ಎಚ್‌ಡಿಕೆಗೆ ಕದ್ದು ಮುಚ್ಚಿ ಹೋಗುವ ಅಗತ್ಯವಿಲ್ಲ: ಗೌಡ

By Kannadaprabha NewsFirst Published Aug 1, 2020, 11:52 AM IST
Highlights

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕುರಿತು ವಿಧಾನಪರಿಷತ್‌ನ ನೂತನ ಸದಸ್ಯ ಸಿ.ಪಿ.ಯೋಗೇಶ್ವರ್‌ ಆರೋಪಕ್ಕೆ ಏನಾದರೂ ಸಾಕ್ಷಿ, ಆಧಾರ ಇದೆಯಾ? ಕುಮಾರಸ್ವಾಮಿ ಅವರಿಗೆ ಕದ್ದುಮುಚ್ಚಿ ಹೋಗಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹರಿಹಾಯ್ದಿದ್ದಾರೆ.

ಬೆಂಗಳೂರು(ಆ.01): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕುರಿತು ವಿಧಾನಪರಿಷತ್‌ನ ನೂತನ ಸದಸ್ಯ ಸಿ.ಪಿ.ಯೋಗೇಶ್ವರ್‌ ಆರೋಪಕ್ಕೆ ಏನಾದರೂ ಸಾಕ್ಷಿ, ಆಧಾರ ಇದೆಯಾ? ಕುಮಾರಸ್ವಾಮಿ ಅವರಿಗೆ ಕದ್ದುಮುಚ್ಚಿ ಹೋಗಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹರಿಹಾಯ್ದಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜಕಾರಣಿಗಳು ಸುಮ್ಮನೆ ಮತ್ತೊಬ್ಬರ ಬಗ್ಗೆ ಲಘುವಾಗಿ ಮಾತನಾಡಬಾರದು. ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಸ್ಥಿರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿಯೇ ವ್ಯತ್ಯಾಸಗಳು ಬಂದರೆ ಚುನಾವಣೆ ಬರುತ್ತದೆ. ಅಷ್ಟೇ ಹೊರತು ಬಿಜೆಪಿ ಪರವಾಗಿ ಕುಮಾರಸ್ವಾಮಿ ಇದ್ದಾರೆ ಎಂಬುದು ಸುಳ್ಳು. ನಾವು ಯಾಕೆ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಬೇಕು. ಅದರ ಅವಶ್ಯಕತೆಯೂ ನಮಗಿಲ್ಲ ಎಂದು ಕಿಡಿಕಾರಿದ್ದಾರೆ.

ಮಂತ್ರಿಗಿರಿ ತಪ್ಪಿಸಲು ಡಿಕೆಶಿ ನಿರಾಧಾರ ಆರೋಪ: ಯೋಗೇಶ್ವರ್‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಅವರ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್‌ ಸೇರಿ ಜೆಡಿಎಸ್‌ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೆಳೆಯುತ್ತಾರೆ ಎಂಬುದೆಲ್ಲಾ ಊಹಾಪೋಹದ ಮಾತುಗಳಾಗಿದ್ದು, ಅಂತಹ ಮಾತುಗಳಿಗೆ ಉತ್ತರ ನೀಡುವುದಿಲ್ಲ. ನನಗೂ ಸಾಕಷ್ಟುರಾಜಕೀಯ ಅನುಭವ ಇದೆ. ಏನು ನಡೆಯುತ್ತಿದೆ ಎಂಬುದು ಗೊತ್ತಿದೆ. ಅವರ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವುದಾದರೆ ಬನ್ನಿ ಎಂದಿದ್ದಾರೆ. ಈ ಬಗ್ಗೆ ಸೂಕ್ತ ಸಂದರ್ಭದಲ್ಲಿ ಮಾತನಾಡುತ್ತೇನೆ ಎಂದರು.

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ವಿರೋಧಿಯಾಗಿದೆ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯಲಾಗುವುದು. ಅಧಿವೇಶನ ಕರೆಯಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಈ ಬಗ್ಗೆಯೂ ರಾಜ್ಯಪಾಲರ ಗಮನಕ್ಕೆ ತರಲಾಗವುದು. ಆ.4ರಂದು ಪಕ್ಷದ ಶಾಸಕರ, ಮುಖಂಡರ ಸಭೆ ಕರೆಯಲಾಗಿದೆ. ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಹೋರಾಟದ ರೂಪರೇಷೆಗಳನ್ನು ರೂಪಿಸಲಾಗುವುದು ಎಂದು ದೇವೇಗೌಡ ಹೇಳಿದರು.

ಎಸ್‌ಐ ಆತ್ಮಹತ್ಯೆ ನಿಷ್ಪಕ್ಷ ತನಿಖೆ ನಡೆಸಿ

ಚನ್ನರಾಯಪಟ್ಟಣ ಸಬ್‌ಇನ್ಸ್‌ಪೆಕ್ಟರ್‌ ಕಿರಣ್‌ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ದೇವೇಗೌಡ, ಪ್ರಕರಣ ಸಂಬಂಧ ಸಂಪೂರ್ಣ ತನಿಖೆಯಾಗಬೇಕು. ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹಿಂಸೆ ಕೊಟ್ಟಿದ್ದಾರೆಂದು ಹೇಳಲಾಗುತ್ತಿದೆ. ಗೃಹ ಸಚಿವರು ಇದರ ಬಗ್ಗೆ ಸೂಕ್ತ ತನಿಖೆ ಮಾಡಿಸಬೇಕು. ಸರಿಯಾಗಿ ತನಿಖೆ ಮಾಡದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಗೃಹ ಸಚಿವರು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

click me!