಗಾದಂತಾಗಿದೆ. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಸೇತುವೆ ಒಂದು ಭಾಗದ ತಡೆಗೋಡೆ ಕೆಲವು ದಿನಗಳ ಹಿಂದೆ ಕುಸಿದಿತ್ತು. ಶುಕ್ರವಾರ ಮತ್ತೊಂದು ಕುಸಿದಿದ್ದು, ಇನ್ನೂ ಒಂದು ತಡೆಗೋಡೆ ಬಿರುಕು ಬಿಟ್ಟಿದೆ. ಸದ್ಯಕ್ಕೆ ಬೈಕ್ ಮಾತ್ರ ಈ ಸೇತುವೆ ಮೇಲೆ ಓಡಾಡುವ ಸ್ಥಿತಿ ಇದ್ದು, ಗ್ರಾಮದ 50 ಕ್ಕೂ ಹೆಚ್ಚು ಕುಟುಂಬಗಳು ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿದ್ದಾರೆ.
ಮನೆ ಕುಸಿತ
ಕಳಸಾ, ಕಾರಗದ್ದೆ ಗ್ರಾಮದಲ್ಲಿ ಸುಶೀಲ ಎಂಬುವವರ ಮನೆ ನಿರಂತರ ಮಳೆಯಿಂದಾಗಿ ಕುಸಿದಿದೆ. ಗುರುವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಅಕ್ಕಿ, ಭತ್ತ, ದವಸ ಎಲ್ಲವೂ ನಾಶವಾಗಿದೆ. ಮನೆಯಲ್ಲಿ ಮೂವರು ಸದಸ್ಯರಿದ್ದು, ಅಡಿಗೆ ಕೋಣೆ ಕುಸಿತಕ್ಕೊಳಗಾಗಿರುವುದರಿಂದ ಜೀವಾಪಾಯ ತಪ್ಪಿದಂತಾಗಿದೆ.
ಶಾಲೆಗಳಿಗೆ ರಜೆ
ಶುಕ್ರವಾರವೂ ಮಳೆ ಮುಂದುವರಿದಿರುವ ಜೊತೆಗೆ ಅಲ್ಲಲ್ಲಿ ರಸ್ತೆ, ಸೇತುವೆಗಳು ಹಾನಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲೂಕಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಆಯಾ ಬಿಇಓಗಳು ರಜೆ ಘೋಷಿಸಿದ್ದಾರೆ.