ಎರಡು ದಿನ ಆಸ್ಪತ್ರೆಯಲ್ಲಿ ಕಳೆದ ಕೊರೋನಾ ಸೋಂಕಿತ| ಗಂಟಲು ಕೆರೆತಕ್ಕೆ ಚಿಕಿತ್ಸೆ ಪಡೆದ ಜಿಂದಾಲ್ ನೌಕರ| ಕೊಪ್ಪಳ ನಗರದ ನಿವಾಸಿಗಳಲ್ಲಿ ಆತಂಕ| ಆಸ್ಪತ್ರೆ ಸೀಲ್‌ಡೌನ್ ಆಗಿದ್ದರೂ ಮಧ್ಯಾಹ್ನದವರೆಗೆ ತೆರೆದೇ ಇದ್ದ ಆಸ್ಪತ್ರೆಯ ಕೆಳಭಾಗದ ಸ್ಕ್ಯಾನ್ ಸೆಂಟರ್|
ಕೊಪ್ಪಳ(ಜೂ.21): ಜಿಂದಾಲ್‌ನಿಂದ ವಾಪಸ್ಸಾದ ಕೊರೋನಾ ಪೀಡಿತ ನಗರದ ಖುಷಿ ಆಸ್ಪತ್ರೆಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಶನಿವಾರ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಇದಕ್ಕೂ ಮುನ್ನ ಇಡೀ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲಾಯಿತು.
ಹೊಸಪೇಟೆ ರಸ್ತೆಯಲ್ಲಿರುವ ಖುಷಿ ಆಸ್ಪತ್ರೆಯಲ್ಲಿ ಸೋಂಕಿತ ಎರಡು ದಿನಗಳ ಕಾಲ ಕಳೆದಿದ್ದಾನೆ. ತನ್ನ ಸಹೋದರಿಯ ಮಗನನ್ನು ಮಾತನಾಡಿಸಲು ಬುಧವಾರ ಮಧ್ಯಾಹ್ನ ಆಗಮಿಸಿದ್ದ ಸೋಂಕಿತ ಇಲ್ಲೇ ಉಳಿದುಕೊಂಡಿದ್ದ. ಅಲ್ಲದೆ, ಈತ ಖುಷಿ ಆಸ್ಪತ್ರೆಯಲ್ಲಿ ಗಂಟಲು ಕೆರೆತಕ್ಕೆ ಚಿಕಿತ್ಸೆ ಪಡೆದಿದ್ದಾನೆ. ಇದರಿಂದಾಗಿ ಆಸ್ಪತ್ರೆ ಸಿಬ್ಬಂದಿ, ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳು, ಅವರ ಸಂಬಂಧಿಕರು ಕಂಗಾಲಾಗಿದ್ದಾರೆ. ಈತ ಎಲ್ಲೆಲ್ಲಿ ತಿರುಗಾಡಿದ್ದಾನೆ ಎಂಬುದು ಇನ್ನಷ್ಟೇ ತಿಳಿಯಬೇಕಿದ್ದು, ನಗರದ ನಿವಾಸಿಗಳು ಕೂಡ ಆತಂಕಗೊಂಡಿದ್ದಾರೆ.
ಅಕ್ರಮ ತಡೆಗಟ್ಟಲು ಹೊಸ ಪ್ಲಾನ್: SSLC ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಸ್ವಾಧೀನಾಧಿಕಾರಿ
ಜಿಂದಾಲ್ ಉದ್ಯೋಗಿಯಾದ ಈತ ತೋರಣಗಲ್‌ನಲ್ಲಿ ಗಂಟಲು ದ್ರವ ಪರೀಕ್ಷೆಗೆ ಕೊಟ್ಟು ಕೊಪ್ಪಳಕ್ಕೆ ಬಂದಿದ್ದ. ಪರೀಕ್ಷೆಗೆ ತೆರಳಿದ್ದಾಗಲೆ ಹೋಂ ಕ್ವಾರಂಟೈನ್‌ನಲ್ಲಿರಲು ಆರೋಗ್ಯ ಇಲಾಖೆ ಸಿಬ್ಬಂದಿ ಸೂಚನೆ ನೀಡಿದ್ದರು. ಆದರೆ, ಸಿಬ್ಬಂದಿ ಸೂಚನೆ ಧಿಕ್ಕರಿಸಿ ಈತ ಕೊಪ್ಪಳಕ್ಕೆ ಬಂದು ತಿರುಗಾಡಿದ್ದಾನೆ.
ಶುಕ್ರವಾರ ಮಧ್ಯಾಹ್ನ ಸೋಂಕು ದೃಢವಾಗಿದೆ. ತಕ್ಷಣ ಸೋಂಕಿತನ ಕುರಿತು ಬಳ್ಳಾರಿ ಜಿಲ್ಲಾಡಳಿತದಿಂದ ಕೊಪ್ಪಳ ಜಿಲ್ಲಾಡಳಿತಕ್ಕೆ ಮಾಹಿತಿ ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಖುಷಿ ಆಸ್ಪತ್ರೆಯಿಂದಲೆ ಈತನನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕೊಪ್ಪಳದ ಕೋವಿಡ್ ಆಸ್ಪತ್ರಗೆ ದಾಖಲಿಸಿದ್ದಾರೆ. ಇನ್ನು, ಆಸ್ಪತ್ರೆ ಸೀಲ್‌ಡೌನ್ ಆಗಿದ್ದರೂ ಮಧ್ಯಾಹ್ನದ ವರೆಗೆ ಆಸ್ಪತ್ರೆಯ ಕೆಳಭಾಗದ ಸ್ಕ್ಯಾನ್ ಸೆಂಟರ್ ತೆರೆದೇ ಇತ್ತು.