‘ಮಾಯಾಮೃಗ’ದಂತೆ ಕಾಡುತ್ತಿರುವ ಒಂದೇ ಒಂದು ಮತದ ಸೋಲು!

By Kannadaprabha News  |  First Published Apr 16, 2023, 9:32 AM IST

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದೊಂದು ಮತವೂ ಮುಖ್ಯ. ಒಂದೇ ಒಂದು ಮತದ ಅಂತರದಿಂದ ಸೋತ ವ್ಯಕ್ತಿ ಈವರೆಗೆ ರಾಜಕೀಯವಾಗಿ ಮೇಲೆಳಲು ಸಾಧ್ಯವಾಗಿಲ್ಲ.


ಅಂಶಿ ಪ್ರಸನ್ನಕುಮಾರ್‌

 ಮೈಸೂರು :  ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದೊಂದು ಮತವೂ ಮುಖ್ಯ. ಒಂದೇ ಒಂದು ಮತದ ಅಂತರದಿಂದ ಸೋತ ವ್ಯಕ್ತಿ ಈವರೆಗೆ ರಾಜಕೀಯವಾಗಿ ಮೇಲೆಳಲು ಸಾಧ್ಯವಾಗಿಲ್ಲ.

Latest Videos

undefined

- ಇದು ಈ ಬಾರಿಯೂ ಕೂಡ ಚಾಮರಾಜನಗರ ಜಿಲ್ಲೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಎ.ಆರ್‌. ಕೃಷ್ಣಮೂರ್ತಿ ಅವರ ಕಥೆ. ಇವರು ಮೈಸೂರು ಸೀಮೆಯ ಹಿರಿಯ ರಾಜಕಾರಣಿಯಾಗಿದ್ದ ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವ, ಹಿಮಾಚಲ ಪ್ರದೇಶ ಹಾಗೂ ಕೇರಳದ ಮಾಜಿ ರಾಜ್ಯಪಾಲರಾಗಿದ್ದ ದಿವಂಗತ ಬಿ.ರಾಚಯ್ಯ ಅವರ ಪುತ್ರ.

ಕೃಷ್ಣಮೂರ್ತಿ ಅವರು 1989ರಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಜನತಾದಳ ಯಾಗಿ ಕಾಂಗ್ರೆಸ್‌ನ ಕೆ.ಸಿದ್ದಯ್ಯ ಅವರೆದುರು ಸೋತರು. 1994ರಲ್ಲಿ ಜನತಾದಳ, 1999 ರಲ್ಲಿ ಜನತಾದಳ (ಸಂಯುಕ್ತ) ಟಿಕೆಟ್‌ ಮೇಲೆ ಸತತ ಎರಡು ಬಾರಿ ಗೆದ್ದರು. 2004ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಧ್ರುವನಾರಾಯಣ ಅಭ್ಯರ್ಥಿ. ಇವಿಎಂ ಬಳಕೆಯಿಂದಾಗಿ ನಿಖರವಾಗಿ ಮತ ಎಣಿಕೆ ನಡೆಯಿತು. ಧ್ರುವನಾರಾಯಣ- 19,752, ಕೃಷ್ಣಮೂರ್ತಿ- 19,751 ಮತಗಳನ್ನು ಪಡೆದರು. ಒಂದು ಮತದ ಧ್ರುವನಾರಾಯಣ ಗೆದ್ದಿದ್ದು ದಾಖಲೆ. ಆದರೆ ಅವತ್ತು ಸೋತು ಕೃಷ್ಣಮೂರ್ತಿ ಇವತ್ತಿನವರೆಗೂ ಗೆಲ್ಲಲಾಗಿಲ್ಲ.

2008ರ ವೇಳೆಗೆ ಸಂತೇಮರಹಳ್ಳಿ ಕ್ಷೇತ್ರ ರದ್ದಾಗಿದ್ದರಿಂದ ಧ್ರುವನಾರಾಯಣ ಹಾಗೂ ಕೃಷ್ಣಮೂರ್ತಿ- ಇಬ್ಬರು ಪಕ್ಕದ ಕೊಳ್ಳೇಗಾಲಕ್ಕೆ ಸ್ಥಳಾಂತರವಾದರು. ಅಲ್ಲಿ ಧ್ರುವನಾರಾಯಣ ಮತ್ತೆ ಗೆದ್ದರು. ಕೃಷ್ಣಮೂರ್ತಿ ಸೋತರು. ನಂತರ ಕೃಷ್ಣಮೂರ್ತಿ ಬಿಜೆಪಿ ಸೇರಿದರು.

2009ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ಧ್ರುವನಾರಾಯಣ (ಕಾಂಗ್ರೆಸ್‌)- ಕೃಷ್ಣಮೂರ್ತಿ (ಬಿಜೆಪಿ) ಮುಖಾಮುಖಿಯಾದರು. ಅಲ್ಲಿ ಕೂಡ ಧ್ರುವ ಗೆದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಇಬ್ಬರು ಮುಖಾಮುಖಿಯಾದರು. ಮತ್ತೆ ಧ್ರುವ ಗೆದ್ದರೆ, ಕೃಷ್ಣಮೂರ್ತಿ ಸೋತರು.

ಕೃಷ್ಣಮೂರ್ತಿ ನಂತರ ಕಾಂಗ್ರೆಸ್‌ ಸೇರಿ, 2018 ರಲ್ಲಿ ಕೊಳ್ಳೇಗಾಲದಲ್ಲಿ ಅಭ್ಯರ್ಥಿಯಾದರು. ಅಲ್ಲಿ ಕೂಡ ಜೆಡಿಎಸ್‌ ಬೆಂಬಲಿತ ಬಿಎಸ್ಪಿಯ ಎನ್‌. ಮಹೇಶ್‌ ಅವರ ಎದುರು ಸೋತರು. ಈ ಬಾರಿ ಮತ್ತೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಮಹೇಶ್‌ ಹಾಗೂ ಕೃಷ್ಣಮೂರ್ತಿ ಮುಖಾಮುಖಿಯಾಗಿದ್ದಾರೆ.

ಒಂದು ಮತದಿಂದ ಗೆದ್ದ ಧ್ರುವ ಎರಡು ಬಾರಿ ಶಾಸಕರು, ಎರಡು ಬಾರಿ ಸಂಸದರಾದರು. ಈ ಬಾರಿ ನಂಜನಗೂಡಿನಿಂದ ವಿಧಾನಸಭೆಗೆ ಸ್ಪರ್ಧಿಸ ಬಯಸಿದ್ದರು. ಆದರೆ, ಇತ್ತೀಚೆಗೆ ನಿಧನರಾದರು.

ಮೊದಲ ಚುನಾವಣೆಯಿಂದಲೂ ಕಣದಲ್ಲಿರುವ ಕುಟುಂಬ

ಬಿ.ರಾಚಯ್ಯನವರದು ಮೊದಲ ಚುನಾವಣೆಯಿಂದಲೂ ಕಣದಲ್ಲಿರುವ ಕುಟುಂಬ. ರಾಚಯ್ಯ ಅವರು 1952 ರಲ್ಲಿ ಯಳಂದೂರು ದ್ವಿಸದಸ್ಯ ಕ್ಷೇತ್ರ, 1957 ರಲ್ಲಿ ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ, 1962, 1967 ರಲ್ಲಿ ಸಂತೇಮರಹಳ್ಳಿ ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 1972 ರಲ್ಲಿ ಮಾತ್ರ ಅವರು ಸ್ಪರ್ಧಿಸಿರಲಿಲ್ಲ. 1977 ರಲ್ಲಿ ಚಾಮರಾಜನಗರಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದ 1978ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. 1980ರ ಲೋಕಸಭಾ ಚುನಾವಣೆಯಲ್ಲಿ ರಾಚಯ್ಯ ಸೋತರು. 1983, 1985ರಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

1989, 1994, 1999, 2004, 2008ರ ವಿಧಾನಸಭೆ, 2009, 2014ರ ಲೋಕಸಭೆ, 2018ರ ವಿಧಾನಸಭಾ ಚುನಾವಣೆಯಲ್ಲಿ ರಾಚಯ್ಯ ಅವರ ಪುತ್ರ ಎ.ಆರ್‌. ಕೃಷ್ಣಮೂರ್ತಿ ಕಣದಲ್ಲಿದ್ದರು. ಈ ಬಾರಿ ಮತ್ತೆ ಕಣದಲ್ಲಿದ್ದಾರೆ.

click me!