ನಾಲ್ಕೈದು ದಿನಗಳಿಂದ ಮಲೆನಾಡು ಭಾಗದಲ್ಲಿ ಹಲವು ಅನಾಹುತಗಳನ್ನು ಸೃಷ್ಠಿಸಿದ್ದ ಮುಂಗಾರಿನ ಅಬ್ಬರ ಇಂದು ತಗ್ಗಿದ್ದು, ನದಿ ಪಾತ್ರದ ಜನರಲ್ಲಿ ಸದ್ಯಕ್ಕೆ ನೆರೆ ಭೀತಿ ದೂರಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.31): ನಾಲ್ಕೈದು ದಿನಗಳಿಂದ ಮಲೆನಾಡು ಭಾಗದಲ್ಲಿ ಹಲವು ಅನಾಹುತಗಳನ್ನು ಸೃಷ್ಠಿಸಿದ್ದ ಮುಂಗಾರಿನ ಅಬ್ಬರ ಇಂದು ತಗ್ಗಿದ್ದು, ನದಿ ಪಾತ್ರದ ಜನರಲ್ಲಿ ಸದ್ಯಕ್ಕೆ ನೆರೆ ಭೀತಿ ದೂರಾಗಿದೆ. ವರುಣನ ಆರ್ಭಟದಿಂದಾಗಿ ತುಂಗ-ಭದ್ರಾ, ಹೇಮಾವತಿ ನದಿಗಳು, ಹಳ್ಳ ಕೊಳ್ಳ, ತೊರೆಗಳು ಉಕ್ಕಿ ಹರಿದು ಬಾಳೆಹೊನ್ನೂರು, ಶೃಂಗೇರಿ, ಕಳಸ, ಕುದುರೇಮುಖ, ಕೊಟ್ಟಿಗೆಹಾರ ಇನ್ನಿತರೆ ಕಡೆಗಳಲ್ಲಿ ಜನವಸತಿ ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಾಗಿತ್ತು. ಶೃಂಗೇರಿ ಹಾಗೂ ಬಾಳೆಹೊನ್ನೂರುಗಳಲ್ಲಿ ಮನೆಗಳು, ಅಂಗಡಿಗಳು ಜಲಾವೃತಗೊಂಡಿದ್ದವು.
undefined
ಮಳೆ ಹಾಗೆಯೇ ಮುಂದುವರಿದರೆ ಬಹಳಷ್ಟು ಮಂದಿ ನಿರಾಶ್ರಿತರಾಗುವ ಜೊತೆಗೆ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿತ್ತು.ಆದರೆ ಇಂದು (ಬುಧವಾರ )ಬೆಳಗಿನಿಂದಲೇ ಮಳೆ ಬಿರುಸು ಕಳೆದುಕೊಂಡು ಚಿಕ್ಕಮಗಳೂರು ಸೇರಿದಂತೆ ಹಲವಡೆ ಬಿಸಿಲು ಬೀಳಲಾರಂಭಿಸುತ್ತಿದ್ದಂತೆ ಜನತೆ ನಿಟ್ಟುಸಿರು ಬಿಟ್ಟರು. ರೌದ್ರಾವತಾರ ತಾಳಿದ್ದ ನದಿಗಳು ಶಾಂತವಾಗತೊಡಗಿದವು. ಅಲ್ಲಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ಸಿಕ್ಕಿತು. ಮೂರ್ನಾಲ್ಕು ದಿನಗಳಿಂದ ಬಂದ್ ಆಗಿದ್ದ ರಸ್ತೆಗಳನ್ನು ತೆರವುಗೊಳಿಸುವ ಕಾರ್ಯ ಚುರುಕಾಗಿ ನಡೆಯಲು ಸಹಕಾರಿ ಆಯಿತು.
ಸಿಎಂ ಸಿದ್ದರಾಮಯ್ಯ ದಲಿತರ ಚರ್ಮದಿಂದ ಚಪ್ಪಲಿ ಮಾಡ್ಕೊಂಡು ಮೆರೆಯುತ್ತಿದ್ದಾರೆ: ಛಲವಾದಿ ನಾರಾಯಣಸ್ವಾಮಿ
ಸಮಾಧಾನದ ನಿಟ್ಟುಸಿರು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಅನಾಹುತದ ದುಸ್ವಪ್ನದಲ್ಲೇ ಕಾಲ ತಳ್ಳುತ್ತಿದ್ದ ಮಲೆನಾಡಿಗರು ಇಲ್ಲೇನು ಅನಾಹುತ ಕಾದಿದೆಯೋ ಎನ್ನುವಷ್ಟರ ಮಟ್ಟಿಗೆ ಮಳೆ ಆರ್ಭಟಿಸಿತ್ತು. ಆದರೆ ಇಂದು (ಬುಧವಾರ) ವರುಣ ಕರುಣೆ ತೋರಿದ ಹಿನ್ನೆಲೆಯಲ್ಲಿ ಜನರು ಸಾಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಭಾರೀ ಭೂಕುಸಿತ: ಮಳೆ ಬಿಡುವು ನೀಡಿದ್ದರ ನಡುವೆಯೂ ಭೂಮಿಯಿಂದ ಜಲ ಉಕ್ಕಿದ ಪರಿಣಾಮ ಭಾರೀ ಭೂ ಕುಸಿತ ಉಂಟಾದ ಘಟನೆ ಬುಧವಾರ ಕಳಸ ತಾಲ್ಲೂಕಿನ ಬಲಿಗೆ ಗ್ರಾಮದ ಬಳಿ ನಡೆಯಿತು.ಸಣ್ಣಗೆ ಜರುಗಲಾರಂಭಿಸಿದ ಗುಡ್ಡದ ಅಡಿಯಿಂದ ಭಾರೀ ಪ್ರಮಾಣದ ನೀರು ಹರಿಯಲಾರಂಭಿಸಿ ನೋಡ ನೋಡುತ್ತಿದ್ದಂತೆ ಮರ, ಗಿಡಗಳೊಂದಿಗೆ ಭೂಮಿಯೂ ಜರುಗಲಾರಂಭಿಸಿತು. ಭಾರೀ ಪ್ರಮಾಣದ ಮಣ್ಣು ರಸ್ತೆಗೆ ಕುಸಿಯಲ್ಪಟ್ಟಿತು ಸ್ಥಳೀಯರು ಘಟನೆಯನ್ನು ಮೊಬೈಲ್ನಲ್ಲಿ ಸೆರೆಹಿಡಿದ್ದಾರೆ. ಘಟನೆಯಿಂದಾಗಿ ಕಳಸ-ಬಲಿಗೆ-ಹೊರನಾಡು ಸಂಪರ್ಕಿಸುವ ರಸ್ತೆ ಸಂಚಾರ ಕಡಿತಗೊಂಡಿದೆ. ಕಳಸ, ಜಾಂಬಳೆ, ಕುದರೆಮುಖ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಭೂಮಿ ಅತಿಯಾದ ತೇವಾಂಶದಿಂದ ಕೂಡಿರುವುದಲ್ಲದೆ, ಬೆಟ್ಟ, ಗುಡ್ಡಗಳು ಸಡಿಲಗೊಳ್ಳಲು ಕಾರಣವಾಗುತ್ತಿದೆ. ಇದರ ಜೊತೆಗೆ ಅಂತರ್ಜಲವೂ ಹೆಚ್ಚಾಗಿ ಹೊರಕ್ಕೆ ತಳ್ಳಲ್ಪಡುತ್ತಿರುವುದರಿಂದ ಭೂ ಕುಸಿತದಂತಹ ಅನಾಹುತಗಳು ನಡೆಯುತ್ತಿವೆ.
ಬೀದರ್‌ನಲ್ಲಿ ಅದ್ದೂರಿಯಾಗಿ ನಡೆದ ಖಾಶೆಂಪೂರ್ ಗ್ರಾಮ ದೇವತೆ ಜಾತ್ರಾ ಮಹೋತ್ಸವ!
ರಸ್ತೆ ತೆರವಿಗೆ ಮನವಿ: ಮೂರ್ನಾಲ್ಕು ಕಡೆಗಳಲ್ಲಿ ಮಣ್ಣು ಕುಸಿದಿರುವುದರಿಂದ ಕೊಪ್ಪ ತಾಲ್ಲೂಕಿನ ಕೋಗ್ರೆ, ಸಾತಕುಡಿಗೆ, ಕಲ್ಲುಗುಡ್ಡೆ, ಮೇಣಸಿನಹಾಡ್ಯ, ಹೊರಾನಾಡು ರಸ್ತೆ ಬಂದ್ ಆಗಿದೆ. ಮಣ್ಣು ಕುಸಿದು 50 ಗಂಟೆಯಾದರು ಯಾವುದೇ ಅಧಿಕಾರಿ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಮಣ್ಣು ತೆರವುಗೊಳಿಸದೆ ಇರುವುದರಿಂದ ಗ್ರಾಮಗಳು ಸಂಪರ್ಕ ಸಂಪೂರ್ಣವಾಗಿ ಹೊರ ಜಗತ್ತಿನ ಸಂಪರ್ಕ ಕಡಿದುಕೊಳ್ಳುವಂತಾಗಿದೆ. ರೈತರು, ವಿದ್ಯಾರ್ಥಿಗಳು, ರೋಗಿಗಳು ನರಕಯಾತನೆ ಪಡುವಂತಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಸ್ಥಳಕ್ಕೆ ಧಾವಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಲಾಗಿದೆ.