ಬ್ಯಾಡಗಿ: ಬಾರದ ಮುಂಗಾರು, ಅರ್ಧದಷ್ಟುಗ್ರಾಮಗಳಲ್ಲಿ ಜಲಕ್ಷಾಮ!

By Kannadaprabha NewsFirst Published Jun 15, 2023, 9:26 AM IST
Highlights

ಮುಂಗಾರು ಕೈಕೊಟ್ಟಬೆನ್ನಲ್ಲೇ ತಾಲೂಕಿನ ಶೇ. 50ರಷ್ಟುಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅದರಲ್ಲೂ ಮಲೆನಾಡು ಭಾಗವೆಂದೇ ಪರಿಗಣಿಸಲ್ಪಡುವ ಪ್ರದೇಶದಲ್ಲೂ ಬಹುತೇಕ ಅಂತರ್ಜಲ ಬತ್ತಿಹೋಗಿದೆ. ಶೀಘ್ರ ಮಳೆಯಾಗದಿದ್ದರೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಅನಿವಾರ‍್ಯವಾಗಲಿದೆ.

ಶಿವಾನಂದ ಮಲ್ಲನಗೌಡ್ರ

ಬ್ಯಾಡಗಿ (ಜೂ.15) : ಮುಂಗಾರು ಕೈಕೊಟ್ಟಬೆನ್ನಲ್ಲೇ ತಾಲೂಕಿನ ಶೇ. 50ರಷ್ಟುಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅದರಲ್ಲೂ ಮಲೆನಾಡು ಭಾಗವೆಂದೇ ಪರಿಗಣಿಸಲ್ಪಡುವ ಪ್ರದೇಶದಲ್ಲೂ ಬಹುತೇಕ ಅಂತರ್ಜಲ ಬತ್ತಿಹೋಗಿದೆ. ಶೀಘ್ರ ಮಳೆಯಾಗದಿದ್ದರೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಅನಿವಾರ‍್ಯವಾಗಲಿದೆ.

ತಾಲೂಕಿನ ನೀರಿನ ಅಭಾವ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹೀಗಾಗಿ ಇತರ ಮೂಲಗಳನ್ನೇ ಅವಲಂಬಿಸಿ ನೀರಿನ ಪೂರೈಕೆ ಹಾಗೂ ನಿರ್ವಹಣೆ ಮಾಡಿಕೊಳ್ಳಬೇಕಾಗಿದೆ.

ಚಿಕ್ಕಮಗಳೂರು: ಜೀವನದಿಗಳು ಜನಿ​ಸು​ವ ಜಿಲ್ಲೆ​ಯಲ್ಲೇ ಮಳೆ ಕ್ಷಾಮ !

9 ಗ್ರಾಮಗಳಲ್ಲಿ ತೀವ್ರ ಕೊರತೆ:

ತಾಲೂಕಿನ 66 ಗ್ರಾಮಗಳ ಪೈಕಿ 30ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಮೆಲೆನಾಡು ಭಾಗದ 5 ಗ್ರಾಪಂ ಪೈಕಿ 9 ಗ್ರಾಮಗಳಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಸೂಡಂಬಿ ಗ್ರಾಪಂ ಪೈಕಿ ಸೂಡಂಬಿ, ತಿಮ್ಮಾಪುರ, ಘಾಳಪೂಜಿ ಗ್ರಾಪಂ ಪೈಕಿ ಘಾಳಪೂಜಿ ಮುಕ್ತಂಪುರ ಪ್ಲಾಟ್‌ ಧುಮ್ಮಿಹಾಳ, ಹಿರೇಅಣಜಿ ಗ್ರಾಪಂ ಪೈಕಿ ಹಿರೇಅಣಜಿ ಮತ್ತು ಚಿಕ್ಕಣಜಿ ಹಾಗೂ ಕಾಗಿನೆಲೆ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

8 ಕೊಳವೆಬಾವಿ ಕೊರೆಸಿದರೂ ನೀರಿಲ್ಲ:

ನೀರಿನ ಸಮಸ್ಯೆ ಎದುರಿಸಲು ಮುಂದಾದ ತಾಪಂ ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಗಳು ಅಭಾವವಿರುವ ಕಡೆಗಳಲ್ಲಿ ಕೊಳವೆಬಾವಿಗಳನ್ನು ತೆಗೆಸಲು ಕ್ರಮ ಕೈಗೊಂಡಿದೆ. ಈಗ ಕೊರೆಸಿರುವ 8 ಕೊಳವೆಬಾವಿಗಳಲ್ಲಿಯೂ ಹನಿ ನೀರು ಸಹ ಸಿಗದಿರುವುದು ತಾಲೂಕಾಡಳಿತವನ್ನು ಇನ್ನಷ್ಟುಆತಂಕಕ್ಕೀಡು ಮಾಡಿದೆ.

ರೈತರ (ಬಾಡಿಗೆ) ಕೊಳವೆಬಾವಿಗಳಿಗೆ ಮೊರೆ:

ತಾತ್ಕಾಲಿಕ ಪರಿಹಾರಕ್ಕೆ ಹೋಗಿರುವ ನೀರು ಸರಬರಾಜು ಇಲಾಖೆಯು ರೈತರ ಕೊಳವೆಬಾವಿಗಳ ಮೊರೆ ಹೋಗಿದ್ದು, ಬಾಡಿಗೆ ರೂಪದಲ್ಲಿ ಪಡೆದುಕೊಂಡು ಗ್ರಾಮದ ಜನರಿಗೆ ಪೂರೈಕೆ ಮಾಡಲಾಗುತ್ತಿದೆ.

ಟ್ಯಾಂಕರ್‌ ನೀರೇ ಗತಿ:

ಇನ್ನೊಂದು ವಾರದಲ್ಲಿ ಮಳೆಯಾಗದಿದ್ದಲ್ಲಿ ಇನ್ನಷ್ಟುಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಗಳಿವೆ. ಇದಕ್ಕಾಗಿ 15 ಗ್ರಾಮಗಳನ್ನು ಗುರ್ತಿಸಿರುವ ನೀರು ಸರಬರಾಜು ಇಲಾಖೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ನಿರ್ಧರಿಸಿದೆ.

ಕೆರೆಗಳೆಲ್ಲ ಖಾಲಿ ಖಾಲಿ:

ತಾಲೂಕಿನಲ್ಲಿ 123 ಕೆರೆಗಳಿವೆ. ಅದರಲ್ಲಿ ಬಹುತೇಕ ಕೆರೆಗಳು ನೀರಿಲ್ಲದೇ ಬತ್ತಿ ಹೋಗಿವೆ. ಅದರಿಂದ ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗಳು ಇನ್ನೂ ಸಮರ್ಪಕವಾಗಿ ಕಾರ್ಯನಿರ್ವಹಿಸಿದಿರುವ ಕಾರಣ ಕೆರೆಗಳಲ್ಲಿ ನೀರು ತುಂಬಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅಂತರ್ಜಲ ಮಟ್ಟಕುಸಿದಿದೆ.

 

ಅರ್ಧ ಮಳೆಗಾಲ ಕಳೆದರೂ ರಾಜ್ಯದಲ್ಲಿ ನೀರಿಗೆ ಬರ!

ಕುಡಿಯುವ ನೀರು ಪೂರೈಕೆ ನಮ್ಮ ಆದ್ಯತೆ. ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ. ಅಂತರ್ಜಲ ಬಹುತೇಕ ಬತ್ತಿಹೋಗಿದೆ. 800 ಅಡಿ ಕೊರೆಸಿದರೂ ಭೂಮಿಯಲ್ಲಿ ನೀರು ಸಿಗುತ್ತಿಲ್ಲ. ಹೀಗಾಗಿ ಪರಾರ‍ಯಯ ವ್ಯವಸ್ಥೆಗೆ ಸೂಚಿಸಿದ್ದೇನೆ. ತಪ್ಪಿದಲ್ಲಿ ಅಧಿಕಾರಿಗಳೇ ಹೊಣೆ.

ಬಸವರಾಜ ಶಿವಣ್ಣನವರ ಶಾಸಕ

ನಮ್ಮ ಪೂರ್ವಜರು ನೀರಿನ ಮೌಲ್ಯವನ್ನು ಅರ್ಥಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇತ್ತೀಚಿನವರಿಗೆ ನೀರಿನ ಮೌಲ್ಯ ಅರ್ಥವಾಗುತ್ತಿಲ್ಲ. ಸಮಸ್ಯೆ ಇರುವ ಕಡೆಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಪರಿಸ್ಥಿತಿ ಅವಲೋಕಿಸಿ 3ರಿಂದ 5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುವುದು.

ಕೆ.ಎಂ. ಮಲ್ಲಿಕಾರ್ಜುನ ತಾಪಂ ಕಾರ್ಯನಿರ್ವಾಹಕಾಧಿಕಾರಿ

ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಪರಿಣಾಮ ಕಳೆದೆರಡು ವರ್ಷದಿಂದ ಭೂಮಿಯಲ್ಲಿ ನೀರಿನ ಕೊರತೆಯಾಗುತ್ತಿದೆ. ದಿನದಿಂದ ದಿನಕ್ಕೆ ನೀರಿನ ಕೊರತೆ ಹೆಚ್ಚಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ 15 ಗ್ರಾಮಗಳಲ್ಲಿ ರೈತರ ಕೊಳವೆಬಾವಿ ಸಹಕಾರ ಪಡೆಯಲು ನಿರ್ಧರಿಸಲಾಗಿದೆ. ಅದಕ್ಕೂ ನೀಗದಿದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು.

ಸುರೇಶ ಬೇಡರ ಎಇಇ ಪಂಚಾಯತ್‌ ರಾಜ್‌ ಗ್ರಾಮೀಣ ನೀರು ಸರಬರಾಜು ಉಪವಿಭಾಗ

click me!