ಲೂಟಿಕೋರ ಬಿಜೆಪಿಗೆ ತಕ್ಕ ಪಾಠ ಕಲಿಸಲು ಜನ ನಿರ್ಣಯ: ಸತೀಶ್‌ ಜಾರಕಿಹೊಳಿ

By Kannadaprabha NewsFirst Published Oct 16, 2021, 1:08 PM IST
Highlights

*  ಜನಸಂಕಷ್ಟಕ್ಕೆ ಮಿಡಿಯದ ಬಿಜೆಪಿ ಸರ್ಕಾರ
*  ಚಿಂತಾಜನಕ ಸ್ಥಿತಿಯಲ್ಲಿರುವ ರೈತರು 
*  ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲ 

ಹಾನಗಲ್‌(ಅ.16): ರಾಜ್ಯದಲ್ಲಿ ಕೊರೋನಾ(Coronavirus), ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಮತ್ತಿತರ ಕಾರಣಗಳಿಂದ ಜನ ತತ್ತರಿಸಿ ಹೋಗಿದ್ದರೂ ಸರಕಾರ ಜನಸಂಕಷ್ಟಕ್ಕೆ ಮಿಡಿಯುತ್ತಿಲ್ಲ. ಭ್ರಮನಿರಸಗೊಂಡಿರುವ ಜನ ಲೂಟಿಕೋರ ಬಿಜೆಪಿಗೆ(BJP) ತಕ್ಕ ಪಾಠ ಕಲಿಸಲು ನಿರ್ಣಯಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ(Satish Jarkiholi) ಹೇಳಿದ್ದಾರೆ. 

ಹಾನಗಲ್‌(Hanagal) ಉಪ ಚುನಾವಣೆ(Byelection) ಹಿನ್ನೆಲೆಯಲ್ಲಿ ಕಾಂಗ್ರೆಸ್‌(Congress) ಅಭ್ಯರ್ಥಿ ಶ್ರೀನಿವಾಸ್‌ ಮಾನೆ ಪರ ಕ್ಷೇತ್ರದ ಹರವಿ, ಕೂಡಲ, ಹರನಗಿರಿ, ಅಲ್ಲಾಪುರ ಸೇರಿದಂತೆ ಹಲವೆಡೆ ಮತಯಾಚನೆ(Campaign) ಕೈಗೊಂಡು ಮಾತನಾಡಿದರು.

ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೂ ನಿಯಂತ್ರಿಸುವಲ್ಲಿ ಬಿಜೆಪಿ ವಿಫಲಗೊಂಡಿದೆ. ಸರ್ಕಾರ ಎಲ್ಲ ರಂಗಗಳಲ್ಲಿಯೂ ತೀವ್ರ ಹಿನ್ನಡೆ ಅನುಭವಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪಕ್ಷದ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಮನೆ, ಮನೆಗಳಿಗೆ ತೆರಳಿ ಬಿಜೆಪಿ ವೈಫಲ್ಯದ ಬಗೆಗೆ ಮನವರಿಕೆ ಮಾಡಿಕೊಡಬೇಕಿದೆ. ಕಾಂಗ್ರೆಸ್‌ ಪಕ್ಷ ಶ್ರೀನಿವಾಸ್‌ ಮಾನೆ ಅವರಂಥ ಸಮರ್ಥ ಹಾಗೂ ಯೋಗ್ಯ ಅಭ್ಯರ್ಥಿ ಕಣಕ್ಕಿಳಿಸಿದ್ದು, ಕ್ಷೇತ್ರದ ಜನರ ಭಾವನೆಗಳಿಗೆ ಸ್ಪಂದಿಸಿ ಮನೆ ಮಗನಾಗಿರುವ ಮಾನೆ ಅವರ ಗೆಲುವಿಗೆ ಕೈ ಜೋಡಿಸುವಂತೆ ಕಿವಿಮಾತು ಹೇಳಿದರು.

ಹಾನಗಲ್‌ ಬೈ ಎಲೆಕ್ಷನ್: ಬಿಜೆಪಿಯಲ್ಲಿನ ಬಂಡಾಯ ಶಮನ, ಕಾಂಗ್ರೆಸ್‌ಗೆ ನಿರಾಸೆ

ಅಭ್ಯರ್ಥಿ ಶ್ರೀನಿವಾಸ್‌ ಮಾನೆ ಮಾತನಾಡಿ, ರೈತರು(Farmers) ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಆರ್ಥಿಕವಾಗಿ ಅಧೋಗತಿ ತಲುಪಿದ್ದಾರೆ. ಸರಕಾರದಿಂದ(Government) ಸಹಾಯ ಅಪೇಕ್ಷಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಜನವಿರೋಧಿ ಬಿಜೆಪಿ ವಿರುದ್ಧ ಹೋರಾಟ ರೂಪಿಸಲು ಕಾಂಗ್ರೆಸ್‌ಗೆ ಶಕ್ತಿ ತುಂಬುವಂತೆ ಮನವಿ ಮಾಡಿದ ಅವರು ಭರವಸೆ ಇಟ್ಟು ಅವಕಾಶ ಮಾಡಿಕೊಡಿ, ವಿಶ್ವಾಸ ಉಳಿಸಿಕೊಂಡು ಭರವಸೆಯಾಗಿ ನಿಲ್ಲುವೆ ಎಂದರು.

ಜಿಪಂ ಮಾಜಿ ಸದಸ್ಯ ನಿಂಗಪ್ಪ ಪೂಜಾರ, ಗನಿ ಪಟೇಲ್‌, ಸಂಗಪ್ಪ ತಳವಾರ, ಬಸವರಾಜ್‌ ಭದ್ರಣ್ಣನವರ, ಕಮಲವ್ವ ತಳವಾರ, ಪ್ರವೀಣ ಸಂತಣ್ಣನವರ, ತಿಪ್ಪಣ್ಣ ಮೊರೆ, ಸುರೇಶ್‌ ಸಂತಣ್ಣನವರ, ಮಂಜು ಚವ್ಹಾಣ, ಯಲ್ಲಪ್ಪ ಸಂತಣ್ಣನವರ, ಸುರೇಶ್‌ ವಾಲ್ಮೀಕಿ, ರಮೇಶ್‌ ವಾಲ್ಮೀಕಿ, ಮಂಜು ನೀರಲಗಿ, ಫಕ್ಕಿರೇಶ್‌ ಮಾಯಣ್ಣನವರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಇದ್ದರು.
 

click me!