ಜನರಿಗೆ ಆರೋಗ್ಯ ಸೇವೆ ಮರೀಚಿಕೆ: ಕೊರೋನಾ ಅಬ್ಬರ ಹೆಚ್ಚಳ

By Kannadaprabha NewsFirst Published May 15, 2021, 3:46 PM IST
Highlights

* ವೈದ್ಯ ಸಿಬ್ಬಂದಿಗೂ ಪಾಸಿಟಿವ್‌
* ಆಕ್ಸಿಜನ್‌ಗೆ ಹೆಚ್ಚಾಯ್ತು ಬೇಡಿಕೆ
* ಕರ್ತವ್ಯ ನಿರತ ವೈದ್ಯರು, ಆರೋಗ್ಯ ಸಹಾಯಕಿಯರು ಸೇರಿದಂತೆ 20 ಜನರಿಗೆ ಕೋವಿಡ್‌ ಪಾಸಿಟಿವ್‌
 

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಮೇ.15): ವಿಜಯನಗರ ಜಿಲ್ಲೆಯ ಪಶ್ಚಿಮ ಭಾಗದ ಹೂವಿನಹಡಗಲಿ ಕೊನೆ ತಾಲೂಕಾಗಿದ್ದು ಕೊರೋನಾ ಸಂದರ್ಭದಲ್ಲಿ ಜನರಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ಗಾಗಿ 50 ಆಕ್ಸಿಜನ್‌ ಬೆಡ್‌, 3 ಐಸಿಯು ಬೆಡ್‌ ಇವೆ. ಇಟಿಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಬೆಡ್‌ಗಳ ವ್ಯವಸ್ಥೆ ಮಾಡಿದ್ದು, ಇದರಲ್ಲಿ 5 ಆಕ್ಸಿಜನ್‌ ಬೆಡ್‌ಗಳಿವೆ. ಐಸಿಯು ವ್ಯವಸ್ಥೆ ಇಲ್ಲ. ಜತೆಗೆ ಮೀರಾಕೂರ್ನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್‌ ಕೇರ್‌ ಸೆಂಟರ್‌ ಮಾಡಿದ್ದು, 100 ಬೆಡ್‌ಗಳ ಸಾಮಾನ್ಯ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.

"

ತಾಲೂಕಿನ ಹಳ್ಳಿ ಹಾಗೂ ಪಟ್ಟಣ ಸೇರಿದಂತೆ 40 ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ತಲುಪಿದೆ. 26 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಈ ವರೆಗೂ 503 ಪಾಸಿಟಿವ್‌ ಪ್ರಕರಣಗಳಾಗಿದ್ದು 8 ಜನರು ಮೃತರಾಗಿದ್ದಾರೆ. 174 ಜನರು ಬಿಡುಗಡೆ ಹೊಂದಿದ್ದು 329 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೂಡ್ಲಿಗಿ: ಸರತಿಯಲ್ಲಿ ನೀರಿಡಿಯುವ ಕೊರೋನಾ ಸೋಂಕಿತರು..!

ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆ, ಇಟಿಗಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಮೀರಾಕೂರ್ನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಾಖಲಾಗುವ ಕೋವಿಡ್‌ ಸೋಂಕಿತರನ್ನು ನೋಡಿಕೊಳ್ಳಲು ಅಗತ್ಯ ಸಿಬ್ಬಂದಿ ಕೊರತೆ ಕಾಡುತ್ತಿದೆ. ತಾಲೂಕಿನಲ್ಲಿ ವಿಶೇಷ ತಜ್ಞರ ಕೊರತೆ ಜತೆಗೆ ವೈದ್ಯರು, ಅರವಳಿಕೆ ತಜ್ಞರು ಸೇರಿದಂತೆ ಬಹಳಷ್ಟುಸಿಬ್ಬಂದಿಗಳ ಅಭಾವವಿದೆ. ಸದ್ಯ ನಾಲ್ವರು ವೈದ್ಯರು, ಒಬ್ಬ ಸರ್ಜನ್‌, ಒಬ್ಬ ಫಿಜಿಷಿಯನ್‌ ಸೇರಿದಂತೆ ಇತರೆ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಈಗ ಹಾಲಿ ಕೋವಿಡ್‌ ಕರ್ತವ್ಯ ನಿರತ ನಾಲ್ವರು ವೈದ್ಯರು, ಆರೋಗ್ಯ ಸಹಾಯಕಿಯರು, ಗ್ರೂಪ್‌-ಡಿ ನೌಕರರು ಸೇರಿದಂತೆ ಈ ವರೆಗೂ 20 ಜನರಿಗೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿನ ಕೋವಿಡ್‌ ಮೀಸಲಿದ್ದ ಎಲ್ಲ ಬೆಡ್‌ಗಳು ಭರ್ತಿಯಾಗಿವೆ. ಇಟಿಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೆಲ ಕೇಸ್‌ಗಳನ್ನು ಸ್ಥಳಾಂತರ ಮಾಡಲಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಂಭವವಿದ್ದು, ಬೆಡ್‌ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಬರುವಂತಹ ಪಾಸಿಟಿವ್‌ ಕೇಸ್‌ಗಳಿಗೆ ಬೆಡ್‌ಗಳ ಬೇಡಿಕೆ ಹೆಚ್ಚಾಗಲಿದೆ. ತಾಲೂಕಿನಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಆಕ್ಸಿಜನ್‌ ಬೇಡಿಕೆಯೂ ಹೆಚ್ಚಾಗುತ್ತಿದೆ. ಕೊಪ್ಪಳ ಜಿಲ್ಲೆ ಗಿಣಿಗೇರಾ ಹಾಗೂ ಹರಿಹರದಿಂದ ಆಕ್ಸಿಜನ್‌ ತರಬೇಕಿದೆ. ಈಗಾಗಲೇ ಜಿಲ್ಲಾಡಳಿತಕ್ಕೆ ಜಂಬೋ ಸಿಲೆಂಡರ್‌ ಬೇಡಿಕೆಯನ್ನು ತಾಲೂಕಾಡಳಿತ ಸಲ್ಲಿಸಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಆಕ್ಸಿಜನ್‌, 3 ಐಸಿಯು ಬೆಡ್‌ಗಳಿವೆ. ಜತೆಗೆ ಇಟಿಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಬೆಡ್‌ಗಳಲ್ಲಿ 5 ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಮೀರಾಕೂರ್ನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ 100 ಬೆಡ್‌ಗಳ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗಿದೆ ಎಂದು ಹೂವಿನಹಡಗಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಕುಮಾರ ಸಾಲಗೇರಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!