ಸುಬ್ರಹ್ಮಣ್ಯ (ಜು.11): ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಕುಮಾರಧಾರ ನದಿ ಉಕ್ಕಿಹರಿಯುತ್ತಿದ್ದು ಅಪಾಯದ ಮಟ್ಟದಲ್ಲಿದೆ. ಶನಿವಾರ ರಾತ್ರಿ ಮತ್ತು ಭಾನುವಾರ ಸುಬ್ರಹ್ಮಣ್ಯ ಸೇರಿದಂತೆ ಘಟ್ಟಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಪುಣ್ಯ ನದಿ ಕುಮಾರಧಾರವು ಮೈದುಂಬಿ ಹರಿಯುತ್ತಿದೆ. ಕುಮಾರಧಾರದ ಉಪನದಿ ದರ್ಪಣ ತೀರ್ಥವೂ ನೆರೆಯಿಂದ ತುಂಬಿದೆ. ಈ ಕಾರಣದಿಂದ ಸುಬ್ರಹ್ಮಣ್ಯ- ಪಂಜ- ನಿಂತಿಕಲ್- ಕಾಣಿಯೂರು-ಪುತ್ತೂರು-ಮಂಜೇಶ್ವರ ಸಂಪರ್ಕಿಸುವ ದರ್ಪಣತೀರ್ಥ ಸೇತುವೆಯು ಮುಳುಗಡೆಯಾಗಿದೆ. ಹೀಗಾಗಿ ಅಂತಾರಾಜ್ಯ ರಸ್ತೆ ಸಂಪರ್ಕವು ಸಂಪೂರ್ಣ ಬಂದ್ ಆಗಿದೆ.
ವಾರದಿಂದ ಮುಳುಗಡೆ ಸ್ಥಿತಿಯಲ್ಲಿ ಸ್ನಾನಘಟ್ಟ: ಕುಮಾರಧಾರ ಸ್ನಾನಘಟ್ಟವು ಕಳೆದ ಒಂದು ವಾರದಿಂದ ಸಂಪೂರ್ಣ ಮುಳುಗಡೆ ಸ್ಥಿತಿಯಲ್ಲಿದೆ. ಭಕ್ತರು ನದಿ ಕಿನಾರೆಯಲ್ಲಿ ಪಾತ್ರೆಗಳ ಮೂಲಕ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಇಲ್ಲಿನ ದೇವರ ಜಳಕದ ಕಟ್ಟೆಯೂ ಸಂಪೂರ್ಣ ಮುಳುಗಡೆಯಾಗಿದೆ. ಶೌಚಾಲಯ ಹಾಗೂ ಬಟ್ಟೆಬದಲಾಯಿಸುವ ಕೊಠಡಿಗಳು ಜಲಾವೃತಗೊಂಡಿವೆ. ಕುಮಾರಧಾರ ನದಿಯು ಸ್ನಾನಘಟ್ಟದಿಂದ ಸುಮಾರು 100 ಮೀಟರ್ ದೂರದಷ್ಟುವ್ಯಾಪಿಸಿದ್ದು ಇಲ್ಲಿನ ಲಗೇಜ್ ಕೊಠಡಿ ನೀರಿನಿಂದ ಆವೃತವಾಗಿದೆ. ಸ್ನಾನಘಟ್ಟದ ಸಮೀಪವಿರುವ ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿದೆ.
ಘಟ್ಟಪ್ರದೇಶಗಳಲ್ಲಿ ಭಾರೀ ಮಳೆ: 4 ಪ್ರಮುಖ ಘಾಟಿ ರಸ್ತೆಗಳು ಅಪಾಯದಲ್ಲಿ..!
ಕುಕ್ಕೆ- ಮಂಜೇಶ್ವರ ಸಂಪರ್ಕ ಬಂದ್: ಕುಮಾರಧಾರದ ಉಪನದಿ ದರ್ಪಣ ತೀರ್ಥವು ತುಂಬಿ ಹರಿದ ಕಾರಣ ಕುಕ್ಕೆಸುಬ್ರಹ್ಮಣ್ಯ- ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ದರ್ಪಣ ತೀರ್ಥ ಸೇತುವೆಯು ಮುಳುಗಡೆಗೊಂಡಿತು. ನದಿ ನೀರು ಸುಮಾರು 200 ಮೀಟರ್ ದೂರದ ತನಕ ರಾಜ್ಯ ಹೆದ್ದಾರಿಯನ್ನು ಆಕ್ರಮಿಸಿಕೊಂಡಿತ್ತು. ದರ್ಪಣ ತೀರ್ಥ ನದಿ ದಡದ ಎಲ್ಲ ಕೃಷಿ ತೋಟಗಳಲ್ಲೂ ಕೃತಕ ನೆರೆ ಉಂಟಾಗಿದ್ದು, ಸಮೀಪದ ಕಿಟ್ಟಣ ರೈ ಅವರ ಕೃಷಿ ತೋಟ ಮತ್ತು ಅಲ್ಕುರೆ ಗೌಡ ಅವರ ಮನೆ ಜಲಾವೃತಗೊಂಡಿತ್ತು. ಕುಮಾರಧಾರ ನದಿಯ ಪ್ರವಾಹದಿಂದಾಗಿ ದೋಣಿಮಕ್ಕಿ, ಕುಲ್ಕುಂದ ಕಾಲನಿ, ನೂಚಿಲಬೈಲು ಹಾಗೂ ಸಮೀಪದ ಮನೆಗಳಿಗೆ ಜಲದಿಗ್ಬಂಧನವಾಗಿದೆ.
ಭಾಗಶಃದ್ವೀಪವಾದ ದೋಣಿಮಕ್ಕಿ: ದರ್ಪಣ ತೀರ್ಥ ನದಿಯಲ್ಲಿ ಪ್ರವಾಹ ಉಕ್ಕಿದ ಕಾರಣ ಸುಬ್ರಹ್ಮಣ್ಯದ ಕುಮಾರಧಾರದ ದೋಣಿಮಕ್ಕಿ ಪರಿಸರವು ಭಾಗಶಃ ದ್ವೀಪವಾಯಿತು. ಇಲ್ಲಿಗೆ ತೆರಳುವ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಸಮೀಪದ ಮನೆಗಳಿಗೂ ನೀರು ನುಗ್ಗಿದೆ. ಈ ಭಾಗದ ಸುಮಾರು 40ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ.
ಸುಳ್ಯ, ಮಡಿಕೇರಿಯಲ್ಲಿ ಮತ್ತೆ ಭೂಕಂಪನ: ಬಿರುಕುಬಿಟ್ಟ ಭೂಮಿ
ಭಕ್ತರ ಸಂಖ್ಯೆ ವಿರಳ: ಕುಕ್ಕೆ ಪರಿಸರ ಸೇರಿದಂತೆ ರಾಜ್ಯಾದ್ಯಂತ ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಉಲ್ಭಣಗೊಂಡ ಕಾರಣ ಮತ್ತು ಭಾನುವಾರ ಏಕಾದಶಿ ಬಂದಿದ್ದರಿಂದ ಪ್ರತಿ ವಾರಾಂತ್ಯ ಜನರಿಂದ ತುಂಬಿರುತ್ತಿದ್ದ ಕುಕ್ಕೆ ಕ್ಷೇತ್ರದಲ್ಲಿ ಶನಿವಾರ ಮತ್ತು ಭಾನುವಾರ ಭಕ್ತರ ಸಂಖ್ಯೆ ವಿರಳವಾಗಿತ್ತು.
ಯೇನೆಕಲ್ಲು ಶಂಖಪಾಲ ದೇವಸ್ಥಾನಕ್ಕೆ ಜಲದಿಗ್ಬಂಧನ: ಯೇನೆಕಲ್ಲು ಪರಿಸರದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಯೇನೆಕಲ್ಲಿನಲ್ಲಿ ಹರಿಯುತ್ತಿರುವ ಕಲ್ಲಾಜೆ ಹೊಳೆಯು ಪ್ರವಾಹದಿಂದ ತುಂಬಿ ಹರಿಯುತ್ತಿದೆ. ನದಿಯ ಪ್ರವಾಹದಿಂದ ಐತಿಹಾಸಿಕ ಯೇನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನವು ಜಲದಿಗ್ಬಂಧನಕ್ಕೆ ಒಳಗಾಗಿದೆ. ನದಿಯ ನೀರಿನಿಂದ ಸುತ್ತು ಪೌಳಿ, ಪಾಕ ಶಾಲೆ ಮತ್ತು ವಸಂತ ಮಂಟಪ ಜಲಾವೃತಗೊಂಡಿದೆ.
ಯೇನೆಕಲ್ಲು-ಮರಕತ ರಸ್ತೆ ಜಲಾವೃತ: ಯೇನೆಕಲ್ಲು ಸಮೀಪದ ದೇವರಹಳ್ಳಿ ಎಂಬಲ್ಲಿ ಹರಿಯುವ ನದಿಯು ತುಂಬಿಹರಿದು ಕುಜುಂಬಾರು ಪ್ರದೇಶಕ್ಕೆ ತೆರಳವ ರಸ್ತೆಯು ಜಲಾವೃತಗೊಂಡಿತ್ತು. ದೇವರಹಳ್ಳಿ- ಬೂದಿಪಳ್ಳ- ಯೇನೆಕಲ್ಲು ಸಂಪರ್ಕ ರಸ್ತೆಯಲ್ಲಿ ನೀರಿ ತುಂಬಿದ್ದು ರಸ್ತೆ ಸಂಪರ್ಕ ಬಂದ್ ಆಗಿದೆ. ಕಡಬ- ಪಂಜ ಸಂಪರ್ಕ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರ ನದಿಯು ರಸ್ತೆಯನ್ನು ಆಕ್ರಮಿಸಿಕೊಂಡ ಕಾರಣ ರಸ್ತೆ ಸಂಚಾರವು ಸ್ಥಗಿತಗೊಂಡಿದೆ.