ಲಾಕ್‌ಡೌನ್‌: ತುತ್ತು ಅನ್ನಕ್ಕೂ KSRTC ಸಿಬ್ಬಂದಿ ಪರದಾಟ

By Kannadaprabha NewsFirst Published May 22, 2020, 10:39 AM IST
Highlights

ಸೌಲಭ್ಯ ಕೊಡಬೇಕಾದ ಸಾರಿಗೆ ಸಂಸ್ಥೆಯ ಅಧಿಕಾರಿಗಳೇ ಇಲ್ಲೇನು ಮುಟ್ಟಬೇಡಿ ಎಂದು ಹೀಯಾಳಿಕೆ| ರಾತ್ರಿಯೇ ಮಂಗಳೂರು, ಉಡುಪಿ, ಬೆಂಗಳೂರು, ಬಾಗಲಕೋಟೆ, ಹುಬ್ಬಳ್ಳಿ, ಗೋವಾ ಸೇರಿದಂತೆ ಬೇರೆ ಬೇರೆ ಊರುಗಳಿಂದ ಪ್ರಯಾಣಿಕರನ್ನು ಕರೆ ತಂದಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿ| ರಾತ್ರಿ 7 ಗಂಟೆಯ ನಂತರ ಎಲ್ಲವೂ ಲಾಕ್‌ಡೌನ್‌| ಹೋಟೆಲ್‌ಗಳಲ್ಲಿ ಪಾರ್ಸಲ್‌ ಕೂಡಾ ಸಿಗುತ್ತಿಲ್ಲ|

ಗದಗ(ಮೇ.22): ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡವರು ಎಷ್ಟೆಲ್ಲ ತೊಂದರೆ ಅನುಭವಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಹೀಗೆ ಬೇರೆ ಬೇರೆ ಊರುಗಳಲ್ಲಿ ಸಿಕ್ಕಿಹಾಕಿಕೊಂಡವರನ್ನು ಅವರ ಊರುಗಳಿಗೆ ತಲುಪಿಸುವ ಕಷ್ಟದ ಕೆಲಸ ಮಾಡುತ್ತಿರುವ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕರಿಗೆ ಮಾತ್ರ ಈಗ ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಹೌದು, ನಗರದ ಕೇಂದ್ರ ಬಸ್‌ ನಿಲ್ದಾಣಕ್ಕೆ ಬುಧವಾರ ರಾತ್ರಿಯೇ ಮಂಗಳೂರು, ಉಡುಪಿ, ಬೆಂಗಳೂರು, ಬಾಗಲಕೋಟೆ, ಹುಬ್ಬಳ್ಳಿ, ಗೋವಾ ಸೇರಿದಂತೆ ಬೇರೆ ಬೇರೆ ಊರುಗಳಿಂದ ಪ್ರಯಾಣಿಕರನ್ನು ಕರೆ ತಂದಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಗೋಳಿದು. ರಾತ್ರಿ 7 ಗಂಟೆಯ ನಂತರ ಎಲ್ಲವೂ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಪಾರ್ಸಲ್‌ ಕೂಡಾ ಸಿಗುತ್ತಿಲ್ಲ, ಹಾಗಾಗಿ ಅವರೆಲ್ಲಾ ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಲಕ್ಷ್ಮೇಶ್ವರ ತಾಲೂಕಿಗೆ ಕಾಲಿಟ್ಟ ಮಹಾಮಾರಿ ಕೊರೋನಾ..!

ಮನೆಯಿಂದ ತಂದಿರುವ ಆಹಾರ ಬಿಸಿಲಿನ ತಾಪಕ್ಕೆ ಮಧ್ಯಾಹ್ನವೇ ಹಳಸಿ ಹೋಗುತ್ತಿದ್ದು, ರಾತ್ರಿಯಾದರೆ ಚಾಲಕ ನಿರ್ವಾಹಕರಿಗೆ ತಿನ್ನಲೂ ಏನೂ ಸಿಗುತ್ತಿಲ್ಲ. ಹಾಗಾಗಿ ಬುಧವಾರ ಗದಗ ಬಸ್‌ ನಿಲ್ದಾಣಕ್ಕೆ ಬಂದ ಕೆಲ ಚಾಲಕ ನಿರ್ವಾಹಕರು, ತಮಗೆ ಪರಿಚಯವಿರುವ ಚಾಲಕ, ನಿರ್ವಾಹಕರ ಮನೆಯಿಂದ ಊಟ ಪಡೆದುಕೊಂಡಿದ್ದರೆ, ಕೆಲವರು ಬ್ರೆಡ್‌, ಬಿಸ್ಕೆಟ್‌ ತಿಂದು ರಾತ್ರಿ ಕಳೆದಿರುವ ಮನ ಕಲಕುವ ಘಟನೆಗಳು ನಡೆದಿವೆ.

ಗದಗ ಕೇಂದ್ರ ಬಸ್‌ ನಿಲ್ದಾಣದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳೇ ಇಲ್ಲ, ಅಲ್ಲಿನ ಎಲ್ಲಾ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ಇರುವ ಶೌಚಾಲಯಗಳಲ್ಲಿ ನೀರೇ ಇಲ್ಲ, ಇನ್ನು ವಿಶ್ರಾಂತಿ ಕೊಠಡಿಗಳನ್ನು ಬೀಗ ಹಾಕಲಾಗಿದ್ದು ದೂರ ದೂರದ ಊರುಗಳಿಂದ ಬಂದಿರುವ ಚಾಲಕರು ಅತ್ತ ಊಟವೂ ಸಿಗದೇ ಇತ್ತ ವಿಶ್ರಾಂತಿಯೂ ಸಿಗದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಗಮನ ಹರಿಸಬೇಕಾದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾತ್ರ ಇದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವುದು ಚಾಲಕ ನಿರ್ವಾಹಕರಿಗೆ ನುಂಗಲಾರದ ತುತ್ತಾಗಿದೆ.

ನಾವೂ ಮನುಷ್ಯರೇ...

ನಾವು ಮಂಗಳೂರಿನಿಂದ ಬಂದಿದ್ದೇವೆ, ನಮ್ಮ ಸಂಸ್ಥೆಯ ಅಧಿಕಾರಿಗಳೇ ತಮ್ಮ ಮುಂದಿರುವ ಟೆಬಲ್‌ ಮುಟ್ಟಬೇಡಿ, ನೀವು ಅನ್ಯರಾಜ್ಯಗಳಿಂದ ಹೆಚ್ಚಿನ ಕೊರೋನಾ ಇರುವ ಪ್ರದೇಶದಿಂದ ಬಂದಿದ್ದೀರಿ ಎಂದು ನಮ್ಮನ್ನು ಅತ್ಯಂತ ನಿಕೃಷ್ಟವಾಗಿ ನೋಡುತ್ತಾರೆ. ಇನ್ನು ಗದಗ ಕೇಂದ್ರ ಬಸ್‌ ನಿಲ್ದಾಣದಲ್ಲಿ ಯಾವುದೇ ಸೌಲಭ್ಯಗಳೇ ಇಲ್ಲ, ಅಷ್ಟೊಂದು ದೂರದಿಂದ ಜನರನ್ನು ತಲುಪಿಸಲು ಬಂದು ನಾವು ತೊಂದರೆ ಅನುಭವಿಸುವಂತಾಗಿದೆ. ನಾವು ಮನುಷ್ಯರೇ, ನಮ್ಮನ್ನು ಇಷ್ಟೊಂದು ಕೇವಲವಾಗಿ ನಡೆಸಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ. ನಮಗೂ ಕುಟುಂಬಗಳಿವೆ, ತಂದೆ, ತಾಯಿ ಎಲ್ಲರೂ ಇದ್ದಾರೆ. ನಾವೆಷ್ಟುರಿಸ್ಕ್‌ನಲ್ಲಿ ಕೆಲಸಕ್ಕೆ ಬಂದಿದ್ದರೂ ನಮ್ಮ ಅಧಿಕಾರಿಗಳು ನಮಗೆ ಕನಿಷ್ಠ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಹಲವಾರು ಚಾಲಕ ನಿರ್ವಾಹಕರು ಬೇಸರ ವ್ಯಕ್ತ ಪಡಿಸಿದರು.
 

click me!