
ಬೆಂಗಳೂರು(ಮೇ.10): ಚುನಾವಣಾ ತರಬೇತಿ ನಿರಾಕರಿಸಿದ ಮಹಿಳಾ ಇನ್‌ಸ್ಪೆಕ್ಟರನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.
ಬೆಂಗಳೂರು ಚುನಾವಣಾ ವಿಭಾಗದಿಂದ ಮೇ 4ರಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗೆ ಮಲ್ಲತಹಳ್ಳಿಯ ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದಲ್ಲಿ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ತರಬೇತಿ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್ ಎಸ್.ಎಸ್.ಭವ್ಯಾ ಅವರು ಹಿಂದಿನ ಸಾಲಿನಲ್ಲಿ ಕುಳಿತಿದ್ದು, ತರಬೇತಿ ನೀಡುತ್ತಿದ್ದ ಅಧಿಕಾರಿಗಳ ಮಾತು ಆಲಿಸದೇ ದಿನಪತ್ರಿಕೆಗಳನ್ನು ಓದುತ್ತಾ ಕುಳಿತಿದ್ದರು. ಇದನ್ನು ಗಮನಿಸಿದ ನೀತಿ ಸಂಹಿತೆ ನೋಡಲ್ ಅಧಿಕಾರಿ ಹಾಗೂ ಸೆಕ್ಟರ್ ಅಧಿಕಾರಿಗಳು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಿದರು.
ಸರ್ಕಾರಿ ನೌಕರರಿಗೆ ಸಂಕಷ್ಟ ತಂದಿಟ್ಟ ಚುನಾವಣಾ ಆಯೋಗ: ಎಫ್‌ಐಆರ್ ದಾಖಲಿಸಲು ತೀರ್ಮಾನ
ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಭವ್ಯಾ, ‘ತರಬೇತಿ ನೀಡುವುದಷ್ಟೇ ನಿಮ್ಮ ಕೆಲಸ. ಅದರಲ್ಲಿ ಪಾಲ್ಗೊಳ್ಳದಿರುವುದು ನನ್ನ ನಿರ್ಧಾರ. ನಾನು ನಿಮ್ಮ ಇಲಾಖೆ ವ್ಯಾಪ್ತಿಯ ಸಿಬ್ಬಂದಿಯಲ್ಲ. ನನ್ನ ವಿರುದ್ಧ ಯಾರಿಗೆ ಬೇಕಾದರೂ ದೂರು ನೀಡಿ. ಆದರೆ, ನಾನು ತರಬೇತಿಯಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಮಾರುತ್ತರ ನೀಡಿದ್ದಾರೆ. ಅಧಿಕಾರಿಯ ಈ ಬೇಜವಾಬ್ದಾರಿಯನ್ನು ಪರಿಗಣಿಸಿ ತುಷಾರ್ ಗಿರಿನಾಥ್ ಪ್ರಜಾಪ್ರತಿನಿಧಿ ಕಾಯ್ದೆ 1951 ಕಲಂ 134ರ ಅಡಿಯಲ್ಲಿ ಎಸ್.ಎಸ್.ಭವ್ಯಾ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.