ಕೊರೋನಾ ಎಫೆಕ್ಟ್: ಎಂಜಿನಿಯರ್ ಈಗ ಖಾತ್ರಿ ಕಾರ್ಮಿಕ| ಬೆಂಗಳೂರಿನಲ್ಲಿ ಉದ್ಯೋಗ ಕಳೆದುಕೊಂಡ ಗದಗದ ಎಂಜಿನಿಯರ್| ಅಂಜಿಕೆ ಇಲ್ಲದೇ ನರೇಗಾ ಯೋಜನೆಯ ಕೂಲಿ ಕೆಲಸದಲ್ಲಿ ಭಾಗಿ| ಯಾವುದೇ ಅಳುಕಿಲ್ಲದೆ ತಮ್ಮ ತಾಯಿ ಜತೆ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹಾಜರಾಗುತ್ತಿರುವ ಸದಾನಂದ|
ಶಿವಕುಮಾರ ಕುಷ್ಟಗಿ
ಗದಗ(ಜೂ.01): ಎಂಜಿನಿಯರಿಂಗ್ ಪದವಿ ಗಳಿಸಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಯುವಕ ಈಗ ಕುಟುಂಬ ನಿರ್ವಹಣೆಗಾಗಿ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ಇದು ಕೊರೋನಾ ತಂದ ಸಂಕಷ್ಟ.
ಗದಗ ತಾಲೂಕಿನ ಕದಡಿ ಗ್ರಾಮದ ನಿವಾಸಿ ಸದಾನಂದ ಮುಕ್ಕನ್ನವರ ಅವರು ರೈತ ಕುಟುಂಬದಲ್ಲಿ ಹುಟ್ಟಿದವರು. ಬಡತನವನ್ನೇ ಹಾಸಿ, ಬಡತನವನ್ನೇ ಹೊದ್ದು ಮಲಗಿದ್ದ ಯುವಕ. ಬಾಲಕನಿದ್ದಾಗನಿಂದಲೂ ದುಡಿಯುವ ಕಾಯಕಯೋಗಿ. ರೈತಾಪಿ ಕೆಲಸ ಮಾಡಿಕೊಂಡೇ ಶಾಲೆ, ಕಾಲೇಜು ಮುಗಿಸಿದ್ದಾರೆ. ಕಷ್ಟಪಟ್ಟು ಓದಿ ಬಿಇ ಪದವೀಧರರಾಗಿದ್ದಾರೆ. ಇನ್ನೇನೂ ಕಷ್ಟ ಮುಗಿಯಿತು, ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡಿ ಹೆತ್ತವರ ಕಷ್ಟ ನಿವಾರಿಸಬೇಕು ಎಂದೆಲ್ಲ ಕನಸು ಕಂಡರು. ಅದರಂತೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತು. ಒಳ್ಳೆಯ ಸಂಬಳವೂ ಇತ್ತು. ಆದರೆ, ಕೊರೋನಾ ಹೆಮ್ಮಾರಿ ಈ ಯುವಕನ ಕನಸು ನುಚ್ಚುನೂರು ಮಾಡಿದೆ.
ಕೊರೋನಾ ಕಂಟಕ: ಇಂದಿನಿಂದ ಗದಗ- ಮುಂಬೈ ರೈಲು ಪ್ರಾರಂಭ
ಸದಾನಂದ ಅವರು ಬಿಇ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಪದವೀಧರ. ಲಾಕ್‌ಡೌನ್‌ಗೂ ಮೊದಲು ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಶಬರಿ ಟೆಲಿ ಕಮ್ಯುನಿಕೇಶಸ್ಸ್‌ನಲ್ಲಿ ಮೆಂಟೆನಸ್ಸ್ ಎಂಜಿನಿಯರ್ ಆಗಿ ಕೆಲಸ ಆರಂಭಿಸಿದರು. ಸುಮಾರು ಮೂರೂವರೆ ವರ್ಷಗಳಿಂದ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ಕಂಪನಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಹೀಗಾಗಿ ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದ ಊರಿನತ್ತ ಹೆಜ್ಜೆ ಹಾಕಿದ್ದರು. ಊರಿಗೆ ಬಂದು 2 ತಿಂಗಳಾಗಿದೆ. ಕೈಯಲ್ಲಿ ಕೆಲಸವಿಲ್ಲ. ಅವರ ಕಂಪನಿಯವರು ವರ್ಕ್ ಫ್ರಂ ಹೋಂ ನೀಡಿರಲಿಲ್ಲ.
ಹೀಗಾಗಿ ಊರಿಗೆ ಬಂದ ಸದಾನಂದ ಸುಮ್ಮನೆ ಕುಳಿತುಕೊಳ್ಳದೇ, ತಮ್ಮ ಜಮೀನಿನ ಕೆಲಸ ಆರಂಭಿಸಿದರು. ಅಷ್ಟೇ ಅಲ್ಲ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಪಂ ವತಿಯಿಂದ ರೈತರ ಜಮೀನುಗಳಲ್ಲಿ ಬದುವು ನಿರ್ಮಾಣ ಕಾರ್ಯ ನಡೆಯುತ್ತಿದೆ. ಸದಾನಂದ ಅವರು ಯಾವುದೇ ಅಳುಕಿಲ್ಲದೆ ತಮ್ಮ ತಾಯಿ ಜತೆ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ನಾನು ಮೂಲತಃ ಕೃಷಿ ಕುಟುಂಬದಿಂದ ಬಂದಿರುವುದರಿಂದ ನನಗೆ ಇದೇನೋ ಹೊಸತಲ್ಲ. ದುಡಿಮೆಯೇ ದೇವರು ಎಂದು ನಂಬಿದವನು ನಾನು. ಮರಳಿ ಕಂಪನಿಯವರು ಕೆಲಸಕ್ಕೆ ಕರೆಯುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ನಾನಂತೂ ಕೂಲಿ ಕೆಲಸ ಮಾಡುತ್ತಿದ್ದೇನೆ ಎಂದು ನರೇಗಾ ಕೆಲಸ ಮಾಡುತ್ತಿರುವ ಎಂಜಿನಿಯರ್ ಸದಾನಂದ ಮಕ್ಕನ್ನವರ ಅವರು ಹೇಳಿದ್ದಾರೆ.
ಕೂಲಿ ಕೆಲಸಕ್ಕೆ ನಿರ್ಧಾರ:
ನಾನೂ ಬಿಇ ಮುಗಿಸಿದ್ದೇನೆ. ಯಾಕೆ ಮನೆ, ಜಮೀನು, ಕೂಲಿ ಕೆಲಸ ಮಾಡಬೇಕು ಅಂತ ಯೋಚಿಸಲಿಲ್ಲ. ಏನೇ ಕಲಿತರೂ ಉದ್ಯೋಗವಿಲ್ಲದೇ ಮನೆ ನಡೆಯಲಾರದು. ಹೀಗಾಗಿ ಊರಿಗೆ ಬಂದ ಸದಾನಂದ ಸುಮ್ಮನೆ ಕುಳಿತುಕೊಳ್ಳದೇ, ತಮ್ಮ ಜಮೀನಿನ ಕೆಲಸ ಆರಂಭಿಸಿದರು. ಅಷ್ಟೇ ಅಲ್ಲ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಪಂ ವತಿಯಿಂದ ರೈತರ ಜಮೀನುಗಳಲ್ಲಿ ಬದುವು ನಿರ್ಮಾಣ ಕಾರ್ಯ ನಡೆಯುತ್ತಿದೆ. ಸದಾನಂದ ಅವರು ಯಾವುದೇ ಅಳುಕಿಲ್ಲದೆ ತಮ್ಮ ತಾಯಿ ಜತೆ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.