
ಬೆಂಗಳೂರು (ಸೆ.18): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಅತ್ಯಂತ ದಟ್ಟಣೆಯಿರುವ ಬೆಂಗಳೂರು ಮತ್ತು ಬಳ್ಳಾರಿ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ 'ಮಲ್ಟಿ ಆಕ್ಸಲ್' (Multi-axle) ಬಸ್ ಸೇವೆಯನ್ನು ಪ್ರಾರಂಭಿಸಿದೆ. ಈಗಾಗಲೇ ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆಯ ಪ್ರೀಮಿಯಂ ಸೇವೆಗಳಿಗೆ ಈ ಹೊಸ ಬಸ್ ಸೇರ್ಪಡೆಯಾಗಿದೆ. ಈ ನೂತನ ಬಸ್ ಸೇವೆಯು ಸಿರಾ, ಹಿರಿಯೂರು ಮತ್ತು ಚಳ್ಳಕೆರೆ ಮಾರ್ಗವಾಗಿ ಸಂಚರಿಸಲಿದೆ. ಸಮಯ ಹಾಗೂ ದರದ ವಿವರಗಳು ಕೆಳಗಿನಂತಿವೆ.
ಬೆಂಗಳೂರಿನಿಂದ ನಿರ್ಗಮಿಸುವ ಸಮಯ: ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (KBS - ಮೆಜೆಸ್ಟಿಕ್) ಪ್ರತಿದಿನ ಸಂಜೆ 4:00 ಗಂಟೆಗೆ ಹೊರಡುವ ಬಸ್, ರಾತ್ರಿ 8:00 ಗಂಟೆಗೆ ಚಳ್ಳಕೆರೆ ತಲುಪಿ, ರಾತ್ರಿ 9:45 ಕ್ಕೆ ಬಳ್ಳಾರಿಯನ್ನು ತಲುಪಲಿದೆ.
ಬಳ್ಳಾರಿಯಿಂದ ಮರುಪ್ರಯಾಣದ ಸಮಯ: ಮರುಪ್ರಯಾಣದಲ್ಲಿ ಬಳ್ಳಾರಿಯಿಂದ ಸಂಜೆ 5:06 ಕ್ಕೆ ಹೊರಡುವ ಬಸ್, ಸಂಜೆ 6:30 ಕ್ಕೆ ಚಳ್ಳಕೆರೆಗೆ ತಲುಪಿ, ರಾತ್ರಿ 10:40 ಕ್ಕೆ ಬೆಂಗಳೂರಿಗೆ ಬಂದು ತಲುಪಲಿದೆ.
ಪ್ರಯಾಣ ದರ (Ticket Fare): ಬೆಂಗಳೂರಿನಿಂದ ಬಳ್ಳಾರಿಗೆ ಗರಿಷ್ಠ ಪ್ರಯಾಣ ದರವನ್ನು ₹802 ಹಾಗೂ ಬೆಂಗಳೂರಿನಿಂದ ಚಳ್ಳಕೆರೆಗೆ ₹634 ಎಂದು ನಿಗದಿಪಡಿಸಲಾಗಿದೆ.
ಈ ನೂತನ ಸೇವೆಯು ಈಗಾಗಲೇ ಈ ಮಾರ್ಗದಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿರುವ 'ಐರಾವತ ಕ್ಲಬ್ ಕ್ಲಾಸ್' (Airavat Club Class) ಮತ್ತು 'ಐರಾವತ ಕ್ಲಬ್ ಕ್ಲಾಸ್ 2.0' ಸೇವೆಗಳಿಗೆ ಪೂರಕವಾಗಿರಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪ್ರೀಮಿಯಂ ಬಸ್‌ಗಳ ದಿನಪೂರ್ತಿಯ ವೇಳಾಪಟ್ಟಿಯಂತೆ ಬೆಂಗಳೂರಿನಿಂದ ಬಳ್ಳಾರಿಗೆ ಹಿರಿಯ ನಾಗರಿಕರು/ವಯಸ್ಕರ ಟಿಕೆಟ್ ದರ ₹802 ರಿಂದ ₹864 ರ ವ್ಯಾಪ್ತಿಯಲ್ಲಿದೆ.
ಇನ್ನೊಂದೆಡೆ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟಿಕೆಟ್ ಪಡೆಯದೇ ಅಕ್ರಮವಾಗಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ವಿರುದ್ಧ ಸಂಸ್ಥೆಯು ಕಠಿಣ ಕ್ರಮ ಕೈಗೊಂಡಿದೆ. 2026 ರ ಆಗಸ್ಟ್ ತಿಂಗಳಿನಲ್ಲಿ ನಡೆಸಿದ ವ್ಯಾಪಕ ತಪಾಸಣೆ ವೇಳೆ ಸಂಸ್ಥೆಯು ಒಟ್ಟು 4,862 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ದಂಡ ವಿಧಿಸಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಕೆಎಸ್‌ಆರ್‌ಟಿಸಿ, ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕ ಹಾಗೂ ನೆರೆ ರಾಜ್ಯಗಳಲ್ಲಿ ಸಂಚರಿಸುವ ಒಟ್ಟು 44,848 ಬಸ್‌ಗಳನ್ನು ಹಠಾತ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದೆ.
ಈ ತಪಾಸಣೆಯ ಸಮಯದಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಒಟ್ಟು ₹8,90,279 ದಂಡ ವಸೂಲಿ ಮಾಡಲಾಗಿದೆ. ತಪಾಸಣೆ ವೇಳೆ ಸಿಬ್ಬಂದಿಗಳಿಂದ ನಡೆದ 4,461 ಟಿಕೆಟ್ ಅಕ್ರಮ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ₹1,33,441 ಮೌಲ್ಯದ ಹಣದ ಅಕ್ರಮವನ್ನು ತಡೆಯಲಾಗಿದೆ. ಈ ಅಕ್ರಮ ಮತ್ತು ಕರ್ತವ್ಯ ಲೋಪ ಎಸಗಿದ ಜವಾಬ್ದಾರಿಯುತ ಸಿಬ್ಬಂದಿಗಳ ವಿರುದ್ಧ ಇಲಾಖಾ ಶಿಸ್ತುಕ್ರಮ ಜಾರಿಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಕಡ್ಡಾಯವಾಗಿ ಸೂಕ್ತ ಟಿಕೆಟ್ ಅಥವಾ ಪಾಸ್‌ಗಳನ್ನು ಪಡೆದುಕೊಂಡು, ಪ್ರಯಾಣ ಮುಗಿಯುವವರೆಗೆ ಅದನ್ನು ತಮ್ಮ ಬಳಿಯೇ ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದೆ.