ದಲಿತ ಸಂಘಟನೆಗಳ ಒಕ್ಕೂಟದ ಮಹಾ ವೇದಿಕೆ ವತಿಯಿಂದ ಕೊರೆಗಾಂವ್ ವಿಜಯೋತ್ಸವದ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಬೃಹತ್ ವಿಜಯೊತ್ಸವ ಮೆರವಣಿಗೆ ನಡೆಯಿತು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜ.08): ದಲಿತ ಸಂಘಟನೆಗಳ ಒಕ್ಕೂಟದ ಮಹಾ ವೇದಿಕೆ ವತಿಯಿಂದ ಕೊರೆಗಾಂವ್ ವಿಜಯೋತ್ಸವದ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಬೃಹತ್ ವಿಜಯೊತ್ಸವ ಮೆರವಣಿಗೆ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದ್ದ ವಿಜಯೋತ್ಸವದಲ್ಲಿ ನೀಲಿ ಕಲರವ ಕಂಡುಬಂತು. ನೀಲಿ ಪೇಟ, ರುಮಾಲು ಶಾಲುಗಳು, ಬೃಹತ್ ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು.
undefined
ಡಿಜೆ ಸದ್ದಿಗೆ ಹೆಜ್ಜೆಹಾಕಿದ ಯುವ ಜನತೆ: ಚಿಕ್ಕಮಗಳೂರು ನಗರದ ಕೆಇಬಿ ವೃತ್ತದಿಂದ ಆಜಾದ್ ಪಾರ್ಕ್ ವರೆಗೆ ನಡೆದ ಮೆರವಣಿಗೆಯಲ್ಲಿ ಯುವಕರು ಹಾಗೂ ಯುವತಿಯರು ಪ್ರತ್ಯೇಕವಾಗಿ ಡಿಜೆ ಸದ್ದಿಗೆ ಹೆಜ್ಜೆಹಾಕಿ, ಕುಣಿದು ಕುಪ್ಪಳಿಸಿದರು. ಹೆಜ್ಜೆ ಹೆಜ್ಜೆಗೂ ಕೋರೆಗಾಂವ್ ಹೋರಾಟಗಾರರು, ಅಂಬೇಡ್ಕರ್ ಹಾಗೂ ಸಂವಿಧಾನ ಪರವಾದ ಘೋಷಣೆಗಳು ಮುಗಿಲು ಮುಟ್ಟಿದವು.ನಾಸಿಕ್ ಡೋಲ್, ಹಳ್ಳಿ ವಾದ್ಯ ಹಾಗೂ ಡಿಜೆಗಳು ಮೆರವಣಿಗೆಯಲ್ಲಿ ಸಾಗಿಬಂದವು. ಅಲ್ಲಲ್ಲಿ ತಂಡವಾಗಿ ನೃತ್ಯ ಮಾಡಿದ ಜನರು ಕೋರೆಗಾಂವ್ ವಿಜಯೋತ್ಸವವನ್ನು ಸ್ಮರಣೀಯವಾಗಿಸಿಕೊಂಡರು. ಬೆಳಗಿನಿಂದಲೇ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಾವಿರಾರು ಜನರು ವಾಹನಗಳಲ್ಲಿ ನಗರಕ್ಕೆ ಆಗಮಿಸಿದ್ದರು.
ಕರುಣೆಯಲ್ಲಿ ಭಾರತಕ್ಕೆ ಸರಿಸಾಟಿ ದೇಶವಿಲ್ಲ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್
ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆ, ಬರಹ, ವಿಚಾರಧಾರೆಗಳೇ ಭವಿಷ್ಯ: ವಿಜಯೋತ್ಸವ ಮೆರವಣಿಗೆ ನಗರದ ಆಜಾದ್ ಪಾರ್ಕ್ ತಲುಪಿದ ನಂತರ ಗಣ್ಯರು ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆ, ಬರಹ, ವಿಚಾರಧಾರೆಗಳೇ ಈ ದೇಶದ ಭವಿಷ್ಯ. ಇವರ ಚಿಂತನೆಗಳೇ ಭಾರತದ ಭವಿಷ್ಯವನ್ನು ಬದಲಾಯಿಸುತ್ತಿವೆ. ಬುದ್ಧ, ಬಸವ, ಅಂಬೇಡ್ಕರ್ ಮಾತ್ರ ಈ ದೇಶದ ಭವಿಷ್ಯ ಎಂದು ನಿಜಗುಣಾನಂದ ಸ್ವಾಮೀಜಿ ಅಭಿಪ್ರಾಯಿಸಿದರು. ಅಂಬೇಡ್ಕರ್, ಬುದ್ಧ, ಬಸವಣ್ಣನವರಿಗಿಂತಲೂ ಮೊದಲು ಈ ದೇಶದಲ್ಲಿ ಸಾವಿರಾರು ಸಂತರು, ಮಹಾನ್ ವ್ಯಕ್ತಿಗಳು ಬಂದು ಹೋಗಿದ್ದಾರೆ.
ಆದರೆ, ಇರ‍್ಯಾರೂ ಮನುಷ್ಯರ ಬಗ್ಗೆ ಮಾತನಾಡಲಿಲ್ಲ. ಬದಲಾಗಿ ದೇವರು, ಧರ್ಮ, ಜಾತಿ ಬಗ್ಗೆ ಮಾತನಾಡಿದರು. ಆದರೆ, ಮನುಷ್ಯರ ಬಗ್ಗೆ ಮಾತ್ರ ಮಾತನಾಡಿದವರು ಬುದ್ಧ, ಬಸವ, ಅಂಬೇಡ್ಕರ್ ಮಾತ್ರ. ಈ ಮಹಾನ್ ಮಾನವತಾವಾದಿಗಳಿಂದಾಗಿ ಭಾರತ ದೇಶದ ಭವಿಷ್ಯ ಬದಲಾಗುತ್ತಿದೆ ಎಂದರು.ಬುದ್ಧ, ಬಸವ, ಅಂಬೇಡ್ಕರ್ ಅವರು ಈ ದೇಶದಲ್ಲಿದ್ದ ಮನುಷ್ಯರ ಬಗ್ಗೆ ಮಾತನಾಡಿದ್ದಾರೆ. ಜನರ ಕಷ್ಟ, ಅಸಮಾನತೆ, ಬಡತನ, ದೌರ್ಜನ್ಯ, ಶೋಷಣೆ ಬಗ್ಗೆ ಮಾತನಾಡಿದ್ದಾರೆ. ಜನರ ನೆಮ್ಮದಿ ಜೀವನಕ್ಕಾಗಿ, ಸಮಾನತೆಗಾಗಿ, ಮಹಿಳೆಯರು, ಮಕ್ಕಳ ಹಕ್ಕುಗಳಿಗಾಗಿ ಹೋರಾಡಿದ್ದಾರೆ.
ಈ ಮೂವರ ವಿಚಾರಧಾರೆಗಳನ್ನು ಪಾಲಿಸಿದಲ್ಲಿ ಮಾತ್ರ ದೇಶದ ಭವಿಷ್ಯ ಉಜ್ವಲವಾಗುತ್ತದೆಯೇ ಹೊರತು ಮತ್ಯಾವ ಜಾತಿ, ಧರ್ಮ, ದೇವ ರಿಂದಲೂ ಈ ದೇಶದ ಭವಿಷ್ಯ ಬದಲಾಗಲು ಸಾಧ್ಯವಿಲ್ಲ. ಧರ್ಮ ಮತ್ತು ದೇವರ ಬಗ್ಗೆ ಮಾತನಾಡುವವರು ಮನುಷ್ಯರೇ ಅಲ್ಲ. ತಟ್ಟೆ ಕಾಸಿಗಾಗಿ, ತಮ್ಮ ಸ್ವಾರ್ಥಕ್ಕಾಗಿ ಮಾತನಾಡುತ್ತಾರೆ. ದೇವರು, ಧರ್ಮದ ಬಗ್ಗೆ ಮಾತನಾಡಿದವರಿಂದ ಈ ದೇಶದ ಭವಿಷ್ಯ ಬದಲಾಗಲೇ ಇಲ್ಲ. ಮಾನವೀತೆ, ಪ್ರೀತಿ, ಕರುಣೆ, ಸಮಾನತೆ, ಸ್ವತಂತ್ರದ ಬಗ್ಗೆ ಮಾತನಾಡಿದ ಬುದ್ಧ, ಬಸವ, ಅಂಬೇಡ್ಕರ್ ಅವರಿಂದಾಗಿ ದೇಶದಲ್ಲಿ ಭವಿಷ್ಯ ಇಷ್ಟು ಪ್ರಗತಿ ಕಂಡಿದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ದಿನಕ್ಕೊಂದು ಹೇಳ್ತಾರೆ: ಸಚಿವ ಪರಮೇಶ್ವರ್ ಟಾಂಗ್
ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು, ಹೋರಾಟಗಾರ ಗೊಲ್ಲಳ್ಳಿ ಶಿವಪ್ರಸಾದ್ ,ವಕೀಲ ಅನಿಲ್‌ಕುಮಾರ್, ಕಾಂಗ್ರೆಸ್ ಮುಖಂಡ ಸುನೀಲ್‌ಕುಮಾರ್ ಮೂರೋಳ್ಳಿ ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತ ನಾಡಿದರು.ಅಂಬೇಡ್ಕರ್ ಜೀವನ ಯಶೋಗಾಥೆಯ ಮಹಾನಾಯಕ ಧಾರಾವಾಹಿಯ ಅಂಬೇಡ್ಕರ್ ಪಾತ್ರಧಾರಿ ಬಾಲಕನು ಭಾಗವಹಿಸಿದ್ದರು .ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.