Corona Effect: ಬೆಂಗ್ಳೂರಲ್ಲಿ ಈಗ ಕ್ಯಾಬ್‌ಗಳೇ ಸಿಗ್ತಿಲ್ಲ..!

By Kannadaprabha NewsFirst Published Dec 1, 2021, 8:09 AM IST
Highlights

*  ಕೊರೋನಾ ಹಾವಳಿ ಇಳಯುತ್ತಿದ್ದಂತೆ ಸಹಜ ಸ್ಥಿತಿಗೆ ಬಂದ ವ್ಯವಹಾರಗಳು
*  ಹಿಂದೆ 5 ನಿಮಿಷದಲ್ಲಿ ಬರುತ್ತಿದ್ದ ಕ್ಯಾಬ್‌ಗಳು ಅರ್ಧ ತಾಸು ಕಾದರೂ ಸಿಗದ ಸ್ಥಿತಿ
*  ಪರ್ಯಾಯ ಉದ್ಯೋಗದತ್ತ ಕ್ಯಾಬ್‌ ಚಾಲಕರು
 

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು(ಡಿ.01):  ನಗರದಲ್ಲಿ ಜಾರಿ ಮಾಡಿದ್ದ ಕೊರೋನಾ(Coronavirus) ಲಾಕ್‌ಡೌನ್‌ನಿಂದ(Lockdown) ಕ್ಯಾಬ್‌ ಚಾಲಕರು ಪರ್ಯಾಯ ಉದ್ಯೋಗಗಳನ್ನು ಅವಲಂಬಿಸಿದ್ದು, ಮೊಬೈಲ್‌ ಆ್ಯಪ್‌ ಆಧಾರಿತ ಕ್ಯಾಬ್‌ಗಳಿಗೆ ಚಾಲಕರ ಕೊರತೆಯುಂಟಾಗಿದೆ.

ಕೊರೋನಾ ಹಾವಳಿ ಕಡಿಮೆಯಾಗುತ್ತಿದ್ದಂತೆ ಎಲ್ಲ ವ್ಯವಹಾರಗಳು ಸಾಮಾನ್ಯ ಸ್ಥಿತಿಗೆ ತಲುಪಿವೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಪುನಾರಂಭವಾಗಿದ್ದು, ಹಂತ ಹಂತವಾಗಿ ವರ್ಕ್ ಫ್ರಮ್‌ ಹೋಮ್‌(Work From Home) ವ್ಯವಸ್ಥೆ ತೆರವು ಮಾಡಲಾಗುತ್ತಿದೆ. ಆದರೂ ಮೊಬೈಲ್‌ ಆ್ಯಪ್‌ ಆಧಾರಿತ ಓಲಾ(Ola) ಮತ್ತು ಉಬರ್‌ಗಳಿಗೆ(Uber) ಚಾಲಕರ ಕೊರತೆಯಿಂದ ಕಚೇರಿಗಳಿಗೆ ತೆರಳಲು ಕ್ಯಾಬ್‌(Cab) ಬುಕ್‌ ಮಾಡಿದ 20ರಿಂದ 30 ನಿಮಿಷ ಕಳೆದರೂ ಬರುತ್ತಿಲ್ಲ.

ಕೊರೋನಾ ಬಳಿಕ ಕಚೇರಿಯಿಂದ(Offices) ಕೆಲಸ ಪ್ರಾರಂಭವಾಗಿದ್ದು, ಕೆಲಸಕ್ಕೆ ತೆರಳಲು ಕ್ಯಾಬ್‌ಗಳನ್ನು ಅವಲಂಭಿಸುತ್ತಿದ್ದೇನೆ. ಕೊರೋನಾಗೂ ಮುನ್ನ ಕ್ಯಾಬ್‌ಬುಕ್‌ ಮಾಡಿದ್ದ 5ರಿಂದ 8 ನಿಮಿಷದ ಒಳಗಾಗಿ ಬರುತ್ತಿತ್ತು. ಇದೀಗ 30 ನಿಮಿಷಕ್ಕೂ ಹೆಚ್ಚು ಕಾಲ ಕಾಯಬೇಕಾಗಿದೆ. ಇದೇ ಕಾರಣದಿಂದ ಕಚೇರಿಗೆ ತೆರಳಲು ಒಂದು ತಾಸು ಮುಂಚಿತವಾಗಿ ಮನೆ ಬಿಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮಾನ್ಯತಾ ಟೆಕ್‌ ಪಾರ್ಕ್ನಲ್ಲಿ ಸೇವೆಯಲ್ಲಿರುವ ರಾಜಾಜಿ ನಗರದ ನಿವಾಸಿ ರವೀಶ್‌ ಎಂಬುವರು ಮಾಹಿತಿ ನೀಡಿದ್ದಾರೆ.

ರಾತ್ರಿ ಕರ್ಫ್ಯೂ ವೇಳೆ ಬಸ್‌, ಆಟೋ, ಕ್ಯಾಬ್‌ ಸಂಚಾರಕ್ಕೆ ಅನುಮತಿ

ಈ ಕುರಿತು ಮಾತನಾಡಿದ ಓಲಾ ಹಾಗೂ ಉಬರ್‌ ಕ್ಯಾಬ್‌ ಮತ್ತು ಚಾಲಕರು ಮತ್ತು ಮಾಲಿಕ ತನ್ವೀರ್‌ ಪಾಷಾ, ಕೊರೋನಾ ಬಳಿಕ ಬೆಂಗಳೂರು(Bengaluru) ನಗರದಲ್ಲಿ ಕ್ಯಾಬ್‌ಗಳಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆ ಕುಸಿಯುತ್ತಿದೆ. ಎಲ್ಲ ಕಂಪನಿಗಳಲ್ಲಿಯೂ ವರ್ಕ್ ಫ್ರಮ್‌ ಹೋಮ್‌ ಪದ್ಧತಿ ಜಾರಿಯಲ್ಲಿದ್ದ ಪರಿಣಾಮ ಸುಮಾರು ಎರಡು ವರ್ಷಗಳ ಕಾಲ ನೂರಾರು ಕ್ಯಾಬ್‌ ಮಾಲೀಕರು ಮತ್ತು ಚಾಲಕರು ಉದ್ಯೋಗವಿಲ್ಲದೆ(Job) ಪರದಾಡಿದ್ದರು. ಪ್ರಸ್ತುತ ಕೊರೋನಾ ಇಲ್ಲದಿದ್ದರೂ, ಕ್ಯಾಬ್‌ ಮಾಲೀಕರಿಗೆ ವ್ಯವಹಾರಗಳು ನಡೆಯುತ್ತಿಲ್ಲ ಎಂದರು.

ಕೊರೋನಾ ಹೊಡೆತದಿಂದ ಕ್ಯಾಬ್‌ಗಳನ್ನು ಖರೀದಿಸಲು ಮಾಡಿದ್ದ ಸಾಲ(Loan) ತೀರಿಸಲಾಗಿಲ್ಲ. ಇದರಿಂದ ಸಾಲ ನೀಡಿರುವ ಫೈನಾನ್ಸ್‌ ಕಂಪನಿಗಳ(Finance Company) ಒತ್ತಡ ಹೆಚ್ಚಾಗುತ್ತಿದೆ. ಅಲ್ಲದೆ, ಕೆಲ ಕ್ಯಾಬ್‌ಗಳನ್ನು ಫೈನಾನ್ಸ್‌ ಕಂಪನಿಗಳು ಈಗಾಗಲೇ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಮತ್ತೆ ಕೆಲ ವಾಹನಗಳ ಮಾಲಿಕರು ಜಪ್ತಿಗೂ ಮುನ್ನ ಮಾರಾಟ ಮಾಡಿದ್ದಾರೆ. ಅಲ್ಲದೆ, ದಿನೇ ದಿನೇ ಡೀಸೆಲ್‌(Diesel) ಬೆಲೆ ಏರಿಕೆಯಾಗುತ್ತಿದೆ. ದಿನ ಬಳಕೆ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತು ಕ್ಯಾಬ್‌ ನಂಬಿಕೊಂಡು ಜೀವನ ಮಾಡುವುದು ಸಾಧ್ಯವಿಲ್ಲ ಎಂಬ ಅಂಶವನ್ನು ಅರಿತಿರುವ ಚಾಲಕರು, ಕುಟುಂಬ ನಿರ್ವಹಣೆಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

ನಗರದಲ್ಲಿ 50 ಸಾವಿರ ಕ್ಯಾಬ್‌ಗಳು ಮಾಯ?

2018ರ ಪ್ರಾರಂಭದಲ್ಲಿ ನಗರದಲ್ಲಿಯೇ ಸುಮಾರು 75 ಸಾವಿರ ಕ್ಯಾಬ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಆದರೆ, ಕೊರೋನಾ ಹಿನ್ನೆಲೆಯಿಂದ ಜಾರಿಯಾದ ಲಾಕ್‌ಡೌನ್‌ನಿಂದ ದೇಶದಾದ್ಯಂತ ವಿಮಾನ(Flight) ಹಾರಾಟ ಸ್ಥಗಿತವಾಗಿತ್ತು. ಜೊತೆಗೆ, ನಗರದ ಐಟಿ ಕಂಪನಿಗಳು(IT Companies) ತನ್ನ ಸಿಬ್ಬಂದಿಗೆ ವರ್ಕ್ ಫ್ರಮ್‌ ಹೋಮ್‌ ಪದ್ಧತಿ ಜಾರಿ ಮಾಡಿದ್ದರು. ಈ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ಸುಮಾರು 50 ಸಾವಿರ ಕ್ಯಾಬ್‌ಗಳು ತನ್ನ ಸೇವೆಯನ್ನು ಸ್ಥಗಿತಗೊಳಿಸಿವೆ. ಪರಿಣಾಮ ಪ್ರಸ್ತುತ ಕೇವಲ 25 ಸಾವಿರಕ್ಕೂ ಕಡಿಮೆ ಕ್ಯಾಬ್‌ಗಳು ನಗರದಲ್ಲಿವೆ ಎಂದು ತನ್ವೀರ್‌ ಪಾಷಾ ವಿವರಿಸಿದರು.

ಕೊರೋನಾ ಲಾಕ್‌ಡೌನ್‌, ಡೀಸೆಲ್‌ ಬೆಲೆ ಏರಿಕೆಯಿಂದ ಕ್ಯಾಬ್‌ಗಳನ್ನು ನಿರ್ವಹಣೆ ಮಾಡಲಾಗಲಿಲ್ಲ. ಅಲ್ಲದೆ ಚಾಲಕರಿಗೆ ಪರ್ಯಾಯ ಆದಾಯ ಮೂಲವಿರಲಿಲ್ಲ. ಇದರಿಂದಾಗಿ ಇತರೆ ವ್ಯವಹಾರಗಳಲ್ಲಿ ತೊಡಗಿದ್ದಾರೆ. ಆದ್ದರಿಂದ ನಗರದಲ್ಲಿ ವಾಹನಗಳ ಸಂಖ್ಯೆ ಕುಸಿದಿದ್ದು, ಅಗತ್ಯ ಸಮಯಕ್ಕೆ ಗ್ರಾಹಕರ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ ಅಂತ ಓಲಾ, ಉಬರ್‌ ಕಾರು ಚಾಲಕ ಮತ್ತು ಮಾಲಿಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷಾ ತಿಳಿಸಿದ್ದಾರೆ. 
 

click me!