ಭಾಗಮಂಡಲದ ಬ್ರಹ್ಮಗಿರಿ ಬೆಟ್ಟಸೇರಿ ಜಿಲ್ಲೆಯ ಹಲವೆಡೆ ಗುರುವಾರ 20ಕ್ಕೂ ಹೆಚ್ಚು ಕಡೆ ಭೂಕುಸಿತ ಸಂಭವಿಸಿದೆ. ನೂರಾರು ಮರಗಳು ಧರೆಗುರುಳಿವೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕೇರಿ ಹರಿಯುತ್ತಿದ್ದು, ಭಾಗ ಮಂಡಲ ದ್ವೀಪಸದೃಶವಾಗಿದೆ. ಸಣ್ಣಪುಟ್ಟಹಳ್ಳಕೊಳ್ಳಗಳು ತುಂಬಿ ರಸ್ತೆ ಮೇಲೆ ಹರಿಯುತ್ತಿರುವುದರಿಂದ ಹಲವೆಡೆ ಸಂಚಾರ ಸ್ಥಗಿತಗೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಮಡಿಕೇರಿ(ಆ.07): ಎರಡು ವರ್ಷಗಳ ಹಿಂದೆ ಭಾರೀ ಮಳೆ, ಭೂ ಕುಸಿತದಿಂದ ಅಪಾರ ಹಾನಿ ಅನುಭವಿಸಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ಮತ್ತೆ ಪ್ರಕೃತಿ ವಿಕೋಪ ಉಂಟಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೊಡಗಲ್ಲಿ ಮತ್ತೆ ವ್ಯಾಪಕ ಭೂಕುಸಿತ ಉಂಟಾಗಿದ್ದು ಅಪಾರ ಹಾನಿ ಉಂಟು ಮಾಡಿದೆ.
ಭಾಗಮಂಡಲದ ಬ್ರಹ್ಮಗಿರಿ ಬೆಟ್ಟಸೇರಿ ಜಿಲ್ಲೆಯ ಹಲವೆಡೆ ಗುರುವಾರ 20ಕ್ಕೂ ಹೆಚ್ಚು ಕಡೆ ಭೂಕುಸಿತ ಸಂಭವಿಸಿದೆ. ನೂರಾರು ಮರಗಳು ಧರೆಗುರುಳಿವೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕೇರಿ ಹರಿಯುತ್ತಿದ್ದು, ಭಾಗ ಮಂಡಲ ದ್ವೀಪಸದೃಶವಾಗಿದೆ. ಸಣ್ಣಪುಟ್ಟಹಳ್ಳಕೊಳ್ಳಗಳು ತುಂಬಿ ರಸ್ತೆ ಮೇಲೆ ಹರಿಯುತ್ತಿರುವುದರಿಂದ ಹಲವೆಡೆ ಸಂಚಾರ ಸ್ಥಗಿತಗೊಂಡಿದೆ.
ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ದೇವಾಲಯದ ಬ್ರಹ್ಮಗಿರಿ ಬೆಟ್ಟದಲ್ಲಿ ಬುಧವಾರ ರಾತ್ರಿ ಭಾರೀ ಕುಸಿತ ಉಂಟಾಯಿತು. ಬೆಟ್ಟದ ತಳದಲ್ಲಿ ವಾಸವಾಗಿದ್ದ ದೇಗುಲದ ಪ್ರಧಾನ ಅರ್ಚಕರ ಮನೆ ಮೇಲೆ ಗುಡ್ಡ ಕುಸಿದು 5 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಅರ್ಚಕ ನಾರಾಯಣಾಚಾರ್ (80), ಪತ್ನಿ ಶಾಂತಾ (70), ಅವರ ಅಣ್ಣ ಆನಂದ ತೀರ್ಥ (86), ಉಳಿದ ಇಬ್ಬರು ಸಹಾಯಕ ಅರ್ಚಕರಾದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಶ್ರೀನಿವಾಸ ಪಡ್ಡಿಲ್ಲಾಯ, ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್‌ನ ರವಿಕಿರಣ್ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಇವರೆಲ್ಲರ ಹುಡುಕಾಟ ನಡೆದಿದೆ. ಮನೆಮುಂದಿದ್ದ 2 ಕಾರು, ಗ್ರಾಮಸ್ಥರ 20ಕ್ಕೂ ಅಧಿಕ ಹಸುಗಳು ಕಣ್ಮರೆಯಾಗಿವೆ. ದುರಂತದ ಅಗಾಧತೆ ನೋಡಿದರೆ ಕಣ್ಮರೆಯಾದವರು ಯಾರೂ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.
ಪ್ರವಾಹ ಪರಿಸ್ಥಿತಿ: ಕಳೆದ ಜುಲೈನಲ್ಲಿ ಮಳೆ ಕೊರತೆ ಎದುರಿಸಿದ್ದ ಜಿಲ್ಲೆಯಲ್ಲಿ ಸೋಮವಾರದಿಂದ ಸುರಿದ ಭಾರೀ ಮಳೆ ಜನ ಜೀವನ ಅಸ್ತವ್ಯಸ್ತಗೊಳಿಸಿದೆ. ಕುಶಾಲನಗರ, ಕರಡಿಗೋಡು, ಹೊದ್ದೂರು, ಬೇತ್ರಿ ಸೇರಿ ಹಲವೆಡೆ ಕಳೆದ ವರ್ಷದಂತೆ ಈ ಬಾರಿಯೂ ಪ್ರವಾಹ ಪರಿಸ್ಥಿತಿ ಆರಂಭವಾಗಿದೆ. ಸುಮಾರು 200ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಪರಿಹಾರ ಕೇಂದ್ರವನ್ನೂ ತೆರೆಯಲಾಗಿದೆ.
10 ಜಿಲ್ಲೆಗಳಲ್ಲಿ ಮಳೆ ಅಬ್ಬರ; 8 ಬಲಿ..!
ದ್ವೀಪಸದೃಶ ಭಾಗಮಂಡಲ: ಭಾಗಮಂಡಲದಲ್ಲಿ 2ನೇ ದಿನವೂ ಪ್ರವಾಹ ಮುಂದುವರಿದಿದ್ದು, ಭಾಗಮಂಡಲ-ತಲಕಾವೇರಿ, ನಾಪೋಕ್ಲು-ಅಯ್ಯಂಗೇರಿ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭಾಗಮಂಡಲದಿಂದ ತಲಕಾವೇರಿ ತೆರಳುವ ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಮಡಿಕೇರಿ-ವಿರಾಜಪೇಟೆ ರಸ್ತೆಯ ಬೇತ್ರಿಯಲ್ಲಿ ಕಾವೇರಿ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಾರಂಗಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳಹರಿಸುವ ಬರುತ್ತಿರುವ ಹಿನ್ನೆಲೆಯಲ್ಲಿ 11 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.
ಘನ ವಾಹನಕ್ಕೆ ನಿಷೇಧ: ಮಡಿಕೇರಿ-ಮಂಗಳೂರು ರಸ್ತೆಯ ಅಲ್ಲಲ್ಲಿ ಗುಡ್ಡಕುಸಿಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಣ್ಣು ತೆರವಾಗುವವರೆಗೂ ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಲಾಗಿದೆ.