ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಿಜೆಪಿ ಸರ್ಕಾರ ಜೇನು ನೀಡಿದೆ: ಕೋಟ ಶ್ರೀನಿವಾಸ ಪೂಜಾರಿ

By Kannadaprabha NewsFirst Published Apr 22, 2023, 3:30 AM IST
Highlights

ವಿರೋಧ ಪಕ್ಷಗಳು ತಮ್ಮ ಸರ್ಕಾರದ ಅವಧಿಯಲ್ಲಿ ಪ.ಜಾ.- ಪ.ಪಂ.ಗಳನ್ನು ಕೇವಲ ಮತ ಲೆಕ್ಕಾಚಾರಕ್ಕಷ್ಟೇ ಬಳಸಿಕೊಂಡಿದ್ದವು. ಆದರೆ ಬಿಜೆಪಿ ಸರ್ಕಾರ ಅವರ ಮೀಸಲಾತಿ ಲೆಕ್ಕಚಾರವನ್ನು ಹೆಚ್ಚಿಸಿದೆ. ಇದರಂದ ರಾಜ್ಯದಲ್ಲಿರುವ 1.80 ಕೋಟಿ ಜನರಿಗೆ ಲಾಭವಾಗಿದೆ, ಇದರ ಶ್ರೇಯಸ್ಸು ಬೊಮ್ಮಾಯಿ ಸರ್ಕಾರಕ್ಕೆ ಸಲ್ಲುತ್ತದೆ: ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ 

ಉಡುಪಿ(ಏ.22):  ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಯನ್ನು ಹೆಚ್ಚಿಸಿದಾಗ, ವಿರೋಧ ಪಕ್ಷಗಳು ಜೇನುಗೂಡಿಗೆ ಕೈ ಹಾಕಿದ್ದೀರಿ ಎಂದು ವಿರೋಧ ವ್ಯಕ್ತಪಡಿಸಿದವು. ಆದರೆ ಬಿಜೆಪಿ ಸರ್ಕಾರ ಗೂಡಿಗೆ ಕೈ ಹಾಕಿ ಈ ಪ.ಜಾತಿ, ಪಂಗಡಗಳಿಗೆ ಜೇನು ನೀಡಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ತಮ್ಮ ಸರ್ಕಾರದ ಅವಧಿಯಲ್ಲಿ ಪ.ಜಾ.- ಪ.ಪಂ.ಗಳನ್ನು ಕೇವಲ ಮತ ಲೆಕ್ಕಾಚಾರಕ್ಕಷ್ಟೇ ಬಳಸಿಕೊಂಡಿದ್ದವು. ಆದರೆ ಬಿಜೆಪಿ ಸರ್ಕಾರ ಅವರ ಮೀಸಲಾತಿ ಲೆಕ್ಕಚಾರವನ್ನು ಹೆಚ್ಚಿಸಿದೆ. ಇದರಂದ ರಾಜ್ಯದಲ್ಲಿರುವ 1.80 ಕೋಟಿ ಜನರಿಗೆ ಲಾಭವಾಗಿದೆ, ಇದರ ಶ್ರೇಯಸ್ಸು ಬೊಮ್ಮಾಯಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

ಉಡುಪಿ: ಮುಕ್ತ, ಪಾರದರ್ಶಕ ಚುನಾವಣೆ ನಡೆಸಿ, ತುಕಾರಾಂ ಹರಿಬಾಹು ಮುಂಡೆ

ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಿದ್ದಾಗ ಮೀನುಗಾರ ಸಮುದಾಯದ 23,000 ಮಹಿಳೆಯರ 50 ಸಾವಿರ ರು. ಸಾಲ ಮನ್ನಾ ಮಾಡಿದ್ದರು, ಇದರಲ್ಲಿ ಶೇ.75ರಷ್ಟುಫಲಾನುಭವಿಗಳು ಉಡುಪಿ ಜಿಲ್ಲೆಯವರು. ಮೀನುಗಾರರ 100 ಆಳ ಸಮುದ್ರ ಬೋಟುಗಳನ್ನು ಖರೀದಿಸಲು ಶೇ.50 ಸಬ್ಸಿಡಿ ನೀಡಲಾಗಿದೆ. ಹಿಂ.ವ.ದ 10 ಸಾವಿರ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ನೀಡಲಾಗಿದೆ. 19,000 ಕುಟುಂಬಗಳಿಗೆ ಕೊಳವೆ ಬಾವಿ ಮಂಜೂರು ಮಾಡಲಾಗಿದೆ. ಹಿಂದಿನ ಸರ್ಕಾರ ಕೇವಲ ಭರವಸೆಯನ್ನಷ್ಟೇ ನೀಡಿದ್ದವು, ಆದರೆ ಬಿಜೆಪಿ ಸರ್ಕಾರ ಹೆಜಮಾಡಿ ಬಂದರು ಅಭಿವೃದ್ಧಿಗೆ 180 ಕೋಟಿ ರು. ಬಿಡುಗಡೆ ಮಾಡಿದ್ದು, ಕಾಮಗಾರಿ ನಡೆಯುತ್ತಿದೆ. ಮತ್ಸ್ಯಸಂಪದ ಯೋಜನೆಯಡಿ 2 ವರ್ಷಗಳಲ್ಲಿ ಪಂಜರ ಕೃಷಿಯಿಂದ ಶೇ.50ರಷ್ಟುಮೀನು ಉತ್ಪಾದನೆ ಜಾಸ್ತಿಯಾಗಿದೆ ಎಂದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಪರಿಗಣಿಸದ ನಿಗಮಗಳ ಬೇಡಿಕೆಯನ್ನು ಬಿಜೆಪಿ ಈಡೇರಿಸಿದೆ. ವೀರಶೈವ, ಒಕ್ಕಲಿಗದಂತಹ ದೊಡ್ಡ ಸಮುದಾಯಗಳಿಗೆ ಮಾತ್ರವಲ್ಲದೇ, ಕುಂಬಾರರ, ಗಾಣಿಗ, ಈಡಿಗದಂತಹ ಚಿಕ್ಕ ಸಮುದಾಯಗಳಿಗೂ ನಿಗಮಗಳನ್ನು ನೀಡಲಾಗಿದೆ. ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಗಳನ್ನೂ, ಕೋಟಿಚೆನ್ನಯ, ಅಬ್ಬಕ್ಕ ಹೆಸರಿನಲ್ಲಿ ಸೈನಿಕ ತರಬೇತಿ ಕೇಂದ್ರಗಳನ್ನೂ ತೆರೆಯಲಾಗಿದೆ ಎಂದು ಸಚಿವರು ಹೇಳಿದರು.

ಮರವಂತೆ ಬಂದರು ಅಭಿವೃದ್ಧಿಗೆ ತಡೆ ಇದೆ

ಮರವಂತೆ ಬಂದರಿಗೆ ಬಿಎಸ್‌ವೈ ಸರ್ಕಾರ ಅನುದಾನ ಮಂಜೂರು ಮಾಡಿ, ಟೆಂಡರ್‌ ಕೂಡ ಆಗಿದೆ. ಆದರೆ ಅದಕ್ಕೆ ನ್ಯಾಯಾಲಯದಿಂದ ತಡೆ ಇದೆ. ಆದ್ದರಿಂದ ವಿಳಂಬವಾಗಿದೆ. ಸಹಜವಾಗಿಯೇ ಮೀನುಗಾರರು ಅಸಮಾಧಾನಗೊಂಡಿದ್ದಾರೆ. ತಡೆ ತೆರವಾದ ಕೂಡಲೇ ಕಾಮಗಾರಿ ಆರಂಭವಾಗುತ್ತದೆ. ಆದ್ದರಿಂದ ಅಲ್ಲಿನ ಮೀನುಗಾರರು ಚುನಾವಣಾ ಬಹಿಷ್ಕಾರಕ್ಕೆ ಯೋಚಿಸಬಾರದು ಎಂದು ಸಚಿವರು ಮನವಿ ಮಾಡಿದರು.

click me!