ರಿಮ್ಸ್ ಸಮಸ್ಯೆಗಳ ನಡುವೆಯೂ ಹೆರಿಗೆ, ಚಿಕಿತ್ಸೆ ಮತ್ತು ರೋಗಿಗಳ ಸೇವೆ ಸೇರಿ ಹಲವು ರೀತಿಯ ಸವಲತ್ತು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾನ್ಯತೆ ಮೊದಲ ಸಲ ಗೌರವ, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿಯೇ ರಾಯಚೂರು ಜಿಲ್ಲಾ ಆಸ್ಪತ್ರೆಯಿಂದ ಅಪರೂಪದ ಸಾಧನೆ.
ರಾಮಕೃಷ್ಣ ದಾಸರಿ
ರಾಯಚೂರು(ಮಾ.01): ಅಸೌಕರ್ಯ, ಸಮಸ್ಯೆಗಳ ನಡುವೆ ಮುಳುಗಿರುವ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯ ಬೋಧಕ ಆಸ್ಪತ್ರೆಯಲ್ಲಿರುವ ತಾಯಿ ಮತ್ತು ಮಗು ವಿಭಾಗಕ್ಕೆ ರಾಷ್ಟ್ರ ಮಟ್ಟದ ಲಕ್ಷ್ಯಾ ಪ್ರಮಾಣೀಕರಣವು ಲಭಿಸಿದೆ. ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ದೇಶದ ಎಲ್ಲ ರಾಜ್ಯಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿನ ಸವಲತ್ತು, ಆರೋಗ್ಯ ಸೇವೆ, ಚಿಕಿತ್ಸೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಿ, ಮಾನದಂಡಗಳನ್ನು ವಿಧಿಸಿ ಅವುಗಳಿಗೆ ಅಂಕಗಳನ್ನು ನೀಡಿ ಲಕ್ಷ್ಯಾ ಪ್ರಮಾಣಿಕೃತವನ್ನು ನೀಡುವ ವಾಡಿಕೆ ಹಾಕಿಕೊಂಡಿದ್ದು, 2022-23ನೇ ಸಾಲಿಗೆ ರಾಯಚೂರು ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗವು ಜನಸಾಮಾನ್ಯರಿಗೆ ನೀಡುತ್ತಿರುವ ಗುಣಮಟ್ಟದ ಆರೋಗ್ಯ ಸೇವೆಯನ್ನು ಪರಿಗಣಿಸಿ ಲಕ್ಷ್ಯಾ ಪ್ರಮಾಣೀಕರಣಗೊಳಿಸಿದೆ.
undefined
ಕಳೆದ ವರ್ಷ ರಾಜ್ಯ ಆರೋಗ್ಯ ಇಲಾಖೆಯಿಂದ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ್ದ 9 ಜನರ ತಜ್ಞರ ತಂಡ ತಾಯಿ ಮತ್ತು ಮಕ್ಕಳ ವಿಭಾಗದ ಸೇವೆಗಳನ್ನು ಪರಿಶೀಲನೆ ನಡೆಸಿ ಕೇಂದ್ರ ಇಲಾಖೆಗೆ ವರದಿ ಸಲ್ಲಿಸಿತ್ತು. ಅದನ್ನಾಧರಿಸಿ ಕೇಂದ್ರದಿಂದ ಬಂದಿದ್ದ ಮತ್ತೊಂದು ತಜ್ಞರ ತಂಡ ಕುಲಂಕುಷವಾಗಿ ಪರಿಶೀಲನೆ ನಡೆಸಿ, ವಿವಿಧ ವಿಭಾಗಗಳಲ್ಲಿ ನೀಡುತ್ತಿರುವ ಸೇವಾ ಸವಲತ್ತುಗಳನ್ನು ಪರೀಕ್ಷಿಸಿ ಪ್ರತಿಷ್ಠಿತ ಲಕ್ಷ್ಯಾ ಪ್ರಮಾಣೀಕರಣಕ್ಕೆ ಆಯ್ಕೆ ಮಾಡಿದೆ.
Raichur: ಮೂಗು ಸಮಸ್ಯೆ ಎಂದು ರಿಮ್ಸ್ ಆಸ್ಪತ್ರೆಗೆ ದಾಖಲಾದ ಯುವತಿ ಆಪರೇಷನ್ ಬಳಿಕ ಸಾವು!
ಕಠಿಣ ಮಾನದಂಡಗಳು, ಮಾನ್ಯತೆ ಸುಲಭವಲ್ಲ:
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಲಕ್ಷ್ಯಾ ಪ್ರಮಾಣೀಕರಣಕ್ಕಾಗಿ ಕಠಿಣ ಮಾನದಂಡಗಳನ್ನು ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಸರ್ಕಾರಿ ಆಸ್ಪತ್ರೆಗಳಿಗೆ ರಾಷ್ಟ್ರೀಯ ಗುಣಮಟ್ಟದ ಭರವಸೆಗಳ ಮಾನದಂಡಗಳನ್ನು (ಎನ್ಕ್ಯೂಎಎಸ್) ವಿಧಿಸಿದ್ದು ಅದರಂತೆ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದ ವ್ಯಾಪ್ತಿಗೆ ಬರುವ ಹೆರಿಗೆ ಕೊಠಡಿ, ಚಿಕಿತ್ಸಾ ಕೊಠಡಿ (ಒಟಿ) ವಾರ್ಡ್‌ಗಳಲ್ಲಿ ಆರೋಗ್ಯ ಸೇವೆ, ಚಿಕಿತ್ಸೆ, ಸ್ವಚ್ಛತೆ, ರೋಗಿಗಳೊಂದಿಗೆ ವೈದ್ಯರು, ಸಿಬ್ಬಂದಿ ನಡೆದುಕೊಳ್ಳುವ ರೀತಿ, ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೈಕೆ, ಆಸ್ಪತ್ರೆ ಸೇವೆ ಕುರಿತು ಖುದ್ದು ರೋಗಿಗಳ ಅಭಿಪ್ರಾಯ ಸೇರಿದಂತೆ ಹತ್ತು ಹಲವು ರೀತಿಯ ವಿಷಯಗಳನ್ನು ಪಡೆದು, ಪರಿಶೀಲಿಸಲಿದೆ.
Raichur: ರಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ!
ಇಷ್ಟೇ ಅಲ್ಲದೇ ಇಲಾಖೆಯಿಂದ ರೂಪಿಸಿರುವ ಸುಮಾರು 350ಕ್ಕು ಹೆಚ್ಚು ಅಂಶಗಳ ಪ್ರಶ್ನಾವಳಿಗಳ ಮಾಹಿತಿ ಸಂಗ್ರಹಿಸಿ ಮಾನ್ಯತೆ ನೀಡಲಾಗುತ್ತದೆ. ಅಂತಹ ವಿಚಾರದಲ್ಲಿ ಜಿಲ್ಲಾ ಆಸ್ಪತ್ರೆಗೆ 100ಕ್ಕೆ ಶೇ.80ರಷ್ಟುಅಂಕಗಳನ್ನು ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರಾಯಚೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಇಂತಹ ಪ್ರಮಾಣೀಕರಣವು ದೊರಕಿರುವುದು ಇದೇ ಮೊದಲಾಗಿದೆ. ಸದಾ ಸಮಸ್ಯೆಗಳ ಆಗರದಲ್ಲಿಯೇ ಸಿಲುಕಿರುವ ರಿಮ್ಸ್ ಬೋಧಕ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗಕ್ಕೆ ಲಭಿಸಿರುವ ಲಕ್ಷ್ಯಾ ಪ್ರಮಾಣೀಕರಣವು ಇತರರಿಗೆ ಮಾದರಿಯಾಗಿದೆ.
ಸತತ ಮೂರು ವರ್ಷಗಳ ಪ್ರಯತ್ನದ ಫಲವಾಗಿ ತಾಯಿ ಮತ್ತು ಮಕ್ಕಳ ವಿಭಾಗಕ್ಕೆ ರಾಷ್ಟ್ರಮಟ್ಟದ ಲಕ್ಷ್ಯಾ ಪ್ರಮಾಣೀಕರಣವು ದೊರಕಿದೆ. ನಿರ್ದೇಶಕರ ಹಾಗೂ ಇತರೆ ಅಧಿಕಾರಿ, ಸಿಬ್ಬಂದಿಯ ಸಹಕಾರದಿಂದ ಇದು ಸಾಧ್ಯವಾಗಿದೆ. ಈ ಸಾಧನೆಯಿಂದ ಜವಾಬ್ದಾರಿ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಸಹ ಇದೇ ರೀತಿಯ ಗುಣಮಟ್ಟದ ಸೇವೆಯನ್ನು ನಿರಂತರವಾಗಿ ನೀಡಲು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು ಅಂತ ರಿಮ್ಸ್ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿಜಯ ಶಂಕರ.ಎನ್ ತಿಳಿಸಿದ್ದಾರೆ.