ಅಂಜನಾದ್ರಿ ಬೆಟ್ಟ ವೀಕ್ಷಣೆಗೆ ಸಿಎಂ ವೈಮಾನಿಕ ಸಮೀಕ್ಷೆ: ಆನಂದ್‌ ಸಿಂಗ್‌

By Kannadaprabha News  |  First Published Jul 14, 2022, 11:42 AM IST

*  ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ
*  60 ಎಕರೆ ಭೂಸ್ವಾಧೀನ
*  ರಸ್ತೆ ಅಭಿವೃದ್ಧಿಗೆ 400 ಕೋಟಿ


ಹೊಸಪೇಟೆ(ಜು.14):  ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ಮುನ್ನೋಟ ವೀಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜುಲೈ ಅಂತ್ಯದೊಳಗೆ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಹದಿನೈದು ದಿನದೊಳಗೆ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ನೀಲನಕ್ಷೆ ಸಿದ್ಧವಾಗಲಿದೆ ಎಂದು ಪ್ರವಾಸೋದ್ಯಮ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದರು. ನಗರದ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಬುಧವಾರ ನಡೆದ ಅಂಜನಾದ್ರಿ ಬೆಟ್ಟಹಾಗೂ ಹಂಪಿ ಅಭಿವೃದ್ಧಿ ಕುರಿತ ಮಾಸ್ಟರ್‌ ಪ್ಲಾನ್‌ ಕುರಿತ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಎಲ್ಲ ಅಗತ್ಯ ಕ್ರಮ ವಹಿಸಲಾಗಿದೆ. ಈಗಾಗಲೇ ಸರ್ಕಾರ .100 ಕೋಟಿ ಅನುದಾನ ಮಂಜೂರು ಮಾಡಿದೆ. 60 ಎಕರೆ ಭೂಸ್ವಾಧೀನ ಮಾಡಿಕೊಂಡು ಭಕ್ತರು ಹಾಗೂ ಪ್ರವಾಸಿಗರಿಗೆ ಯಾತ್ರಿ ನಿವಾಸ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗುವುದು. ರೈತರು ಕೂಡ ಜಮೀನು ನೀಡಲು ಮುಂದೆ ಬಂದಿದ್ದು, ಅಭಿವೃದ್ಧಿಗೆ ಯಾವುದೇ ತೊಡಕು ಆಗುವುದಿಲ್ಲ ಎಂದರು.

Latest Videos

undefined

ಡಿಸೆಂಬರ್‌ನಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರಾಹುಲ್‌, ಪ್ರಿಯಾಂಕಾ: ತಂಗಡಗಿ

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಡಿಪಿಆರ್‌ ತಯಾರಿಸಲು ಸ್ವಯಂ ಆಸಕ್ತಿಯಿಂದ ಕೆಲ ಸಂಸ್ಥೆಗಳು ಮುಂದೆ ಬಂದಿದ್ದು, ಅಂಥ ಸಂಸ್ಥೆಗಳಿಗೆ ಡಿಪಿಆರ್‌ ತಯಾರಿಸಲು ಅವಕಾಶ ನೀಡಲಾಗುವುದು. ಈಗಾಗಲೇ ಎರಡು ಬಗೆಯ ಯೋಜನೆ ರೂಪಿಸಲಾಗಿದೆ. ಮೊದಲು ತಯಾರಿಸಿದ್ದ ಯೋಜನೆಯಿಂದ ಸ್ವಲ್ಪ ಸಮಸ್ಯೆಯಾಗಲಿದೆ. ಹಾಗಾಗಿ ಈಗ ಮತ್ತೊಂದು ಯೋಜನೆ ರೂಪಿಸಿದ್ದು, ಇದರಿಂದ ಬೆಟ್ಟದ ಸೌಂದರ್ಯಕ್ಕೂ ಯಾವುದೇ ಧಕ್ಕೆಯಾಗುವುದಿಲ್ಲ ಎಂದರು.

ಬೆಟ್ಟಕ್ಕೆ ರೋಪ್‌ವೇ:

ಅಂಜನಾದ್ರಿ ಬೆಟ್ಟ ಏರಲು ಭಕ್ತರು ಹಾಗೂ ಪ್ರವಾಸಿಗರಿಗೆ ಅನುಕೂಲ ಒದಗಿಸಲು ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ಅಂಜನಾದ್ರಿ ಬೆಟ್ಟಕ್ಕೆ ಉತ್ತರ ಭಾರತದ ಪ್ರವಾಸಿಗರು ಹಾಗೂ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ವಾಸ್ತವ್ಯಕ್ಕೆ ಉಳಿದುಕೊಳ್ಳಲು ಯಾತ್ರಿ ನಿವಾಸ ಸೇರಿದಂತೆ ಅಡುಗೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು.

ವೀಕೆಂಡ್‌ಗೆ 25 ಸಾವಿರ ಜನ ಭೇಟಿ:

ಅಂಜನಾದ್ರಿ ಬೆಟ್ಟಕ್ಕೆ ದಿನನಿತ್ಯ 5 ಸಾವಿರ ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ವೀಕೆಂಡ್‌ಗೆ 25 ಸಾವಿರ ಜನ ಭೇಟಿ ನೀಡುತ್ತಾರೆ. ಆಂಜನೇಯ ಜಯಂತಿ ಸೇರಿದಂತೆ ಹಬ್ಬ-ಹರಿದಿನಗಳಲ್ಲಿ 50 ಸಾವಿರದಿಂದ ಲಕ್ಷ ಜನ ಭೇಟಿ ನೀಡುತ್ತಾರೆ. ಹಾಗಾಗಿ, ಅಂಜನಾದ್ರಿ ಬೆಟ್ಟದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮವಹಿಸಲಾಗಿದ್ದು, ಈಗಾಗಲೇ ರೈತರು ಕೂಡ ಜಮೀನು ನೀಡಲು ಮುಂದೆ ಬಂದಿದ್ದಾರೆ. ರೈತರಿಗೆ ಪ್ರತಿ ಎಕರೆಗೆ .42 ಲಕ್ಷ ಪರಿಹಾರ ಕೂಡ ನೀಡಲಾಗುವುದು. ಹೆಚ್ಚಿಗೆ ಬೇಡಿಕೆ ಇಟ್ಟರೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದರು.

ರಸ್ತೆ ಅಭಿವೃದ್ಧಿಗೆ 400 ಕೋಟಿ:

ಅಂಜನಾದ್ರಿ ಬೆಟ್ಟಕ್ಕೆ ಸಂಪರ್ಕ ಬೆಳೆಸುವ ಕೊಪ್ಪಳ, ಗಂಗಾವತಿ ಮತ್ತು ಹೊಸಪೇಟೆ-ಹಂಪಿ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲು .400 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕೊಪ್ಪಳದಿಂದ ಅಂಜನಾದ್ರಿಗೆ ಸಂಪರ್ಕ ಬೆಳೆಸುವ ರಸ್ತೆ ಅಭಿವೃದ್ಧಿಗೆ ಭೂಸ್ವಾಧೀನ ಮಾಡಿಕೊಳ್ಳಲಾಗುವುದು. ಆದರೆ, ಮನೆ, ಅಂಗಡಿಗಳು ಬಂದರೆ ಅಂಥ ಕಡೆಗಳಲ್ಲಿ ಅದೇ ಮಾದರಿ ರಸ್ತೆ ಉಳಿಸಿಕೊಂಡು, ಉಳಿದೆಡೆ ದ್ವಿಪಥ, ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಎಲ್ಲ ಸಿದ್ಧತೆ ನಡೆಸಲಾಗಿದೆ ಎಂದರು.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್‌, ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ವೆಂಕಟೇಶ, ಎಸ್ಪಿ ಡಾ. ಅರುಣ್‌ ಕೆ., ಕೊಪ್ಪಳ ಎಸ್‌ಪಿ ಅರುಣಾಂಗ್ಷು ಗಿರಿ, ವಿಜಯನಗರ ಜಿಪಂ ಸಿಇಒ ಹರ್ಷಲ್‌ ಬೋಯೇರ್‌ ನಾರಾಯಣರಾವ್‌, ಹಂಪಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಮತ್ತಿತರರಿದ್ದರು.

ಅಂಜನಾದ್ರಿ ಬೆಟ್ಟವೇರಿ ಆಂಜನೇಯನ ದರ್ಶನ ಪಡೆದ ಮೈಸೂರು ರಾಜವಂಶಸ್ಥ ಯಧುವೀರ ಒಡೆಯರ್ ದಂಪತಿ!

ದೇಶದಲ್ಲೇ ಎತ್ತರದ ಧ್ವಜಸ್ತಂಭ ಸ್ಥಾಪನೆ: ಸಿಂಗ್‌

ಹೊಸಪೇಟೆ: ನಗರದ ಕ್ರೀಡಾಂಗಣದಲ್ಲಿ ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡಲಾಗುತ್ತಿದೆ. ದೇಶಪ್ರೇಮ ಸಾರುವ ಧ್ವಜಸ್ತಂಭ ನಿರ್ಮಾಣ ಮಾಡುವ ಮೂಲಕ ವಿಜಯನಗರದ ನೆಲದಲ್ಲಿ ಇತಿಹಾಸ ಸೃಷ್ಟಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, 405 ಅಡಿ ಎತ್ತರದ ಧ್ವಜ ಸ್ತಂಭವನ್ನು ಹೊಸಪೇಟೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರಾಷ್ಟ್ರಪ್ರೇಮ ಮೆರೆಯುವ ಕಾರ್ಯ ನಡೆಯುತ್ತಿದೆ. ಈ ಧ್ವಜಸ್ತಂಭ ನಿರ್ಮಾಣದ ಬಳಿಕ ವಿಜಯನಗರದ ಹೆಸರು ದೇಶದಲ್ಲಿ ಇನ್ನಷ್ಟುರಾರಾಜಿಸಲಿದೆ ಎಂದರು.

click me!