ಅಡ್ಡಬೋರ್‌ ಮೂಲಕ ಬತ್ತಿದ ಕೆರೆ, ಬಾವಿಗಳಲ್ಲಿ ನೀರಿನ ಸೆಲೆ; ಮಂಗಳೂರಿನಲ್ಲಿ ಜಲಕ್ರಾಂತಿ

Published : Apr 28, 2026, 08:37 AM IST
Well Mangaluru

ಸಾರಾಂಶ

ಬೇಸಿಗೆಯಲ್ಲಿ ಬತ್ತಿಹೋಗುವ ಕರಾವಳಿಯ ಕೆರೆ ಮತ್ತು ಬಾವಿಗಳಿಗೆ ಅಡ್ಡ ಬೋರ್ ಕೊರೆಯುವ ಮೂಲಕ ಮತ್ತೆ ಜೀವ ನೀಡಲಾಗುತ್ತಿದೆ. ಭೂಮಿಯೊಳಗೆ ಅಡ್ಡಲಾಗಿ ಕೊರೆದು ನೀರಿನ ಸೆಲೆಯನ್ನು ಪತ್ತೆಹಚ್ಚುವ ಈ ಯಶಸ್ವಿ ತಂತ್ರವು, ವರ್ಷಪೂರ್ತಿ ನೀರು ಹರಿಯುವಂತೆ ಮಾಡಿ ನೀರಿನ ಅಭಾವವನ್ನು ನೀಗಿಸುತ್ತಿದೆ.

ದಯಾನಂದ ಕಲ್ನಾರ್

ಮಂಗಳೂರು: ಮಳೆಗಾಲದಲ್ಲಿ ಸಹಜವಾಗಿ ತುಂಬಿರುವ ತೆರೆದ ಬಾವಿ, ಕೆರೆಗಳು ಬೇಸಗೆಯಲ್ಲಿ ಬತ್ತುವ ಮೂಲಕ ನೀರಿನ ಅಭಾವ ಉಂಟು ಮಾಡುತ್ತಿವೆ. ಇದೀಗ ಕರಾವಳಿ ಸಹಿತ ವಿವಿಧೆಡೆ ಅಡ್ಡ ಬೋರ್‌ ಮೂಲಕ ಬತ್ತಿದ ಕೆರೆ, ಬಾವಿಗಳಲ್ಲಿ ನೀರಿನ ಸೆಲೆಯ ಮೂಲಕ ನೀರಿನ ಕ್ರಾಂತಿ ಮಾಡಲಾಗುತ್ತಿದೆ.

ಬೇಸಿಗೆಯಲ್ಲಿ ಎಲ್ಲೆಡೆ ನೀರಿನ ಮೂಲಗಳು ಬತ್ತುವುದರಿಂದ ನೀರಿನ ಬೇಡಿಕೆ ಸಹಜವಾಗಿ ಹೆಚ್ಚುತ್ತದೆ. ಇತ್ತೀಚಿನ ದಿನಗಳಲ್ಲಿ ಬತ್ತಿದ ಕೆರೆ, ಬಾವಿಗಳಿಗೆ ಅಡ್ಡಬೋರ್ ಕೊರೆಯುವ ಮೂಲಕ ಮತ್ತೆ ಬಾವಿ, ಕೆರೆಗೆ ನೀರಿನ ಜೀವ ನೀಡಲಾಗುತ್ತಿದೆ.

ಬೇಸಿಗೆಯಲ್ಲಿ ಬತ್ತಿ ಬರಿದಾಗುವ ಕೆರೆ, ಬಾವಿಗಳಿಗೆ ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ಅಡ್ಡಬೋರ್ ಕೊರೆಸಿ ನೀರು ಪಡೆಯುವ ಪ್ರಯತ್ನಗಳು ನಡೆಯುತ್ತಿದ್ದು, ಈ ಪ್ರಯತ್ನಗಳು ಯಶಸ್ವಿಯಾಗುತ್ತಿದೆ.

ಅಡ್ಡ ಬೋರ್‌ ಕೊರೆಯುವುದು ಹೇಗೆ?

ಕೊಳವೆ ಬಾವಿಯಲ್ಲಿ ಭೂಮಿಯ ಆಳಕ್ಕೆ ಕೊಳವೆ ಕೊರೆದರೆ, ಅಡ್ಡ ಬೋರಿನಲ್ಲಿ ಬಾವಿಯೊಳಗಿನಿಂದ ಸುರಂಗದ ಮಾದರಿ ಅಡ್ಡಲಾಗಿ ಭೂಮಿಯನ್ನು ಕೊರೆಯಲಾಗುತ್ತದೆ.

ಆರಂಭದಲ್ಲಿ ಬಾವಿ, ಕೆರೆಗೆ ಅಡ್ಡಬೋರ್‌ ಕೊರೆಯುವ ಯಂತ್ರ (ಮೋಟಾರ್ ಪಂಪ್‌) ಅಳವಡಿಸಲಾಗುತ್ತದೆ. ಬಳಿಕ ನೀರಿನ ಮೂಲ (ಮೊದಲೆ ಪತ್ತೆ ಅಂದಾಜಿಸಿರಬೇಕು)ಇರುವ ಭಾಗಕ್ಕೆ ಮೋಟಾರ್ ಮೂಲಕ 3.5 ಫೀಟ್‌ನ ಕಬ್ಬಿಣದ ರಾಡ್‌ ಸಹಾಯದಿಂದ ಮಣ್ಣು ಅಡ್ಡಲಾಗಿ ಕೊರೆಯಲಾಗುತ್ತದೆ. ಕೊರೆಯುತ್ತಾ ಸಾಗಿದಂತೆ ಅದಕ್ಕೆ ಕಬ್ಬಿಣದ ರಾಡ್ (ಪೈಪ್‌) ಜೋಡಿಸುತ್ತಾ ಹೋಗಲಾಗುತ್ತದೆ. ಈ ರೀತಿ ಗರಿಷ್ಠ 300 ಫೀಟ್‌ ವರೆಗೆ ಕೊರೆಯಬಹುದಾಗಿದೆ. ಮಣ್ಣು, ಸಡಿಲ ಕಲ್ಲು ಸಿಕ್ಕಲ್ಲಿ ಕೊರೆಯುವಿಕೆ ಸುಲಭವಾಗುತ್ತದೆ. ಕಠಿಣ ಕಲ್ಲು ಸಿಕ್ಕಲ್ಲಿ ಮುಂದುವರಿಯಲು ಕಷ್ಟವಾಗುತ್ತದೆ.

ಕೊರೆಯುತ್ತಾ ಸಾಗಿದಂತೆ ನೀರಿನ ಮೂಲ ಸಿಕ್ಕಲ್ಲಿ ಬಳಿಕ ಒರತೆ ಮೂಲಕ ನೀರು ಬಾವಿ/ಕೆರೆ ಹರಿಯುತ್ತದೆ. ಇದಕ್ಕೆ ಪೂರಕವಾಗಿ ನೀರು ಹರಿಯಲು ಪಿವಿಸಿ ಪೈಪ್‌ ಅಳವಡಿಸಲಾಗುತ್ತದೆ. ಒಂದು ಬಾವಿಗೆ 4-5 ಕಡೆಗಳಲ್ಲಿ (ನೀರಿನ ಲಭ್ಯತೆ ಇರುವ ಭಾಗವನ್ನು ನೋಡಿಕೊಂಡು) ಅಡ್ಡಬೋರ್ ಕೊರೆಸಬಹುದು. ಒಂದೊಮ್ಮೆ ಮಣ್ಣು ತುಂಬಿ ಪೈಪ್‌ ಬ್ಲಾಕ್ ಆದಲ್ಲಿ ಅದಕ್ಕೆ ಫ್ರೆಶರ್‌ಲ್ಲಿ ನೀರನ್ನು ಹಾಯಿಸಿ ಬ್ಲಾಕ್ ತೆರವು ಮಾಡಬಹುದಾಗಿದೆ. ಇದರಿಂದ ವರ್ಷಪೂರ್ತಿ ಸುಮಾರು 1ರಿಂದ 2 ಇಂಚಿನಷ್ಟು ನೀರು ಇದರಲ್ಲಿ ಹರಿದುಬರುತ್ತದೆ. ಭೂಮಿಯ ಮೇಲ್ಭಾಗದ ನೀರು ಇದಾಗಿರುತ್ತದೆ.

ಅಡ್ಡ ಬೋರ್‌ ಕೊರೆಯಲು ಬಾವಿಯಲ್ಲಿ ಕನಿಷ್ಠ 5ರಿಂದ 5-5 ಫೀಟ್ ಸ್ಥಳವಕಾಶ ಬೇಕಾಗುತ್ತದೆ. ಮೂವರು ಕಾರ್ಮಿಕರು ಇದನ್ನು ನಿರ್ವಹಿಸುತ್ತಾರೆ. ತ್ರಿಫೇಸ್ ವಿದ್ಯುತ್ ಸಂಪರ್ಕ ಬೇಕಾಗುತ್ತದೆ. ಮೋಟಾರ್ ಸೆಟ್ಟಿಂಗ್‌ಗೆ ಇಂತಿಷ್ಟು ಹಾಗೂ ಅಡ್ಡಬೋರ್‌ ಕೊರೆಯಲು ಫೀಟ್‌ಗೆ ಇಂತಿಷ್ಟು ಎಂದು ವೆಚ್ಚ ನಿಗದಿ ಮಾಡಲಾಗಿದೆ ಎನ್ನುತ್ತಾರೆ ಕಾರ್ಮಿಕರು.

ಹೆಚ್ಚುತ್ತಿರುವ ಅಡ್ಡಬೋರ್

ಕರಾವಳಿ ಭಾಗದಲ್ಲಿ ಸುಮಾರು 20 ವರ್ಷಗಳ ಹಿಂದೆಯೇ ಅಡ್ಡಬೋರ್ ಕೊರೆಯುವ ಮೂಲಕ ನೀರು ಪಡೆಯಲಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದ ಇದು ವಿಪರೀತ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಬಾವಿ, ಕೆರೆಗೆ ಅಡ್ಡಬೋರ್ ಕೊರೆಸಿ ನೀರು ಪಡೆಯುವುದು ಅಧಿಕವಾಗಿದೆ. ಬಾವಿ, ಕೆರೆ ಮೊದಲೇ ಆಳಕ್ಕೆ ಇರುವುದರಿಂದ ಆಳದಲ್ಲೇ ಅಡ್ಡಬೋರ್ ಕೊರೆಸಿದಲ್ಲಿ ಅಥವಾ, ಗುಡ್ಡ ಪ್ರದೇಶ ಭಾಗದತ್ತ ಅಡ್ಡ ಬೋರ್ ಕೊರೆಸಿದಲ್ಲಿ ನೀರು ಸಿಕ್ಕೆ ಸಿಗುತ್ತದೆ ಎಂಬ ಅಂದಾಜಿನ ಪ್ರಕಾರ ಬಾವಿ, ಕೆರೆಗೆ ಹೆಚ್ಚಾಗಿ ಅಡ್ಡಬೋರ್ ಕೊರೆಸಲಾಗುತ್ತಿದೆ. ಅಲ್ಲದೇ, ಅಡ್ಡಬೋರ್‌ಗಳು ಯಶಸ್ವಿಯಾಗಿ ನೀರಿನ ಮೂಲ ನೀಡುತ್ತಿದೆ ಎನ್ನುವು ಕೃಷಿಕರ ಅಭಿಮತ.

ಜನವರಿ ಬಳಿಕ ಅಡ್ಡಬೋರ್ ಕೊರೆಸುವ ಕೆಲಸ ಆರಂಭಗೊಂಡರೆ, ಮೇ ವರೆಗೆ ಈ ಕಾರ್ಯ ಮುಂದುವರಿಯುತ್ತದೆ. ಜಿಲ್ಲೆಯಲ್ಲಿ 2-3 ತಂಡಗಳು ಮೋಟಾರ್‌ ಮೂಲಕ ಅಡ್ಡಬೋರ್ ಕೊರೆಯುವ ಕೆಲಸ ಮಾಡುತ್ತಿದ್ದರೆ, ಉತ್ತರ ಭಾರತದ ಎಂಟು ತಂಡಗಳು ಜಿಲ್ಲೆಯ ವಿವಿಧೆಡೆ ಅಡ್ಡ ಬೋರ್ ಕೊರೆಯುವ ಕೆಲಸವನ್ನು ಮಾಡುತ್ತಿದ್ದಾರೆ. ವ್ಯಾಪಕ ಬೇಡಿಕೆಯೂ ಇವರಿಗೆ ಇದೆ ಎನ್ನುತ್ತಾರೆ ಕಾರ್ಮಿಕರು. ಕಡಬ, ಪುತ್ತೂರು, ವಿಟ್ಲ, ಬಂಟ್ವಾಳ, ಕಾಸರಗೋಡು ಭಾಗದಲ್ಲಿ ಅಡ್ಡಬೋರ್‌ ಕೆಲಸಗಳು ಹೆಚ್ಚಾಗಿ ನಡೆಯುತ್ತಿದೆ ಎಂಬ ಮಾಹಿತಿ ಇದೆ.

ಸುರಂಗ ಕೊರೆದು ನೀರು ಪಡೆಯುವ ಮಾದರಿಯಲ್ಲೇ, ಈ ಅಡ್ಡಬೋರ್ ಕೆಲಸ ಮಾಡುತ್ತದೆ. ಆರಂಭದಲ್ಲಿ ತೆರೆದ ಭಾಗದಲ್ಲೇ ಎತ್ತರದ ಪ್ರದೇಶದ/ಗುಡ್ಡ ಪ್ರದೇಶದ ಕಡೆಗಳಿಗೆ ಅಡ್ಡಬೋರ್ ಕೊರೆದು ಅದನ್ನು ನೀರಿನ ಹೊಂಡ, ಕೆಳ ಭಾಗದ ಕೆರೆಗಳಿಗೆ ತುಂಬಿಸುವ ಕಾರ್ಯ ಮಾಡಲಾಗುತ್ತಿತ್ತು. ಆದರೆ ಇದೀಗ ಕೆರೆ, ಬಾವಿಗೆ ಅಡ್ಡಬೋರ್ ಕೊರೆಸಿ ಬಾವಿ, ಕೆರೆಗೆ ಮತ್ತೆ ಜೀವ ನೀಡುವ ಕಾರ್ಯ ಆಗುತ್ತಿದೆ, ಈ ಮೂಲಕ ನೀರಿನ ಸಮಸ್ಯೆಗೂ ಪರಿಹಾರ ಸಿಗುತ್ತಿದೆ.

ರಮೇಶ್ ಕಾಣಿಯೂರು, ಅಡ್ಡಬೋರ್ ಕೊರೆಯುವ ಕೆಲಸ ಮಾಡುವವರು ಹೇಳಿದ್ದೇನು?

ಈ ವರ್ಷ ಅಡ್ಡಬೋರ್‌ ಕೊರೆಸಲು ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಬತ್ತಿದ ಬಾವಿ, ಕೆರೆಗಳಿಗೆ ಅಡ್ಡಬೋರ್ ಕೊರೆಸಲು ಬೇಡಿಕೆ ಹೆಚ್ಚಿದೆ. ಪ್ರತಿ ವರ್ಷ ಜನವರಿಯಿಂದ ಅಡ್ಡಬೋರ್ ಕೊರೆಯುವ ಕೆಲಸ ಮಾಡುತ್ತಿದ್ದೇವೆ. ಅಡ್ಡಬೋರ್ ಕೊರೆಸಿದ ಕಡೆಗಳಲ್ಲಿ ಯಶಸ್ವಿಯಾಗಿ ನೀರು ಸಿಗುತ್ತಿದೆ.

ಇದನ್ನೂ ಓದಿ: Haveri: ಬರಿದಾಗಿರುವ ವರದಾ ನದಿಯಲ್ಲಿ ಚಿನ್ನದ ಹುಡುಕಾಟ; ಇರ್ಲರ್ ಸಮುದಾಯದಿಂದ ಶೋಧ

ಸ್ಥಳೀಯರ ಪ್ರತಿಕ್ರಿಯೆ

ನಮ್ಮ ಬಾವಿ ಕೆಲ ವರ್ಷಗಳಿಂದ ಬೇಸಗೆಯಲ್ಲಿ ನೀರಿಲ್ಲದೇ ಬತ್ತುತ್ತಿತ್ತು. ಈ ವರ್ಷ ಬಾವಿಗೆ ಅಡ್ಡಬೋರ್ ಕೊರೆಸಿದ್ದೇನೆ. ಇದೀಗ ಬಾವಿಯಲ್ಲಿ ನೀರು ಸಂಗ್ರಹ ಆರಂಭಗೊಂಡಿದ್ದು, ನಮ್ಮ ಮನೆ ಕಾರ್ಯ, ತೋಟಕ್ಕೆ ನೀರು ಲಭ್ಯವಾಗುತ್ತಿದೆ.

- ಉಮೇಶ್ ಶೆಟ್ಟಿ ನೂಜಿಬಾಳ್ತಿಲ, ಕಡಬ ತಾಲೂಕು.

ಇದನ್ನೂ ಓದಿ: ಎಂಆರ್‌ಪಿಎಲ್ 4ನೇ ತ್ರೈಮಾಸಿಕದಲ್ಲಿ 119 ಕೋಟಿ ರು. ನಿವ್ವಳ ಲಾಭಾಂಶ- ಕಳೆದ ವರ್ಷ 85 ಚಿಲ್ಲರೆ ಮಾರಾಟದ ಸ್ಟೇಷನ್‌ ಆರಂಭ

PREV
Read more Articles on
click me!

Recommended Stories

Bengaluru: ಬೆತ್ತಲೆ ಸ್ಥಿತಿಯಲ್ಲಿ ಜಾರ್ಖಂಡ್ ಮೂಲದ ಯುವತಿಯ ಅರೆಕೊಳೆತ ಶವ ಪತ್ತೆ
ಕಾಂಗ್ರೆಸ್ಸಲ್ಲಿ ಅಹಿಂದ ದಂಗಲ್‌: ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲು ಒಂದು ಬಣ ಸಿದ್ಧತೆ