ಪಿಎಸ್‌ಐ ಸೇರಿದಂತೆ 42 ಸಿಬ್ಬಂದಿಗಳಿಗೆ ಸಾಂಸ್ಥಿಕ ಕ್ವಾರಂಟೈನ್| ಕೊಟ್ಟೂರು ಪೊಲೀಸ್ ವಸತಿ ಗೃಹಗಳ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ| ಕೊಟ್ಟೂರು ಪೊಲೀಸ್ ಠಾಣೆಗೆ ಸಂಬಂಧಿಸಿದ ಕೆಲಸಗಳು ಮತ್ತು ದೂರುಗಳಿಗೆ ಕಾನಾಹೊಸಳ್ಳಿ ಪೊಲೀಸ್ ಠಾಣೆ ಸಂಪರ್ಕಿಸಬಹುದು|
ಬಳ್ಳಾರಿ(ಜೂ.01): ಕೊಟ್ಟೂರು ಪೊಲೀಸ್ ಠಾಣೆಯ ಮುಖ್ಯಪೇದೆಗೆ ಕೊರೋನಾ ಸೋಂಕು ದೃಢ ಪಟ್ಟಿದ್ದರಿಂದ ಇಡೀ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇದರಿಂದ ಠಾಣೆಯ ವ್ಯಾಪ್ತಿಯ ಜನರು ದೂರು ಸೇರಿದಂತೆ ಠಾಣೆಗೆ ಸಂಬಂಧಿಸಿದಂತೆ ವಿಚಾರಗಳಿಗೆ ಕಾನಾಹೊಸಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಿಎಸ್‌ಐ ಸೇರಿದಂತೆ 42 ಸಿಬ್ಬಂದಿಗಳಿಗೆ ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡಲಾಗಿದೆ. ಇನ್ನು ಕೊಟ್ಟೂರು ಪೊಲೀಸ್ ವಸತಿ ಗೃಹಗಳ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊರೋನಾದಿಂದ ಸಂಕಷ್ಟ: 'ಉದ್ಯೋಗ ಬಯಸಿ ಬರುವವರೆಗೆಲ್ಲಾ ಕೆಲಸ ಕೊಡಲೇಬೇಕು'
ಕೊಟ್ಟೂರು ಪೊಲೀಸ್ ಠಾಣೆಗೆ ಸಂಬಂಧಿಸಿದ ಕೆಲಸಗಳು ಮತ್ತು ದೂರುಗಳಿಗೆ ಕಾನಾಹೊಸಳ್ಳಿ ಪೊಲೀಸ್ ಠಾಣೆ ಪಿಎಸ್ ಐ ನಾಗರಾಜ್ 9480803060, ಸಿಪಿಐ ರವೀಂದ್ರ ಕುರುಬಗಟ್ಟಿ9480803045 ಅವರನ್ನು ಸಂಪರ್ಕಿಸಬಹುದು ಎಂದು ಎಸ್ಪಿ ಬಾಬಾ ತಿಳಿಸಿದ್ದಾರೆ.
ಚಿಕಿತ್ಸೆಗೆ ಬೆಂಗಳೂರಿಗೆ ತೆರಳುತ್ತಿದ್ದ ಪೇದೆ
ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿರುವ ವ್ಯಕ್ತಿಗೆ ಇದೀಗ ಕೊರೋನಾ ಸೋಂಕು ತಗುಲಿದ್ದು, ಪಕ್ಕದ ಜಗಳೂರು ತಾಲೂಕಿನ ವಾಸಿಯೆಂದು ಆತನ ಹಿಸ್ಟರಿಯಿಂದ ತಿಳಿದುಬಂದಿದೆ. ಆಗಾಗ ಚಿಕಿತ್ಸೆಗೆಂದು ಬೆಂಗಳೂರಿಗೆ ಹೋಗಿ ಬರುತ್ತಿದ್ದ ಎಂದು ಹೇಳಲಾಗಿದ್ದು, ಇತ್ತೀಚಿಗಷ್ಟೇ ಜಗಳೂರಿನಿಂದ ಆತ ಹೋಗಿ ಬಂದಿದ್ದ ಎಂದು ಗೊತ್ತಾಗಿದೆ. ಆತನ ಜೊತೆಗಿರುವವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ ವ್ಯಕ್ತಿಗಳ ಸಮಗ್ರ ವಿವರ ಕಲೆಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ನಿರತರಾಗಿದ್ದು, ಅವರುಗಳನ್ನೆಲ್ಲಾ ಕ್ವಾರಂಟೈನ್‌ನಲ್ಲಿರಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಸೋಮವಾರದ ವೇಳೆಗೆ ಮತ್ತಷ್ಟು ವಿವರಗಳು ಪೂರ್ಣವಾಗಿ ಗೊತ್ತಾಗಲಿವೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.