ಕುಂದಾಪ್ರ ಕನ್ನಡ ಬೆಳಸಿದ ಮನು ಹಂದಾಡಿ!

ಕನ್ನಡಕ್ಕಾಗಿ ಏನೇನು ಮಾಡಬಹುದು ಎಂದು ಚರ್ಚೆಯಾಗುತ್ತಿರುವ ಹೊತ್ತಲ್ಲೇ, ಅನೇಕರು ಯಾಪ ಪ್ರಚಾರವನ್ನೂ ಬಯಸದೇ, ಯಾರಪ್ಪಣೆಗೂ ಕಾಯದೇ, ತಮ್ಮಷ್ಟಕ್ಕೇ ತಾವು ಕನ್ನಡ ಕೈಂಕರ್ಯದಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು. ಕಲೆ, ಸಾಹಿತ್ಯ, ಸಂಗೀತ, ಕನ್ನಡ ಕಲಿಸುವುದು, ಸಂಶೋಧನೆ, ಮನರಂಜನೆ, ಉದ್ಯಮ-ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಶೈಲಿಯಲ್ಲಿ ಕನ್ನಡದ ಕೆಲಸ ಮಾಡಿಕೊಂಡಿರುವವರು ಕನ್ನಡವನ್ನು ತಮಗರಿವಿಲ್ಲದೇ ಹುರಿಗೊಳಿಸುತ್ತಾ ಇರುತ್ತಾರೆ. ಅಂಥ ಕನ್ನಡ ಕಟ್ಟಿದವರ ಸರಣಿ ಇಂದಿನಿಂದ ಆರಂಭವಾಗುತ್ತಿದೆ. ನವೆಂಬರ್ ತಿಂಗಳುದ್ದಕ್ಕೂ ಇದು ಮುಂದುವರಿಯಲಿದೆ

Lifestyle journey of Kundapura stand up comedian Manu Handadi

ಸುಭಾಶ್ಚಂದ್ರ ವಾಗ್ಳೆ

ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ತಾಯಿ ಭಾಷೆಯನ್ನು ಉಳಿಸಿ ಬೆಳೆಸಬಹುದು ಎನ್ನುವುದು ತೋರಿಸಿ ಕೊಟ್ಟವರು ಉಡುಪಿ ಜಿಲ್ಲೆಯ ಬಾರ್ಕೂರು ಸಮೀಪದ ಹಂದಾಡಿ ಎಂಬ ಕುಗ್ರಾಮದ ಯುವಕ ಮನು ಅವರು. ಮನು ಹಂದಾಡಿ ಎಂದೇ ಪ್ರಸಿದ್ಧರಾಗಿರುವ ಅವರು ಇವತ್ತು ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಹರಿಯ ಬಿಡುವ ವಿಡಿಯೋ-ಆಡಿಯೋ ಕ್ಲಿಪಿಂಗ್‌ಗಳಿಗಾಗಿ ಕಾಯುವ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾ.

Lifestyle journey of Kundapura stand up comedian Manu Handadi

ಬಳ್ಳಾರಿ ಕನ್ನಡ, ಮಂಡ್ಯ ಕನ್ನಡ, ಹುಬ್ಳಿ ಕನ್ನಡ, ಮಂಗ್ಳೂರ್ ಕನ್ನಡ... ಹೀಗೆ ಕನ್ನಡ ಭಾಷೆಯ ಹತ್ತಾರು ಶೈಲಿಗಳಲ್ಲಿ ಕುಂದಾಪುರ ಭಾಗದ ಜನರು ಆಡುವ ಕುಂದಾಪ್ರ ಕನ್ನಡವೂ ಒಂದು. ಉಡುಪಿ ಜಿಲ್ಲೆಯ ಕುಂದಾಪುರ ಭಾಗಕ್ಕೆ ಮಾತ್ರ ಸೀಮಿತವಾಗಿರುವ ಈ ಭಾಷೆಯನ್ನು ಆಡುವವರ ಸಂಖ್ಯೆ ಕಡಿಮೆಯಾಗಿ ಇತ್ತೀಚೆಗೆ ನಿಧಾನವಾಗಿ ಅಳಿವಿನಂಚಿಗೆ ಸರಿಯುತ್ತಿತ್ತು. ಶಾಲೆಗಳಲ್ಲಿ ಗ್ರಾಂಥಿಕ ಕನ್ನಡವನ್ನು ಕಲಿತ ಇಲ್ಲಿನ ಇಂದಿನ ಪೀಳಿಗೆ ತಮ್ಮ ಹಿರಿಯರ ಅದ್ಭುತ ಬಳುವಳಿಯಾಗಿರುವ ಕುಂದಾಪ್ರ ಕನ್ನಡದಿಂದ ದೂರ ಸರಿಯುತ್ತಿದ್ದರು. ಈ ಕಾಲ ಘಟ್ಟದಲ್ಲಿ ಕೋ.ಲ.ಕಾರಂತ, ಎ.ಎಸ್.ಎನ್.ಹೆ ಬ್ಬಾರ್, ಓಂ ಗಣೇಶ್ ಅವರು ಕುಂದಾಪ್ರ ಕನ್ನಡ ಉಳಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದರು. ಅವರಿಂದ ಪ್ರೇರಣೆಗೊಂಡು ಬೆಳಕಿಗೆ ಬಂದ ಪ್ರತಿಭೆಯೇ ಈ ಮನು ಹಂದಾಡಿ.

ಕೆಲ್ವೂಮ್ಮೆ ವಿಡಿಯೋ ಆಡಿಯೋ ಬಪ್ಪುದು ತಡ ಆಯ್ರೆ ಜನ ಫೋನ್ ಮಾಡ್ತ್ರ್, ಮೆಸೇಜ್ ಮಾಡ್ತ್ರ್, ಇತ್ಲಾಗ್ ನಿಮ್ ವಿಡಿಯೋ ಬರ್ಲಲೆ, ಅಡಿಯೋ ಬರ್ಲಲೆ ಅಂತ್ರ್, ಆಗ ಹೋ ಹಂಗಾರ್
ಇನ್ನೊಂದು ವಿಡಿಯೋ ಮಾಡ್ಕ್ ಅಂತ್ ಉಮೇದ್ ಆತ್... ಈಗ ನಮ್ಬದಿ ಎಲ್ಲಾ ಹುಡುಗ್ರ್ ಒಂದೇ ಸರ್ತಿಗ್ ಎಚ್ಚೆತ್ತ್ ಕೊಂಡಿರ್, ಎಲ್ಲಾ ನಮ್ ಭಾಷೆ ಮಾತಾಡಕ್ ಸುರು ಮಾಡಿರ್, ಒಟ್ನಲ್ಲಿ
ಕುಂದಾಪ್ರ ಕನ್ನಡ ಉಳಿಲಿ, ಹಂಗ್ ಉಳ್ಕೊಂಡ್ ಮುಂದಕ್ ಹೊಯ್ಲಿ, ಅಷ್ಟೇ ನಮ್ ಅಸೆ- ಮನು ಹಂದಾಡಿ

ಇನ್ನೂರಕ್ಕೂ ಹೆಚ್ಚು ವಿಡಿಯೋ, ಲಕ್ಷಾಂತರ ಪ್ರೇಕ್ಷಕರು

ಕೋಣಗಳ ಕಂಬಳ, ಗದ್ದೆ ನಾಟಿ, ಬಿಗ್‌ಬಾಸ್, ಶಾಲಾ ಶತಮಾನೋತ್ಸವ, ಹೆಲ್ಮೆಟ್ ಕಡ್ಡಾಯ ನಿಯಮ... ಹೀಗೆ ಸಮಾಜದ ಯಾವುದೇ ಆಗುಹೋಗುಗಳಿರಲಿ ಅದಕ್ಕೆ ಪ್ರತಿಯಾಗಿ ಮನು ಹಂದಾಡಿ ಅವರು ಶುದ್ಧ ಕುಂದಾಪ್ರ ಕನ್ನಡ ಶೈಲಿಯಲ್ಲಿ ಒಂದು ಸಂದೇಶ ಭರಿತ ಆಡಿಯೋ ಅಥವಾ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಗಮ್ ಗೈಲ್ ಕಂಬ್ಳ, ಕೊಯ್ಲ್ ಪದು, ಹೊಡ್ತಿ ಓಳಲ್... ಹೀಗೆ ಅವರು ಇದುವರೆಗೆ 200ಕ್ಕೂ ಅಧಿಕ ವಿಡಿಯೋಗಳನ್ನು ಸೃಷ್ಟಿಸಿದ್ದಾರೆ. ಲಕ್ಷಾಂತರ ಮಂದಿ  ಅದನ್ನು ವೀಕ್ಷಿಸಿದ್ದಾರೆ, ಮೆಚ್ಚಿದ್ದಾರೆ.

ಅವುಗಳನ್ನು ‘ಫಣ್ಕ್’ (ತುಂಟತನ) ಎಂದು ಕರೆಯುವ ಅವರ ಈ ವಿಡಿಯೋಗಳಲ್ಲಿ ಎಂತಹ ಆಕರ್ಷಣೆ ಇದೆ ಎಂದರೆ ಇಲ್ಲಿನ ಯುವಕರು ಮತ್ತೆ ಕುಂದಾಪ್ರ ಕನ್ನಡದಲ್ಲಿ ಮಾತನಾಡಲಾರಂಭಿಸಿದ್ದಾರೆ. ಮನು ಅವರದ್ದೇ ಶೈಲಿಯಲ್ಲಿ ಹೇಳುವುದಾದರೆ ‘ಕುಂದಾಪ್ರುದ ಹುಡುಗ್ರು ಒಂದ್ ಸರ್ತಿಗೆ ಎಚ್ಚೆತ್ತುಕೊಂಡಾಗಿತ್, ಎಲ್ಲರ ಬಾಯಾಗ್ ಕುಂದಾಪ್ರ ಕನ್ನಡ ಕುಣಿತಿತ್, ತುಂಬಾ ಜನ ಕುಂದಾಪ್ರ ಕನ್ನಡದಲ್ಲಿ ಹಾಡ್ ಬರುದ, ಕತೆ ಬರುದ್ ಸುರು ಮಾಡಿರ್, ನಂಗ್ ಅದ್ ದೊಡ್ಡ್ ಖುಷಿ...’

ಕತಿ ಪಡ್ಸಾಲಿ ವೇದಿಕೆ

ತಾಯಿ ರತ್ನಾವತಿ, ಅಜ್ಜಿ ಲಚ್ಚಮ್ಮ ಅವರ ಬಾಯಿಂದ ಕುಂದಾಪ್ರ ಕನ್ನಡದಲ್ಲಿ ಅಸಂಖ್ಯ ಕತೆ ಪದಗಳನ್ನು ಕೇಳಿ ಸ್ಫೂರ್ತಿ ಪಡೆದ ಮನು ಹಂದಾಡಿ ಅವರು ‘ಕತಿ ಪಡ್ಸಾಲಿ’ (ಕತೆ ಪಡಸಾಲೆ) ಎಂಬ ವೇದಿಕೆಯೊಂದನ್ನು ಹುಟ್ಟು ಹಾಕಿ ಅದರ ಮೂಲಕ ಕನ್ನಡದ ಕತೆಗಳನ್ನು ಕುಂದಾಪ್ರ ಶೈಲಿಯಲ್ಲಿ ನಿರೂಪಿಸುವ, ಆ ಮೂಲಕ ಕನ್ನಡವನ್ನು ಜನರಿಗೆ ಹತ್ತಿರಕ್ಕೆ ತೆಗೆದುಕೊಂಡು ಹೋಗುವ ಪ್ರಯೋಗವನ್ನೂ ಮಾಡಿದ್ದಾರೆ.

Lifestyle journey of Kundapura stand up comedian Manu Handadi

ನಗೆ ಅಟ್ಟೂಳಿ ತಂಡ

‘ನಗೆ ಅಟ್ಟೂಳಿ’ ಎಂಬ 12 ಜನರ ತಂಡವನ್ನು ಕಟ್ಟಿಕೊಂಡು, 40ಕ್ಕೂ ಹೆಚ್ಚು ಕಡೆಗಳಲ್ಲಿ ಕುಂದಾಪ್ರ ಕನ್ನಡದಲ್ಲಿ ಸಾಮಾಜಿಕ ಸಂದೇಶಗಳ ಪ್ರಹಸನಗಳನ್ನು ಪ್ರದರ್ಶಿಸುತ್ತಾ ಮನು ಹಂದಾಡಿ ಅವರು ಕುಂದಾಪ್ರ ಕನ್ನಡಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಇತ್ತೀಚೆಗೆ ದುಬೈಯಲ್ಲಿಯೂ ಕುಂದಾಪ್ರ ಕನ್ನಡದ ಕಾರ್ಯಕ್ರಮ ನೀಡಿದ್ದಾರೆ. ಮಸ್ಕತ್, ಓಮನ್ ಕನ್ನಡ ಸಂಘಗಳಿಂದಲೂ ಕರೆ ಬಂದಿದೆ. ರಾಜ್ಯದ ಬೇರೆ ಕಡೆಗಳಿಂದ ಅವರನ್ನು ಗುರುತಿಸುತ್ತಿದ್ದಾರೆ.

ಬಿಗ್ ಬಾಸ್ ಥರ ಹೆರಿ ಬಾಸ್

ಬಿಗ್ ಬಾಸ್ ರಿಯಾಲಿಟಿ ಶೋಗೆ ಪ್ರತಿಯಾಗಿ ಕುಂದಾಪ್ರ ಕನ್ನಡದಲ್ಲಿ ಹೆರಿ ಬಾಸ್ ಎನ್ನುವ ವಿಡಿಯೋ ಮಾಡಿದ್ದರು, ಅದು ಎಷ್ಟು ಪ್ರಭಾವಶಾಲಿ ಯಾಗಿತ್ತೆಂದರೇ ಬಹಳ ದಿನ ಉಡುಪಿಯ ಯುವಕರ ಮೊಬೈಲಿನಲ್ಲಿ ಓಡಾಡುತ್ತಿತ್ತು. ರಾಹೆ ಕಳಪೆ ಕಾಮಗಾರಿ ಬಗ್ಗೆ, ಸಿಂಗಂ ಸಿನೆಮಾದ ಅಜಯ್ ದೇವ್‌ಗನ್ ಮಂತ್ರಿಗೆ ಹೊಡೆಯುವ ದೃಶ್ಯಕ್ಕೆ ಮಾಡಿದ ಕುಂದಾಪ್ರ ಭಾಷೆಯ ಡಬ್ಬಿಂಗ್ ಡೈಲಾಗ್ ಬಹಳ ಯುವಕರ ಬಾಯಲ್ಲಿತ್ತು. ಕನ್ನಡ, ಹಿಂದಿ, ಇಂಗ್ಲೀಷ್ ಸಿನೆಮಾ ದೃಶ್ಯಗಳಿಗೆ ಡಬ್ಬಿಂಗ್ ಮಾಡಿ, ಆ ಮೂಲಕ ಕುಂದಾಪ್ರ ಕನ್ನಡ ಯುವಕರಿಗೆ ಇಷ್ಟವಾಗುವಂತೆ ಮಾಡಿದ್ದು ಅವರ ಪ್ರತಿಭೆಯೇ ಸೈ.

ಬಾಷೆ ಬೆಳೆಸ್ತಿದ್ರೆ ಮಾತ್ರ ಬೆಳಿತದೆ...

ಸದ್ಯ ಉಡುಪಿ ಸಮೀಪದ ಕೊಕ್ಕೆಣೆಯ ದುರ್ಗಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಂಶುಪಾಲರಾಗಿರುವ ಮನು ಹಂದಾಡಿ ಅವರಿಗೆ (9986322997) ಕರೆ ಮಾಡಿದ್ರೆ, ಆ ಕಡೆಯಿಂದ ಥಟ್ಟನೇ ಕಿವಿ ಬೀಳುವುದು ಕುಂದಾಪುರ ಕನ್ನಡ. ಅವರ ಬಳಿ ನಾವು ಎಷ್ಟೇ ಮಾತನಾಡಿದರೂ, ಅವರು ಮಾತ್ರ ತಮ್ಮ ಮಾತಿನುದ್ದಕ್ಕೂ ಶುದ್ಧ ಕುಂದಾಪ್ರ ಶೈಲಿಯ ಕನ್ನಡದಲ್ಲಿಯೇ ಮಾತನಾಡುತ್ತಾರೆ, ಕೇಳುವವರನ್ನು ಮೋಡಿ ಮಾಡುತ್ತಾರೆ. ಭಾಷೆಯನ್ನು ಬಳಸ್ತಿದ್ರೆ ಮಾತ್ರ ಉಳಿತದೆ, ಬೆಳಿತದೆ ಎನ್ನುವ ಅವರು ಆ ಮಾತಿಗೆ ಜೀವಂತ ಪ್ರಾಯೋಗಿಕ ಉದಾಹರಣೆ.

Latest Videos
Follow Us:
Download App:
  • android
  • ios