3,536 ಕೋಟಿ ರೂಪಾಯಿ ವೆಚ್ಚದಲ್ಲಿ ಯಶವಂತಪುರ-ಕೆಆರ್‌ ಪುರ ನಡುವೆ 28 ಕಿ.ಮೀ ಟೋಲ್‌ ಕಾರಿಡಾರ್‌

Published : Sep 18, 2026, 06:35 PM IST
yeshwanthpur kr puram elevated corridor

ಸಾರಾಂಶ

ಬೆಂಗಳೂರಿನ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಬೆಸೆಯುವ 28 ಕಿ.ಮೀ ಉದ್ದದ 'ಯಶವಂತಪುರ - ಕೆ.ಆರ್. ಪುರಂ ಎಲಿವೇಟೆಡ್ ಕಾರಿಡಾರ್' ಯೋಜನೆಗೆ ರೂಪುರೇಷೆ ಸಿದ್ಧವಾಗಿದೆ. ₹3,536 ಕೋಟಿ ವೆಚ್ಚದ ಈ ಯೋಜನೆಗೆ ಗರಿಷ್ಠ 32.5 ವರ್ಷಗಳ ಟೋಲ್ ಅವಧಿ ನಿಗದಿಪಡಿಸಲಾಗಿದೆ.

ಬೆಂಗಳೂರು (ಸೆ.18): ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ನಗರದ ಪೂರ್ವ-ಪಶ್ಚಿಮ ಭಾಗಗಳ ನಡುವೆ ವೇಗದ ಸಂಚಾರ ಕಲ್ಪಿಸಲು ಉದ್ದೇಶಿಸಲಾಗಿರುವ 'ಯಶವಂತಪುರ - ಕೆ.ಆರ್. ಪುರಂ ಎಲಿವೇಟೆಡ್ ಕಾರಿಡಾರ್' (Yeshwanthpur-KR Puram Elevated Corridor) ಯೋಜನೆಗೆ ಮಹತ್ವದ ರೂಪುರೇಷೆ ಸಿದ್ಧಗೊಂಡಿದೆ. ಪ್ರಸ್ತಾವಿತ 28 ಕಿಲೋಮೀಟರ್ ಉದ್ದದ ಈ ಮೇಲ್ಸೇತುವೆ ಯೋಜನೆಗೆ ಗರಿಷ್ಠ 11,863 ದಿನಗಳ, ಅಂದರೆ ಸುಮಾರು 32.5 ವರ್ಷಗಳ ಟೋಲ್ ಅಥವಾ ರಿಯಾಯಿತಿ ಅವಧಿಯನ್ನು (Concession Period) ಕಡ್ಡಾಯವಾಗಿ ನಿಗದಿಪಡಿಸಲಾಗಿದೆ.

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಾಗೂ ನಿರ್ಮಾಣ ವಹಿಸಿಕೊಳ್ಳುವ ಬಿಡ್‌ದಾರರು (Bidders) ತಮ್ಮ ಹೂಡಿಕೆ ಮತ್ತು ಶೇಕಡಾವಾರು ಲಾಭವನ್ನು ಹಿಂತಿರುಗಿ ಪಡೆಯಲು ಅಗತ್ಯವಿರುವ ದಿನಗಳ ಸಂಖ್ಯೆಯನ್ನು ಟೆಂಡರ್‌ನಲ್ಲಿ ನಮೂದಿಸಬೇಕಾಗುತ್ತದೆ. 11,863 ದಿನಗಳಿಗಿಂತ ಹೆಚ್ಚಿನ ಅವಧಿಯನ್ನು ಕೋರುವ ಬಿಡ್‌ಗಳನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸದೆ ನೇರವಾಗಿ ತಿರಸ್ಕರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಯೋಜನೆಯ ನಂತರದ ಯಾವುದೇ ಹೊಂದಾಣಿಕೆಗಳ ಮೂಲಕವೂ ಟೋಲ್ ಅವಧಿಯನ್ನು ಈ 32.5 ವರ್ಷಗಳ ಗರಿಷ್ಠ ಮಿತಿಗಿಂತ ಹೆಚ್ಚಿಸಲು ಅವಕಾಶವಿರುವುದಿಲ್ಲ.

ಯಶವಂತಪುರದಿಂದ ಕೆ.ಆರ್. ಪುರಂಗೆ 28 ಕಿ.ಮೀ ನೇರ ಮಾರ್ಗ

ಪ್ರಸ್ತಾವಿತ ಎಲಿವೇಟೆಡ್ ಕಾರಿಡಾರ್ ಯಶವಂತಪುರದ ಮತ್ತಿಕೆರೆ ಕ್ರಾಸ್‌ನಿಂದ (Mathikere Cross) ಆರಂಭಗೊಂಡು ಕೆ.ಆರ್. ಪುರಂನಲ್ಲಿ ಕೊನೆಗೊಳ್ಳಲಿದೆ. ಈ 28 ಕಿ.ಮೀ ಉದ್ದದ ರಸ್ತೆಯು ನಗರದ ಅತ್ಯಂತ ಪ್ರಮುಖ ಹಾಗೂ ದಟ್ಟಣೆಯ ಪ್ರದೇಶಗಳ ಮೂಲಕ ಹಾದುಹೋಗಲಿದೆ.

ಭಾರತೀಯ ವಿಜ್ಞಾನ ಸಂಸ್ಥೆ (IISc), ಮೇಕ್ರಿ ಸರ್ಕಲ್, ಜಯಮಹಲ್, ಸೇಂಟ್ ಜಾನ್ಸ್ ಚರ್ಚ್ ರಸ್ತೆ ಮತ್ತು ಹಲಸೂರು ಕೆರೆಯನ್ನು ಹಾದು, ಹಳೆಯ ಮದ್ರಾಸ್ ರಸ್ತೆಯ ಮೂಲಕ ಕೆ.ಆರ್. ಪುರಂ ತಲುಪಲಿದೆ. ಈ ಯೋಜನೆ ಜಾರಿಯಾದರೆ ಬೆಂಗಳೂರಿನ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳನ್ನು ನೇರವಾಗಿ ಜೋಡಿಸುವ ಅತ್ಯಂತ ವೇಗದ ರಸ್ತೆ ಮಾರ್ಗ ಇದಾಗಲಿದೆ.

₹3,536 ಕೋಟಿ ಒಟ್ಟು ಯೋಜನೆ ವೆಚ್ಚ – ಡಿಪಿಆರ್ ವಿವರ

ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಪ್ರಕಾರ, ಈ ಬೃಹತ್ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಒಟ್ಟು ₹3,536 ಕೋಟಿ ಅಂದಾಜು ವೆಚ್ಚವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಸಿವಿಲ್ ಕಾಮಗಾರಿಗಳಿಗಾಗಿಯೇ (Civil Works) ₹2,710 ಕೋಟಿ ವೆಚ್ಚವಾಗಲಿದ್ದು, ಸೂಪರ್‌ಸ್ಟ್ರಕ್ಚರ್ (Superstructure) ಅಂದರೆ ಮೇಲ್ಸೇತುವೆಯ ಮೇಲ್ಭಾಗದ ಕಾಂಕ್ರೀಟ್ ಚೌಕಟ್ಟಿನ ನಿರ್ಮಾಣವೇ ಸಿವಿಲ್ ವೆಚ್ಚದ ಶೇಕಡಾ 62 ಕ್ಕಿಂತ ಹೆಚ್ಚು ಭಾಗವನ್ನು ಒಳಗೊಳ್ಳಲಿದೆ.

'ಬೂಟ್' (BOOT) ಮಾದರಿಯಲ್ಲಿ ನಿರ್ಮಾಣ - 30 ತಿಂಗಳ ಡೆಡ್‌ಲೈನ್

ಯಶವಂತಪುರ-ಕೆಆರ್ ಪುರಂ ಕಾರಿಡಾರ್ ಅನ್ನು 'ಬೂಟ್' (BOOT - Build-Own-Operate-Transfer) ಅಂದರೆ 'ನಿರ್ಮಿಸಿ-ಮಾಲೀಕತ್ವ ಹೊತ್ತು-ನಿರ್ವಹಿಸಿ-ಹಸ್ತಾಂತರಿಸುವ' ಟೋಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಕಾರಿಡಾರ್ ನಿರ್ಮಾಣ ಕಾಮಗಾರಿಗೆ 30 ತಿಂಗಳ (2.5 ವರ್ಷ) ಕಾಲಮಿತಿಯನ್ನು ವಿಧಿಸಲಾಗಿದೆ. ಸಾಂಪ್ರದಾಯಿಕ ಯೋಜನೆಗಳಿಗಿಂತ ಭಿನ್ನವಾಗಿ, ಈ ಯೋಜನೆಯಲ್ಲಿ ಹಣಕಾಸಿನ ಬಿಡ್ಡಿಂಗ್ ನಡೆಸಲು 'ರಿಯಾಯಿತಿ ಅಥವಾ ಟೋಲ್ ಅವಧಿಯೇ' ಪ್ರಮುಖ ಮಾನದಂಡವಾಗಲಿದೆ. ಅಂದರೆ, ಕಡಿಮೆ ಅವಧಿಯಲ್ಲಿ ಹೂಡಿಕೆ ವಾಪಸ್ ಪಡೆಯಲು ಸಮ್ಮತಿಸುವ ಕಂಪನಿಗೆ ಯೋಜನೆ ಸಿಗಲಿದ್ದು, 32.5 ವರ್ಷಗಳ ಮೇಲ್ಮಿತಿಯನ್ನು ದಾಟುವಂತಿಲ್ಲ.

4-ಲೇನ್ ರಸ್ತೆ, 20 ರಾಂಪ್‌ಗಳು ಹಾಗೂ ಪ್ರಮುಖ ಜಂಕ್ಷನ್‌ಗಳ ನಿರ್ವಹಣೆ

ವಿನ್ಯಾಸ ಮತ್ತು ವೇಗ: ಈ ಎಲಿವೇಟೆಡ್ ರಸ್ತೆಯು 4-ಲೇನ್ (Four-lane) ಅಗಲ ಹೊಂದಿರಲಿದ್ದು, ಒಟ್ಟು 19.61 ಮೀಟರ್ ಅಗಲವಿರಲಿದೆ. ರಸ್ತೆಯಲ್ಲಿ ವಾಹನಗಳು ಗಂಟೆಗೆ 60 ರಿಂದ 80 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಆನ್‌/ಆಫ್ ರಾಂಪ್‌ಗಳು: ಸಾರ್ವಜನಿಕರ ಸುಲಭ ಸಂಚಾರಕ್ಕಾಗಿ ಈ ಕ್ಯಾರಿಡಾರ್ ಉದ್ದಕ್ಕೂ ಒಟ್ಟು 20 ರಾಂಪ್‌ಗಳನ್ನು ನೀಡಲಾಗುತ್ತಿದೆ (10 ಆಪ್-ರಾಂಪ್‌ಗಳು ಹಾಗೂ 10 ಡೌನ್-ರಾಂಪ್‌ಗಳು).

ಫ್ಲೈಓವರ್ ಹಾಗೂ ಜಂಕ್ಷನ್‌ಗಳು: ಎಂಇಐ ಜಂಕ್ಷನ್‌ನಲ್ಲಿ (MEI Junction) ಪ್ರತ್ಯೇಕ ಸ್ಪೇಸ್‌ ಹೊಂದಿರುವ 'ಸ್ಪ್ಲಿಟ್ ಫ್ಲೈಓವರ್' (Split Flyover) ನಿರ್ಮಿಸಲು ಪ್ರಸ್ತಾವಿಸಲಾಗಿದೆ.

ಇದಲ್ಲದೆ, ಆರ್‌ಟಿ ನಗರ ಮುಖ್ಯರಸ್ತೆ, ಹಲಸೂರು ಕೆರೆ, ಇಂದಿರಾನಗರ ಮತ್ತು ವರ್ತೂರು ರಸ್ತೆ ಸೇರಿದಂತೆ ಡಜನ್‌ಗೂ ಹೆಚ್ಚು ಪ್ರಮುಖ ಹಾಗೂ ಸುದೀರ್ಘ ಟ್ರಾಫಿಕ್ ಜಂಕ್ಷನ್‌ಗಳ ಮೇಲಿನ ಒತ್ತಡವನ್ನು ಈ ಮೇಲ್ಸೇತುವೆ ಸಂಪೂರ್ಣವಾಗಿ ನಿವಾರಿಸಲಿದೆ.

ಪ್ರಯಾಣದ ಸಮಯ ಭಾರಿ ಉಳಿತಾಯ, ಮೆಜೆಸ್ಟಿಕ್ ದಟ್ಟಣೆಗೆ ಬೈಪಾಸ್!

ಪ್ರಸ್ತುತ ಯಶವಂತಪುರ ಮತ್ತು ಇಂದಿರಾನಗರದ ನಡುವೆ ಮೆಟ್ರೋ ಅಥವಾ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುವವರು ನಗರದ ಮಧ್ಯಭಾಗವಾದ ಮೆಜೆಸ್ಟಿಕ್ (Majestic) ಹಾಗೂ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (CBD) ಮೂಲಕವೇ ಹಾದುಹೋಗಬೇಕಿದೆ. ಇದರಿಂದಾಗಿ ಸುದೀರ್ಘ ಸಮಯ ವ್ಯರ್ಥವಾಗುತ್ತಿದೆ.

ಆದರೆ, ಪ್ರಸ್ತಾವಿತ ಎಲಿವೇಟೆಡ್ ಕ್ಯಾರಿಡಾರ್ ನಗರದ ಮಧ್ಯಭಾಗ ಹಾಗೂ ಮೆಜೆಸ್ಟಿಕ್ ಸುತ್ತಮುತ್ತಲಿನ ದಟ್ಟಣೆಯನ್ನು ಸಂಪೂರ್ಣವಾಗಿ ಬೈಪಾಸ್ (Bypass) ಮಾಡಲಿದ್ದು, ನಗರದ ಒಂದು ತುದಿಯಿಂದ ಮತ್ತೊಂದು ತುದಿಗೆ ಪ್ರಯಾಣಿಸುವ ವಾಹನ ಸವಾರರ ಸಮಯವನ್ನು ಗಣನೀಯವಾಗಿ ಉಳಿಸಲಿದೆ. ಈ ಮೂಲಕ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದು ಡಿಪಿಆರ್ ವರದಿ ಸ್ಪಷ್ಟಪಡಿಸಿದೆ.

PREV
Read more Articles on
click me!

Recommended Stories

ಡಬಲ್‌ ರಾಯಲ್ಟಿ ವಿವಾದ: ರಾಜ್ಯಾದ್ಯಂತ ಕಲ್ಲು ಗಣಿ, ಜೆಲ್ಲಿ ಕ್ರಷರ್, ಎಂ-ಸ್ಯಾಂಡ್ ಘಟಕ ಬಂದ್
ಪುನೀತ್‌ ರಾಜ್‌ಕುಮಾರ್‌ ಸಾವಿನ ದಿನ ಬಿಯರ್‌ ಹಿಡಿದು ಪೋಸ್ಟ್‌, ವಿದ್ಯಾರ್ಥಿಗೆ ಎಚ್ಚರಿಕೆ ನೀಡಿ ಕೇಸ್‌ ರದ್ದು ಮಾಡಿದ ಹೈಕೋರ್ಟ್‌