ಮುಸ್ಲಿಂ ಗೂಂಡಾಗಳ ದಾಳಿ ಸಹಿಸಲ್ಲ: ಈಶ್ವರಪ್ಪ ಗುಡುಗು

By Kannadaprabha NewsFirst Published Jul 14, 2022, 3:28 PM IST
Highlights

*   ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕಾಂತರಾಜ್‌ ಆರೋಗ್ಯ ವಿಚಾರಿಸಿದ ಮಾಜಿ ಸಚಿವ
*   ಮುಸ್ಲಿಂ ಹಿರಿಯರ ವಾಗ್ದಾನ ಸುಳ್ಳಾಯ್ತು
*   ರಾಷ್ಟ್ರದ್ರೋಹಿಗಳ ಮೇಲೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ವಿಶ್ವಾಸ
 

ಶಿವಮೊಗ್ಗ(ಜು.14):  ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕೆಲವು ಮುಸ್ಲಿಂ ಗೂಂಡಾಗಳು ನಡೆಸುತ್ತಿರುವ ದಾಳಿ ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಹಲ್ಲೆಗೊಳಗಾಗಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಬೂತ್‌ ಕೇಂದ್ರದ ಪ್ರಮುಖ ಕಾಂತರಾಜ್‌ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದಲ್ಲಿ ಸುಮಾರು 4 ತಿಂಗಳ ಕೆಳಗೆ ರಾಷ್ಟ್ರದ್ರೋಹಿಗಳು ಹಿಂದೂ ಕಾರ್ಯಕರ್ತ ಹರ್ಷ ಎಂಬಾತನನ್ನು ಹತ್ಯೆ ಮಾಡಿದ್ದರು. ರಾಷ್ಟ್ರದ್ರೋಹಿಗಳಿಗೆ ಸರಿಯಾದ ಪಾಠ ಕಲಿಸಬೇಕೆಂದು ಎನ್‌ಐಎ ತನಿಖೆಗೆ ಒತ್ತಾಯಿಸಿದ್ದೆವು. ಅದರಂತೆ ಕೇಂದ್ರ ಸರ್ಕಾರ ಹರ್ಷನ ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿದೆ. ರಾಷ್ಟ್ರದ್ರೋಹಿಗಳ ಮೇಲೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದರು.

ಮುಸ್ಲಿಂ ಹಿರಿಯರ ವಾಗ್ದಾನ ಸುಳ್ಳಾಗಿದೆ:

Latest Videos

ಇದೀಗ ಕಾಂತರಾಜ್‌ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ. ಹರ್ಷನ ಕೊಲೆ ಸಂದರ್ಭದಲ್ಲಿ ರಾಜೀವ್‌ ಗಾಂಧಿ ಬಡಾವಣೆಯ ಮುಸಲ್ಮಾನ್‌ ಸಮುದಾಯದ ಹಿರಿಯರು ಇನ್ನು ಮುಂದೆ ಈ ರೀತಿ ಘಟನೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ವಾಗ್ದಾನ ಮಾಡಿದ್ದರು. ಆದರೆ ಘಟನೆ ಮರುಕಳಿಸುತ್ತಿದ್ದು, ಮುಸಲ್ಮಾನ್‌ ಹಿರಿಯರ ವಾಗ್ದಾನ ಸುಳ್ಳಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ದರಾಮೋತ್ಸವ ಮಾಡಲು ಹೊರಟಿರುವುದು ಕಾಂಗ್ರೆಸ್‌ನ ಶಿಖಂಡಿತನ: KS Eshwarappa

ಹಲ್ಲೆ ನಡೆಸಿದ ವೇಳೆ ಕಾಂತರಾಜ್‌ ತನ್ನ ತಲೆ ಮೇಲೆ ಅಡ್ಡ ಕೈಹಿಡಿದಿದ್ದಾನೆ. ಹೀಗಾಗಿ ಅದೃಷ್ಟವಶಾತ್‌ ಘಟನೆಯಲ್ಲಿ ಬದುಕಿದ್ದಾನೆ. ಇಲ್ಲದಿದ್ದರೆ ಆತನ ತಲೆಯೂ ಕತ್ತರಿಸುತ್ತಿತ್ತು. ಮುಸಲ್ಮಾನ್‌ ಗೂಂಡಾಗಳು ಇಂತಹ ದುಷ್ಕೃತ್ಯ ಮುಂದುವರೆಸಿದ್ದಾರೆ. ಈ ಪ್ರಕರಣದಲ್ಲಿನ ಆರೋಪಿಗಳ ವಿರುದ್ಧ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕೆಲವು ಮುಸಲ್ಮಾನ್‌ ಗೂಂಡಾಗಳು ಇಂತಹ ದುಷ್ಕೃತ್ಯ ಮುಂದುವರೆಸುತ್ತಾರೆಂದರೆ ಹಿಂದು ಸಮಾಜ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತರನ್ನೇ ಗುರಿಯಾಗಿಸಿ ಈ ರೀತಿ ದುಷ್ಕೃತ್ಯ ಎಸಗಲಾಗುತ್ತಿದೆ. ಹಿಂದು ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆಯೂ ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ. ಮುಂದೆ ಈ ರೀತಿ ಘಟನೆ ಆಗದಂತೆ ನೋಡಿಕೊಳ್ಳಬೇಕಿದೆ. ಗೂಂಡಾ ಪ್ರವೃತ್ತಿ ತೋರುವವರಿಗೆ ಸರಿಯಾದ ಪಾಠ ಕಲಿಸಬೇಕಿದೆ ಎಂದರು.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ. ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಇದರ ಹಿಂದಿರುವ ದೊಡ್ಡ ಶಕ್ತಿಗಳನ್ನು ಹುಡುಕಬೇಕಾಗಿದೆ. ಕೆಲವು ದೇಶದ್ರೋಹಿ ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮೇಯರ್‌ ಸುನೀತಾ ಅಣ್ಣಪ್ಪ, ಉಪ ಮೇಯರ್‌ ಶಂಕರ್‌ ಗನ್ನಿ, ಜಿಪಂ ಮಾಜಿ ಸದಸ್ಯ ಕೆ. ಇ. ಕಾಂತೇಶ್‌, ಪಾಲಿಕೆ ಸದಸ್ಯ ಎಸ್‌.ಎನ್‌. ಚನ್ನಬಸಪ್ಪ, ಜ್ಞಾನೇಶ್ವರ್‌ ಮತ್ತಿತರರು ಉಪಸ್ಥಿತರಿದ್ದರು.

ನಿರೀಕ್ಷೆಗೂ ಮೀರಿ ಮಳೆ: ಶಾಸಕ

ರಾಜ್ಯದಲ್ಲಿ ನಿರೀಕ್ಷೆಗೆ ಮೀರಿ ಮಳೆ ಬರುತ್ತಿದೆ. ಕಳೆದ ಬಾರಿ ಶಿವಮೊಗ್ಗ ನಗರದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಶಿವಮೊಗ್ಗ ನಗರದಲ್ಲಿ ಸಮಸ್ಯೆ ಆಗದ ರೀತಿಯಲ್ಲಿ ನಗರ ಪಾಲಿಕೆ ಎಲ್ಲಾ ರೀತಿಯ ಪ್ರಯತ್ನ ಕೈಗೊಂಡಿದೆ. ಒಂದೇ ಒಂದು ಮನೆಗೆ ನೀರು ನುಗ್ಗದಿರುವ ರೀತಿಯಲ್ಲಿ ಕ್ರಮ ವಹಿಸಿದ್ದಾರೆ ಎಂದು ಶಾಸಕ ಈಶ್ವರಪ್ಪ ಹೇಳಿದರು.

ಕಾಳಿದೇವಿಗೆ ಅಪಮಾನವಾಗಿದ್ದನ್ನು ಸಿದ್ದು ಯಾಕೆ ಖಂಡಿಸಿಲ್ಲ?: ಈಶ್ವರಪ್ಪ

ಶಿವಮೊಗ್ಗ ನಗರದಲ್ಲಿ ಎ -ವರ್ಗದ 8 ಮನೆ, ಬಿ- ವರ್ಗದ 14 ಮನೆ ಬಿದ್ದಿದೆ. ಎ -ವರ್ಗದ ಮನೆಗೆ ಈ ಮೊದಲು 95 ಸಾವಿರ ರು. ಪರಿಹಾರ ಇತ್ತು. ಆದರೆ ರಾಜ್ಯ ಸರ್ಕಾರ ಇದೀಗ ಪರಿಹಾರ ಮೊತ್ತವನ್ನು 5 ಲಕ್ಷ ರು.ಗೆ ಏರಿಕೆ ಮಾಡಿದೆ. ಹಾಗೆಯೇ ಬಿ-ವರ್ಗದ ಮನೆಗೆ 95 ಸಾವಿರ ರು. ಪರಿಹಾರ ನೀಡಲಾಗುತ್ತಿತ್ತು. ಈಗ 3 ಲಕ್ಷ ರು. ಪರಿಹಾರ ಕೊಡಲು ತೀರ್ಮಾನ ಆಗಿದೆ. ಅದೇ ರೀತಿ ಭಾಗಶಃ ಹಾನಿಗೊಳಗಾದ ಮನೆಗಳಿಗೆ 5200 ರು. ಪರಿಹಾರ ಇತ್ತು. ಈಗ 50 ಸಾವಿರ ರು. ನೀಡಲಾಗುತ್ತಿದ್ದು, ಪರಿಹಾರ ಮೊತ್ತ ಏರಿಕೆ ಮಾಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ ಆಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ ಎಂದು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಉಸ್ತುವಾರಿ ಸಚಿವರು ಎಲ್ಲೂ ಹೋಗಿಲ್ಲ. ಅವರ ಜೊತೆ ಮಾತನಾಡಿದ್ದೇನೆ. ಅವರ ಕ್ಷೇತ್ರದಲ್ಲೂ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಈ ಕಾರಣಕ್ಕೆ ಅವರು ಅಲ್ಲಿ ಗಮನ ಹರಿಸಿದ್ದಾರೆ. ಜಿಲ್ಲೆಗೂ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
 

click me!