ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮ ಹುಟ್ಟೂರಿನಲ್ಲಿ ಗಣೇಶ ಚತುರ್ಥಿಯಂದು ತಮ್ಮ ಪೂರ್ವಜರಿಗೆ ಪೂಜೆ ಸಲ್ಲಿಸಿದರು.
ಕನಕಪುರ (ಆ.24): ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ತಂದೆ ಡಿ.ಕೆ. ಕೆಂಪೇಗೌಡರು ಮತ್ತು ಪೂರ್ವಜರ ಸಮಾಧಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಗಣೇಶನ ಹಬ್ಬದ ದಿನದಂದು ಪೂಜೆ ಸಲ್ಲಿಸಿದರು.
ಬೆಂಗಳೂರಿನಿಂದ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಾಯಿ ಗೌರಮ್ಮ, ಪತ್ನಿ ಉಷಾ ಶಿವಕುಮಾರ್ ಅವರೊಂದಿಗೆ ಸೇರಿ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಿ ಎಡೆ ಇಟ್ಟರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರತಿವರ್ಷ ಗಣೇಶನ ಹಬ್ಬದ ದಿನ ನಮ್ಮ ತಂದೆ ಮತ್ತು ಪೂರ್ವಜರಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ ಹಾಗಾಗಿ ಇವತ್ತು ಕುಟುಂಬದವರ ಜೊತೆಗೆ ಬಂದು ಪೂಜೆ ಸಲ್ಲಿಸಿದ್ದೇನೆ. ಹಿರಿಯರಿಗೆ ಎಡೆ ಇಟ್ಟು ಆತ್ಮಕ್ಕೆ ಶಾಂತಿ ಕೋರಿ ಅವರ ಆಶೀರ್ವಾದ ಬೇಡಿದ್ದೇವೆ ಎಂದರು.
ಕಾಂಗ್ರೆಸ್‌ನಲ್ಲಿ ಆಂತರಿಕ ಬೆಳವಣಿಗೆ: ಸೋನಿಯಾಗೆ ಪತ್ರ ಬರೆದ ಡಿಕೆಶಿ...
ಈ ಬಾರಿ ಕೊರೋನಾ ಇರುವ ಹಿನ್ನೆಲೆ ಜನರು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಮ್ಮ ಸಂಪ್ರದಾಯಗಳು ಮುಖ್ಯ, ಆದರೆ, ಕೊರೋನಾ ಬಗ್ಗೆಯೂ ನಿಗಾ ಇರಲಿ ಎಂದು ಹೇಳಿದರು.
ಫೋನ್ ಟ್ಯಾಪಿಂಗ್ ನಡೆದಿಲ್ಲ ಎಂಬ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ನನಗೆ ನನ್ನ ಫೋನ್ ಟ್ಯಾಪ್ ಆಗುತ್ತಿದೆ ಎಂದು ಅನುಮಾನವಿದೆ. ಹಾಗಾಗಿ ದೂರು ಕೊಟ್ಟಿದ್ದೇನೆ. ಈ ಬಗ್ಗೆ ತನಿಖೆ ನಡೆಯಲಿ, ಆಮೇಲೆ ಮಾತನಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.