Bengaluru: ಸಂಜೆ 6ರ ನಂತರ 8ನೇ ಮೈಲಿ ಬಳಿ KSRTC ಸಿಬ್ಬಂದಿ ಮಾಡೋದೇನು? ಅಸಲಿ ಮುಖ ಬಿಚ್ಚಿಟ್ಟ ಮಹಿಳೆ

Published : Oct 07, 2026, 09:17 AM IST
KSRTC Bus Chitradurga

ಸಾರಾಂಶ

ಬೆಂಗಳೂರಿನ 8ನೇ ಮೈಲಿ ಸಿಗ್ನಲ್ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳು ತುಮಕೂರು, ಚಿತ್ರದುರ್ಗದಂತಹ ಸ್ಥಳೀಯ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ವಂಚಿಸುತ್ತಿವೆ. ಕೇವಲ ದೂರದ ಊರುಗಳ ಪ್ರಯಾಣಿಕರಿಗೆ ಮಾತ್ರ ಆದ್ಯತೆ ನೀಡುತ್ತಿದ್ದು, ಗಂಟೆಗಟ್ಟಲೆ ಕಾಯುವಂತಾಗಿದೆ. ಇತ್ತೀಚೆಗೆ ಮಹಿಳೆಯೊಬ್ಬರು ಬಸ್‌ಗೆ ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಬೆಂಗಳೂರು (ಆ.07): ಬೆಂಗಳೂರಿನ ಹೊರವಲಯದ 8ನೇ ಮೈಲಿ ಸಿಗ್ನಲ್ ಬಳಿ ನಿತ್ಯ ಸಂಜೆ 6 ಗಂಟೆಯಾಗುತ್ತಿದ್ದಂತೆ ಕೆಎಸ್‌ಆರ್‌ಟಿಸಿ (KSRTC) ಚಾಲಕ ಮತ್ತು ನಿರ್ವಾಹಕರ ಅಸಲಿ ಮುಖವಾಡ ಕಳಚಿಬೀಳುತ್ತಿದೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಬಸ್‌ಗಳ ಮುಂಭಾಗದಲ್ಲಿ 'ವಯಾ ತುಮಕೂರು, ಚಿತ್ರದುರ್ಗ' ಎಂದು ಸ್ಪಷ್ಟವಾಗಿ ಬೋರ್ಡ್ ಹಾಕಿದ್ದರೂ, ಈ ಭಾಗದ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸಿಕೊಳ್ಳದೆ ನಡುರಸ್ತೆಯಲ್ಲೇ ಬಿಟ್ಟುಹೋಗುವ ದಂಧೆ ಅವ್ಯಾಹತವಾಗಿ ಸಾಗಿದೆ.

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ತೆರಳುವ ಬಹುತೇಕ ಬಸ್‌ಗಳು ಕೇವಲ ‘ಲಾಂಗ್ ರೂಟ್’ (ದೂರದ ಊರುಗಳ) ಪ್ರಯಾಣಿಕರಿಗೆ ಮಾತ್ರ ಆದ್ಯತೆ ನೀಡುತ್ತಿವೆ. ತುಮಕೂರು, ಸಿರಾ, ಹಿರಿಯೂರು ಹಾಗೂ ಚಿತ್ರದುರ್ಗಕ್ಕೆ ತೆರಳುವ ಪ್ರಯಾಣಿಕರು ಎಷ್ಟೇ ಅಂಗಲಾಚಿದರೂ, ಬಸ್ ಬಾಗಿಲನ್ನೇ ತೆರೆಯದೆ 'ಸ್ಟಾಪ್ ಕೊಡಲ್ಲ, ಬಸ್ ಹೋಗಲ್ಲ' ಎಂದು ಸಿಬ್ಬಂದಿ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಬಸ್‌ನಲ್ಲಿ ಸೀಟುಗಳು ಸಂಪೂರ್ಣ ಖಾಲಿ ಇದ್ದರೆ ಮಾತ್ರ ಅನಿವಾರ್ಯವಾಗಿ ಸ್ಥಳೀಯರನ್ನು ಹತ್ತಿಸಿಕೊಳ್ಳುವ ಸಿಬ್ಬಂದಿ, ಇಲ್ಲದಿದ್ದರೆ ಗಂಟೆಗಟ್ಟಲೆ ನಿಲ್ಲಿಸಿ ತಮಾಷೆ ನೋಡುತ್ತಿದ್ದಾರೆ.

ಎರಡೂವರೆ ಗಂಟೆ ಕಾದರೂ ಯಾವುದೇ ಬಸ್ ನಿಲ್ಲಿಸಲಿಲ್ಲ

ಇತ್ತೀಚೆಗೆ ಮಹಿಳಾ ಪ್ರಯಾಣಿಕರೊಬ್ಬರು ಸುಮಾರು 2.30 ಗಂಟೆಗಳ ಕಾಲ ಕಾದು ನಿಂತರೂ ಯಾವುದೇ ಬಸ್ ನಿಲ್ಲಿಸದಿದ್ದಾಗ, ರೊಚ್ಚಿಗೆದ್ದು ‘KA 29 F 1653’ ನೋಂದಣಿ ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್‌ಗೆ ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ ಬಳಿಕವಷ್ಟೇ ಅವರನ್ನು ಬಸ್ಸಿಗೆ ಹತ್ತಿಸಿಕೊಳ್ಳಲಾಗಿದೆ. 'ಪ್ರತಿದಿನ ಸಂಜೆಯಾದರೆ ಇದೇ ಗೋಳು, ಮಹಿಳೆಯರು-ವೃದ್ಧರು ಎನ್ನದೆ ಎಲ್ಲರನ್ನೂ ಸತಾಯಿಸಲಾಗುತ್ತದೆ' ಎಂದು ಪ್ರಯಾಣಿಕರು ಕಣ್ಣೀರಿಡುತ್ತಿದ್ದಾರೆ.

ಸರ್ಕಾರ ಸಾಮಾನ್ಯ ಜನರ ಸಾರಿಗೆಗಾಗಿ ಸಾವಿರಾರು ಬಸ್‌ಗಳನ್ನು ರಸ್ತೆಗಿಳಿಸಿದ್ದರೂ, ಕೆಲ ಸಿಬ್ಬಂದಿಯ ಈ ದುರ್ವರ್ತನೆಯಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ. ಕೆಎಸ್‌ಆರ್‌ಟಿಸಿ ಉನ್ನತಾಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು 8ನೇ ಮೈಲಿ ಸಿಗ್ನಲ್ ಬಳಿ ಪರಿಶೀಲನೆ ನಡೆಸಿ, ಬೋರ್ಡ್ ಇದ್ದರೂ ಬಸ್ ನಿಲ್ಲಿಸದ ಬೇಜವಾಬ್ದಾರಿ ಚಾಲಕ-ನಿರ್ವಾಹಕರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕಿದೆ.

PREV
Read more Articles on
click me!

Recommended Stories

ಪೈಪ್‌ಲೈನ್ ಭೀಕರ ಸ್ಫೋಟ: ಧರೆಗುರುಳಿದ ತೆಂಗು, ಅಡಕೆ ಮರಗಳು, ಭಯದಿಂದ ಓಡಿ ಹೋದ ಜನರು
ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವ ಸಮಯ ಬಂದಿದೆ: ಫಾರ್ಮ್‌-7 ದುರ್ಬಳಕೆ ವಿಚಾರ, ಛಲವಾದಿ ಹೇಳಿಕೆ ಸಂಚನಲ