ಮೈಸೂರು, ನಂಜನಗೂಡು ಹಾಗೂ ಟಿ.ನರಸೀಪುರ ತಾಲೂಕುಗಳ ಭಾಗಶಃ ಪ್ರದೇಶಗಳ ‘ತ್ರಿವೇಣಿ ಸಂಗಮ’ವಾದ ವರುಣ ಕ್ಷೇತ್ರದಲ್ಲಿ ಇದೇ ಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಬಲ ಎದುರಾಳಿಯಾಗಿ ವಸತಿ ಸಚಿವ ವಿ. ಸೋಮಣ್ಣ ಕಣಕ್ಕಿಳಿದಿದ್ದಾರೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಮೈಸೂರು, ನಂಜನಗೂಡು ಹಾಗೂ ಟಿ.ನರಸೀಪುರ ತಾಲೂಕುಗಳ ಭಾಗಶಃ ಪ್ರದೇಶಗಳ ‘ತ್ರಿವೇಣಿ ಸಂಗಮ’ವಾದ ವರುಣ ಕ್ಷೇತ್ರದಲ್ಲಿ ಇದೇ ಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಬಲ ಎದುರಾಳಿಯಾಗಿ ವಸತಿ ಸಚಿವ ವಿ. ಸೋಮಣ್ಣ ಕಣಕ್ಕಿಳಿದಿದ್ದಾರೆ.
ಕುಲದೀಪ್‌ಸಿಂಗ್ ನೇತೃತ್ವದ ಕ್ಷೇತ್ರ ಪುನರ್‌ವಿಂಗಡಣಾ ಆಯೋಗದ ವರದಿಯಂತೆ 2008ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರ ಇದು.
ಈ ಹಿಂದೆಕ್ಷೇತ್ರದಲ್ಲಿದ್ದ ವರುಣ ಹೋಬಳಿ, ಟಿ.ನರಸೀಪುರ ಮೀಸಲು ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ತಾಲೂಕಿನ ಬಿಳಿಗೆರೆ ಹಾಗೂ ಚಿಕ್ಕಯ್ಯನ ಛತ್ರ ಹೋಬಳಿ, ಟಿ. ನರಸೀಪುರ ತಾಲೂಕು ಕಸಬಾ ಹೋಬಳಿ, 2008 ರಲ್ಲಿ ರದ್ದಾದ ಸಂತೇಮರಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಕವಲಂದೆ ಹೋಬಳಿಯ ಭಾಗಶಃ ಪ್ರದೇಶಗಳನ್ನು ಒಳಗೊಂಡಂತೆ ಈ ಕ್ಷೇತ್ರ ರಚಿಸಲಾಗಿದೆ. ಸಿದ್ದರಾಮಯ್ಯ ಅವರ ಹುಟ್ಟೂರಾದ ಸಿದ್ದರಾಮನಹುಂಡಿ ಕೂಡ ಇದೇ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ.
ಸಿದ್ದರಾಮಯ್ಯಅವರು ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 1983ರಿಂದ 2006ರ ಉಪ ಚುನಾವಣೆವರೆಗೆ ಕಾಯಂ ಅಭ್ಯರ್ಥಿ ಎನಿಸಿಕೊಂಡಿದ್ದರು. 1983ರಲ್ಲಿ ಲೋಕದಳ ಬೆಂಬಲಿತ ಪಕ್ಷೇತರ, 1985 ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಆಯ್ಕೆ, 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಸೋಲು, 1994 ರಲ್ಲಿ ಜನತಾದಳದ ಟಿಕೆಟ್ ಮೇಲೆ ಆಯ್ಕೆ, 1999 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು, 2004 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ, ಆಯ್ಕೆ, 2006ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿದ್ದರು.
2006 ಉಪ ಚುನಾವಣೆಯಲ್ಲಿ ಅವರು ಜೆಡಿಎಸ್- ಬಿಜೆಪಿ ಹೋರಾಟದ ಎದುರು ಕೇವಲ 257 ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ಅಲ್ಲಿ ಒಕ್ಕಲಿಗರು ಹಾಗೂ ವೀರಶೈವರು ಪ್ರಾಬಲ್ಯ. ಹೀಗಾಗಿ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಚಾಮುಂಡೇಶ್ವರಿ ತ್ಯಜಿಸಿ, ವರುಣಕ್ಕೆ ಸ್ಥಳಾಂತರವಾಗಿದ್ದರು. ವರುಣದಲ್ಲಿ ವೀರಶೈವರ ಪ್ರಾಬಲ್ಯ ಇದ್ದರೂ ಅಷ್ಟೇ ಪ್ರಮಾಣದಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಇದ್ದಾರೆ. ಹೀಗಾಗಿ ಸಿದ್ದರಾಮಯ್ಯ ವರುಣ ಆಯ್ಕೆ ಮಾಡಿಕೊಂಡಿದ್ದರು.
2008ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಬಿಜೆಪಿಯ ಎಲ್.ರೇವಣಸಿದ್ದಯ್ಯ (ನಿವೃತ್ತ ಐಜಿಪಿ) ಅವರಿಂದ ಪ್ರಬಲ ಪೈಪೋಟಿ ಎದುರಿಸಿ, 18,837 ಮತಗಳ ಅಂತರದಿಂದ ಗೆದ್ದಿದ್ದರು. ನಿವೃತ್ತ ಅಧಿಕಾರಿ ಡಾ.ಎಚ್.ವಿ. ಕೃಷ್ಣಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು.
2013 ರಲ್ಲಿ ಕೆಜೆಪಿಯ ಕಾ.ಪು. ಸಿದ್ದಲಿಂಗಸ್ವಾಮಿ (ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ, ಹಾಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರು) ಅವರನ್ನು 29,641 ಮತಗಳ ಅಂತರದಿಂದ ಸೋಲಿಸಿದ್ದರು. ಬಿಜೆಪಿಯಿಂದ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಡಿ. ಮಹೇಂದ್ರ ಸ್ಪರ್ಧಿಸಿ, ಠೇವಣಿ ಕಳೆದುಕೊಂಡಿದ್ದರು. ನಿವೃತ್ತ ಡಿವೈಎಸ್ಪಿ ಚಲುವರಾಜು ಜೆಡಿಎಸ್ ಅಭ್ಯರ್ಥಿಯಾಗಿದ್ದರು.
ಸಿದ್ದರಾಮಯ್ಯ ಅವರು ಮೊದಲ ಬಾರಿ ಗೆದ್ದಾಗ ಒಂದು ವರ್ಷದ ನಂತರ ಪ್ರತಿಪಕ್ಷ ನಾಯಕರಾದರು. ಎರಡನೇ ಬಾರಿ ಗೆದ್ದಾಗ ಮುಖ್ಯಮಂತ್ರಿಯೇ ಆದರು.
ಇಲ್ಲಿ 2008 ರಿಂದಲೂ ಸಿದ್ದರಾಮಯ್ಯ ಪರವಾಗಿ ಅವರ ಹಿರಿಯ ಪುತ್ರ ರಾಕೇಶ್ ಸಂಘಟನೆ ಮಾಡಿಕೊಂಡು ಬಂದಿದ್ದರು. ಆದರೆ ಅವರು ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಕಿರಿಯ ಪುತ್ರ ಡಾ.ಎಸ್. ಯತೀಂದ್ರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು 2018 ರಲ್ಲಿ ಚಾಮುಂಡೇಶ್ವರಿಗೆ ಸ್ಥಳಾಂತರಗೊಂಡು, ಪುತ್ರನಿಗೆ ಈ ಕ್ಷೇತ್ರ ಬಿಟ್ಟುಕೊಟ್ಟಿದ್ದರು.
ಯತೀಂದ್ರ ಅವರು ಬಿಜೆಪಿಯ ತೋಟದಪ್ಪ ಬಸವರಾಜು ಅವರನ್ನು 58,616 ಮತಗಳ ಅಂತರದಿಂದ ಸೋಲಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದರು. ಜೆಡಿಎಸ್‌ನಿಂದ ಎಸ್.ಎಂ. ಅಭಿಷೇಕ್ ಅಭ್ಯರ್ಥಿಯಾಗಿದ್ದರು. ಆದರೆ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಅಲ್ಪಮತಗಳ ಅಂತರದಿಂದ ಗೆದ್ದರು.
2018 ರಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಅವರು ಮೂರು ವಾರ ಪ್ರಚಾರ ಕೂಡ ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ನೀಡದಿದ್ದರಿಂದ ಬೆಂಬಲಿಗರು ಕಾಂಗ್ರೆಸ್ ಬೆಂಬಲಿಸುವ ಮೂಲಕ ಭಾರಿ ಅಂತರದಿಂದ ಬಿಜೆಪಿ ಸೋಲಿಸಿದ್ದರು.
ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಕಳೆದ ಮೂರು ಚುನಾವಣೆಗಳ ಅಭ್ಯರ್ಥಿಗಳಿಗೆ ಹೋಲಿಸಿದಲ್ಲಿ ಸುಮಾರು ನಾಲ್ಕು ದಶಕಗಳ ರಾಜಕೀಯ ಅನುಭವವಿರುವ, ಐದು ಬಾರಿ ವಿಧಾನಸಭೆ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಹಲವಾರು ಖಾತೆಯ ಮಂತ್ರಿಗಳಾಗಿ ಕೆಲಸ ಮಾಡಿರುವ ಸೋಮಣ್ಣ ಎಂಬ ಪ್ರಬಲರನ್ನು ಎದುರಿಸಬೇಕಾಗಿದೆ. ‘ಇದು ನನ್ನ ಕಡೆಯ ಚುನಾವಣೆ, ಸ್ವಕ್ಷೇತರಿಂದ ಗೆದ್ದು ರಾಜಕೀಯ ಜೀವನಕ್ಕೆ ಗುಡ್‌ಬೈ ಹೇಳಬೇಕು’ ಎಂಬ ಭಾವನಾತ್ಮಕ ಮಾತುಗಳನ್ನು ಸಿದ್ದರಾಮಯ್ಯ ಹೇಳುತ್ತಿದ್ದಾರೆ.
ಇದಲ್ಲದೇ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮತ್ತೊಮ್ಮೆ ವರುಣ ಕ್ಷೇತ್ರಕ್ಕೆ ಸಿಎಂ ಗಾದಿ ಒಲಿದು ಬರಲಿದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.
---
2008ರ ಫಲಿತಾಂಶ
ಒಟ್ಟು ಮತದಾರರು- 1,89,041
ಸ್ವೀಕೃತ ಮತಗಳು- 1,43,150
ಶೇಕಡವಾರು ಮತದಾನ- 75.7
ಸಿದ್ದರಾಮಯ್ಯ (ಕಾಂಗ್ರೆಸ್)- 71,908- 50.23
ಎಲ್.ರೇವಣಸಿದ್ದಯ್ಯ (ಬಿಜೆಪಿ)- 53,071- 37.07
ಪಿ.ಗುರುಪಾದಸ್ವಾಮಿ (ಬಿಎಸ್ಪಿ)- 5,426- 3.79
ಎಚ್.ವಿ. ಕೃಷ್ಣಸ್ವಾಮಿ (ಜೆಡಿಎಸ್)- 4,133- 2.89
(ಇನ್ನೂ 8 ಮಂದಿ ಕಣದಲ್ಲಿದ್ದರು)
-------
2013ರ ಫಲಿತಾಂಶ
ಒಟ್ಟು ಮತದಾರರು- 1,84,915
ಸ್ವೀಕೃತ ಮತಗಳು- 1,60,641
ಶೇಕಡವಾರು ಮತದಾನ- 82.42
ಸಿದ್ದರಾಮಯ್ಯ (ಕಾಂಗ್ರೆಸ್)- 84,385- 52.53
ಕಾ.ಪು.ಸಿದ್ದಲಿಂಗಸ್ವಾಮಿ (ಕೆಜೆಪಿ)- 54,744- 34.08
ಚಲುವರಾಜ್ (ಜೆಡಿಎಸ್)- 2,686- 1.67
ಶಿವಮಹದೇವ (ಬಿಎಸ್ಪಿ)- 2,419- 1.51
ಜಿ.ಎಂ. ಗಾಡ್ಕರ್ (ಸಜಪ-ಕ)- 1,454- 0.91
ಎಸ್.ಡಿ.ಮಹೇಂದ್ರ (ಬಿಜೆಪಿ)- 1,070- 0.67
(ಇನ್ನೂ 21 ಮಂದಿ ಕಣದಲ್ಲಿದ್ದರು)
--------
2018ರ ಫಲಿತಾಂಶ
ಡಾ.ಯತೀಂದ್ರ ಸಿದ್ದರಾಮಯ್ಯ (ಕಾಂಗ್ರೆಸ್)- 96, 435
ತೋಟದಪ್ಪ ಬಸವರಾಜು (ಬಿಜೆಪಿ)- 37, 819
ಅಭಿಷೇಕ್ ಎಸ್.ಮಣೇಗಾರ್ (ಜೆಡಿಎಸ್) - 28123
(ಇದಲ್ಲದೇ ಇನ್ನೂ 20 ಮಂದಿ ಕಣದಲ್ಲಿದ್ದರು)