Karwar: ಅರ್ಹರಿಗೆ ಯೋಜನೆ ತಲುಪಿಸಲು ಅಂತ್ಯೋದಯ: ಸಚಿವ ಕೋಟ

By Kannadaprabha NewsFirst Published Mar 6, 2022, 4:15 AM IST
Highlights

*  ಅಂತ್ಯೋದಯ ರಾಜ್ಯಮಟ್ಟದ ಮಾಹಿತಿ ಕಾರ್ಯಾಗಾರ ಉದ್ಘಾಟನೆ
*  ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತುಗಳು ಸಿಗಬೇಕು
*   ಜನಪ್ರತಿನಿಧಿಗಳ ಪಾತ್ರ ಶ್ಲಾಘನೀಯ 

ಕಾರವಾರ(ಮಾ.06): ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್‌(Dr BR Ambedkar) ಅವರ ಆಶಯದಂತೆ ಸರ್ವರಿಗೂ ಸಮಬಾಳು, ಸಮಪಾಲು, ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟು ಜಾರಿಗೆ ತಂದಂತಹ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದೇ ಅಂತ್ಯೋದಯ ಕಾರ್ಯಗಾರದ ಉದ್ದೇಶವಾಗಿದೆ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Shrinivas Poojari) ಹೇಳಿದರು.

ನಗರದ ಟಾಗೋರ್‌ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಶನಿವಾರ ನಡೆದ ಪಂಚಾಯತ್‌ ರಾಜ್‌ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ವಿವಿಧ ಯೋಜನೆಗಳ ಕುರಿತ ಅಂತ್ಯೋದಯ ರಾಜ್ಯಮಟ್ಟದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತುಗಳು ಸಿಗಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಗ್ರಾಮ ಪಂಚಾಯತ್‌, ನಗರ ಸ್ಥಳೀಯ ಜನಪ್ರತಿನಿಧಿಗಳು ಸರಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವಲ್ಲಿ ಹಾಗೂ ಜನರ ಮತ್ತು ಸರಕಾರದ ನಡುವಿನ ಕೊಂಡಿಯಾಗಿ ಕಾರ್ಯ ಮಾಡುವಲ್ಲಿ ಜನಪ್ರತಿನಿಧಿಗಳ ಪಾತ್ರ ಶ್ಲಾಘನೀಯ ಎಂದರು.

Russia-Ukraine War: 'ಭಾರತ ಉಕ್ರೇನ್‌ ಪರ ನಿಲ್ಲದ್ದಕ್ಕೆ ಸಿಟ್ಟಿಗೆದ್ದು ಕಿರುಕುಳ ಕೊಟ್ಟರು'

ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸುರವರು ಹೇಳಿದಂತೆ ಕುಡಿಯುವ ನೀರು, ನಡೆಯುವ ಹಾದಿ, ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೋಗಿ ಈ ಮೂರು ವಿಷಯದಲ್ಲಿ ಎಂದಿಗೂ ರಾಜಕೀಯ(Politics) ಮಾಡಬಾರದು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸಭೆಯ ಮುಖಾಂತರ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸವಲತ್ತುಗಳನ್ನು ಒದಗಿಸುವಲ್ಲಿ ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು.

ಪರಿಶಿಷ್ಟಜಾತಿ, ಪರಿಶಿಷ್ಟವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಗಾಗಿ ಸರಕಾರವು ಹಮ್ಮಿಕೊಂಡ ವಿವಿಧ ಯೋಜನೆಗಳ ಮಾಹಿತಿ ಪಡೆದು ಅವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಅವರು ಸಮಾಜದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಿ ಉತ್ತಮ ಜೀವನವನ್ನು ನಡೆಸುವಂತಾಗಬೇಕು. ಸರಕಾರದ ವಿವಿಧ ಇಲಾಖೆಗಳಿಂದ ಜಾರಿಗೆ ಬಂದಿರುವ ಯೋಜನೆಗಳಾದ ಚೈತನ್ಯ ಸಹಾಯಧನ, ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಸಹಾಯಧನ, ಕಿರುಸಾಲ, ಅರಿವು-ಶೈಕ್ಷಣಿಕ ಸಾಲ, ವಿದೇಶಿ ವಿವಿಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ, ಕುಶಲಕರ್ಮಿಗಳಿಗೆ ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಮತ್ತು ಸಹಾಯಧನ, ಗಂಗಾ ಕಲ್ಯಾಣ, ಮೈಕ್ರೋ ಕ್ರೆಡಿಟ್‌, ಐರಾವತ, ಭೂ ಒಡೆತನದಂತಹ ಯೋಜನೆಗಳ ಪ್ರಯೋಜನ ಪಡೆದಾಗ ಸಮಾಜದಲ್ಲಿ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಯೋಜನೆಗಳ ಸರಿಯಾದ ಅನುಷ್ಠಾನದಿಂದ ಸಾರ್ಥಕತೆ ಸಾಧ್ಯ. ಹಾಗಾಗಿ ಸಮನ್ವಯತೆಯ ದೃಷ್ಟಿಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದರು.

Karnataka Politics: 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರೋದು ಫಿಕ್ಸ್‌: ಮಧು ಬಂಗಾರಪ್ಪ

ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ(Roopali Naik) ಮಾತನಾಡಿ, ಸರಕಾರದ ಯೋಜನೆಗಳು ಅರ್ಹರಿಗೆ ತಲುಪಲು ಪಂಚಾಯತ್‌ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳ ಪಾತ್ರ ಮಹತ್ವದ್ದಾಗಿದೆ, ಸರಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿಯನ್ನು ಸ್ಥಳೀಯ ಜನಪ್ರತಿನಿಧಿಗಳು ನಿರ್ವಹಿಸಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ, ಪರಿಶಿಷ್ಟವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳ್ವೇಕರ್‌, ನಗರಸಭಾಧ್ಯಕ್ಷ ನಿತಿನ್‌ ಪಿಕಳೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸಮಾಜಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮೇಜರ್‌ ಮಣಿವಣ್ಣನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಯುಕ್ತ ಕೆ. ಎ. ದಯಾನಂದ, ಜಿಲ್ಲಾ ಪಂಚಾಯತ್‌ ಸಿಇಓ ಪ್ರಿಯಾಂಗಾ ಎಂ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
 

click me!