
ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ನಡೆದ ಕರ್ನಾಟಕ ರಾಜ್ಯ ಲೆಕ್ಕ ಮತ್ತು ಪರಿಶೋಧನಾ ಇಲಾಖೆಯ ಸಹಾಯಕ ನಿಯಂತ್ರಕರ (AC) ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಜ್ಞಾನೇಂದ್ರಕುಮಾರ್ ಅವರ ಅವಧಿಯಲ್ಲಿ ನಡೆದ ಈ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯನ್ನು ಬೆಳಗಾವಿ ಮೂಲದ ಪರೀಕ್ಷಾರ್ಥಿ ಚೇತನ ಚೋಪಡೆ ಸೇರಿದಂತೆ ಹಲವು ಅಭ್ಯರ್ಥಿಗಳು ಪ್ರಶ್ನಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
2025ರ ಏಪ್ರಿಲ್‌ನಲ್ಲಿ ಎಸಿ-ಎಸ್‌ಎಎಡಿ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಆದರೆ, ಸುಮಾರು 17 ತಿಂಗಳುಗಳ ಕಾಲ ಫಲಿತಾಂಶವನ್ನು ವಿಳಂಬಗೊಳಿಸಿ, ಇತ್ತೀಚೆಗೆ ಸೆಪ್ಟೆಂಬರ್ 3ರಂದು 1:3 ಪ್ರಮಾಣದ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಹಲವು ಅಕ್ರಮಗಳ ವಾಸನೆ ಹೊಡೆಯುತ್ತಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.
ಅಂಕ ಹಾಗೂ ಕಟ್-ಆಫ್ ವಿವರ ಅಪೂರ್ಣ: ಪ್ರಿಲಿಮ್ಸ್ ಪರೀಕ್ಷೆಯ ಕಟ್-ಆಫ್ ಅಂಕಗಳು ಮತ್ತು ವರ್ಗವಾರು ವಿವರಗಳನ್ನು ಪ್ರಕಟಿಸಿಲ್ಲ. ಜೊತೆಗೆ ಆಯ್ಕೆಯಾಗದ ಅಭ್ಯರ್ಥಿಗಳ ಅಂಕಗಳು ಮತ್ತು ವರ್ಗವಾರು ಮಾಹಿತಿಗಳನ್ನು ಬಹಿರಂಗಪಡಿಸದೆ, ಕೇವಲ ಆಯ್ಕೆಯಾದವರ ವಿವರಗಳನ್ನು ಮಾತ್ರ ಪ್ರಕಟಿಸಲಾಗಿದೆ.
ಶಂಕಾಸ್ಪದ ಪತ್ರಿಕಾ ಪ್ರಕಟಣೆ: ಮೌಲ್ಯಮಾಪನ ಮುಗಿದು ಎರಡು ತಿಂಗಳು ಕಳೆದ ನಂತರ, ಅಂದರೆ ಸೆಪ್ಟೆಂಬರ್ 9ರಂದು "ಅಭ್ಯರ್ಥಿಯೊಬ್ಬರು ನಿಯಮ ಉಲ್ಲಂಘಿಸಿದ್ದಾರೆ" ಎಂದು ಕೆಪಿಎಸ್‌ಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರ‍್ಯಾಂಕಿಂಗ್ ಸರಣಿಯಲ್ಲಿ ವ್ಯತ್ಯಾಸ: ಆಯ್ಕೆಯಾದವರ ಪಟ್ಟಿಯಲ್ಲಿ 40ಕ್ಕೂ ಹೆಚ್ಚು ಅಭ್ಯರ್ಥಿಗಳ ರ‍್ಯಾಂಕ್ ಸೀರಿಯಲ್ ನಂಬರ್ ಸರಣಿ ಒಂದೇ ರೀತಿಯಲ್ಲಿರುವುದು ದೊಡ್ಡ ಮಟ್ಟದ ಅಕ್ರಮದ ಶಂಕೆಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಮೀಸಲಾತಿ ನಿಯಮಗಳ ಪಾಲನೆ ಹಾಗೂ ಫಲಿತಾಂಶ ವಿಳಂಬದ ಕುರಿತು ಸ್ವತಂತ್ರ ತನಿಖೆಯಾಗಬೇಕು ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಈ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಅಭ್ಯರ್ಥಿ ಚೇತನ್ ಚೋಪಡೆ ಒತ್ತಾಯಿಸಿದ್ದಾರೆ.
ಇದೇ ವೇಳೆ, ಕೆಪಿಎಸ್‌ಸಿ ನೇಮಕಾತಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಜ್ಞಾನೇಂದ್ರಕುಮಾರ್ ಮತ್ತು ಬಸವರಾಜ್ ಕನ್ನಾಳೆ ಅವರನ್ನು ನ್ಯಾಯಾಲಯದ ಅನುಮತಿ ಪಡೆದು ಇಡಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸತತ 6 ಗಂಟೆಗಳ ಕಾಲ ನಡೆದಿರುವ ಈ ವಿಚಾರಣೆಯಲ್ಲಿ, ನೇಮಕಾತಿ ಅಕ್ರಮದಲ್ಲಿ ನಡೆದಿದೆಯನ್ನಲಾದ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಮುಖ ದಾಖಲೆ ಹಾಗೂ ಮಾಹಿತಿಗಳನ್ನು ಕಲೆಹಾಕಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇಂದೂ ಕೂಡ ಇಡಿ ಅಧಿಕಾರಿಗಳು ಜೈಲಿಗೆ ತೆರಳಿ ಆರೋಪಿಗಳ ವಿಚಾರಣೆ ನಡೆಸುವ ಸಾಧ್ಯತೆಯಿದೆ.