* ಬೆಳಗ್ಗೆ 6.22ಕ್ಕೆ ಸಂಭವಿಸಿದ ಲಘು ಭೂಕಂಪ
* ಭೂಕಂಪನ ದೃಢಪಡಿಸಿದ ಕೆಎಸ್‌ಎನ್‌ಡಿಎಂಸಿ
* ಭೂ ಕಂಪನದ ಸಮಯದಲ್ಲಿ ಭೂಮಿ ಬಿರುಕು
ಸುಳ್ಯ/ಮಡಿಕೇರಿ(ಜು.11): ಕಳೆದ ಕೆಲದಿಗಳಿಂದ ವ್ಯಾಪಕ ಮಳೆಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಹಾಗೂ ಕೊಡಗು ಜಿಲ್ಲೆ ಮಡಿಕೇರಿ ಪ್ರದೇಶದ ಹಲವೆಡೆ ಭಾನುವಾರ ಬೆಳಗ್ಗೆ ಭೂಮಿ ಕಂಪಿಸಿದೆ. ಬೆಳಗ್ಗೆ 6.22ಕ್ಕೆ ಸಂಭವಿಸಿದ ಲಘು ಭೂಕಂಪದ ಕೇಂದ್ರ ಸುಳ್ಯ ತಾಲೂಕಿನ ಅರಂತೋಡು ಎಂದು ಕರ್ನಾಟಕ ಸ್ಟೇಟ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ಬೆಳಗ್ಗೆ 6 ಗಂಟೆ 22 ನಿಮಿಷ 30 ಸೆಕೆಂಡ್‌ಗೆ ಕಂಪನವಾಗಿದೆ. ಕಂಪನದ ಪರಿಮಾಣ 1.8 ಇತ್ತು. ಅರಂತೋಡು ಗ್ರಾಮದ 1.1 ಕಿ.ಮೀ. ಪರಿಸರದಲ್ಲಿ 10 ಕಿ.ಮೀ. ಆಳದಲ್ಲಿ ಕಂಪನ ಉಂಟಾಗಿದೆ ಎಂದು ರಿಕ್ಟರ್ ಮಾಪಕದ ಅಂಕಿ ಅಂಶಗಳ ಪ್ರಕಾರ ಕೆಎಸ್‌ಎನ್‌ಡಿಎಂಸಿ ಹೇಳಿದೆ. ಇದು ಈ ಭಾಗದಲ್ಲಿ ನಡೆಯುತ್ತಿರುವ ಎಂಟನೇ ಕಂಪನವಾಗಿದೆ. ದೊಡ್ಡ ಸದ್ದಿನೊಂದಿಗೆ ಭೂಮಿ ಕಂಪಿಸಿದ್ದು, ಮನೆಯಲ್ಲಿದ್ದವರು ಭಯದಿಂದ ಹೊರಗೋಡಿ ಬಂದರು ಎಂದು ತಿಳಿದುಬಂದಿದೆ.
ಕೊಡಗು, ದಕ್ಷಿಣ ಕನ್ನಡಗೆ ಹೈದ್ರಾಬಾದ್ ತಜ್ಞರ ತಂಡ: ಸಚಿವ ಆರ್. ಅಶೋಕ್
ಕಲ್ಲುಗುಂಡಿ ಮಠದಮೂಲೆ ಸಮೀಪ ತಾಜುದ್ದೀನ್ ಟರ್ಲಿ ಅವರ ಮನೆಯ ಹಿಂಬದಿ ಭೂ ಕಂಪನದ ಸಮಯದಲ್ಲಿ ಭೂಮಿ ಬಿರುಕು ಬಿಟ್ಟಿದ್ದು ಬರೆ ಕುಸಿದಿದೆ. ಮನೆಯ ಮೇಲೆ ಬರೆ ಕುಸಿದು ಬೀಳುವ ಆತಂಕದಲ್ಲಿದೆ. ಕೊಡಗಿನ ಗಡಿ ಗ್ರಾಮ ಚೆಂಬುವಿನ ಸುತ್ತಮುತ್ತ ಪ್ರದೇಶಗಳಲ್ಲಿ ಭೂಮಿ ಕಂಪಿಸಿರುವ ಅನುಭವ ಉಂಟಾಗಿದೆ. ಶನಿವಾರ ರಾತ್ರಿ ಭೂಮಿಯಿಂದ ಜೋರು ಶಬ್ದ ಕೇಳಿ ಬಂದಿತ್ತೆಂದು ಗ್ರಾಮಸ್ಥರು ಮಾಹಿತಿ ನೀಡಿದ್ದು, ಭಾನುವಾರ ಬೆಳಗ್ಗೆ ಮತ್ತೆ ಜೋರಾದ ಶಬ್ದದೊಂದಿಗೆ ಭೂಕಂಪ ಸಂಭವಿಸಿದೆ. ಗೂನಡ್ಕ, ಕೊಯಿನಾಡಿನಲ್ಲೂ ಭೂಕಂಪದ ಅನುಭವಾಗಿದೆ.