ಬಂಡಾಯ ನಾಡಿನ ಹೋರಾಟದ ಮೂಲಕ ನಮ್ಮ ಸಮಾಜಕ್ಕೆ ಮೀಸಲಾತಿ ಪಡೆಯೋಣ. ಅದಕ್ಕೆ ಸಮುದಾಯದ ಎಲ್ಲರೂ ಕೈ ಜೋಡಿಸಬೇಕು ಎಂದ: ಜಯಮೃತ್ಯುಂಜಯ ಸ್ವಾಮೀಜಿ
ನವಲಗುಂದ(ಜು.19): ಸರ್ಕಾರ ಈ ಭಾಗದ ಜನರಿಗೆ ನೀರು ಕೊಡಲಿಲ್ಲ. ಈಗ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೂಡ ಕೊಡುತ್ತಿಲ್ಲ. ಎಲ್ಲರೂ ಒಗ್ಗಟ್ಟಾಗಿ ಮೀಸಲಾತಿ ಪಡೆದೇ ತೀರೋಣ. ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು. ತಾಲೂಕಿನ ತಿರ್ಲಾಪುರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ನಡೆದ ಪಂಚಮಸಾಲಿ 2 ಎ ಮೀಸಲಾತಿಗಾಗಿ ಬೃಹತ್ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಬ್ಬರು ಮಾಜಿ ಮುಖ್ಯಮಂತ್ರಿ ಇದ್ದಾರೆ. ನಮ್ಮ ಸಮುದಾಯದ ಒಬ್ಬರು ಸಚಿವರೂ ಇದ್ದಾರೆ. ಆದರೂ ಈ ವರೆಗೂ ಮೀಸಲಾತಿ ಮಾತ್ರ ಸಿಕ್ಕಿಲ್ಲ. ನೀರು ಕೊಟ್ಟಿಲ್ಲ. ಅನ್ಯಾಯ ಮಾಡುತ್ತಿದ್ದಾರೆ. ಬಂಡಾಯ ನಾಡಿನ ಹೋರಾಟದ ಮೂಲಕ ನಮ್ಮ ಸಮಾಜಕ್ಕೆ ಮೀಸಲಾತಿ ಪಡೆಯೋಣ. ಅದಕ್ಕೆ ಸಮುದಾಯದ ಎಲ್ಲರೂ ಕೈ ಜೋಡಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಅಂದಾನಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಮೀಸಲಾತಿ ಕೊಟ್ಟರೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಮೀಸಲಾತಿಯಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದರು.
ಪಂಚಮಸಾಲಿ ಮೀಸಲಾತಿ: ನನ್ನದು ತಂತಿ ಮೇಲಿನ ನಡಿಗೆ ಸ್ಥಿತಿಯಾಗಿದೆ, ಸಚಿವ ಸಿ.ಸಿ.ಪಾಟೀಲ
ಕಾರ್ಯಕ್ರಮದಲ್ಲಿ ಎಲ್.ಬಿ. ಪಾಟೀಲ, ಶೇಖಣ್ಣ ಬಕ್ಕಣ್ಣವರ, ಗುರುಶಾಂತಗೌಡ ಪಾಟೀಲ, ಮಹೇಶ ಬಕ್ಕಣ್ಣವರ, ವಿ.ಜಿ. ಕಲ್ಲೇದ, ಮಲ್ಲಪ್ಪ ಮೆಣಸಿನಕಾಯಿ, ಬಸಪ್ಪ ಅಣ್ಣಿಗೇರಿ, ನಾಗಪ್ಪ ಕುಂದಗೋಳ, ಸಿದ್ಲಿಂಗಪ್ಪ ಲೋಕಾಪುರಮಠ, ಸದುಗೌಡ ಪಾಟೀಲ ಹಲವರಿದ್ದರು. ಅಡಿವೆಪ್ಪ ಕಮತರ ಪ್ರಾರ್ಥಿಸಿದರು.
ಮೀಸಲಾತಿ ಹೋರಾಟ-ಅಕ್ಟೋಬರ್ ವೇಳೆಗೆ ಅಂತಿಮ ನಿರ್ಧಾರ
ಕುಂದಗೋಳ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ರಾಜ್ಯದ ಮುಖ್ಯಮಂತ್ರಿ ಭರವಸೆ ನೀಡಿದ್ದು, ಇದುವರೆಗೆ ಈಡೇರಿಸದೆ ಇರುವುದರಿಂದ ಅಂತಿಮವಾಗಿ ಕಾದು ಅಕ್ಟೋಬರ್, ನವೆಂಬರ್ ವರೆಗೆ ನೀಡದಿದ್ದರೆ ನಮ್ಮ ಅಂತಿಮ ನಿರ್ಧಾರವನ್ನು ಘೋಷಿಸುವುದಾಗಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 27ರಂದು ಶಿಗ್ಗಾಂವಿಯ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಮುಖ್ಯಮಂತ್ರಿ ಸಮ್ಮುಖದಲ್ಲಿ ರಾಜಿ ಸಂಧಾನ ನಡೆದಿದ್ದರಿಂದ ಅವರು ನಮ್ಮ ಸಮುದಾಯದ ಬೇಡಿಕೆಯನ್ನು ಎರಡು ತಿಂಗಳಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ ಇದುವರೆಗೂ ಮುಖ್ಯಮಂತ್ರಿಗಳು ಭರವಸೆ ಈಡೇರಿಸಿಲ್ಲ. ಹೀಗಾಗಿ ಅವರನ್ನು ಎಚ್ಚರಿಸಲು ಜು. 30ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ಮಾಡಲಾಗುವುದು. ಜಿಲ್ಲಾದ್ಯಂತ ಪ್ರತಿ ಗ್ರಾಮಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮೀಸಲಾತಿ ಬಗ್ಗೆ ಸಂತಸದ ಸುದ್ದಿ ನೀಡಿದ ಸಚಿವ ರಾಮುಲು
ಸರ್ಕಾರಕ್ಕೆ ನಿಮ್ಮ ಅಂತಿಮ ಗಡುವು ಸ್ಪಷ್ಟಪಡಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಮುಖ್ಯಮಂತ್ರಿ ಈಗಾಗಲೆ ಆಯೋಗ ರಚನೆ ಮಾಡಿದ್ದು ಕಾರ್ಯರೂಪಕ್ಕೆ ಬಂದಿದೆ. ಶ್ರಾವಣ ಮಾಸದಲ್ಲಿ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಭರವಸೆ ಇದೆ. ಮುಖ್ಯಮಂತ್ರಿ ಭರವಸೆ ಈಡೇರಿಸದಿದ್ದರೆ ಬೆಂಗಳೂರಿನಲ್ಲಿ 25 ಲಕ್ಷಕ್ಕೂ ಹೆಚ್ಚು ನಮ್ಮ ಸಮುದಾಯದ ಜನರೊಂದಿಗೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅಂದು ನಮ್ಮ ಅಂತಿಮ ನಿರ್ಧಾರ ಘೋಷಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆ ಕುರಿತು ಪ್ರತಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜಾಗೃತಿ ಸಭೆಗಳನ್ನು ಮಾಡುತ್ತಿದ್ದು, ಅದರಂತೆ ಕುಂದಗೋಳ ತಾಲೂಕಿನ ಎಲ್ಲ ಜಿಪಂ ವ್ಯಾಪ್ತಿಯ ಅಲ್ಲಾಪುರ, ಪಶುಪತಿಹಾಳ, ಮಂಡಿಗನಾಳ, ಗುಡಗೇರಿ, ಯಲಿವಾಳ, ಯರಗುಪ್ಪಿ ಸೇರಿದಂತೆ ಅನೇಕರ ಕಡೆಗಳಲ್ಲಿ ಜಾಗ್ರತಿ ಸಭೆ ನಡೆಸಲಾಗಿದೆ. ಜು. 30ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುವ ಸಾಂಕೇತಿಕ ಧರಣಿಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.
ಮಾಜಿ ಶಾಸಕ ಎಂ.ಎಸ್. ಅಕ್ಕಿ, ಮುಖಂಡ ಅರವಿಂದ ಕಟಗಿ, ಬಸವರಾಜ ನಾವಳ್ಳಿ, ಟಿ.ಎಸ್. ಗೌಡಪ್ಪನವರ, ನಾಗರಾಜ ದೇಶಪಾಂಡೆ, ಮಲ್ಲಪ್ಪ ಮಾರಡಗಿ, ಶೇಖಪ್ಪ ಬಾಳಿಕಾಯಿ, ಬಸವರಾಜ ಶಿರಸಂಗಿ, ಅಪ್ಪಣ್ಣ ಹುಂಡೇಕರ, ರವಿ ಬಂಕದ ಇದ್ದರು.