ಬಿಸಿಲು ನಾಡು ಯಲಬುರ್ಗಾಕ್ಕೆ ಬಂದ ಕೃಷ್ಣೆ; ಸಂಭ್ರಮಿಸಿದ ರೈತರು

By Kannadaprabha News  |  First Published Mar 2, 2023, 10:51 AM IST

ಬಿಸಿಲುನಾಡು ಯಲಬುರ್ಗಾಕ್ಕೆ ದೂರದ ಕೃಷ್ಣಾ ನದಿಯಿಂದ ನೀರು ಬಂದಿದೆ. ಯಲಬುರ್ಗಾ ತಾಲೂಕಿನ ಹಗೆದಾಳ ಗ್ರಾಮದ ಬಳಿ ಜಾಕ್‌ವೆಲ್‌ನಲ್ಲಿ ಬುಧವಾರ ನೀರು ಉಕ್ಕುತ್ತಿದ್ದಂತೆಯೇ ರೈತರು, ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಪಟಾಕಿ ಸಿಡಿಸಿ ಖುಷಿ ಪಟ್ಟಿದ್ದಾರೆ.


ಸೋಮರಡ್ಡಿ ಅಳವಂಡಿ

ಕೊಪ್ಪಳ (ಮಾ.2) : ಬಿಸಿಲುನಾಡು ಯಲಬುರ್ಗಾಕ್ಕೆ ದೂರದ ಕೃಷ್ಣಾ ನದಿಯಿಂದ ನೀರು ಬಂದಿದೆ. ಯಲಬುರ್ಗಾ ತಾಲೂಕಿನ ಹಗೆದಾಳ ಗ್ರಾಮದ ಬಳಿ ಜಾಕ್‌ವೆಲ್‌ನಲ್ಲಿ ಬುಧವಾರ ನೀರು ಉಕ್ಕುತ್ತಿದ್ದಂತೆಯೇ ರೈತರು, ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಪಟಾಕಿ ಸಿಡಿಸಿ ಖುಷಿ ಪಟ್ಟಿದ್ದಾರೆ.

Tap to resize

Latest Videos

undefined

ಈಗ ಪ್ರಾರಂಭವಾಗಿರುವ ‘ಕೊಪ್ಪಳ ಏತ ನೀರಾವರಿ ಯೋಜನೆ(Koppal lift irrigation project)’ಯಿಂದ ಯಲಬುರ್ಗಾ(Yalburga) ತಾಲೂಕಿನ 22 ಕೆರೆಗಳು ಭರ್ತಿಯಾಗಲಿವೆ. ಇದರಿಂದ ಬಯಲುನಾಡು, ಬಿಸಿಲುನಾಡು ಯಲಬುರ್ಗಾ ತಾಲೂಕಿಗೆ ನೀರಾವರಿ ಭಾಗ್ಯ ಇಲ್ಲವೇ ಇಲ್ಲ ಎನ್ನುವ ಕೊರಗನ್ನು ಕೃಷ್ಣೆ ನೀಗಿಸಲಿದ್ದಾಳೆ.

Koppal: ಸಾವಿರಾರು ಕೋಟಿ ರು. ಯೋಜನೆಗೆ ಮೋದಿ ಚಾಲನೆ?

ಬಚಾವತ್‌ ತೀರ್ಪಿ(Bachawat judgment)ನಿಂದಾಗಿ ಕೃಷ್ಣಾ ನದಿ ನೀರು ಹಂಚಿಕೆ(Krishna river water sharing)ಯಲ್ಲಿ ರಾಜ್ಯದ ‘ಬಿ ಸ್ಕೀಂ’ ಯೋಜನೆಯಲ್ಲಿ ಹಂಚಿಕೆಯಾಗಿದ್ದ ನೀರು ಬಳಕೆಗೆ 9 ಯೋಜನೆಗಳನ್ನು ರೂಪಿಸಲಾಗಿದೆ. ಇದರಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯೂ ಒಂದು. ಪ್ರಾರಂಭದಲ್ಲಿ 11.5 ಟಿಎಂಸಿ ಇದ್ದದ್ದನ್ನು 12.815 ಟಿಎಂಸಿಗೆ ಹೆಚ್ಚಿಸಿ ನೀರು ಹಂಚಿಕೆ ಮಾಡಲಾಗಿದೆ. ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಎರಡು ಹಂತದಲ್ಲಿ ಲಿಫ್‌್ಟಮಾಡಿ, ಈ ಯೋಜನೆಗೆ ನೀರು ಪೂರೈಕೆ ಮಾಡಲಾಗುತ್ತದೆ.

2013ರ ಜನವರಿಯಲ್ಲಿ ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagadish shettar) ಹಾಗೂ ಈಗಿನ ಮುಖ್ಯಮಂತ್ರಿ ಹಾಗೂ ಆಗಿನ ಜಲಸಂಪನ್ಮೂಲ ಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಉಪಸ್ಥಿತಿಯಲ್ಲಿ . 1310 ಕೋಟಿ ವೆಚ್ಚದ ಈ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು. ಅದಾದ ನಂತರ ಪ್ರಗತಿ ನನೆಗುದಿಗೆ ಬಿದ್ದಿತು. ಈಗ ಸಚಿವ ಹಾಲಪ್ಪ ಆಚಾರ್‌(Halappa achar) ಅವರ ಪ್ರಯತ್ನದ ಫಲವಾಗಿ ಯೋಜನೆ ತೀವ್ರಗತಿಯಲ್ಲಿ ಜಾರಿಗೊಂಡು ಜಾರಿಯಾಗುತ್ತಿದೆ. ಮೂರು ಹಂತಗಳಲ್ಲಿ . 3001 ಕೋಟಿ ಪೈಕಿ . 2655 ಕೋಟಿ ವೆಚ್ಚವಾಗಿದ್ದು, ಶೇ.88.47ರಷ್ಟುಆರ್ಥಿಕ ಪ್ರಗತಿ ಸಾಧಿಸಿ, ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.

ಯಾವ ಕೆರೆಗೆ ನೀರು?:

ಯಲಬುರ್ಗಾ ತಾಲೂಕಿನ ಬಸಾಪುರ, ಬಳೂಟಗಿ, ಯಲಬುರ್ಗಾದ ಕೆಂಪುಕೆರೆ, ಕುದರಿಕೊಟಗಿ, ಮಲಕಸಮುದ್ರ, ಬುನಕೊಪ್ಪ, ದಮ್ಮೂರು, ತಲ್ಲೂರು, ಚಿಕ್ಕಮ್ಯಾಗೇರಿ, ಮುರುಡಿ, ಬೆನಕಲ್‌, ಬೇವೂರು ಒಳಗೊಂಡು ಸುಮಾರು 22 ಕೆರೆಗಳಿಗೆ ನೀರು ಭರ್ತಿಯಾಗಲಿವೆ.

ಇದರಿಂದ ಯಲಬುರ್ಗಾ ತಾಲೂಕಿನ ವ್ಯಾಪ್ತಿಯ ಅರ್ಧ ಭಾಗಕ್ಕೆ ನೀರು ಪೂರೈಕೆಯಾಗಲಿದೆ ಎನ್ನುವುದು ಅಲ್ಲಿಯ ಜನರ ಸಂತಸವನ್ನು ಇಮ್ಮಡಿಗೊಳಿಸಿದೆ.

ಇದಲ್ಲದೆ, ಕೊಪ್ಪಳ ಜಿಲ್ಲೆಯ ಕೊಪ್ಪಳ, ಕನಕಗಿರಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಯನ್ನೊಳಗೊಂಡು 72 ಕೆರೆಗಳು ಭರ್ತಿ ಮಾಡುವ ಯೋಜನೆಯೂ ಪ್ರಗತಿಯಲ್ಲಿದೆ.

ಬಹುವರ್ಷಗಳ ಕನಸು-ನನಸು:

ಯಲಬುರ್ಗಾ ತಾಲೂಕಿಗೆ ಕೃಷ್ಣಾ ನದಿಯ ನಾರಾಯಣಪುರ ಜಲಾಶಯ(Narayanpura Reservoir)ದ ಹಿನ್ನೀರಿನಿಂದ ನೀರು ಬರುತ್ತದೆ ಎನ್ನುವುದು ತಾಲೂಕಿನ ಜನರಲ್ಲಿ ಕನಸಾಗಿಯೇ ಉಳಿದಿತ್ತು. ಇದು ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿತ್ತು. ಆದರೆ, ಈಗ ಅದು ಸಾಕಾರಗೊಡಿರುವುದರಿಂದ ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಹೀಗೆ ಬಂದಿರುವ ನೀರು ಈಗ ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಕೆಯಾಗುತ್ತದೆ. ಮುಂದಿನ ದಿನಗಳಲ್ಲಿ ನೀರಾವರಿಗೆ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಮೂಡಿದೆ. ಕೆರೆ ತುಂಬಿಸುವುದರಿಂದ ಅಂತರ್ಜಲ ವೃದ್ಧಿಯಾಗುತ್ತದೆ ಎನ್ನುತ್ತಾರೆ ಸ್ಥಳೀಯ ರೈತರು.

Karnataka election: ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ ಜನಾರ್ದನರೆಡ್ಡಿ

ಪ್ರಧಾನಿಯಿಂದ ಚಾಲನೆ:

ಈಗ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಮಾಚ್‌ರ್‍ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಚಾಲನೆ ನೀಡಲಿದ್ದಾರೆ.

ನಮಗಂತೂ ತುಂಬ ಸಂತೋಷವಾಗಿದೆ. ನಮ್ಮೂರಿಗೆ ನೀರು ಬರುತ್ತದೆ ಅಂದುಕೊಂಡಿರಲೇ ಇಲ್ಲ. ದೂರದ ಕೃಷ್ಣಾ ನದಿಯಿಂದ ಇಲ್ಲಿಗೆ ಹೇಗೆ ನೀರು ಬರಲು ಸಾಧ್ಯ ಎಂದಿದ್ದೆವು. ಆದರೆ, ಈಗ ನಮ್ಮೂರಿನ ಪಕ್ಕದ ಜಾಕ್‌ವೆಲ್‌ನಲ್ಲಿ ನೀರು ಉಕ್ಕುತ್ತಿರುವುದನ್ನು ನೋಡಿ ಖುಷಿಯಾಗಿದೆ.

-ಕಳಕಪ್ಪ ಗೌಡ್ರ, ಹಗೆದಾಳ ಗ್ರಾಮಸ್ಥ

ಕೊಟ್ಟಮಾತಿನಂತೆ ನೀರು ತಂದಿದ್ದೇನೆ. ಸತತ ಪ್ರಯತ್ನ ಮಾಡಿದ್ದೇನೆ. ಅನೇಕ ಅಪಮಾನ ಅನುಭವಿಸಿದ್ದೇನೆ. ನೀರೇ ಬರುವುದಿಲ್ಲ, ಅಡಿಗಲ್ಲು ಅಲ್ಲ, ಅಡ್ಡಗಾಲು ಎಂದವರ ಎದುರು ನೀರು ತಂದಿರುವುದು ಖುಷಿಯಾಗಿದೆ.

-ಹಾಲಪ್ಪ ಆಚಾರ್‌, ಸಚಿವ

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಆಗಿರುವ ಯೋಜನೆ ಇದಾಗಿದೆ. ಆಗಲೇ ಟೆಂಡರ್‌ ಕರೆಯಲಾಗಿತ್ತು. ಆನಂತರ ಬಂದ ಸರ್ಕಾರದಲ್ಲಿ ಜಾರಿಯಾಗಿದೆ. ಇದು ಯಾವುದೇ ಒಬ್ಬ ಶಾಸಕರ ಕಾರ್ಯವಲ್ಲ, ಸರ್ಕಾರದ ಕಾರ್ಯ. ಕುಡಿಯುವ ನೀರಿಗಾಗಿ ಕೆರೆ ತುಂಬಿಸುವ ಯೋಜನೆಯಾಗಿದೆ. ಇದರಲ್ಲಿ ವೋಟ್‌ ರಾಜಕೀಯ ಮಾಡಬಾರದು.

-ಬಸವರಾಜ ರಾಯರಡ್ಡಿ, ಮಾಜಿ ಸಚಿವ

 ಕೊಟ್ಟಮಾತಿನಂತೆ ಕೃಷ್ಣೆ ನೀರನ್ನು ತಂದಿದ್ದೇನೆ : ಹಾಲಪ್ಪ ಆಚಾರ್‌

ಚುನಾವಣೆ ಪೂರ್ವದಲ್ಲಿ ರೈತರಿಗೆ ಕೊಟ್ಟಮಾತಿನಂತೆ ಕೃಷ್ಣೆಯ ನೀರನ್ನು ತಂದು ಕೆರೆಯ ಒಡಲಿಗೆ ತುಂಬಿಸಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ತಾಲೂಕಿನ ಹಗೇದಾಳ ಗ್ರಾಮದಲ್ಲಿ ಬುಧವಾರ ಕೊಪ್ಪಳ ಏತ ನೀರಾವರಿ ಯೋಜನೆಯ ಹಗೇದಾಳ ಗ್ರಾಮದ ಜಾಕ್‌ವೆಲ್‌ಗೆ ನೀರು ಬಂದಿರುವುದಕ್ಕೆ ಗಂಗಾಪೂಜೆ ನೆರವೇರಿಸಿ, ಆನಂತರ ನಡೆದ ಅಧಿಕಾರಿಗಳ ಹಾಗೂ ರೈತರ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದ ಅನ್ನದಾತರಿಗೆ ಕೊಟ್ಟಮಾತಿನಂತೆ ಬರದ ನಾಡಿಗೆ ಕೃಷ್ಣೆಯನ್ನು ಹರಿಸುವ ಮೂಲಕ ಸದ್ಯದಲ್ಲಿಯೇ ತಾಲೂಕಿನ ಎಲ್ಲ ಕೆರೆಗೆ ನೀರು ತುಂಬಿಸಲಾಗುವುದು ಎಂದರು.

2013ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹಾಗೂ ಇಂದಿನ ಮುಖ್ಯಮಂತ್ರಿ, ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ತಾಲೂಕಿನ ಬೇವೂರು ಗ್ರಾಮಕ್ಕೆ ಕರೆಯಿಸಿ ಶಂಕುಸ್ಥಾಪನೆ ಮಾಡಿದಾಗ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅಡಿಗಲ್ಲು ಅಲ್ಲ, ಅದು ಅಡ್ಡಗಾಲು ಎಂದು ಟೀಕೆ ಮಾಡಿದ್ದರು. ಸತ್ಯ ಹರಿಶ್ಚಂದ್ರ ಬಂದರೂ ಕ್ಷೇತ್ರಕ್ಕೆ ನೀರು ಬರಲ್ಲ ಎಂದು ಲೇವಡಿ ಮಾಡಿದ್ದರು ಎಂದು ರಾಯರಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ನಡೆಸಿ ಐದು ವರ್ಷ ಅಧಿಕಾರ ಪೂರ್ಣಗೊಳಿಸಿದರೂ ನಯಾಪೈಸೆ ಅನುದಾನ ನೀಡಲಿಲ್ಲ. ಇದೀಗ ಯೋಜನೆ ಯಶಸ್ವಿಯಾಗುತ್ತಿದ್ದಂತೆಯೇ ನಾನು ಮಾಡಿದ ಯೋಜನೆ ಎಂದು ಉಲ್ಟಾಹೊಡೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕ್ಷೇತ್ರದ ಜನತೆ ಸತ್ಯವನ್ನು ಅರ್ಥ ಮಾಡಿಕೊಂಡಿದ್ದಾರೆ. ಶೀಘ್ರದಲ್ಲಿ ಯಲಬುರ್ಗಾ ಬ್ರ್ಯಾಂಚ್‌ ಮೂಲಕ ಕೆರೆಗಳಿಗೆ ನಾಲ್ಕೈದು ದಿನಗಳಲ್ಲಿ ನೀರು ಹರಿಸುತ್ತೇವೆ. ಕ್ಷೇತ್ರದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಲಾಗಿದೆ ಎಂದರು.

ಕುಣಿದು ಕುಪ್ಪಳಿಸಿದ ಸಚಿವ ಹಾಲಪ್ಪ ಆಚಾರ:

ಮೊದಲ ಬಾರಿಗೆ ಕ್ಷೇತ್ರದ ಹಗೇದಾಳ ಗ್ರಾಮದ ಹತ್ತಿರ ಸ್ಥಾಪಿಸಲಾದ ಕೆರೆ ತುಂಬಿಸುವ ಯೋಜನೆ ಜಾಕ್‌ವೆಲ್‌ಗೆ ನೀರು ಬಂದಿರುವುದಕ್ಕೆ ಈ ಭಾಗದ ರೈತರು ಸಚಿವ ಹಾಲಪ್ಪ ಆಚಾರ ಅವರನ್ನು ಗೌರವಿಸಿದರು. ಬಳಿಕ ರೈತ ಗೀತೆಗೆ ಸಚಿವ ಹಾಲಪ್ಪ ಆಚಾರ ರೈತರೊಂದಿಗೆ ಕುಣಿದು ಕುಪ್ಪಳಿಸಿರುವುದು ಎಲ್ಲರ ಗಮನ ಸೆಳೆಯಿತು.

 

ರೈತರ ಸಂಕಷ್ಟಅರಿಯದ ರಾಯರಡ್ಡಿ: ಸಚಿವ ಹಾಲಪ್ಪ ಆಚಾರ್

ಈ ಸಂದರ್ಭದಲ್ಲಿ ಕೃಷ್ಣಾ ಭಾಗ್ಯ ಜಲನಿಗಮದ ಇಇ ಬಿರಾದಾರ, ಚೆನ್ನಪ್ಪ, ಮುರಳಿ ಮೋಹನ, ತಹಸೀಲ್ದಾರ್‌ ವಿಠ್ಠಲ ಚೌಗಲಾ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ, ಮುಖಂಡರಾದ ಬಸವಲಿಂಗಪ್ಪ ಭೂತೆ, ಆರ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಸವರಾಜ ರಾಜೂರು, ಕಳಕಪ್ಪ ಕಂಬಳಿ, ವೀರಣ್ಣ ಹುಬ್ಬಳ್ಳಿ, ರತನ ದೇಸಾಯಿ, ವಿಶ್ವನಾಥ ಮರಿಬಸಪ್ಪನವರ, ಶಿವಶಂಕರರಾವ್‌ ದೇಸಾಯಿ, ಶಿವಕುಮಾರ ನಾಗಲಾಪುರಮಠ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ, ಶಿವಣ್ಣ ವಾದಿ, ರಂಗನಾಥ ವಲ್ಮಕೊಂಡಿ, ಶ್ರೀನಿವಾಸ ತಿಮ್ಮಾಪುರ, ಬಾಪುಗೌಡ ಪಾಟೀಲ, ಸುರೇಶ ಹೊಸಳ್ಳಿ, ಈಶಪ್ಪ ವಕ್ಕಳದ, ಶ್ರೀಕಾಂತ ಅಂಕಲಿ, ಚಿದಾನಂದ ಮ್ಯಾಗಳಮನಿ ಮತ್ತಿತರರು ಇದ್ದರು.

click me!