ಹೊರಗಿನ ಭಕ್ತರಿಗೆ ನಿಷೇಧ, ಆತಂಕದ ನಡುವೆ ರಥೋತ್ಸವ ಪೂರ್ಣ| ರಥೋತ್ಸವ ಪ್ರತಿವರ್ಷದಂತೆ ಜರುಗಿ ಆನಂತರ ತೇರು ಬಜಾರ್‌ನ ತನ್ನ ಜಾಗದಲ್ಲಿ ಸಂಜೆ 5.56ಕ್ಕೆ ನಿಲುಗಡೆ| ಈ ಬೆಳವಣಿಗೆಯಿಂದ ಸಂಭ್ರಮಿಸಿದ ಭಕ್ತರು|
ರಥೋತ್ಸವ ಪೂರ್ಣ ಪ್ರಮಾಣದಲ್ಲಿ ಸಾಗಿತಲ್ಲ ಎಂದು ಸಂತಸ ವ್ಯಕ್ತಪಡಿಸಿ ನಿಟ್ಟಿಸಿರು ಬಿಟ್ಟ ಭಕ್ತರು|
ಕೊಟ್ಟೂರು(ಮಾ.08): ಮಹಾಮಾರಿ ಕೊರೋನಾ 2ನೇ ಅಲೆ ಭೀತಿಯ ಮಧ್ಯೆಯೂ ಅಸಂಖ್ಯಾತ ಭಕ್ತರ ಆರಾಧದೈವ ಕೊಟ್ಟೂರಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವ ಭಕ್ತರ ಶ್ರದ್ಧಾ, ಭಕ್ತಿಯೊಂದಿಗೆ ಭಾನುವಾರ ಸಂಜೆ ಮೂಲಾ ನಕ್ಷತ್ರದಲ್ಲಿ ಅದ್ಧೂರಿಯಾಗಿ ನೆರೆವೇರಿದೆ.
ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊರಗಿನ ಭಕ್ತರ ನಿಷೇಧ ಮಾಡಿತ್ತು. ಹೀಗಾಗಿ ರಥೋತ್ಸವ ಪೂರ್ಣ ಜರುಗುತ್ತದೆಯೋ ಇಲ್ಲವೋ ಎಂಬ ಆತಂಕ ಭಕ್ತರಲ್ಲಿ ಮನೆ ಮಾಡಿತ್ತು. ರಥೋತ್ಸವ ಪ್ರತಿವರ್ಷದಂತೆ ಜರುಗಿ ಆನಂತರ ತೇರು ಬಜಾರ್‌ನ ತನ್ನ ಜಾಗದಲ್ಲಿ ಸಂಜೆ 5.56ಕ್ಕೆ ನಿಲುಗಡೆಗೊಂಡಿತು. ಈ ಬೆಳವಣಿಗೆಯಿಂದ ಸಂಭ್ರಮಿಸಿದ ಭಕ್ತರು ರಥೋತ್ಸವ ಪೂರ್ಣ ಪ್ರಮಾಣದಲ್ಲಿ ಸಾಗಿತಲ್ಲ ಎಂದು ಸಂತಸ ವ್ಯಕ್ತಪಡಿಸಿ ನಿಟ್ಟಿಸಿರು ಬಿಟ್ಟರು.
ರಾಜ್ಯದ ಪ್ರಸಿದ್ಧ ರಥೋತ್ಸವಗಳಲ್ಲಿ ತನ್ನದೇ ಆದ ಹಿರಿಮೆ ಗರಿಮೆಯೊಂದಿಗೆ ಶ್ರೇಷ್ಠತೆಯನ್ನು ಪಡೆದಿರುವ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಪ್ರಾರಂಭಗೊಳ್ಳುತ್ತಿದ್ದಂತೆ ಈ ಬಗೆಯ ವಿಸ್ಮಯ ಎಂಬಂತೆ ಜಮಾವಣೆಗೊಂಡಿದ್ದ ಜನಸ್ತೋಮ ರಥೋತ್ಸವವನ್ನು ಮಿಣಿಯಿಂದ ಎಳೆದೊಯ್ಯಲು ಮುಗಿಬಿದ್ದರು. ಪ್ರತಿ ವರ್ಷದಂತೆ ಮೂಲಾ ನಕ್ಷತ್ರವಿರುವ ಘಳಿಗೆಯಲ್ಲಿ 70 ಅಡಿ ಎತ್ತರದ ರಥೋತ್ಸವ ರಾಜಗಾಂಭೀರ್ಯದೊಂದಿಗೆ ತೇರು ಬಯಲುಗುಂಟ ಸಾಗಿತು. ಇದಕ್ಕೂ ಮೊದಲು ಶ್ರೀ ಸ್ವಾಮಿಯನ್ನು ಮಧ್ಯಾಹ್ನದ ಪೂಜಾ ಕೈಂಕರ್ಯದ ನಂತರ ಮೂಲ ಹಿರೇಮಠದಿಂದ ಪ್ರಧಾನ ಧರ್ಮಕರ್ತ ಸಿ.ಎಚ್.ಎಂ. ಗಂಗಾಧರಯ್ಯ ಮತ್ತು ಪೂಜಾ ಬಳಗದವರು ಸಕಲ ಬಿರುದಾವಳಿಗಳೊಂದಿಗೆ ಹೊರ ತಂದು ಬೆಳ್ಳಿ ಪಲ್ಲಕ್ಕಿಯಲ್ಲಿ ಆಸೀನಪಡಿಸಿ ಸಂಭ್ರಮದ ಮೆರವಣಿಗೆ ಕೈಗೊಂಡರು.
ಹೊಸಪೇಟೆ: ಆಟೋ ಓಡಿಸಿ ಬದುಕು ಕಟ್ಟಿಕೊಂಡ ನಂದಿನಿ..!
ದೇವದಾಸಿಯರಿಂದ ಆರತಿ:
ಆಕರ್ಷಕ ಸಮ್ಮಾಳ, ಲಯಬದ್ಧ ನಂದಿಕೋಲು ಕುಣಿತದ ನಿನಾದದೊಂದಿಗೆ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ಗಾಂಧಿ ವೃತ್ತದ ಬಳಿ ಬರುತ್ತಿದ್ದಂತೆ ಶ್ರೀಸ್ವಾಮಿಗೆ ಆರತಿ ಬೆಳಗುವ ಕಾರಣಕ್ಕಾಗಿ ಕಳೆದ 3 ದಿನಗಳಿಂದ ಹರಕೆ ಹೊತ್ತು ಉಪವಾಸ ವ್ರತ ಕೈಗೊಂಡಿದ್ದ ದಲಿತ ದೇವದಾಸಿ ದುರ್ಗಮ್ಮ ಸ್ವಾಮಿಗೆ ಕಳಸದೊಂದಿಗೆ ಧೂಪದಾರತಿಯನ್ನು ಬೆಳಗಿದರು. ಆನಂತರ ಪಲ್ಲಕ್ಕಿ ಉತ್ಸವ ತೇರು ಬಜಾರ ಮೂಲಕ ಸಾಗಿ ತೇರು ಬಯಲು ತಲುಪುತ್ತಿದ್ದಂತೆಯೇ ರಥದ ಸುತ್ತಲೂ ಧರ್ಮಕರ್ತ ಬಳಗ ಬೆಳ್ಳಿ ಪಲ್ಲಕ್ಕಿಯಲ್ಲಿ ಆಸೀನರಾಗಿದ್ದ ಸ್ವಾಮಿಯ ಮೂಲ ಮೂರ್ತಿಯೊಂದಿಗೆ 5 ಸುತ್ತು ಪ್ರದಕ್ಷಿಣೆ ಹಾಕಿ ಆನಂತರ ರಥದ ಒಳಗೆ ಸ್ವಾಮಿಯನ್ನು ಏಣಿಗೆಯ ಮೂಲಕ ಕೊಂಡೊಯ್ದರು. ಈ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿದ್ದಂತೆ ಜನತೆ ಜೈಕಾರವನ್ನು ಕೂಗಿ ಕೈ ಮುಗಿದು ನಮಸ್ಕರಿಸಿದರು.
ಹರಸಾಹಸ:
ಈ ಬಾರಿ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆ ಭಕ್ತರು ಪಾಲ್ಗೊಳ್ಳುವುದನ್ನು ತಡೆಯಲು ಪೊಲೀಸರು ತೇರು ಬಯಲು ಸುತ್ತಲೂ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಬಯಲೊಳಗೆ ಬರದಂತೆ ಕಟ್ಟೆಚ್ಚರ ವಹಿಸಿದ್ದರು. ಪೊಲೀಸ್ ಸಿಬ್ಬಂದಿಯ ಕಣ್ತಪ್ಪಿಸಿ ಸಾಕಷ್ಟುಭಕ್ತರು ಬ್ಯಾರಿಕೇಡ್‌ಗಳನ್ನು ಮುರಿದು ತೇರು ಬಯಲೊಳಗೆ ನುಗ್ಗಿದರು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಡಿವೈಎಸ್‌ಪಿ ಹಾಲಮೂರ್ತಿರಾವ್, ಕೂಡ್ಲಿಗಿ ಡಿವೈಎಸ್‌ಪಿ ಹರೀಶ್ ರೆಡ್ಡಿ, ಸರ್ಕಲ್ ಇನ್‌ಸ್ಪೆಕ್ಟರ್ ಎಚ್. ದೊಡ್ಡಣ್ಣ, ಮತ್ತಿತರ ಪೊಲೀಸ್ ಅಧಿಕಾರಿಗಳು ವ್ಯಾಪಕ ಪೊಲೀಸ್ ಬಂದೋಬಸ್‌್ತ ಆಯೋಜಿಸಿ ಯಾವುದೇ ಗದ್ದಲ-ಗಲಾಟೆಯಾಗದಂತೆ ಕ್ರಮ ಕೈಗೊಂಡರು.
ಸಂಸದ ವೈ. ದೇವೇಂದ್ರಪ್ಪ, ಶಾಸಕ ಎಸ್. ಭೀಮಾನಾಯ್ಕ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಉಜ್ಜಯಿನಿ ಜಿಪಂ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ ಸೇರಿದಂತೆ ಅನೇಕ ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.