8 ಗ್ರಾಮಗಳ 3355 ಎಕರೆ ಜಮೀನು ಅರಣ್ಯಕ್ಕೆ!

By Kannadaprabha NewsFirst Published Mar 8, 2020, 10:31 AM IST
Highlights

 ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಾನೆ ಪೀಡಿತ 8 ಗ್ರಾಮಗಳಲ್ಲಿ ಅರಣ್ಯ ವಿಸ್ತರಣೆ ಯೋಜನೆಗೆ ಗ್ರಾಮಸ್ಥರು ಸ್ವ-ಇಚ್ಚೆಯಿಂದ ತಮ್ಮ ಜಮೀನು ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. 

ಹಾಸನ [ಮಾ.08]:  ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಾನೆ ಪೀಡಿತ 8 ಗ್ರಾಮಗಳಲ್ಲಿ ಅರಣ್ಯ ವಿಸ್ತರಣೆ ಯೋಜನೆಗೆ ಗ್ರಾಮಸ್ಥರು ಸ್ವ-ಇಚ್ಚೆಯಿಂದ ತಮ್ಮ ಜಮೀನು ಬಿಟ್ಟುಕೊಡಲು ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಪ್ರಜ್ವಲ್‌ ರೇವಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅರಣ್ಯ ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳು ಮತ್ತು ಗ್ರಾಮಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆನೆ ಹಾವಳಿ ಹಾಗೂ ಅತಿವೃಷ್ಟಿಯಿಂದ ಕಾಫಿ ತೋಟ ಹಾಳಾಗಿದ್ದು, ಏಲಕ್ಕಿ ಬೆಳೆಯು ರೋಗಕ್ಕೆ ತುತ್ತಾಗಿ ನಷ್ಟಅನುಭವಿಸುತ್ತಿರುವ ರೈತರಿಗೆ ನೆರವಾಗುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದರು.

ನಿಯೋಗ:  ಸಕಲೇಶಪುರ- ಆಲೂರು ತಾಲೂಕು ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರು ಹಾಗೂ ಗ್ರಾಮದ ಮುಖ್ಯಸ್ಥರನ್ನು ದೆಹಲಿಗೆ ನಿಯೋಗ ಕರೆದುಕೊಂಡು ಹೋಗಿ, ಕೇಂದ್ರ ಅರಣ್ಯ ಸಚಿವರು ಸೇರಿದಂತೆ ಪ್ರಮುಖರನ್ನು ಭೇಟಿ ಮಾಡಿ, ಕಾಡಾನೆಗಳ ಸಮಸ್ಯೆ ಮತ್ತು ಪರಿಹಾರದ ಯೋಜನೆಗಳ ಬಗ್ಗೆ ಚರ್ಚಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಆಗ್ರಹಿಸಲಾಗುವುದು ಎಂದರು.

ಎಎಸ್ಸೈ ವೇಷ ಹಾಕಿ ವಂಚಿ​ಸು​ತ್ತಿ​ದ್ದ​ವ ಅರೆಸ್ಟ್...

ಹೆತ್ತೂರು ಹೋಬಳಿಯ ಮಂಕನಹಳ್ಳಿ, ಅರಣಿ, ಯಡೆಕುಮರಿ, ಬಾಜಿಮನೆಎಸ್ಟೇಟ್‌, ಬಾಳೆಹಳ್ಳ, ಬೆಟ್ಟಕುಮರಿ, ಬೋರನಮನೆ ಹಾಗೂ ಯತ್ತನಹಳ್ಳ ಸೇರಿದಂತೆ 8 ಗ್ರಾಮಗಳ 416 ಕುಟುಂಬದವರು ಒಟ್ಟು 3355 ಎಕರೆ ಜಮೀನನ್ನು ಅರಣ್ಯ ವಿಸ್ತರಣಾ ಯೋಜನೆಗೆ ನೀಡಲು ಮುಂದೆ ಬಂದಿದ್ದಾರೆ. ರೈತರ ಸಮಸ್ಯೆ ಅರ್ಥೈಸಿಕೊಂಡು ಪರಿಹರಿಸಬೇಕು ಎಂದ ಸಂಸದರು, ಈ ಯೋಜನೆ 8 ಗ್ರಾಮಗಳಿಗೆ ಮಾತ್ರ ಸೀಮಿತವಾಗಿದೆ ಎಂದರು.

ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸದರಿ ಯೋಜನೆಗೆ ವಾಣಿಜ್ಯ, ಅರಣ್ಯ ಹಾಗೂ ಆರ್ಥಿಕ ಇಲಾಖೆಯ ಅನುಮತಿ ಅಗತ್ಯವಿದೆ ಎಂದ ಸಂಸದರು, ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗುವುದು ಎಂದರು.

ರೈತರಿಂದ ಜಮೀನನ್ನು ನೇರ ಖರೀದಿಗೆ ಜಿಲ್ಲಾಧಿಕಾರಿಗಳು ದರ ನಿಗಧಿ ಪಡಿಸಲು ಅವಕಾಶವಿದ್ದು, ನಿಯಾಮನುಸಾರ ದರ ನಿಗಧಿ ಪಡಿಸುತ್ತಾರೆ ಎಂದು ಸಂಸದರು, ಕೇಂದ್ರ ಸರ್ಕಾರದಿಂದ 1084 ಕೋಟಿ ರು. ಪರಿಹಾರ ಧನವನ್ನು ರಾಜ್ಯಕ್ಕೆ ನೀಡಲಾಗಿದೆ. ರೈಲ್ವೇ ಬ್ಯಾರಿಕೇಡ್‌ ಅಳವಡಿಕೆಗಾಗಿ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸದಸ್ಯೆ ಉಜ್ಮರಿಜ್ವಿ ದರ್ಶನ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಹೆಮ್ಮಿಗೆ ಮೋಹನ್‌, ಕಿಶೋರ್‌, ಅತ್ತಿಹಳ್ಳಿ ದೇವರಾಜ್‌, ಆರ್‌.ಪಿ.ವೆಂಕಟೇಶ್‌ ಮೂರ್ತಿ, ತಹಸೀಲ್ದಾರ್‌ ಮಂಜುನಾಥ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್‌ ಇತರೆ ಅಧಿಕಾರಿಗಳು, ನಾನಾ ಗ್ರಾಮಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಗ್ರಾಮಗಳ ರೈತರು ಹಲವು ವರ್ಷಗಳಿಂದ ವನ್ಯ ಜೀವಿಗಳ ಉಪಟಳದಿಂದ ನಷ್ಟಅನುಭವಿಸುತ್ತಿದ್ದು, ಸರ್ಕಾರದ ಮೂಲಕ ತಮ್ಮ ಜಮೀನಿಗೆ ವೈಜ್ಞಾನಿಕ ಪರಿಹಾರ ದೊರತರೆ ಉತ್ತಮ ಜೀವನ ರೂಪಿಸಿಕೊಳ್ಳಲು ನೆರವಾಗುತ್ತದೆ.

- ಎಚ್‌.ಕೆ.ಕುಮಾರಸ್ವಾಮಿ, ಶಾಸಕ

ಬೆಲೆ ನಿಗಧಿಗೆ 2013ರಿಂದ ಸ್ಪಷ್ಟನಿರ್ದೇಶನವಿದೆ. ಅದರಂತೆ ರೈತರ ಜಮೀನಿಗೆ ಹಿಂದಿನ ಮೂರು ವರ್ಷಗಳಲ್ಲಿ ಉಪ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ವ್ಯವಹಾರಿಸಲ್ಪಟ್ಟಿರುವ ದರಗಳ ಸರಾಸರಿ ತೆಗೆದುಕೊಂಡು ದರ ನಿರ್ಧರಿಸಲಾಗುವುದು.

- ಆರ್‌.ಗಿರೀಶ್‌, ಜಿಲ್ಲಾಧಿಕಾರಿ

click me!