ಧಾರವಾಡ: ಖರೀದಿ ಪತ್ರ ನೋಂದಾಯಿಸಿ ಕೊಡದ ಜಮೀನಿನ ಮಾಲೀಕರಿಗೆ ಬಿತ್ತು ದಂಡ

By Girish GoudarFirst Published Jan 10, 2023, 9:31 AM IST
Highlights

ಜಮೀನಿನ ಮಾಲೀಕರು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರನಿಗೆ ಸದರಿ ಜಮೀನಿನ ಖರೀದಿ ಪತ್ರ ನೋಂದಣಿ ಮಾಡಿ ಕೊಡುವಂತೆ ಆದೇಶಿಸಿದ ಆಯೋಗ. 

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಜ.10):  ಧಾರವಾಡದ ಶಿವಗಿರಿ ಬಡಾವಣೆಯ ನಿವಾಸಿಯಾದ ಹನುಮಂತರಾವ ಕುಲಕರ್ಣಿ ಎಂಬುವವರು ಪವನ್ ಫಾರ್ಮ ಲ್ಯಾಂಡ್ ಡೆವಲಪರ್ಸ್ ಮತ್ತು ಜಮೀನಿನ ಮಾಲೀಕರಾದ ದ್ಯಾಮವ್ವ ಕೆಲಗೇರಿ ಹಾಗೂ ಅವರ ಕುಟುಂಬದವರೊಂದಿಗೆ ಕೆಲಗೇರಿಯಲ್ಲಿ 5 ಗು.ನಾನು 1 ಆಣೆ ಜಮೀನನ್ನು ರೂ.15 ಲಕ್ಷಗಳಿಗೆ ಖರೀದಿಸಲು ದಿ:28/01/2022ರಂದು ಖರೀದಿ ಕರಾರು ಒಪ್ಪಂದ ಮಾಡಿಕೊಂಡಿದ್ದರು. ಆ ಪ್ರಕಾರ ದೂರುದಾರ ರೂ.10 ಲಕ್ಷ ರೂಪಾಯಿಯನ್ನು ಮುಂಗಡ ಹಣ ಅಂತಾ ಪಾವತಿಸಿದ್ದರು. ಆದರೆ ಸದರಿ ಡೆವಲಪರ್ಸ್ ಮತ್ತು ಜಮೀನಿನ ಮಾಲೀಕರು ಖರೀದಿ ಕರಾರಿನ ಷರತ್ತಿನಂತೆ 5. ಗುಂ. 1 ಆಣೆ ಜಮೀನನ್ನು ಬಾಕಿ 5 ಲಕ್ಷ ರೂಪಾಯಿ ಪಡೆದುಕೊಂಡು 60 ದಿವಸಗಳ ಒಳಗಾಗಿ ಖರೀದಿ ಪತ್ರ ನೋಂದಣಿ ಮಾಡಿಕೊಟ್ಟಿರಲಿಲ್ಲ. 

ಒಂದಿಲ್ಲೊಂದು ನೆಪ ಹೇಳಿ ಖರೀದಿ ಪತ್ರ ಬರೆದುಕೊಡದೇ ತನಗೆ ಸತಾಯಿಸಿ ತೊಂದರೆಕೊಟ್ಟು ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.    

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೆಚ್ಚಾಯಿತು ಕಳ್ಳರ‌ ಕಾಟ: ಬೀಗ ಹಾಕಿದ ಮನೆಗಳೇ ಟಾರ್ಗೆಟ್

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ, ಪ್ರಭು. ಸಿ ಹಿರೇಮಠ ಅವರು ಮುಂಗಡವಾಗಿ ಹೇರಳ ಮೊತ್ತದ ಹಣವನ್ನು ಡೆವಲಪರವರು ಹಾಗೂ ಜಮೀನಿನ ಮಾಲೀಕರು ಪಡೆದು ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ದೂರುದಾರನಿಗೆ ಪಕ್ಕಾ ಖರೀದಿ ಪತ್ರ ನೋಂದಣಿ ಮಾಡಿಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಆಯೋಗ ತೀರ್ಪು ನೀಡಿದೆ.

ಜಮೀನಿನ ಮಾಲೀಕರು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರನಿಗೆ ಸದರಿ ಜಮೀನಿನ ಖರೀದಿ ಪತ್ರ ನೋಂದಣಿ ಮಾಡಿ ಕೊಡುವಂತೆ ಆದೇಶಿಸಿದೆ. ಅದಕ್ಕೆ ವಿಫಲರಾದಲ್ಲಿ ದೂರುದಾರರಿಂದ ಮುಂಗಡವಾಗಿ ಪಡೆದ ಸೇರಿ ರೂ.10 ಲಕ್ಷ ರೂಪಾಯಿ ಮೇಲೆ ಶೇ.9% ಬಡ್ಡಿ ಲೆಕ್ಕ ಹಾಕಿ ಸಂದಾಯ ಮಾಡುವಂತೆ ಹಾಗೂ ಮಾನಸಿಕ ತೊಂದರೆಗೆ ರೂ.50,000/- ಸಾವಿರ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000/-ಗಳನ್ನು ಕೊಡುವಂತೆ ಪವನ್ ಫಾರ್ಮ ಲ್ಯಾಂಡ್ ಡೆವಲಪರ್ಸ್ ಮತ್ತು ಜಮೀನಿನ ಮಾಲಿಕರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

click me!