
ಕೊಪ್ಪಳ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (KRIDL) ದಲ್ಲಿ ಕೇಳಿಬಂದಿರುವ ಸುಮಾರು ₹72 ಕೋಟಿ ಹಗರಣದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಪ್ಪಳ ಜಿಲ್ಲೆಯ ಪ್ರವಾಸ ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಆಗಸ್ಟ್ ತಿಂಗಳ 4ನೇ ತಾರೀಖಿಗೆ ಸಿಎಂ ಕೊಪ್ಪಳಕ್ಕೆ ಭೇಟಿ ನೀಡಬೇಕಾಗಿತ್ತು. ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಉದ್ದೇಶವಿತ್ತು. ಆದರೆ, ಪ್ರವಾಸಕ್ಕೆ ಮುನ್ನವೇ ಕೆಆರ್‌ಐಡಿಎಲ್‌ನಲ್ಲಿ ಭಾರಿ ಅಕ್ರಮ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಪ್ರವಾಸ ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಈ ಅಕ್ರಮ ಪ್ರಕರಣ ಸಂಬಂಧ EE ZM ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ನೌಕರ ಕಳಕಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ಕೆಆರ್‌ಐಡಿಎಲ್ ಅಧಿಕಾರಿಗಳೇ ದೂರು ನೀಡಿದ್ದಾರೆ. ಕಳಕಪ್ಪ ನಿಡಗುಂದಿಯ ಹೆಸರಿನಲ್ಲಿ ನೂರಾರು ಕೋಟಿ ಮೌಲ್ಯದ ಆಸ್ತಿಗಳನ್ನು ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ಸಹಾಯಕನಾಗಿದ್ದ ಕಳಕಪ್ಪ ನಿಡಗುಂದಿ ಪ್ರತಿ ತಿಂಗಳು ₹15 ಸಾವಿರ ವೇತನ ಪಡೆಯುತ್ತಿದ್ದ. ಆದರೆ, ಇತನ ನೂರಾರು ಕೋಟಿ ಆಸ್ತಿ ನೋಡಿದ ಲೋಕಾಯುಕ್ತ ಅಧಿಕಾರಿಗಳೇ ಬೆರಗಾಗಿದ್ದಾರೆ.
ಈ ಪ್ರಕರಣದ ತನಿಖೆ ಈಗಾಗಲೇ ಆರಂಭವಾಗಿದ್ದು, ಶೀಘ್ರದಲ್ಲೇ ತನಿಖೆ ಪೂರ್ಣಗೊಳಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರವೇ ಸಿಎಂ ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಸಿಎಂ ಆಗಸ್ಟ್ 16 ರಂದು ಕೊಪ್ಪಳ ಜಿಲ್ಲೆಗೆ ಬರುವ ನಿರೀಕ್ಷೆಯಿದೆ. ಆದಾಗ್ಯೂ, ತನಿಖೆ ಸಮಯಕ್ಕೆ ಪೂರ್ಣಗೊಳ್ಳದಿದ್ದರೆ ಈ ಪ್ರವಾಸ ಮತ್ತೊಮ್ಮೆ ಮುಂದೂಡಲ್ಪಡುವ ಸಾಧ್ಯತೆ ಇದೆ.
ಕೆಆರ್‌ಐಡಿಎಲ್‌ನಲ್ಲಿ ನಡೆದಿರುವ ರೂ.72 ಕೋಟಿ ಮೊತ್ತದ ಅಕ್ರಮ ಪ್ರಕರಣದ ತನಿಖೆಗೆ ಲೋಕಾಯುಕ್ತ ಎಸ್‌ಪಿ ಸತೀಶ್ ಚಿಟಗುಪ್ಪಿ ಅವರು ನೇರವಾಗಿ ಫೀಲ್ಡ್‌ಗೆ ಇಳಿದಿದ್ದಾರೆ.
ಈ ಸಂಬಂಧ ಅವರು ಲೋಕಾಯುಕ್ತ ಕಚೇರಿಯಿಂದಲೇ ಪರಿಶೀಲನೆ ನಡೆಸುತ್ತಿದ್ದು, ತನಿಖೆಯನ್ನು ಗಂಭೀರವಾಗಿ ಮುಂದುವರೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಆರ್‌ಐಡಿಎಲ್ ಇಂಜಿನಿಯರ್‌ಗಳಾದ ಅನೀಲ ಪಾಟೀಲ್ ಮತ್ತು ಆನಂದ ಕಾರ್ಲಕುಂಟಿ ಅವರಿಂದ ವಿವರವಾದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಲೋಕಾಯುಕ್ತ ಎಸ್‌ಪಿ ಸತೀಶ್ ಚಿಟಗುಪ್ಪಿ ಅವರು, ಪ್ರಸ್ತುತ ತನಿಖೆಯ ಹಂತದಲ್ಲಿರುವ ಈ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು, ಕಾಮಗಾರಿಗಳ ವಿವರಗಳು ಹಾಗೂ ಹಣಕಾಸಿನ ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಈ ಹಿಂದೆ ಹೊರಗುತ್ತಿಗೆ ನೌಕರನಾದ ಕಳಕಪ್ಪ ವಿರುದ್ಧವೂ ಲೋಕಾಯುಕ್ತ ಪೊಲೀಸರು ಭಾರೀ ಆಸ್ತಿ ಪತ್ತೆ ಮಾಡಿದ್ದಾರೆ. ಇದೀಗ ತನಿಖೆ ಇನ್ನಷ್ಟು ವೇಗ ಪಡೆದುಕೊಂಡಿದ್ದು, ಶೀಘ್ರದಲ್ಲೇ ಮಹತ್ವದ ಬೆಳವಣಿಗೆಗಳ ನಿರೀಕ್ಷೆ ವ್ಯಕ್ತವಾಗಿದೆ.