34 ಪ್ರಾಣಿಗಳಿಗೆ ಕೋಳಿ ಮಾಂಸ ರೂಢಿಸುತ್ತಿರುವ ಅಧಿಕಾರಿಗಳು| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಕಮಲಾಪುರದ ಜೂಲಾಜಿಕಲ್ ಪಾರ್ಕ್| ಗೋಹತ್ಯೆ ನಿಷೇಧ ಕಾಯ್ದೆಯಿಂದ ಪ್ರಾಣಿಗಳಿಗೆ ಕೋಳಿ ಮಾಂಸ ಪೂರೈಕೆ| ಮಾಂಸಾಹಾರಕ್ಕೆ ಹೊಂದಿಕೊಳ್ಳಲು ಪ್ರಾಣಿಗಳು ಹಿಂದೇಟು|
ಹೊಸಪೇಟೆ(ಫೆ.05): ಗೋ ಮಾಂಸ ನಿಷೇಧದ ಹಿನ್ನೆಲೆಯಲ್ಲಿ ತಾಲೂಕಿನ ಕಮಲಾಪುರದ ಹತ್ತಿರದ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‌ನ ಸಿಂಹ, ಹುಲಿಗಳಿಗೆ ಗೋ ಮಾಂಸದ ಬದಲಿಗೆ ಕೋಳಿ ಮಾಂಸ ತಿನ್ನುವ ಸ್ಥಿತಿ ಎದುರಾಗಿದೆ.
ಸಿಂಹ, ಹುಲಿ ಸೇರಿದಂತೆ ಇತರೆ ಪ್ರಾಣಿಗಳಿಗೆ ದನದ ಮಾಂಸ ನೀಡಲಾಗುತ್ತಿತ್ತು. ಈಗ ಗೋಹತ್ಯೆ ನಿಷೇಧ ಕಾಯ್ದೆಯಿಂದ ಪ್ರಾಣಿಗಳಿಗೆ ಕೋಳಿ ಮಾಂಸ ನೀಡಲಾಗುತ್ತಿದೆ. ಆದರೆ, ಗೋ ಮಾಂಸ ಸೇವನೆ ರೂಢಿಸಿಕೊಂಡಿರುವ ಪ್ರಾಣಿಗಳು ಇದೀಗ ಕೋಳಿ ತಿನ್ನಲು ಹಿಂದೇಟು ಹಾಕುತ್ತಿವೆ.
ಪ್ರಾಣಿ ತಜ್ಞರು ಮತ್ತು ವೈದ್ಯರ ಸಲಹೆಯಂತೆ ವಾರದ ಒಂದು ದಿನ ಹೊರತು ಪಡಿಸಿ, ಉಳಿದ 6 ದಿನಗಳು ಗೋ ಮಾಂಸ ನೀಡಲಾಗುತ್ತಿತ್ತು. ಒಂದು ಪ್ರಾಣಿಗೆ ದಿನಕ್ಕೆ 10 ಕೆಜಿ ನೀಡಲಾಗುತ್ತಿತ್ತು. ಒಂದು ಕೆಜಿ ಗೋ ಮಾಂಸಕ್ಕೆ ಅಂದಾಜು . 120 ಆಗುತ್ತಿತ್ತು. ಈಗ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ ನಂತರ ಕೋಳಿ ಮತ್ತು ಕುರಿ ಮಾಂಸ ನೀಡಲಾಗುತ್ತಿದೆ. ಕೋಳಿ ಮಾಂಸ ಕೆಜಿಗೆ . 200 ಆದರೆ, ಕುರಿ ಮಾಂಸ . 500 ಗಡಿದಾಟಿದೆ. ಒಂದು ಕಡೆ ಕೋಳಿ, ಕುರಿ ಮಾಂಸ ದುಬಾರಿಯಾದರೆ, ಇನ್ನೊಂದೆಡೆ ಕೋಳಿ ಮಾಂಸ ತಿನ್ನಲು ಮಾಂಸಹಾರಿ ಪ್ರಾಣಿಗಳು ಹೊಂದಿಕೊಳ್ಳುತ್ತಿಲ್ಲ. ಹೀಗಾಗಿ ಕೋಳಿಮಾಂಸ ರೂಢಿಸುವ ಕಾರ್ಯದಲ್ಲಿ ಮೃಗಾಲಯದ ಅಧಿಕಾರಿಗಳು ನಿರತರಾಗಿದ್ದಾರೆ.
ವಿಜಯನಗರಕ್ಕೆ ಹೆಚ್ಚಿದ ಬಲ : ರಾಜ್ಯದಲ್ಲಿ ಮತ್ತೊಂದು ಹೊಸ ಜಿಲ್ಲೆ
34 ಮಾಂಸಾಹಾರಿ ಪ್ರಾಣಿಗಳು:
ಸಿಂಹ, ಹುಲಿ, ಗುಳ್ಳೆ ನರಿ, ಕತ್ತೆ ಕಿರುಬ, ತೋಳ ಸೇರಿ ಮೃಗಾಲಯದಲ್ಲಿ ಒಟ್ಟು 34 ಮಾಂಸಾಹಾರಿ ಪ್ರಾಣಿಗಳಿವೆ. ಈ ಮುನ್ನ ಗಂಡು ಹುಲಿಗೆ ದಿನಕ್ಕೆ 10 ಕೆಜಿ ಹಾಗೂ ಹೆಣ್ಣು ಹುಲಿಗೆ 8 ಕೆಜಿ ದನದ ಮಾಂಸ ನೀಡಲಾಗುತ್ತಿತ್ತು. ನರಿಗೆ 3ಕೆಜಿ, ಕತ್ತೆಕಿರುಬಗೆ 5 ಕೆಜಿ, ತೋಳಕ್ಕೆ 4 ಕೆಜಿ ನೀಡಲಾಗುತ್ತಿತ್ತು. ಗೋ ಮಾಂಸದ ಬದಲಿಗೆ ಈಗ ಕೋಳಿ ಮತ್ತು ಕುರಿ ಮಾಂಸ ನೀಡಲಾಗುತ್ತಿದೆ. ಈ ಮಾಂಸಾಹಾರಕ್ಕೆ ಹೊಂದಿಕೊಳ್ಳಲು ಪ್ರಾಣಿಗಳು ಹಿಂದೇಟು ಹಾಕುತ್ತಿವೆ.
ಮೃಗಾಲಯದ ಪ್ರಾಣಿಗಳಿಗೆ ಈ ಹಿಂದೆ ಗೋ ಮಾಂಸ ನೀಡಲಾಗುತ್ತಿತ್ತು. ಈಗ ಕುರಿ, ಕೋಳಿ ಮಾಂಸ ನೀಡಲಾಗುತ್ತಿದೆ. ತಿನ್ನಲು ಪ್ರಾಣಿಗಳು ಹಿಂದೇಟು ಹಾಕುತ್ತಿವೆ. ಪ್ರಾಣಿಗಳಿಗೆ ಗೋ ಮಾಂಸ ಸೇವನೆಗೆ ಕಾಯ್ದೆಯಲ್ಲಿ ವಿನಾಯಿತಿ ನೀಡಿದರೆ ಉತ್ತಮ ಎಂದು ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಅಧಿಕಾರಿ ಕಿರಣ್ ಕುಮಾರ್ ಹೇಳಿದ್ದಾರೆ.