
ವರದಿ: ಎಂ.ಕೆ.ಹರಿಚರಣ್ ತಿಲಕ್
ಕೆ.ಆರ್.ಪೇಟೆ: ನೀರಾವರಿ ಇಲಾಖೆಯ ನಿರ್ಲಕ್ಷ್ಯ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯ ಕೈಚಳಕದಿಂದ ಪಟ್ಟಣದ ವ್ಯಾಪ್ತಿ ಹಾದು ಹೋಗಿರುವ ಹೇಮಾವತಿ ಎಡದಂಡೆ ನಾಲಾ ವ್ಯಾಪ್ತಿ ಅತಿಕ್ರಮಣವಾಗಿರುವ ವಿತರಣಾ ನಾಲೆಗಳನ್ನು ಮುಚ್ಚಿ ಒತ್ತುವರಿದಾರರು ಅಕ್ರಮ ಕಟ್ಟಡಗಳನ್ನು ನಿರ್ಮಿಸಲು ಮುಂದಾಗುತ್ತಿದ್ದಾರೆ.
ಹೇಮಾವತಿ ಮುಖ್ಯ ಕಾಲುವೆಯ 55ನೇ ವಿತರಣಾ ನಾಲೆ ಪಟ್ಟಣದ ಹೊರವಲಯದಲ್ಲಿ ಹಾದುಹೋಗಿದೆ. ನಾಲೆ ಒಂದು ಭಾಗ ಪಟ್ಟಣದ ಚೌಡೇಶ್ವರಿ ದೇವಾಲಯದ ಹಿಂಭಾಗದಿಂದ ಸರ್ಕಾರಿ ಪಾಲಿಟೆಕ್ನಿಕ್ ಹಿಂದಿನಿಂದ ಹೊಸಹೊಳಲು ಚಿಕ್ಕಕೆರೆಗೆ ನೀರು ತುಂಬಿಸುತ್ತದೆ. ಕಾಲುವೆಯ ಮತ್ತೊಂದು ಉಪ ನಾಲೆ ಪಟ್ಟಣಕ್ಕೆ ಹೊಂದಿಕೊಂಡಂತೆ ಗೋವಿಂದೇಗೌಡನ ಕೊಪ್ಪಲು ಮೂಲಕ ಕತ್ತರಘಟ್ಟ ಹಳ್ಳ ಸೇರುತ್ತದೆ. ಈ ಎರಡೂ ವಿತರಣಾ ನಾಲೆಗಳು ಪಟ್ಟಣ ವ್ಯಾಪ್ತಿಗೆ ಸಂಪರ್ಕ ಹೊಂದಿವೆ. ನಾಲೆಗಳ ಆಸುಪಾಸು ವಸತಿ ಮನೆಗಳು ತಲೆಯೆತ್ತುತ್ತಿವೆ. ನಾಲೆ ಪಟ್ಟಣ ವ್ಯಾಪ್ತಿ ಹಾದು ಹೋಗಿರುವುದರಿಂದ ಇಲ್ಲಿನ ಭೂಮಿಗೆ ಬಂಗಾರವನ್ನೂ ಮೀರಿಸಿದ ಬೆಲೆ ಇದೆ. ನಾಲೆ ಎರಡೂ ಬದಿಗಳಲ್ಲೂ ನಿಯಮಾನುಸಾರ ಸರ್ವೀಸ್ ರಸ್ತೆಯಿದ್ದು ತಮ್ಮ ಭೂಮಿಯನ್ನು ನಿವೇಶನವನ್ನಾಗಿಸಿಕೊಳ್ಳಲು ನಾಲೆ ಆಸುಪಾಸಿನ ರೈತರು ಕಾಲುವೆಯನ್ನೇ ಮುಚ್ಚುತ್ತಿದ್ದಾರೆ. ಇದರಿಂದ ಹೊಸಹೊಳಲು ಚಿಕ್ಕಕೆರೆಗೆ ನೀರು ತಲುಪದಂತಾಗಿದೆ.
ಕಾಲುವೆಯನ್ನು ರೈತರು ರಾಜಾರೋಷವಾಗಿ ಮುಚ್ಚಿ ಅದನ್ನು ಅಕ್ರಮ ನಿವೇಶನಗಳನ್ನಾಗಿ ಮಾಡಿಕೊಳ್ಳುತ್ತಿದ್ದರೂ ನೀರಾವರಿ ಇಲಾಖೆ ಇಂಜಿನಿಯರುಗಳು ತಮ್ಮ ಆಸ್ತಿ ರಕ್ಷಣೆಗೆ ಮುಂದಾಗುತ್ತಿಲ್ಲ. ಪಟ್ಟಣದ ರಾಮಯ್ಯ ಕಾಲೋನಿ ಪಕ್ಕದಲ್ಲಿನ ಕಾಲುವೆ ಚರಂಡಿಯಾಗಿ ಪರಿವರ್ತನೆಯಾಗಿದೆ. ಈ ಭಾಗದಲ್ಲಿ ಬಲ್ಯಾಢ್ಯರು ಕಾಲುವೆ ಮುಚ್ಚಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿ ವಾಸಿಸುತ್ತಿದ್ದಾರೆ.
ತಾಲೂಕಿನ ಗೋವಿಂದೇಗೌಡನ ಕೊಪ್ಪಲು ವ್ಯಾಪ್ತಿಯಲ್ಲಿ ಕಾಲುವೆ ಕುರುಹುಗಳೂ ಕಾಣದಂತೆ ಮಾಯವಾಗಿದೆ. ಗ್ರಾಮದ ಸರ್ವೇ ನಂ. 91/20 ಕ್ಕೆ ಸೇರಿದ ಕಾಲುವೆಯನ್ನು ಮುಚ್ಚಿ ಕಂದಾಯ ಇಲಾಖೆ ನಿವೃತ್ತ ಶಿರಸ್ತೇದಾರನೊಬ್ಬ ಅಕ್ರಮ ಖಾತೆ ಮಾಡಿಸಿಕೊಂಡು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿರುವುದು ಬಯಲಿಗೆ ಬಂದಿದೆ.
ಕಂದಾಯ ಇಲಾಖೆ ಶಿರಸ್ತೇದಾರನಿಂದ ಜಾಗ ಕೊಂಡ ವ್ಯಕ್ತಿ ಅಲ್ಲಿ ಗೋಡೌನ್ ನಿರ್ಮಿಸಲು ಮುಂದಾಗಿದ್ದಾನೆ. ಕಾಲುವೆ ಜಾಗದಲ್ಲಿ ಗೋಡೌನ್ ನಿರ್ಮಿಸುವುದನ್ನು ವಿರೋಧಿಸಿ ಗ್ರಾಮದ ಕೆಲವರು ನೀರಾವರಿ ಇಲಾಖೆಗೆ ದೂರು ನೀಡಿದ್ದಾರೆ. ಪ್ರಕರಣ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ನೀರಾವರಿ ಇಲಾಖೆ ಇಂಜಿನಿಯರುಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗೋಡೌನ್ ನಿರ್ಮಿಸುತ್ತಿರುವ ಜಾಗ ಕಾಲುವೆಯಾಗಿದೆ. ಕಾಮಗಾರಿ ನಿಲ್ಲಿಸುವಂತೆ ಖಾಸಗಿ ವ್ಯಕ್ತಿಗೆ ನೋಟಿಸ್ ನೀಡಿದ್ದಾರೆ. ಸದರಿ ಜಾಗ ನೀರಾವರಿ ಇಲಾಖೆ ಕಾಲುವೆಯಾಗಿದೆ ಎಂದು ಸರ್ವೇ ಇಲಾಖೆಯು ಸ್ಥಳ ಸರ್ವೇ ಮಾಡಿ ದೃಢಪಡಿಸಿ ವರದಿ ನೀಡಿದೆ.
ಕಂದಾಯ ಇಲಾಖೆ ನಿವೃತ್ತ ಶಿರಸ್ತೇದಾರನ ಹೆಸರಿಗೆ ನೀರಾವರಿ ಇಲಾಖೆ ಕಾಲುವೆಯನ್ನು ಸ್ಕೆಚ್ ಮಾಡಿ ಖಾತೆ ಮಾಡಿಕೊಟ್ಟ ಸರ್ವೇ ಇಲಾಖೆ ಮತ್ತು ಕಂದಾಯ ಇಲಾಖೆ ನೌಕರರ ವಿರುದ್ಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಗೋವಿಂದೇಗೌಡನ ಕೊಪ್ಪಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೆ.ಆರ್.ಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನದ ಬೆಲೆ ಹೆಚ್ಚಿರುವುದರಿಂದ ಸಹಜವಾಗಿಯೇ ನಾಲೆ ಆಸುಪಾಸಿನ ಭೂ ಮಾಲೀಕರು ಕಾಲುವೆಯನ್ನು ಮುಚ್ಚುತ್ತಿದ್ದಾರೆ. ಈ ಬಗ್ಗೆ ಇಲಾಖೆ ಗಮನಕ್ಕೂ ಬಂದಿದೆ. ಕಾಲುವೆ ನಿರ್ಮಿಸಲು ಭೂ ಸ್ವಾಧೀನವಾಗಿರುವ ಭೂಮಿ ಸರ್ವೇ ಮಾಡಿಸಿ ಕಾಲುವೆ ಎರಡೂ ಬದಿಗಳಲ್ಲೂ ಇರುವ ಸರ್ವೀಸ್ ರಸ್ತೆಯ ಗಡಿ ಗುರುತಿಸಿ ಸರ್ಕಾರಿ ಆಸ್ತಿ ಸಂರಕ್ಷಣೆ ಮಾಡುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಎಚ್.ಟಿ.ಮಂಜು, ಶಾಸಕರು.
ಪಟ್ಟಣ ವ್ಯಾಪ್ತಿ ಹಾದುಹೋಗಿರುವ 55ನೇ ವಿತರಣಾ ನಾಲೆ ಅತಿಕ್ರಮಣವಾಗಿರುವ ಬಗ್ಗೆ ನಮಗೆ ಲಿಖಿತ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಮಾಡಿ ನಿರ್ಮಾಣವಾಗುತ್ತಿದ್ದ ಅಕ್ರಮ ಗೋಡೌನ್ ಕಾಮಗಾರಿಗೆ ಸಂಬಂಧಿಸಿದಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪಟ್ಟಣದ ರಾಮಯ್ಯ ಕಾಲೋನಿ ಹಿಂಭಾಗದಿಂದ ಹೊಸಹೊಳಲು ಚಿಕ್ಕಕೆರೆಯವರೆಗೂ ನಮ್ಮ ಕಾಲುವೆ ಅತಿಕ್ರಮಣವಾಗಿದೆ. ಈ ಕುರಿತು ಇಲಾಖೆ ಮೇಲಾಧಿಕಾರಿಗಳಿಗೆ ವರದಿ ಮಾಡಿದ್ದೇನೆ. ನಾಲೆ ಸರ್ವೇ ಕಾರ್ಯ ನಡೆಸಿ ಗಡಿ ಗುರುತಿಸಿಕೊಡುವಂತೆ ಕೋರಲಾಗಿದೆ.
ವಿಶ್ವನಾಥ್ , ಸಹಾಯಕ ಕಾರ್ಯಪಾಲಕ ಅಭಿಯಂತರ, ಎಚ್.ಎಲ್.ಬಿ.ಸಿ ನಂ.20 ವಿಭಾಗ