ಕುಡ್ಲದ ಮೊದಲ ಆಟೋ ಡ್ರೈವರ್ ಇನ್ನಿಲ್ಲ: Montu Lobo ಇನ್ನು ನೆನಪಷ್ಟೇ!

By Ravi Janekal  |  First Published Nov 5, 2022, 5:37 PM IST

ಕುಡ್ಲದ 'ಆಟೋ ರಾಜ' ಎಂದೇ ಗುರುತಿಸಿಕೊಂಡಿದ್ದ, ಇಳಿವಯಸ್ಸಿನಲ್ಲೂ ಆಟೋ ಓಡಿಸೋ ಮೂಲಕ ಮಂಗಳೂರಿನ ಮೊದಲ ಲೈಸೆನ್ಸ್ ಹೊಂದಿದ್ದ ಆಟೋ ಚಾಲಕ ಎಂಬ ಪ್ರಖ್ಯಾತಿಯ, ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ಹೀರೋ ಖ್ಯಾತಿಯ ಮೋಂತು ಲೋಬೋ ಅಲ್ಪಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ನ.5): ಕುಡ್ಲದ 'ಆಟೋ ರಾಜ' ಎಂದೇ ಗುರುತಿಸಿಕೊಂಡಿದ್ದ, ಇಳಿವಯಸ್ಸಿನಲ್ಲೂ ಆಟೋ ಓಡಿಸೋ ಮೂಲಕ ಮಂಗಳೂರಿನ ಮೊದಲ ಲೈಸೆನ್ಸ್ ಹೊಂದಿದ್ದ ಆಟೋ ಚಾಲಕ ಎಂಬ ಪ್ರಖ್ಯಾತಿಯ, ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ಹೀರೋ ಖ್ಯಾತಿಯ ಮೋಂತು ಲೋಬೋ ಅಲ್ಪಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

Tap to resize

Latest Videos

Big 3 Hero: ಕುಡ್ಲದ ಆಟೋರಾಜ ಮೋಂತು ಲೋಬೋ, ಕೊಪ್ಪಳದ ಮಾದರಿ ಶಿಕ್ಷಕರು

ಮಂಗಳೂರಿನ ವೆಲೆನ್ಸಿಯಾ ಬಳಿಯ ತಮ್ಮ ನಿವಾಸದಲ್ಲಿ ಮೋಂತು ಲೋಬೋ(Montu Lobo) ಕೊನೆಯುಸಿರೆಳೆದಿದ್ದು, ಅವರಿಗೆ ಬರೋಬ್ಬರಿ 86 ವರ್ಷ ವಯಸ್ಸಾಗಿತ್ತು. ಅಚ್ಚರಿ ಅಂದ್ರೆ ತನ್ನ ಕೊನೆಯ ದಿನಗಳವರೆಗೂ ಮೋಂತು ಲೋಬೋ ಆಟೋ ಓಡಿಸ್ತಿದ್ದರು. 

ತನ್ನ 86ರ ವಯಸ್ಸಲ್ಲೂ ನಿರಾಯಾಸವಾಗಿ ಆಟೋ ಓಡಿಸ್ತಿದ್ದ ಮೋಂತು ಲೋಬೋ ಮಂಗಳೂರಿ(Mangaluru)ನ ಜೆಪ್ಪು ವೆಲೆನ್ಸಿಯಾ( Jeppu  Valencia) ನಿವಾಸಿ. ಆದರೂ ಆಟೋ ಏರಿ ಹ್ಯಾಂಡಲ್ ಹಿಡಿದು ಎಕ್ಸಿಲೇಟರ್ ಹಿಂಡಿದ್ರೆ ಇವತ್ತಿಗೂ ಆಟೋ ಚಾಲಕರಾಗಿ ಅದೇ ಯುವಕನ ಗತ್ತು ಉಳಿಸಿಕೊಂಡಿದ್ದ ಆಟೋ ರಾಜ ಮೋಂತು ಲೋಬೋ.

ನೀವು ನಂಬಲೇ ಬೇಕು, ಇವತ್ತು ಮಂಗಳೂರಿನಲ್ಲಿ ಆಟೋ ಓಡಿಸೋ ಯಾವ ಆಟೋ ಚಾಲಕನಿಗೂ ಇವರ ಲೈಸೆನ್ಸ್ ನಷ್ಟೂ ವಯಸ್ಸಾಗಿರಲ್ಲ. ಅಂದ್ರೆ ತನ್ನ 20ನೇ ವಯಸ್ಸಿನಲ್ಲೇ ಆಟೋ ಓಡಿಸಲು ಆರಂಭಿಸಿದ ಮೋಂತು ಲೋಬೋರ ಆಟೋ ಚಾಲಕನ ಅನುಭವಕ್ಕೀಗ ಬರೋಬ್ಬರಿ 66 ವರ್ಷ. ಆದರೆ ತನ್ನ ಕೊನೆ ದಿನಗಳವರೆಗೂ ಇವರು ಆಟೋ ಓಡಿಸಿದ್ದರು. 

1935ರಲ್ಲಿ ಮಂಗಳೂರಿನಲ್ಲಿ ಜನಿಸಿದ ಮೋಂತು ಲೋಬೋ ಕಲಿತದ್ದು ಆರನೇ ತರಗತಿ. ಇದಾದ ಬಳಿಕ ಉದ್ಯೋಗದ ಕನಸು ಕಂಡವರು ಮೊಟ್ಟ ಮೊದಲ ಬಾರಿಗೆ ಲ್ಯಾಂಬ್ರೆಟ್ಟಾ ಆಟೋ ರಿಕ್ಷಾ(Lambretta Auto Rickshaw )ದಲ್ಲಿ ತಮ್ಮ ಮೊದಲ ಡ್ರೈವ್ ಆರಂಭಿಸಿದ್ರು. ಅಚ್ಯುತ್ಯ ಸಾಲಿಯಾನ್ ಎಂಬವರ ಬಳಿ ಇದ್ದ ಎರಡು ಆಟೋಗಳಲ್ಲಿ ಒಂದನ್ನ ಮೊದಲ ಬಾರಿಗೆ ಈ ಮೋಂತು ಲೋಬೋ ರಸ್ತೆಗಿಳಿಸಿದ್ರು. 1955ರ ಹೊತ್ತಲ್ಲಿ ಮಂಗಳೂರಿನಲ್ಲಿ ಓಡಾಡಿದ ಏಳು ಆಟೋಗಳ ಪೈಕಿ ಮೋಂತು ಲೋಬೋ ಓಡಿಸಿದ ಆಟೋ ಮೊದಲನೆಯದ್ದು. 

ಆಗ ಡ್ರೈವಿಂಗ್ ಸ್ಕೂಲ್(Driving School) ಇರಲಿಲ್ಲ. ರಿಕ್ಷಾ ಓಡಿಸಲು ಕಲಿಯುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಗ್ಯಾರೇಜ್ ಮೆಕ್ಯಾನಿಕ್ ಮೂಲಕ ಚಾಲನೆಯ ಮೂಲಭೂತ ಅಂಶಗಳನ್ನು ಕಲಿತು ಉಳಿದವುಗಳನ್ನು ಸ್ವಂತವಾಗಿ ಕಲಿತರು. ಆಗ ರಿಕ್ಷಾಕ್ಕೆ ಕನಿಷ್ಠ ದರ 25 ಪೈಸೆ. ಮಂಗಳೂರಿನ ಹಳೆಯ ಬಸ್ ನಿಲ್ದಾಣದ ಬಳಿ ರಿಕ್ಷಾ ಸ್ಟ್ಯಾಂಡ್ ಇತ್ತು. ಆದರೆ 25 ಪೈಸೆ ಕೊಟ್ಟು ಪ್ರಯಾಣಿಸುವುದು ಆ ಕಾಲದಲ್ಲಿ ಐಷಾರಾಮಿಯಾಗಿತ್ತು. 

ಒಂದು ದಿನದ ದುಡಿಮೆ 45-50 ರೂ. ಇದರಲ್ಲಿ ಮಾಲಿಕರಿಗೆ 35 ರೂ. ಕೊಡಬೇಕು. ಶ್ರೀಮಂತರು ಮಾತ್ರ ರಿಕ್ಷಾಗಳನ್ನು ಆರಿಸಿಕೊಳ್ಳುತ್ತಿದ್ದ ಕಾಲ. ಆ ಬಳಿಕ 2001ರಲ್ಲಿ ಬ್ಯಾಂಕ್ ಲೋನ್ ಮಾಡಿ ಸ್ವಂತ ಆಟೋ ರಿಕ್ಷಾ ಖರೀದಿಸಿ ಓಡಿಸಲು ಶುರು ಮಾಡಿದ ಮೋಂತು ಲೋಬೋ, ಈವರೆಗೆ 14 ಆಟೋಗಳನ್ನ ಖರೀದಿಸಿ ಮಾರಾಟ ಮಾಡಿದ್ದಾರೆ. ಅಚ್ಚರಿ ಅಂದ್ರೆ ತಮ್ಮ 66 ವರ್ಷಗಳ ಚಾಲನಾ ಬದುಕಿನಲ್ಲಿ ಈವರೆಗೆ ಒಂದೇ ಒಂದು ಅಪಫಾತ ಎಸಗದ ದಾಖಲೆ ಇವರದ್ದು. 40 ಕಿ.ಮೀ ಒಳಗಿನ ವೇಗದಲ್ಲಿ ಆಟೋ ಓಡಿಸೋ ಇವರು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಇತಿಹಾಸವೇ ಇಲ್ಲ. 

ಆರೋಗ್ಯದ ಗುಟ್ಟು ಕಣ್ಣನ್ ದೇವನ್ ಚಾ!

ಇವರ ಈ ಸೇವೆ ಗುರುತಿಸಿ ಹಲವು ಪ್ರಶಸ್ತಿಗಳು ಸಂದಿವೆ‌. ಲೋಬೋರ ಅವರ ಸೇವೆಯನ್ನು ದ.ಕ ಜಿಲ್ಲಾಡಳಿತ, ಆರ್‌ಟಿಒ ಮತ್ತು ಪೊಲೀಸ್ ಇಲಾಖೆ ಗುರುತಿಸಿದೆ. 19 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಂದರ್ಭದಲ್ಲಿ ಅವರಿಗೆ ಮಾನ್ಯತೆ ಪ್ರಶಸ್ತಿಯನ್ನು ನೀಡಲಾಗಿದೆ. ಮಂಗಳೂರಿನಲ್ಲಿ 'ಆಟೋ ರಾಜ' ಬಿರುದು ಹಾಗೂ ಬೆಂಗಳೂರಿನಲ್ಲಿ 'ಸಾರಥಿ ನಂಬರ್ 1' ಪ್ರಶಸ್ತಿ ನೀಡಿದ್ದು, ಇನ್ನೂ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ಆದರೂ ಮೋಂತು ಲೋಬೋ ಸ್ವಾವಲಂಬಿ . ವಯಸ್ಸು 86 ಆದರೂ ತನ್ನ ಒಂದು ಆಟೋವನ್ನ ಬಾಡಿಗೆಗೆ ಬಿಟ್ಟಿದ್ದರು. ತಾನೂ ಖಾಸಗಿ ಆಟೋ ಓಡಿಸ್ತಾ ಇದ್ದರು. 

ಇನ್ನು ಇವರ ಆರೋಗ್ಯದ ಗುಟ್ಟು ಕಣ್ಣನ್ ದೇವನ್ ಚಾಹ್ ಅಂತ ಅವರೇ ಹೇಳಿಕೊಂಡಿದ್ದರು. ಹಲವು ವರ್ಷಗಳಿಂದ ನಿತ್ಯ 20 ಗ್ಲಾಸ್ ಚಹಾ ಕುಡಿಯೋ ಮೋಂತು ಲೋಬೋ, ಅವರ ಆಟೋದಲ್ಲೂ ಕಣ್ಣನ್ ದೇವನ್ ಚಹಾದ ಬಗ್ಗೆ ಬರೆದು ಪ್ರಚಾರ ಮಾಡ್ತಿದ್ದರು. ನಿತ್ಯ ಒಂದು ಗಂಟೆಗೆ ಎದ್ದು ಚಹಾ ಸೇವಿಸಿ ಬೆ.4-5ಗಂಟೆಗೆಲ್ಲಾ ಆಟೋ ಓಡಾಟ ಶುರು‌. ಆದರೆ ಸದ್ಯ ಇವರ ಪತ್ನಿ ಎಲಿಸಾಗೆ ಸಕ್ಕರೆ ಖಾಯಿಲೆ ಇದ್ದು, ಹಾಸಿಗೆ ಹಿಡಿದಿದ್ದಾರೆ. ಇಬ್ಬರು ಹೆಣ್ಮಕ್ಕಳು ಮದುವೆಯಾಗಿ ಹೋಗಿದ್ದು, ಇನ್ನೊಬ್ಬ ಮಗ ಜೊತೆಗಿಲ್ಲ. ಹೀಗಾಗಿ ಪತ್ನಿಯನ್ನ ನೋಡಿಕೊಳ್ಳುವ ಮತ್ತು ಚಿಕಿತ್ಸೆ ನೀಡುವ ಜವಾಬ್ದಾರಿ ಈ ಹಿರಿಯ ಜೀವದ ಮೇಲಿತ್ತು. ಆದರೂ ಬಾಡಿಗೆ ಆಟೋದಲ್ಲಿ ಬರೋ ಆದಾಯವೇ ಇವರಿಗೆ ಆಸರೆಯಾಗಿತ್ತು. ಕಣ್ಣು ಮಂಜಾಗ್ತಿರೋ ಕಾರಣ ಭವಿಷ್ಯದಲ್ಲಿ ಆಟೋ ಓಡಿಸೋದು ಅಸಾಧ್ಯ ಎನ್ನುತ್ತಿದ್ದರು.

ಇಂಗ್ಲೀಷ್ ಕೇಳಿ ಬೆರಗಾದ ಪ್ಯಾಸೆಂಜರ್: ವಿಚಾರಿಸಿದಾಗ ಇವರು ನಿವೃತ್ತ ಲೆಕ್ಚರರ್‌

 ಮೋಂತು ಲೋಬೋ ಮಂಗಳೂರಿನ ಆಟೋ ರಾಜಾ ಮತ್ತು ನಂಬರ್ ಒನ್ ಸಾರಥಿಯಾಗಿದ್ದವರು. ಇದರ ಜೊತೆಗೆ ಗರ್ಭಿಣಿಯರಿಗೆ ಮತ್ತು ಅಸಕ್ತರಿಗೆ ಆಟೋದಲ್ಲಿ ಉಚಿತ ಸೇವೆ ನೀಡ್ತಾ ಇದ್ದರು.  ಇದು ಮಂಗಳೂರಿನ ಹಿರಿಯ ಆಟೋ ಚಾಲಕ‌ನ ಕಥೆ. ನಿರ್ಲಕ್ಷ್ಯದಿಂದ ಆಟೋ ಓಡಿಸೋ ಇಂದಿನ ಚಾಲಕರಿಗೆ ಮೋಂತು ಲೋಬೋ ಮಾದರಿಯಾಗಿದ್ಧರು. ಇಳಿ ವಯಸ್ಸಲ್ಲೂ ಇವರ ಆಟೋ ಓಡಿಸೋ ಉತ್ಸಾಹ ಕುಂದಿರಲಿಲ್ಲ. ಆದರೆ ಈ ಇಳಿ ವಯಸ್ಸಿನ ಸಾಧಕ ಇನ್ನು ನೆನಪು ‌ಮಾತ್ರ.

click me!