ಸಿದ್ದರಾಮಯ್ಯ ವಿರುದ್ಧ ಎಚ್ಚರಿಕೆಯಿಂದ ಮಾತನಾಡಿ : ವಾರ್ನಿಂಗ್

By Kannadaprabha News  |  First Published Oct 18, 2021, 11:33 AM IST
  • ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುವಾಗ ಎಚ್ಚರಿಕೆಯಿಂದಿರಲಿ
  • ಸುಳ್ಳು ಕಥೆಗಳನ್ನು ಕಟ್ಟಿಆರೋಪ ಮಾಡಬಾರದು  ಎಂದು ಎಚ್ಚರಿಕೆ

 ಮೈಸೂರು (ಅ.18):  ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಸಿದ್ದರಾಮಯ್ಯ (Siddaramaiah) ವಿರುದ್ಧ ಆರೋಪ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಸುಳ್ಳು ಕಥೆಗಳನ್ನು ಕಟ್ಟಿಆರೋಪ ಮಾಡಬಾರದು ಎಂದು ಮಾಜಿ ಮೇಯರ್‌ (Mayor) ಹಾಗೂ ಹಾಲಿ ನಗರ ಪಾಲಿಕೆ ಸದಸ್ಯ ಆರೀಫ್‌ ಹುಸೇನ್‌ (Arif Hussain) ಆಗ್ರಹಿಸಿದರು.

ಕಾಂಗ್ರೆಸ್‌ (Congress) ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಅವರು ಗಾಂಜಾ ಸೇವಿಸಿ, ಅಫೀಮು, ಚರಸ್‌ ತೆಗೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಗಿಸಲು ಹಂತ ಹಂತವಾಗಿ ಕುತಂತ್ರ ಹೆಣೆದು ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ದೂರಿದರು.

Latest Videos

undefined

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ (CM) ಕುಮಾರಸ್ವಾಮಿ ಅವರಿಗೆ ರಾಜಕೀಯದ (Politics) ಇತಿಹಾಸ (History) ತಿಳಿದಿಲ್ಲ. ಜ್ಞಾನ ನೆಟ್ಟಗೆ ಇದಿಯೋ ಇಲ್ಲವೋ ಗೊತ್ತಿಲ್ಲ. ಜೊತೆಗೆ ರೋಷನ್‌ ಬೇಗ್‌ ಅವರಂತಹ ಸಮಾಜಕ್ಕೆ ದ್ರೋಹ ಬಗೆದವರ ಪರವಾಗಿ ಮಾತನಾಡುತ್ತಿದ್ದಾರೆ. ಒಂದು ಸಮುದಾಯವನ್ನು ಒಡೆಯಲು ಎಷ್ಟುಸುಳ್ಳು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು.

ವಿಧಾನ ಪರಿಷತ್‌  ಚುನಾವಣೆಯಲ್ಲಿ (Assembly Election) ಇಕ್ಬಾಲ್‌ ಅಹಮದ್‌ ಸಡರಗಿ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅಲ್ಲ. ಸೀತಾರಾಮ್‌ (Seetharam) ಅವರನ್ನು ಬಳಸಿಕೊಂಡು ಸೋಲಿಸಿದ್ದು ಇದೇ ಕುಮಾರಸ್ವಾಮಿ. ಸಿ.ಎಂ. ಇಬ್ರಾಹಿಂ (CM Ibrahim) ಅವರನ್ನು ಬಳಸಿಕೊಂಡು ಸಿ.ಕೆ. ಜಾಫರ್‌ ಷರೀಫ್‌ (CK Zafar Sharif) ಅವರನ್ನು ಸೋಲಿಸಿದಿರಿ. ರೆಹಮಾನ್‌ ಷರೀಪ್‌ ಅವರು ಚುನಾವಣೆಗೆ ಸ್ಪರ್ಧಿಸಿದ್ದಾಗ ಭೈರತಿ ಸುರೇಶ್‌ (Byrathi Suresh) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿಯೇ ಇಲ್ಲ. ನಿಮಗೆ ಚುನಾವಣೆಯ ಯಾರು ಅಭ್ಯರ್ಥಿಗಳಾಗಿದ್ದರು ಎಂಬುದೇ ಗೊತ್ತಿಲ್ಲ. ಈ ರೀತಿ ಸುಳ್ಳು ಟ್ವೀಟ್‌ (Tweet) ಮಾಡಲು ನಾಚಿಕೆ ಆಗುವುದಿಲ್ಲವೇ ಎಂದು ಅವರು ಕಿಡಿಕಾರಿದರು.

ಡಿಕೆಶಿ ಮೇಲಿನ ಕಮಿಷನ್ ಮಾತು... ಪ್ರತಿಕ್ರಿಯೆ ಕೊಡದೆ ಜಾರಿಕೊಳ್ಳುತ್ತಿರುವ ಸಿದ್ದು!

ರೆಹಮಾನ್‌ ಷರೀಫ್‌ ವಿರುದ್ಧ ಇಸ್ಮಾಯಿಲ್‌ ಷರೀಫ್‌ ಅವರನ್ನು ನಿಲ್ಲಿಸಿ ಸೋಲಿಸಿದಿರಿ. ಈಗ ಜಾಫರ್‌ ಷರೀಫ್‌ ಮೇಲೆ ಪ್ರೀತಿ ತೋರಿಸುತ್ತ ಇದೀರಾ? ಮುಸ್ಲಿಂರನ್ನು (Muslim) ತುಳಿಯುವ ಕುತಂತ್ರವನ್ನು ತಾವು ಮಾಡಿ, ಸಿದ್ದರಾಮಯ್ಯ (Siddaramaiah) ಮೇಲೆ ಆರೋಪ ಮಾಡ್ತಿರಲ್ಲ, ನಿಮ್ಮ ಆರೋಪಗಳನ್ನು ನಂಬಲು ಜನ ಎಲ್ಲರೂ ಕಿವಿಗೆ ಹೂ ಮುಡಿದುಕೊಂಡಿಲ್ಲ ಎಂದು ಅವರು ಕುಟುಕಿದರು.

ಮಾಜಿ ಸಚಿವ ರೋಷನ್‌ ಬೇಗ್‌ (Rishan baig) ಕಥೆ ರಾಜ್ಯದ ಜನತೆಗೆ ಗೊತ್ತಿದೆ. ಕಳ್ಳರನ್ನು ಕಾಂಗ್ರೆಸ್‌ ಇಟ್ಟುಕೊಳ್ಳುವುದಿಲ್ಲ, ನೀವು ಬೇಕಾದರೆ ಕಳ್ಳರನ್ನು ಇಟ್ಟುಕೊಳ್ಳಿ. ಚುನಾವಣೆಗಳಲ್ಲಿಯೂ ಅವರ ಪರವಾಗಿ ಮಾತನಾಡಿ, ಮುಸ್ಲಿಂರು ಸರಿಯಾಗಿ ಪಾಠ ಕಲಿಸುತ್ತಾರೆ. ಸಲೀಂನನ್ನು ಡಿ.ಕೆ. ಶಿವಕುಮಾರ್‌ ಅವರು ತಮ್ಮನಂತೆ ಬೆಳೆಸಿದರು. ಆದರೆ, ಆತ ದ್ರೋಹ ಬಗೆದ. ಹೀಗಾಗಿ, ಆತನನ್ನು ಕಿತ್ತು ಹಾಕಿದ್ದೇವೆ ಎಂದರು.

ಸುಖಾ ಸುಮ್ಮನೆ ಸಿದ್ದರಾಮಯ್ಯ ಅವರು ನಿಮ್ಮ ಬಗ್ಗೆ ಮಾತೇ ಆಡುವುದಿಲ್ಲ. ಇನ್ನೂ ನೀವು ಮಾಡಿರುವ ಕಪೋಲ ಕಲ್ಪಿತ ಸುಳ್ಳು ಕಥೆಗಳಿಗೆ ಸಿದ್ದರಾಮಯ್ಯ ಉತ್ತರ ಕೊಡಬೇಕೆ? ನೀವು ಮಾಡಿರುವ ಆರೋಪಗಳನ್ನು ಸಾಬೀತು ಮಾಡಿ. ನಾನು ರಾಜಕಾರಣದಿಂದ ದೂರವಾಗುತ್ತೇನೆ. ಸಿದ್ದರಾಮಯ್ಯ ಕೇವಲ ಮುಸ್ಲಿಂರ ನಾಯಕರಲ್ಲ. ಈ ರಾಜ್ಯದ ಎಲ್ಲ ಜನಾಂಗದ ಬಡವರ ನಾಯಕ. ಹಳ್ಳಿಗಳಲ್ಲಿ ಸಿದ್ದರಾಮಯ್ಯ ಪೋಟೋ ಇಟ್ಟು ಪೂಜೆ ಮಾಡುತ್ತಿದ್ದಾರೆ. ನೀವು ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂರಿಗಾಗಿ ಮಾಡಿದ್ದ ಕೆಲಸ ಏನು ಎಂದು ಅವರು ಪ್ರಶ್ನಿಸಿದರು.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ (M Laxman), ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ, ಉಪ ಮೇಯರ್‌ ಅನ್ವರ್‌ ಬೇಗ್‌, ನಗರ ಪಾಲಿಕೆ ಸದಸ್ಯರಾದ ಅಯಾಜ್‌ ಪಾಷ, ಆಪ್ಸರ್‌, ಸೌಕತ್‌ ಪಾಷಾ, ಮುಖಂಡರಾದ ಎಂ. ಶಿವಣ್ಣ, ಮಂಜುಳಾ ಮಂಜುನಾಥ್‌ ಮೊದಲಾದವರು ಇದ್ದರು.

ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ತಲೆದೂರಿರುವ ಬೆಲೆ ಏರಿಕೆ, ಸರ್ಕಾರದ ವೈಫಲ್ಯ, ಕೇಂದ್ರದ ಕೃಷಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯ ಬಗ್ಗೆ ಮಾತನಾಡದೇ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್‌ ಮಾಡಿ ಮುಖ್ಯ ವಿಷಯಗಳನ್ನು ಮರೆಮಾಚಲು ಯತ್ನಿಸಿ, ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆ ಕಂಡಿದ್ದು ಕುಮಾರಸ್ವಾಮಿ ಅವರಿಂದಲೇ. ಇದನ್ನು ಯಾರು ಮರೆಯಬಾರದು.

- ಎಂ. ಲಕ್ಷ್ಮಣ, ಕೆಪಿಸಿಸಿ ವಕ್ತಾರ

click me!